ಬ್ಯಾಂಕ್ಗಳ ಆಯಾ ಶಾಖೆಯಲ್ಲಿ ಖಾಲಿ ಇರುವ ಲಾಕರ್‌ಗಳ ಪಟ್ಟಿ ಹಾಗೂ ಹಂಚಿಕೆ ಉದ್ದೇಶಕ್ಕಾಗಿ ಲಾಕರ್‌ಗಳ ಕಾಯುವ ಪಟ್ಟಿಯನ್ನು (Waiting List) ನಿರ್ವಹಿಸಲು ಮತ್ತು ಲಾಕರ್‌ಗಳ ಹಂಚಿಕೆಯಲ್ಲಿ ಪಾರದರ್ಶಕತೆ ಖಾತ್ರಿಪಡಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಧವಾರ ಸೂಚನೆ ನೀಡಿದೆ. ಈ ಪರಿಷ್ಕೃತ ಸೂಚನೆ ಜನವರಿ 1, 2022ರಿಂದ ಜಾರಿಗೆ ಬರಲಿವೆ. “ಗ್ರಾಹಕರು ಆಯ್ಕೆಗಳನ್ನು ಮಾಡಲು ಅನುಕೂಲವಾಗುವಂತೆ ಬ್ಯಾಂಕ್‌ಗಳು ಶಾಖೆಯ ಲಾಕರ್‌ಗಳ ಪಟ್ಟಿಯನ್ನು ಹಾಗೂ ಕೋರ್ ಬ್ಯಾಂಕಿಂಗ್ ಸಿಸ್ಟಂನಲ್ಲಿ (ಸಿಬಿಎಸ್) ಅಥವಾ ಆರ್‌ಬಿಐನಿಂದ ನೀಡಲಾದ ಯಾವುದೇ ಸೈಬರ್ ಭದ್ರತೆಗೆ ಅನುಗುಣವಾಗಿ ಕಂಪ್ಯೂಟರೈಸ್ಡ್ (ಗಣಕೀಕೃತ) ವ್ಯವಸ್ಥೆಯಲ್ಲಿ ಕಾಯುವ ಪಟ್ಟಿ ನಿರ್ವಹಿಸಬೇಕು. ಲಾಕರ್‌ಗಳನ್ನು ಹಂಚುವ ಉದ್ದೇಶ ಮತ್ತು ಅವುಗಳ ಹಂಚಿಕೆಯಲ್ಲಿ ಪಾರದರ್ಶಕತೆ ಖಚಿತಪಡಿಸಬೇಕು,” ಎಂದು ಆರ್‌ಬಿಐ ತಿಳಿಸಿದೆ.
ಲಾಕರ್ ಹಂಚಿಕೆಗಾಗಿ ಎಲ್ಲ ಅರ್ಜಿಗಳ ಸ್ವೀಕೃತಿಯನ್ನು ಬ್ಯಾಂಕ್‌ಗಳು ದೃಢಪಡಿಸಬಹುದು ಮತ್ತು ಲಾಕರ್‌ಗಳು ಹಂಚಿಕೆಗೆ ಲಭ್ಯ ಇಲ್ಲದಿದ್ದರೆ ಗ್ರಾಹಕರಿಗೆ ಕಾಯುವ ಪಟ್ಟಿ ಸಂಖ್ಯೆಯನ್ನು ಒದಗಿಸಬಹುದು ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಲಾಕರ್ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಮತ್ತು ಸಿಡಿಡಿ (Customer Due Diligence) ಮಾನದಂಡಗಳನ್ನು ಸಂಪೂರ್ಣವಾಗಿ ಅನುಸರಿಸುವ ಬ್ಯಾಂಕ್ನ ಪ್ರಸ್ತುತ ಗ್ರಾಹಕರಿಗೆ ಸುರಕ್ಷಿತ ಠೇವಣಿ ಲಾಕರ್‌ಗಳು/ ಸುರಕ್ಷಿತ ಕಸ್ಟಡಿ ಆರ್ಟಿಕಲ್ ಸೌಲಭ್ಯಗಳನ್ನು ನೀಡಬಹುದು- ಅದು ನಿಯಮಾನುಸಾರ ಇರುತ್ತದೆ. ಬ್ಯಾಂಕ್ನೊಂದಿಗೆ ಯಾವುದೇ ಇತರ ಬ್ಯಾಂಕಿಂಗ್ ಸಂಬಂಧ ಹೊಂದಿರದ ಗ್ರಾಹಕರಿಗೆ ಸುರಕ್ಷಿತ ಠೇವಣಿ ಲಾಕರ್/ಸುರಕ್ಷಿತ ಕಸ್ಟಡಿ ಆರ್ಟಿಕಲ್ ಸೌಲಭ್ಯಗಳನ್ನು ನೀಡಬಹುದು ಎಂದು ಹೇಳಲಾಗಿದೆ.
ಲಾಕರ್ ಒಪ್ಪಂದದ ವೇಳೆ ಷರತ್ತು
ಲಾಕರ್ ಬಾಡಿಗೆದಾರರು ಕಾನೂನುಬಾಹಿರ ಅಥವಾ ಯಾವುದೇ ಅಪಾಯಕಾರಿ ವಸ್ತುವನ್ನು ಸೇಫ್ ಡೆಪಾಸಿಟ್ ಲಾಕರ್‌ನಲ್ಲಿ ಇಟ್ಟುಕೊಳ್ಳಬಾರದು ಎಂಬ ಷರತ್ತನ್ನು ಬ್ಯಾಂಕ್‌ಗಳು ಗ್ರಾಹಕರೊಂದಿಗೆ ಮಾಡಿಕೊಳ್ಳುವ ಲಾಕರ್ ಒಪ್ಪಂದದ ವೇಳೆ ಸೇರಿಸಿಕೊಳ್ಳಬೇಕು ಎಂದು ಆರ್‌ಬಿಐ ಹೇಳಿದೆ. “ಯಾವುದೇ ಗ್ರಾಹಕರು ಸೇಫ್ ಡೆಪಾಸಿಟ್ ಲಾಕರ್‌ನಲ್ಲಿ ಕಾನೂನುಬಾಹಿರ ಅಥವಾ ಅಪಾಯಕಾರಿ ವಸ್ತುಗಳನ್ನು ಇಟ್ಟಿರುವುದರ ಬಗ್ಗೆ ಅನುಮಾನ ಬಂದಲ್ಲಿ ಅಂತಹ ಗ್ರಾಹಕರ ವಿರುದ್ಧ ಆಯಾ ಸನ್ನಿವೇಶಕ್ಕೆ ಹೊಂದುವಂಥ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಬ್ಯಾಂಕ್ ಹೊಂದಿದೆ,” ಎಂದು ಆರ್‌ಬಿಐ ಸೇರಿಸಿದೆ.
ಬ್ಯಾಂಕ್‌ಗಳು ಸುರಕ್ಷಿತ ಠೇವಣಿ ಲಾಕರ್‌ಗಳಿಗಾಗಿ ಮಂಡಳಿಯಿಂದ ಅನುಮೋದನೆಯಾದ ಒಪ್ಪಂದ ಹೊಂದಿರುತ್ತವೆ ಎಂದು ಕೇಂದ್ರೀಯ ಬ್ಯಾಂಕ್ ಹೇಳುತ್ತದೆ. ಈ ಉದ್ದೇಶಕ್ಕಾಗಿ, ಐಬಿಎ ರೂಪಿಸುವ ಮಾದರಿ ಲಾಕರ್ ಒಪ್ಪಂದವನ್ನು ಬ್ಯಾಂಕ್‌ಗಳು ಅಳವಡಿಸಿಕೊಳ್ಳಬಹುದು ಎಂದು ಹೇಳಿದೆ. “ಈ ಒಪ್ಪಂದವು ಪರಿಷ್ಕೃತ ಸೂಚನೆಗಳು ಮತ್ತು ವಿಷಯದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನಗಳಿಗೆ ಅನುಸಾರವಾಗಿ ಇರಬೇಕು. ಬ್ಯಾಂಕ್‌ಗಳು ತಮ್ಮ ಲಾಕರ್ ಒಪ್ಪಂದಗಳಲ್ಲಿ ಯಾವುದೇ ನ್ಯಾಯಸಮ್ಮತ ಅಲ್ಲದ ನಿಯಮಗಳು ಅಥವಾ ಷರತ್ತುಗಳನ್ನು ಸೇರಿಸಿಲ್ಲ ಎಂದು ಖಾತ್ರಿಪಡಿಸಬೇಕು,” ಎಂದು ಆರ್‌ಬಿಐ ಹೇಳಿದೆ.
“ಬ್ಯಾಂಕ್ನ ಹಿತಾಸಕ್ತಿಗಳನ್ನು ಕಾಪಾಡಲು ಒಪ್ಪಂದದ ನಿಯಮಗಳು ಸಾಮಾನ್ಯ ವ್ಯವಹಾರದ ಅಗತ್ಯಕ್ಕಿಂತ ಹೆಚ್ಚು ಕಷ್ಟಕರ ಆಗಿರುವುದಿಲ್ಲ. ತಮ್ಮ ಲಾಕರ್ ಒಪ್ಪಂದಗಳನ್ನು ಈಗಾಗಲೇ ಇರುವ ಗ್ರಾಹಕರ ಜತೆಗೆ ಜನವರಿ 1, 2023ರೊಳಗೆ ಬ್ಯಾಂಕ್‌ಗಳು ನವೀಕರಿಸುತ್ತವೆ,” ಎಂದು ಆರ್‌ಬಿಐ ಹೇಳಿದೆ.
ಗ್ರಾಹಕರ ಸಾವಿನ ಸಂದರ್ಭದಲ್ಲಿ ಕ್ಲೇಮ್ಗಳ ವಿಲೇವಾರಿ
ಕ್ಲೇಮ್ಗಳ ಇತ್ಯರ್ಥಕ್ಕಾಗಿ ಬ್ಯಾಂಕ್‌ಗಳು ಮಂಡಳಿಯಿಂದ ಅನುಮೋದಿಸಿದ ನೀತಿಯನ್ನು ಹೊಂದಿರತಕ್ಕದ್ದು ಎಂದು ಆರ್‌ಬಿಐ ಹೇಳಿದೆ. ಇದು ನಾಮಿನೇಷನ್ಗೆ ನೀತಿ ರೂಪಿಸಲು ಮತ್ತು ಸುರಕ್ಷತಾ ಲಾಕರ್‌ಗಳು/ಸುರಕ್ಷಿತ ಕಸ್ಟಡಿ ಆರ್ಟಿಕಲ್ಗಳನ್ನು ನಾಮಿನಿಗೆ ಬಿಡುಗಡೆ ಮಾಡಲು ಮತ್ತು ಇತರ ವ್ಯಕ್ತಿಗಳ ಕ್ಲೇಮ್ಗಳ ನೋಟಿಸ್ ವಿರುದ್ಧ ರಕ್ಷಣೆ ನೀಡಲು ಬ್ಯಾಂಕ್ಗಳನ್ನು ಕೇಳಿದೆ.
“ಲಾಕರ್‌ಗಳ ಸುರಕ್ಷಿತ ಕಸ್ಟಡಿಯಲ್ಲಿರುವ ವಸ್ತುಗಳು ಮತ್ತು ಸರಿಯಾದ ನಾಮಿನಿಗೆ ಹಿಂತಿರುಗಿದೆಯೇ ಎಂದು ಖಚಿತಪಡಿಸಿಕೊಳ್ಳಲು, ಸಾವಿಗೆ ಸಂಬಂಧಿಸಿದಂತೆ ಪುರಾವೆಗಳನ್ನು ಪರಿಶೀಲಿಸಲು, ಅನ್ವಯವಾಗುವ ಕಾನೂನುಗಳು ಮತ್ತು ನಿಯಂತ್ರಕ ಮಾರ್ಗಸೂಚಿಗಳ ಪ್ರಕಾರ ಬ್ಯಾಂಕ್‌ಗಳು ತಮ್ಮದೇ ಆದ ಕ್ಲೇಮ್ ಫಾರ್ಮ್ಯಾಟ್‌ಗಳನ್ನು ರೂಪಿಸಿಕೊಳ್ಳಬೇಕು,” ಎಂದು ಹೇಳಲಾಗಿದೆ. ಬ್ಯಾಂಕ್‌ಗಳು ಕ್ಲೇಮ್ಗಳನ್ನು ಇತ್ಯರ್ಥಪಡಿಸಬಹುದು. ಮತ್ತು ಠೇವಣಿದಾರರ ಸಾವಿಗೆ ಸಂಬಂಧಿಸಿದ ಸಾಕ್ಷ್ಯ- ಪುರಾವೆಯನ್ನು ಕ್ಲೇಮ್ ಉದ್ದೇಶಕ್ಕಾಗಿ ಪಡೆದ ದಿನಾಂಕದಿಂದ 15 ದಿನಗಳನ್ನು ಮೀರದ ಅವಧಿಯಲ್ಲಿ ಲಾಕರ್‌ನಲ್ಲಿನ ವಸ್ತುಗಳನ್ನು ಬದುಕುಳಿದವರಿಗೆ(ರು)/ ನಾಮಿನಿಗೆ(ಗಳಿಗೆ) ಬಿಡುಗಡೆ ಮಾಡಬೇಕು ಎಂದು ಆರ್‌ಬಿಐನಿಂದ ಸೇರಿಸಲಾಗಿದೆ.
ಇದನ್ನೂ ಓದಿ: Reserve Bank Of India: ಗ್ರಾಹಕರ ಅನ್ಕ್ಲೇಮ್ ಡೆಪಾಸಿಟ್ ಬಗ್ಗೆ ಆರ್‌ಬಿಐ ಮಹತ್ವದ ತೀರ್ಮಾನ
(New Guidelines For Bank Lockers By Reserve Bank Of India Here Is The Details)