Reserve Bank Of India: ಆರ್ಬಿಐನಿಂದ ಕೇಂದ್ರ ಸರ್ಕಾರಕ್ಕೆ ರೂ. 99,122 ಕೋಟಿ ವರ್ಗಾವಣೆಗೆ ನಿರ್ಧಾರ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೇಂದ್ರ ಸರ್ಕಾರಕ್ಕೆ 99,122 ಕೋಟಿ ರೂಪಾಯಿ ವರ್ಗಾವಣೆ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಶುಕ್ರವಾರ ತಿಳಿಸಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್ಬಿಐ) ಮಿಗತೆ (surplus) ಹಣ ರೂ. 99,122 ಕೋಟಿಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡುವುದಕ್ಕೆ ನಿರ್ಧಾರ ಮಾಡಿದೆ ಎಂದು ಕೇಂದ್ರ ಬ್ಯಾಂಕ್ ಶುಕ್ರವಾರದಂದು ಹೇಳಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅಧ್ಯಕ್ಷತೆಯಲ್ಲಿ 589ನೇ ಸಭೆ ನಡೆಯಿತು. ಅಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು ಎಂದು ತಿಳಿಸಲಾಗಿದೆ. ಮಂಡಳಿಯು ಈ ಸಭೆಯಲ್ಲಿ ಸದ್ಯದ ಆರ್ಥಿಕ ಸನ್ನಿವೇಶ, ಜಾಗತಿಕ ಮತ್ತು ದೇಶೀಯ ಸವಾಲುಗಳು, ಕೊರೊನಾ ಎರಡನೇ ಅಲೆಯಿಂದ ಆಗಿರುವ ಆರ್ಥಿಕತೆ ಮೇಲಿನ ದುಷ್ಪರಿಣಾಮದಿಂದ ಹೊರಬರಲು ಆರ್ಬಿಐ ತೆಗೆದುಕೊಂಡ ಕ್ರಮಗಳನ್ನೂ ಪರಾಮರ್ಶಿಸಲಾಯಿತು.
ಈ ಹಿಂದೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಲೆಕ್ಕಾಚಾರದ ವರ್ಷ ಜುಲೈನಿಂದ ಆರಂಭವಾಗಿ ಜೂನ್ಗೆ ಮುಗಿಯುತ್ತಿತ್ತು. ಅದು ಏಪ್ರಿಲ್ನಿಂದ ಮಾರ್ಚ್ ತನಕ ಎಂದು ಬದಲಾಗಿದೆ. ಮಂಡಳಿಯು 2020ರ ಜುಲೈನಿಂದ 2021ರ ಮಾರ್ಚ್ ತನಕದ ಹಾದಿಯಲ್ಲಿನ ಕಾರ್ಯ ನಿರ್ವಹಣೆ ಬಗ್ಗೆ ಚರ್ಚಿಸಲಾಯಿತು. ವಾರ್ಷಿಕ ವರದಿಗೆ ಮತ್ತು ಈಗಿನ ಅವಧಿಯ ಲೆಕ್ಕ ವ್ಯವಹಾರಗಳಿಗೆ ಅನುಮೋದನೆ ನೀಡಲಾಯಿತು. ಇದರ ಜತೆಗೆ ಮಂಡಳಿಯಿಂದ ಮಿಗತೆಯ 99,122 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾವಣೆ ಮಾಡಲು ಸಹ ಸಮ್ಮತಿಸಲಾಯಿತು. ಇದು ಮಾರ್ಚ್ 31, 2021ಕ್ಕೆ ಕೊನೆಯಾದ 9 ತಿಂಗಳ ಅವಧಿಗೆ (2020ರ ಜುಲೈನಿಂದ 2021ರ ಮಾರ್ಚ್ ತನಕ). ಈ ಸಂದರ್ಭದಲ್ಲಿ ಕಂಟಿಜೆನ್ಸಿ ರಿಸ್ಕ್ ಬಫರ್ (ಅಂದುಕೊಳ್ಳದ ರೀತಿಯಲ್ಲಿ ಬರಬಹುದಾದ ಅಪಾಯಕಾರಿ ಸನ್ನಿವೇಶಗಳಿಗಾಗಿ) ಶೇ 5.50 ಮೀಸಲಿಡಲಾಗಿದೆ.
ಡೆಪ್ಯೂಟಿ ಗವರ್ನರ್ ಮಹೇಶ್ ಕುಮಾರ್ ಜೈನ್, ಡಾ. ಮೈಕೇಲ್ ದೇಬಬ್ರತ ಪಾತ್ರ, ಎಂ. ರಾಜೇಶ್ವರ ರಾವ್, ಟಿ. ರಬಿಶಂಕರ್, ಮತ್ತು ಮಂಡಳಿಯ ಇತರ ನಿರ್ದೇಶಕರಾದ ಎನ್.ಚಂದ್ರಶೇಖರನ್, ಸತೀಶ್ ಕೆ.ಮರಾಠೆ, ಎಸ್. ಗುರುಮೂರ್ತಿ, ರೇವತಿ ಐಯ್ಯರ್, ಪ್ರೊ. ಸಚಿನ್ ಚತುರ್ವೇದಿ ಈ ಸಭೆಯಲ್ಲಿ ಭಾಗಿ ಆಗಿದ್ದರು. ಹಣಕಾಸು ಸೇವೆ ಇಲಾಖೆಯ ದೇಬಶೀಶ್ ಪಾಂಡಾ, ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಅಜಯ್ ಸೇಠ್ ಕೂಡ ಹಾಜರಿದ್ದರು.
(Reserve Bank Of India on Friday announced that, bank decided to transfer Rs 99,122 crore to central government)
Published On - 4:53 pm, Fri, 21 May 21