Aadhaar
ಆಧಾರ್ ಎಂಬುದು ಭಾರತ ಸರ್ಕಾರ ರೂಪಿಸಿರುವ ನಾಗರಿಕರ ಗುರುತಿನ ವ್ಯವಸ್ಥೆಯಾಗಿದೆ. ಬಯೋಮೆಟ್ರಿಕ್ ಆಧಾರಿತವಾಗಿರುವ ಯೋಜನೆ ಇದು. ವ್ಯಕ್ತಿಯ ಎಲ್ಲಾ ಬೆರಳ ಗುರುತು, ಎರಡು ಕಣ್ಣಿನ ಗುರುತು (ಐರಿಸ್ ಪ್ರಿಂಟ್) ಮತ್ತು ಚಹರೆಯ ಫೋಟೋ, ಇವಿಷ್ಟೂ ವ್ಯಕ್ತಿಯ ದತ್ತಾಂಶವು ಆಧಾರ್ ಕಾರ್ಡ್‌ನಲ್ಲಿ ದಾಖಲಾಗಿರುತ್ತದೆ. ಈ ಆಧಾರ್ ಕಾರ್ಡ್‌ನಲ್ಲಿ 12 ಅಂಕಿಗಳ ವಿಶೇಷ ಸಂಖ್ಯೆ ಇರುತ್ತದೆ. ಆಧಾರ್ ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ಆಧಾರಿತ ಐಡಿ ವ್ಯವಸ್ಥೆ ಎಂಬ ದಾಖಲೆ ಪಡೆದಿದೆ. 2009ರಲ್ಲಿ ಭಾರತದಲ್ಲಿ ಆಧಾರ್ ಯೋಜನೆ ಆರಂಭವಾಯಿತು. ಯುಐಡಿಎಐ ಪ್ರಾಧಿಕಾರವನ್ನು ರಚಿಸಿ ಯೋಜನೆಗೆ ಚಾಲನೆ ಕೊಡಲಾಯಿತು. ಇನ್ಫೋಸಿಸ್ನ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಈ ಯೋಜನೆಯ ರೂವಾರಿ. ವ್ಯಕ್ತಿಯ ಗುರುತಿಗಾಗಿ ಮೊದಲು ಬಳಕೆ ಆಗುತ್ತಿದ್ದ ಆಧಾರ್ ಈಗ ಬಹೂಪಯೋಗಿ ಆಗಿದೆ. ಸರ್ಕಾರದ ಯೋಜನೆಗಳ ಹಣ ನಿರ್ದಿಷ್ಟ ಫಲಾನುಭವಿಗಳನ್ನು ತಲುಪಿಸಲು ಆಧಾರ್ ಬಹಳ ಉಪಯುಕ್ತ ಎನಿಸಿದೆ. ಇದರಿಂದ ಹಣ ಪೋಲಾಗುವುದು ತಪ್ಪಿದೆ. ಸರ್ಕಾರಕ್ಕೆ ಸಾಕಷ್ಟು ಹಣ ಉಳಿತಾಯ ಆಗುತ್ತದೆ. ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವಲ್ಲವಾದರೂ ಅದು ಬಹಳ ಅಗತ್ಯವಾಗಿರುವ ದಾಖಲೆಯಾಗಿದೆ.