VDA Hike: ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ ಹೆಚ್ಚಳ; 1.50 ಕೋಟಿ ಮಂದಿಗೆ ಅನುಕೂಲ
Variable DA Hike: ಕೇಂದ್ರ ಸರ್ಕಾರದಿಂದ ನಿರ್ದಿಷ್ಟ ವಲಯದವರಿಗೆ ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ ಅನ್ನು ತಿಂಗಳಿಗೆ 105 ರೂಪಾಯಿಯಿಂದ 210 ರೂಪಾಯಿಗೆ ಏರಿಸಲಾಗಿದೆ. ಇದರಿಂದ 1.50 ಕೋಟಿ ಮಂದಿಗೆ ಅನುಕೂಲವಾಗಲಿದೆ.
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ (ವಿಡಿಎ) ಅನ್ನು ತಿಂಗಳಿಗೆ 105 ರೂಪಾಯಿಯಿಂದ 210 ರೂಪಾಯಿಗೆ ಏರಿಕೆ ಮಾಡಿ, ಶುಕ್ರವಾರದಂದು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಘೋಷಣೆ ಮಾಡಲಾಗಿದೆ. ಈ ಏರಿಕೆಯು ಏಪ್ರಿಲ್ 1, 2021ರಿಂದ ಅನ್ವಯ ಆಗುತ್ತದೆ. ಇದರಿಂದ ಕೇಂದ್ರ ಸರ್ಕಾರದ ನಿರ್ದಿಷ್ಟ ವಲಯದ ಉದ್ಯೋಗಿಗಳು ಮತ್ತು ಸಿಬ್ಬಂದಿಗೆ ಕನಿಷ್ಠ ವೇತನ ಕೂಡ ಜಾಸ್ತಿ ಆಗಲಿದೆ. ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವಂಥ ನಿರ್ದಿಷ್ಟ ಸಂಸ್ಥೆಗಳ ಸಿಬ್ಬಂದಿ ಹಾಗೂ ಕಾರ್ಮಿಕರಿಗೆ ಇದು ಅನ್ವಯ ಆಗುತ್ತದೆ. ರೈಲ್ವೆ ಆಡಳಿತ, ಗಣಿಗಾರಿಕೆ, ತೈಲ ವಲಯ, ಪ್ರಮುಖ ಬಂದರು, ಕೇಂದ್ರ ಸರ್ಕಾರದಿಂದ ಸ್ಥಾಪನೆಯಾದ ನಿಗಮಗಳು ಇಂಥದ್ದರಲ್ಲಿ ಕೆಲಸ ಮಾಡುತ್ತಿರುವಂಥವರಿಗೆ ಈ ವಿಡಿಎ ಹೆಚ್ಚಳವು ಜಾರಿ ಆಗಲಿದೆ. ಈ ದರಗಳು ಗುತ್ತಿಗೆ ಮತ್ತು ಸಾಮಾನ್ಯ ಸಿಬ್ಬಂದಿ/ಕಾರ್ಮಿಕರಿಗೆ ಸಮಾನವಾಗಿರುತ್ತದೆ.
ಪಿಟಿಐ ಸುದ್ದಿ ಸಂಸ್ಥೆ ಜತೆಗೆ ಕೇಂದ್ರ ಕಾರ್ಮಿಕ ಮುಖ್ಯಸ್ಥ (ಸಿಎಲ್ಸಿ) ಡಿಪಿಎಸ್ ನೇಗಿ ಮಾತನಾಡಿ, ಕೇಂದ್ರ ವಲಯದ ಕಾರ್ಮಿಕರಿಗೆ ಪ್ರತಿ ತಿಂಗಳು ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ 105 ರೂಪಾಯಿಯಿಂದ 210ಕ್ಕೆ ಏರಿಕೆ ಆಗುತ್ತದೆ ಎಂದಿದ್ದಾರೆ. ಕಾರ್ಮಿಕ ಸಚಿವಾಲಯದಿಂದ ಈ ಬಗ್ಗೆ ಹೇಳಿಕೆ ನೀಡಿ, ಅಧಿಸೂಚನೆ ಹೊರಡಿಸಿದ್ದು ಮತ್ತು ಏಪ್ರಿಲ್ 1, 2021ರಿಂದಲೇ ಅನ್ವಯ ಆಗುವಂತೆ ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ನ ಪರಿಷ್ಕೃತ ದರವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ. ಕೊರೊನಾ ಎರಡನೇ ಅಲೆಯ ಮಧ್ಯೆ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕೇಂದ್ರ ವಲಯದ ವಿವಿಧ ವರ್ಗದ ಉದ್ಯೋಗಿಗಳಿಗೆ ಇದರಿಂದ ಅನುಕೂಲ ಆಗಲಿದೆ ಎನ್ನಲಾಗಿದೆ.
ವೇರಿಯಬಲ್ ಡಿಯರ್ನೆಸ್ ಅಲೋವೆನ್ಸ್ ಅಥವಾ ವಿಡಿಎ ಅಂತ ಏನನ್ನು ಕರೆಯುತ್ತಾರೆ ಅದರ ಪರಿಷ್ಕರಣೆ ಮಾಡೋದು ಗ್ರಾಹಕ ದರ ಸೂಚ್ಯಂಕದ ಸರಾಸರಿಯ ಆಧಾರದಲ್ಲಿ ಕೈಗಾರಿಕೆ ಕಾರ್ಮಿಕರಿಗೆ (CPI-IW), ಈ ದರ ಸೂಚ್ಯಂಕವನ್ನು ಕಾರ್ಮಿಕ ಸಚಿವಾಲಯವು ಒಗ್ಗೂಡಿಸುತ್ತದೆ. ವಿಡಿಎ ಪರಿಷ್ಕರಣೆಗೆ 2020ರ ಜುಲೈನಿಂದ ಡಿಸೆಂಬರ್ವರೆಗಿನ ಸರಾಸರಿ ಸಿಪಿಐ-ಐಡಬ್ಲ್ಯು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಈಗಿನ ಪರಿಷ್ಕರಣೆಯಿಂದ ದೇಶದಲ್ಲಿ ಕೇಂದ್ರ ಸರ್ಕಾರದ ವಿವಿಧ ವಲಯಗಳ ಅಡಿಯಲ್ಲಿ ಬರುವ 1.50 ಕೋಟಿ ಕಾರ್ಮಿಕರಿಗೆ ನೆರವಾಗುತ್ತದೆ. ಸದ್ಯದ ಕೊರೊನಾ ಪರಿಸ್ಥಿತಿಯಲ್ಲಿ ಈ ಕಾರ್ಮಿಕರಿಗೆ ವಿಡಿಎ ಹೆಚ್ಚಳದಿಂದ ಅನುಕೂಲ ಆಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಗಂಗ್ವರ್ ಹೇಳಿದ್ದಾರೆ.
ಹಣದುಬ್ಬರಕ್ಕೆ ಪರಿಹಾರ ಎಂಬಂತೆ ಕೇಂದ್ರ ಸರ್ಕಾರದಿಂದ ನಿರ್ದಿಷ್ಟ ವಲಯದ ಕಾರ್ಮಿಕರಿಗೆ ವಿಡಿಎ ನೀಡಲಾಗುತ್ತದೆ.
ಇದನ್ನೂ ಓದಿ: 7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಜೂನ್ನಲ್ಲಿ ಡಿಎ ಹೆಚ್ಚಳ ಘೋಷಣೆ ಮಾಡುವ ಸಾಧ್ಯತೆ
(Variable Dearness Allowance (VDA) increased by central govt from Rs 105 to Rs 210 per month. 1.5 Crore people benefit from this)
Published On - 10:06 pm, Fri, 21 May 21