ಫಾಸ್ಟ್‌ಟ್ಯಾಗ್ ಯುಗ ಹೋಯ್ತು; MLFF ವ್ಯವಸ್ಥೆ ಬರುತ್ತಿದೆ; ಹೆದ್ದಾರಿ ಟೋಲ್ ಕಲೆಕ್ಷನ್ ಸಿಸ್ಟಂನಲ್ಲಿ ಕ್ರಾಂತಿಕಾರಿ ಬದಲಾವಣೆ ನಿರೀಕ್ಷಿಸಿ
ಭಾರತೀಯ ಹೆದ್ದಾರಿಗಳಲ್ಲಿ ಫಾಸ್ಟ್‌ಟ್ಯಾಗ್ ವ್ಯವಸ್ಥೆಯನ್ನು ಮೀರಿ, ಮಲ್ಟಿ-ಲೇನ್ ಫ್ರೀ-ಫ್ಲೋ (MLFF) ಟೋಲಿಂಗ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಯೋಜನೆ ರೂಪಿಸಿದೆ. ಕೈಯಿಂದ ಟೋಲ್ ಸಂಗ್ರಹಿಸುವ ವ್ಯವಸ್ಥೆಯಿಂದ ಫಾಸ್ಟ್ಯಾಗ್ಗೆ ಬದಲಾವಣೆ ಮಾಡಲಾಯಿತು. ಈಗ ಮುಂದಿನ ಹಂತಕ್ಕೆ ಹೋಗಲಾಗುತ್ತಿದೆ. ವಾಹನಗಳು ನಿಲ್ಲದೆ ಟೋಲ್ ಪಾವತಿಸುವ ಈ ಜಿಎನ್‌ಎಸ್ಎಸ್/ಜಿಪಿಎಸ್ ಆಧಾರಿತ ತಂತ್ರಜ್ಞಾನದ ಸಂಪೂರ್ಣ ವಿವರ ಇಲ್ಲಿದೆ.

ನವದೆಹಲಿ, ಅಕ್ಟೋಬರ್ 5: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ರಸ್ತೆ ಸಾರಿಗೆ ಸಚಿವಾಲಯವು ದೇಶದ ಹೆದ್ದಾರಿಗಳಲ್ಲಿ ಪ್ರಸ್ತುತ ಇರುವ ಫಾಸ್ಟ್‌ಟ್ಯಾಗ್ (FASTag) ವ್ಯವಸ್ಥೆಯನ್ನು ಮೀರಿ, ತಡೆರಹಿತ ‘ಮಲ್ಟಿ-ಲೇನ್ ಫ್ರೀ-ಫ್ಲೋ’ (Multi-Lane Free-Flow – MLFF) ಟೋಲ್ ಸಂಗ್ರಹ ವ್ಯವಸ್ಥೆಗೆ ಹೆಜ್ಜೆ ಇಡುತ್ತಿವೆ. ಈ ಹೊಸ ತಂತ್ರಜ್ಞಾನದಿಂದ ಹೆದ್ದಾರಿಗಳಲ್ಲಿ ಟೋಲ್ ಕಲೆಕ್ಷನ್ ವ್ಯವಸ್ಥೆ ಹೆಚ್ಚು ಸಮರ್ಪಕಗೊಳ್ಳಲಿದೆ. ಸರ್ಕಾರಕ್ಕೆ ವಾಹನಗಳಿಂದ ಟೋಲ್ ಸಂಗ್ರಹ ಹೆಚ್ಚುವುದರ ಜೊತೆಗೆ ವಾಹನ ಸಂಚಾರ ತಡೆರಹಿತವಾಗಿ ಆಗಲು ಸಾಧ್ಯವಾಗುತ್ತದೆ.
‘ಎಂಎಲ್‌ಎಫ್‌ಎಫ್’ ಸಿಸ್ಟಂ, ಏನಿದು?
MLFF ಎಂಬುದು ಟೋಲ್ ಪ್ಲಾಜಾಗಳಲ್ಲಿ ಯಾವುದೇ ಗೇಟ್ ಅಥವಾ ಬ್ಯಾರಿಯರ್‌ಗಳಿಲ್ಲದೆ (Barrier-less Tolling) ವಾಹನಗಳು ಸಾಮಾನ್ಯ ವೇಗದಲ್ಲೇ ಚಲಿಸುತ್ತಿರುವಾಗ ಟೋಲ್ ಸಂಗ್ರಹಿಸುವ ತಂತ್ರಜ್ಞಾನವಾಗಿದೆ. ವಾಹನಗಳು ಟೋಲ್ ಬೂತ್‌ಗಳಲ್ಲಿ ಸಾಲಿನಲ್ಲಿ ನಿಲ್ಲುವ ಅಥವಾ ವೇಗ ತಗ್ಗಿಸುವ ಅಗತ್ಯವಿರುವುದಿಲ್ಲ.
ಇದನ್ನೂ ಓದಿ: ಈ ವಾರ 29 ಷೇರುಗಳ ಲಿಸ್ಟಿಂಗ್; 2026ರಲ್ಲಿ ಐಪಿಒ ಸುಗ್ಗಿ, ಈ ವಾರ ಹೊಸ ಐಪಿಒ ಒಂದೇ ಒಂದು
ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್: ಹೆದ್ದಾರಿಗಳ ಮೇಲಿರುವ ಹೈ-ರೆಸಲ್ಯೂಶನ್ ಕ್ಯಾಮೆರಾಗಳು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಟೆಕ್ನಾಲಜಿ ಸಹಾಯದಿಂದ ವಾಹನದ ನಂಬರ್ ಪ್ಲೇಟ್ ಅನ್ನು ಗುರುತಿಸಿ ಟೋಲ್ ಖಾತೆಯಿಂದ ಹಣ ಕಡಿತಗೊಳಿಸುತ್ತವೆ.
ಜಿಎನ್‌ಎಸ್‌ಎಸ್: ಉಪಗ್ರಹ ಆಧಾರಿತ ಜಿಪಿಎಸ್ ತಂತ್ರಜ್ಞಾನದ (GNSS – Global Navigation Satellite System) ಮೂಲಕ ವಾಹನವು ಹೆದ್ದಾರಿಯಲ್ಲಿ ಚಲಿಸಿದ ನಿಖರ ದೂರವನ್ನು (Distance-based Tolling) ಲೆಕ್ಕಹಾಕಿ, ಅದಕ್ಕೆ ತಕ್ಕಷ್ಟು ಮಾತ್ರ ಟೋಲ್ ಕಡಿತಗೊಳಿಸಲಾಗುತ್ತದೆ.
ಫಾಸ್ಟ್‌ಟ್ಯಾಗ್‌ಗಿಂತ ಇದು ಹೇಗೆ ಭಿನ್ನ?
ಫಾಸ್ಟ್‌ಟ್ಯಾಗ್‌ನಲ್ಲಿ ವಾಹನಗಳು ಟೋಲ್ ಗೇಟ್ ಬಳಿ ಬಂದು ನಿಂತು ಸ್ಕ್ಯಾನ್ ಆಗಬೇಕಿತ್ತು. ಆದರೆ ಎಂಎಲ್‌ಎಫ್‌ಎಫ್ ವ್ಯವಸ್ಥೆಯಲ್ಲಿ ಟೋಲ್ ಪ್ಲಾಜಾಗಳ ಭೌತಿಕ ಗೇಟ್‌ಗಳೇ ಇರುವುದಿಲ್ಲ. ವಾಹನಗಳು ಗಂಟೆಗೆ 80-100 ಕಿ.ಮೀ ವೇಗದಲ್ಲಿ ಸಾಗುತ್ತಿದ್ದರೂ ಸ್ವಯಂಚಾಲಿತವಾಗಿ ಟೋಲ್ ಕಡಿತಗೊಳ್ಳುತ್ತದೆ.
ಇದನ್ನೂ ಓದಿ: ಫುಯೆಲ್ ಚಾರ್ಜ್ ಹೆಚ್ಚಿಸಿದ ಇಂಡಿಗೋ; ವಿಮಾನ ಪ್ರಯಾಣ ದರವೂ ಏರಿಕೆ
ಎಂಎಲ್‌ಎಫ್‌ಎಫ್ ಸಿಸ್ಟಂನಿಂದ ಪ್ರಮುಖ ಪ್ರಯೋಜನಗಳು
- ಸಮಯ ಮತ್ತು ಇಂಧನ ಉಳಿತಾಯ: ಟೋಲ್ ಕ್ಯೂನಲ್ಲಿ ನಿಲ್ಲುವುದು ತಪ್ಪುವುದರಿಂದ ಅಪಾರ ಪ್ರಮಾಣದ ಸಮಯ ಹಾಗೂ ಇಂಧನ ಉಳಿತಾಯವಾಗಲಿದೆ.
- ದೂರ ಆಧಾರಿತ ಶುಲ್ಕ: ಇಡೀ ಟೋಲ್ ಪ್ಲಾಜಾ ಶುಲ್ಕ ಕಟ್ಟುವ ಬದಲು, ಹೆದ್ದಾರಿಯಲ್ಲಿ ಚಲಿಸಿದ ನಿಖರ ಕಿಲೋಮೀಟರ್‌ಗಳಿಗೆ (Pay-as-you-use) ಮಾತ್ರ ಶುಲ್ಕ ಪಾವತಿಸುವ ಸೌಲಭ್ಯ ಸಿಗಲಿದೆ.
- ಸುಗಮ ಸಂಚಾರ: ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಗ್ ವ್ಯವಸ್ಥೆ ಇದ್ದರೂ ಪೀಕ್ ಸಮಯದಲ್ಲಿ ಸದ್ಯ ವಾಹನಗಳು ಮೂರ್ನಾಲ್ಕು ನಿಮಿಷ ಸರದಿಯಲ್ಲಿ ನಿಲ್ಲುತ್ತಿವೆ. ಆರ್ಎಫ್ಐಡಿ ಸ್ಕ್ಯಾನರ್ ರೀಡ ಮಾಡುವುದರಲ್ಲಿ ಆಗುವ ವಿಳಂಬವು ಇದಕ್ಕೆ ಕಾರಣ. ಎಂಎಲ್‌ಎಫ್‌ಎಫ್ ವ್ಯವಸ್ಥೆಯಲ್ಲಿ ಈ ನಿಲುಗಡೆಯ ಅಗತ್ಯ ಇರುವುದಿಲ್ಲ ವಾಹನಗಳು ನಿಂತು ಸ್ಟಾರ್ಟ್ ಆಗುವುದು ತಪ್ಪುವುದರಿಂದ ಹೆದ್ದಾರಿಗಳಲ್ಲಿ ವಾಯು ಮಾಲಿನ್ಯ ಕಡಿಮೆಯಾಗಲಿದೆ.
ಪ್ರಾಯೋಗಿಕ ಯೋಜನೆಯಾಗಿ (Pilot Project) ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮತ್ತು ಆಯ್ದ ಎಕ್ಸ್‌ಪ್ರೆಸ್‌ವೇಗಳಲ್ಲಿ ಇದನ್ನು ಮೊದಲು ಜಾರಿಗೆ ತರಲಾಗುತ್ತಿದ್ದು, ಹಂತ ಹಂತವಾಗಿ ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




