Reserve Bank Of India: ಗ್ರಾಹಕರ ಅನ್ಕ್ಲೇಮ್ ಡೆಪಾಸಿಟ್ ಬಗ್ಗೆ ಆರ್ಬಿಐ ಮಹತ್ವದ ತೀರ್ಮಾನ
ಅನ್ಕ್ಲೇಮ್ ಟರ್ಮ್ ಡೆಪಾಸಿಟ್ ಬಗ್ಗೆ ರಿಸರ್ವ್ ಬ್ಯಾಂಕ್ ಇಂಡಿಯಾದಿಂದ ಮಹತ್ವವಾದ ತೀರ್ಮಾನವನ್ನು ತೆಗೆದುಕೊಂಡಿದೆ. ಆ ಬಗ್ಗೆ ವಿವರ ಈ ಲೇಖನ ಇಲ್ಲಿದೆ.
ಬ್ಯಾಂಕ್ಗಳಲ್ಲಿ ಇರುವ ಅನ್ಕ್ಲೇಮ್ ಠೇವಣಿಗೆ ಸಂಬಂಧಿಸಿದಂತೆ ಪ್ರಮುಖವಾದ ನಿಯಮ ಬದಲಾವಣೆ ಸಂಗತಿಯನ್ನು ಶುಕ್ರವಾರ ಪರಿಶೀಲನೆ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ. ನಿಶ್ಚಿತ ಠೇವಣಿ ಮೆಚ್ಯೂರ್ ಆಗಿ, ಪಾವತಿಸದ ಬಾಕಿ ಮೊತ್ತಕ್ಕೆ ಸೇರಿ ಗ್ರಾಹಕರಿಗೆ ಬಡ್ಡಿ ದೊರೆಯುತ್ತದೆ. ಈ ತನಕ ಏನಾಗುತ್ತಿತ್ತು ಅಂದರೆ, ನಿಶ್ಚಿತ ಠೇವಣಿ ಮೆಚ್ಯೂರ್ ಆದ ನಂತರ ಅದು ಹಾಗೂ ಪಾವತಿ ಮಾಡದ ಮೊತ್ತಕ್ಕೆ ಉಳಿತಾಯ ಖಾತೆಯ ಬಡ್ಡಿ ದರ ದೊರೆಯುತ್ತದೆ. “ಬ್ಯಾಂಕ್ಗಳಲ್ಲಿ ವಾಪಸ್ ನೀಡದೆ ಉಳಿದ ಟರ್ಮ್ ಡೆಪಾಸಿಟ್ ಹಾಗೂ ಬಾಕಿ ಉಳಿಸಿಕೊಂಡ ಮೊತ್ತಕ್ಕೆ ಉಳಿತಾಯ ಖಾತೆಗೆ ಅನ್ವಯ ಆಗುವಂಥ ಬಡ್ಡಿ ದರ ಅಥವಾ ಮೆಚ್ಯೂರ್ ಆದ ಟರ್ಮ್ ಡೆಪಾಸಿಟ್ ಬಡ್ಡಿ ದರ ಇವೆರಡರ ಪೈಕಿ ಯಾವುದು ಕಡಿಮೆಯೋ ಅಷ್ಟು ನೀಡಲಾಗುತ್ತದೆ,” ಎಂದು ಆರ್ಬಿಐ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಎಲ್ಲ ವಾಣಿಜ್ಯ ಬ್ಯಾಂಕ್ಗಳು, ಸಣ್ಣ ಹಣಕಾಸು ಬ್ಯಾಂಕ್ಗಳು, ಸ್ಥಳೀಯ ಬ್ಯಾಂಕ್ಗಳು ಮತ್ತು ಕೋ ಆಪರೇಟಿವ್ ಬ್ಯಾಂಕ್ಗಳಿಗೆ ಈ ಹೊಸ ನಿಯಮಾವಳಿ ಅನ್ವಯ ಆಗುತ್ತದೆ. ಟರ್ಮ್ ಡೆಪಾಸಿಟ್ಗಳು ಅಂದರೆ, ನಿಶ್ಚಿತ ಕಾಲಾವಧಿಗೆ ಮೆಚ್ಯೂರ್ ಆಗುವಂಥ ಠೇವಣಿಗಳು. ಅಲ್ಲಿಯ ತನಕ ಅದನ್ನು ವಿಥ್ ಡ್ರಾ ಮಾಡಲು ಸಾಧ್ಯವಿಲ್ಲ. ಇದರಲ್ಲಿ ರೆಕರಿಂಗ್, ಕ್ಯುಮಲೇಟಿವ್, ಆನ್ಯುಯುಟಿ, ರೀ ಇನ್ವೆಸ್ಟ್ಮೆಂಟ್ ಡೆಪಾಸಿಟ್ಗಳು ಮತ್ತು ನಗದು ಪ್ರಮಾಣಪತ್ರಗಳು ಒಳಗೊಳ್ಳುತ್ತವೆ. ಪ್ರತಿ ವರ್ಷವೂ ಅನ್ ಕ್ಲೇಮ್ ಮಾಡದ ಬ್ಯಾಂಕ್ ಠೇವಣಿಗಳು ಹೆಚ್ಚುತ್ತಲೇ ಇರುವ ಕಾಲಘಟ್ಟದಲ್ಲಿ ಈ ಬೆಳವಣಿಗೆ ಆಗಿದೆ. FY19 ಕೊನೆಗೆ 18,380 ಕೋಟಿ ರೂ. ಆಗಿತ್ತು. ಅದಕ್ಕೂ ಒಂದು ವರ್ಷ ಮುನ್ನ ಆ ಮೊತ್ತ 14,307 ಕೋಟಿ ರೂಪಾಯಿ ಇತ್ತು.
ಗ್ರಾಹಕರು ಒಂದು ವೇಳೆ 10 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಅವಧಿಗೆ ಖಾತೆಯಲ್ಲಿ ವ್ಯವಹಾರ ಮಾಡದಿದ್ದಲ್ಲಿ ಅಂಥ ಡೆಪಾಸಿಟ್ ಅನ್ನು ಆರ್ಬಿಐ ಅನ್ಕ್ಲೇಮ್ ಎಂದು ವರ್ಗೀಕರಿಸಲಾಗುತ್ತದೆ. ಅನ್ಕ್ಲೇಮ್ ಮೊತ್ತವನ್ನು ಪ್ರತಿ ತಿಂಗಳು ಆರ್ಬಿಐನ ಡೆಪಾಸಿಟರ್ ಎಜುಕೇಷನ್ ಅಂಡ್ ಅವೇರ್ನೆಸ್ (DEA)ಗೆ ವರ್ಗಾವಣೆ ಮಾಡಲಾಗುತ್ತದೆ. 2019-20ರಲ್ಲಿ ಡಿಇಎ ಮೊತ್ತ 33,144 ಕೋಟಿ ರೂ. ಇದ್ದರೆ, ಹೋದ ವರ್ಷ ರೂ. 25,747 ಕೋಟಿ ಇತ್ತು ಎಂಬ ಅಂಶವನ್ನು ಆರ್ಬಿಐ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಈ ಮೊತ್ತವನ್ನು ವಿವಿಧ ಬ್ಯಾಂಕ್ಗಳಿಂದ ಡಿಇಎಗೆ ವರ್ಗಾವಣೆ ಮಾಡಿದ ಮೇಲೆ, ಅದನ್ನು ಸರ್ಕಾರದ ಸೆಕ್ಯೂರಿಟಿಗಳ ಮೇಲೆ ಆರ್ಬಿಐ ಸಮಿತಿ ಹೂಡುತ್ತದೆ. ಅದರ ಮೇಲೆ ಬಂದ ಆದಾಯವನ್ನು ಠೇವಣಿ ಮೇಲೆ ಬಡ್ಡಿ ಪಾವತಿಗೆ ಹಾಗೂ ಹೂಡಿಕೆದಾರರ ಶಿಕ್ಷಣದ ಉದ್ದೇಶಗಳಿಗೆ ಬಳಸಲಾಗುತ್ತದೆ.
ಇದನ್ನೂ ಓದಿ: Reserve Bank Of India: ಆರ್ಬಿಐನಿಂದ ಕೇಂದ್ರ ಸರ್ಕಾರಕ್ಕೆ ರೂ. 99,122 ಕೋಟಿ ವರ್ಗಾವಣೆಗೆ ನಿರ್ಧಾರ
(Reserve Bank Of India review new rules about unclaimed deposits of customers)
Published On - 4:51 pm, Sun, 4 July 21