
ನವದೆಹಲಿ, ಫೆಬ್ರುವರಿ 3: ವಿದೇಶಕ್ಕೆ ಹೋಗಿ ಭಾರತೀಯರು ಸುಂಕ ಪಾವತಿಸುವ ಅವಶ್ಯಕತೆ ಇಲ್ಲದೆ ಹೆಚ್ಚು ಸಾಮಾನುಗಳನ್ನು (duty-free imports) ಈಗ ತರಬಹುದು. ಬಜೆಟ್ನಲ್ಲಿ ಪ್ರಕಟಿಸಲಾಗಿದ್ದ ಹೊಸ ಬ್ಯಾಗೇಜ್ ನಿಯಮಗಳು (Baggage Rules 2026) ನಿನ್ನೆ ಮಧ್ಯರಾತ್ರಿಯಿಂದಲೇ (ಜ. 2) ಜಾರಿಗೆ ಬಂದಿದೆ. ಹೊಸ ನಿಯಮಗಳಲ್ಲಿ ಸುಂಕ ರಹಿತವಾಗಿ ತರಬಹುದಾದ ಬ್ಯಾಗೇಜ್ ಅಥವಾ ಲಗೇಜ್ ಮಿತಿಯನ್ನು ಏರಿಸಲಾಗಿದೆ. ಆಮದಿತ ಸರಕುಗಳ ಮಿತಿಯಲ್ಲಿ ಏರಿಕೆ ಮಾಡಲಾಗಿದೆ. ಒಡವೆಗಳ ಮಿತಿಯಲ್ಲೂ ಏರಿಕೆ ಮಾಡಲಾಗಿದೆ.
ವಿದೇಶಕ್ಕೆ ಹೋಗಿ ಭಾರತಕ್ಕೆ ವಾಪಸ್ ಬರುವ ಭಾರತೀಯ ನಾಗರಿಕರು, ಅಥವಾ ವಿದೇಶದಿಂದ ಭಾರತಕ್ಕೆ ಪ್ರವಾಸ ಬರುವ ಭಾರತ ಮೂಲದ ವ್ಯಕ್ತಿಗಳು 75,000 ರೂ ಮೌಲ್ಯದ ಸರಕುಗಳಿಗೆ ಸುಂಕ ವಿನಾಯಿತಿ ಪಡೆಯುತ್ತಾರೆ. ಈ ಮುಂಚೆ ಇದ್ದ ನಿಯಮಗಳಲ್ಲಿ ಇದರ ಮಿತಿ 50,000 ರೂ ಇತ್ತು. ಈಗ ಅದನ್ನು 75,000 ರೂಗೆ ಏರಿಸಲಾಗಿದೆ.
ವಿದೇಶೀ ಪ್ರವಾಸಿಗರು ಭಾರತಕ್ಕೆ ಬರುವಾಗ ತರುವ ಲಗೇಜಿನಲ್ಲಿ 25,000 ರೂ ಮೌಲ್ಯದ ಸರಕುಗಳಿಗೆ ಸುಂಕ ಇರುವುದಿಲ್ಲ. ಹಳೆಯ ನಿಯಮಗಳ ಪ್ರಕಾರ ಇದರ ಮಿತಿ 15,000 ರೂ ಇತ್ತು.
ಇದನ್ನೂ ಓದಿ: ಬ್ಯಾಂಕ್ ಲಾಕರ್ ಕೀ ಕಳೆದುಹೋದರೆ ಮುಂದೇನು? ಲಾಕರ್ ಒಡೆಯಲಾಗುತ್ತಾ? ಇಲ್ಲಿದೆ ಪ್ರಕ್ರಿಯೆ
ವಿದೇಶದಲ್ಲಿ ಒಂದಕ್ಕಿಂತ ಹೆಚ್ಚು ವರ್ಷ ಇದ್ದು ಭಾರತಕ್ಕೆ ಮರಳುವ ವ್ಯಕ್ತಿಗಳು ಸುಂಕರಹಿತವಾಗಿ ತರಬಹುದಾದ ಆಭರಣದ ಮಿತಿಯನ್ನು ಏರಿಸಲಾಗಿದೆ. ಮಹಿಳೆಯೊಬ್ಬರು 40 ಗ್ರಾಮ್ ಚಿನ್ನಕ್ಕೆ ಸುಂಕ ಕಟ್ಟಬೇಕಿಲ್ಲ. ಇತರರಾದರೆ 20 ಗ್ರಾಮ್ವರೆಗಿನ ಚಿನ್ನಕ್ಕೆ ಸುಂಕ ಪಾವತಿಸಬೇಕಿಲ್ಲ.
ಈ ಹಿಂದಿನ ನಿಯಮಗಳ ಪ್ರಕಾರ ಮಹಿಳೆಯರು ಸುಂಕರಹಿತವಾಗಿ ತರಬಹುದಾದ ಒಡವೆಯ ಮೌಲ್ಯ 1,00,000 ರೂ ಮೀರುವಂತಿಲ್ಲ. ಪುರುಷರಾದರೆ 50,000 ರೂ ಮೌಲ್ಯ ಮಿತಿ ಇತ್ತು. ಈಗ ಮೌಲ್ಯದ ಮಾನಕ ತೆಗೆದುಹಾಕಿ, ತೂಕವನ್ನು ಅನ್ವಯಿಸಲಾಗುತ್ತದೆ.
ಈ ಬಾರಿಯ ಬಜೆಟ್ನಲ್ಲಿ ಆಮದಿತ ಸರಕುಗಳ ಮೇಲಿನ ಸುಂಕವನ್ನು ಶೇ. 20ರಿಂದ ಶೇ. 10ಕ್ಕೆ ಇಳಿಸಲಾಗಿದೆ. ಈ ಮುಂಚೆ 50,000 ರೂಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಮೇಲೆ ಶೇ. 20 ಸುಂಕ ಅನ್ವಯ ಆಗುತ್ತಿತ್ತು. ಈಗ 75,000 ರೂಗಿಂತ ಹೆಚ್ಚಿನ ಮೌಲ್ಯದ ಸರಕುಗಳ ಮೇಲೆ ಸುಂಕವನ್ನು ಶೇ. 10ಕ್ಕೆ ಇಳಿಸಲಾಗಿದೆ.
ಇದನ್ನೂ ಓದಿ: ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಗಳ ಭರ್ಜರಿ ಕುಸಿತ; ಇಗೋ ಇಲ್ಲಿವೆ ಕಾರಣಗಳು
ಉದಾಹರಣೆಗೆ, ಹೊಸ ನಿಯಮಗಳ ಪ್ರಕಾರ, ವಿದೇಶಕ್ಕೆ ಹೋಗಿ ನೀವು 2,00,000 ರೂ ಮೌಲ್ಯದ ಎಲೆಕ್ಟ್ರಾನಿಕ್ಸ್, ಗ್ಯಾಜೆಟ್ಸ್ ಇತ್ಯಾದಿಯನ್ನು ಖರೀದಿಸಿ ಬಂದಿದ್ದರೆ ಆಗ 1.25 ಲಕ್ಷ ರೂಗೆ ಶೇ. 10 ಸುಂಕ ಕಟ್ಟಬೇಕಾಗುತ್ತದೆ. ಅಂದರೆ 12,500 ರೂ ಸುಂಕ ಕಟ್ಟಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ