7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಜೂನ್ನಲ್ಲಿ ಡಿಎ ಹೆಚ್ಚಳ ಘೋಷಣೆ ಮಾಡುವ ಸಾಧ್ಯತೆ
ಕೇಂದ್ರ ಸರ್ಕಾರಿ ನೌಕರರಿಗೆ ಏಪ್ರಿಲ್ ತಿಂಗಳ ಕೊನೆ ಅಥವಾ ಮೇ ಮೊದಲ ವಾರದಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕೋವಿಡ್- 19 ಎರಡನೇ ಅಲೆಯ ಕಾರಣಕ್ಕೆ ಜೂನ್ಗೆ ಮುಂದಕ್ಕೆ ಹೋಗಿದೆ.
ನವದೆಹಲಿ: ತುಟ್ಟಿ ಭತ್ಯೆ (ಡಿಎ) ಹೆಚ್ಚಳಕ್ಕಾಗಿ ಕಾಯುತ್ತಿದ್ದ ಕೇಂದ್ರ ಸರ್ಕಾರಿ ನೌಕರರು ಇನ್ನಷ್ಟು ಸಮಯ ಕಾಯಬೇಕಾಗಬಹುದು. ಜನವರಿ 1, 2021ರಿಂದ ಬಾಕಿಯಿರುವ ಡಿಎ ಘೋಷಣೆ ಮಾಡುವುದಕ್ಕೆ ಇನ್ನಷ್ಟು ತಡ ಆಗಬಹುದು ಎಂದು ಲೈಬ್ಮಿಂಟ್ ವರದಿ ಮಾಡಿದೆ. ಸಿಬ್ಬಂದಿ ಪರವಾಗಿ ಇರುವ ನ್ಯಾಷನಲ್ ಕೌನ್ಸಿಲ್ ಆಫ್ ಜೆಸಿಎಂ ಹೇಳಿರುವ ಪ್ರಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಮುಂದಿನ ತಿಂಗಳು, ಅದು ಜೂನ್ನಲ್ಲಿ ಡಿ.ಎ. ಹೆಚ್ಚಳದ ಬಗ್ಗೆ ಘೋಷಣೆ ಮಾಡಬಹುದು. ಜೆಸಿಎಂ ಪದಾಧಿಕಾರಿಗಳು ಹೇಳುವ ಪ್ರಕಾರ, ಮೂಲ ವೇತನದ ಶೇಕಡಾ 4ರಷ್ಟನ್ನು ಡಿಎ ಹೆಚ್ಚಳ ಮಾಡಬಹುದು. ಈ ಬಗ್ಗೆ ಜೆಸಿಎಂ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ ಮಾತನಾಡಿ, ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ಅಧಿಕಾರಿಗಳ ಜತೆಗೆ ನಾವು ನಿರಂತರ ಸಂಪರ್ಕದಲ್ಲಿದ್ದೇವೆ. ಭಾರತದಲ್ಲಿ ಕೋವಿಡ್ ಎರಡನೇ ಅಲೆಯಿಂದ ಸಂಪೂರ್ಣ ಯೋಜನೆಗೆ ಅಡೆತಡೆ ಆಗಿದೆ ಮತ್ತು ಒಂದೇ ತಿಂಗಳಲ್ಲಿ ಎಲ್ಲ ಬದಲಾಗಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ ಆಗಿದೆ. ಆ ಕಾರಣಕ್ಕೆ ಏಪ್ರಿಲ್ ಕೊನೆಯಲ್ಲಿ ಅಥವಾ ಮೇ ಮೊದಲ ವಾರದಲ್ಲಿ ನಿರೀಕ್ಷೆ ಮಾಡಿದ ಡಿಎ ಹೆಚ್ಚಳ ಈಗ ಜೂನ್ಗೆ ಹೋಗಿದೆ ಎಂದಿದ್ದಾರೆ.
ಇನ್ನೂ ಮುಮದುವರಿದು ಮಾತನಾಡಿರುವ ಅವರು, ಇದರಿಂದಾಗಿ ಕೇಂದ್ರ ಸರ್ಕಾರದ ಏಳನೇ ವೇತನ ಆಯೋಗದ ಶಿಫಾರಸಿನ ಮೇಲೆ ಏನೂ ಪ್ರಭಾವ ಮಾಡುವುದಿಲ್ಲ. ಏಕೆಂದರೆ, ಕೇಂದ್ರದಿಂದ ಈಗಾಗಲೇ ಜೂನ್ 2021ರ ತನಕ ಸಿಬ್ಬಂದಿ ಮತ್ತು ಪಿಂಚಣಿದಾರರ ಡಿಎ ಮತ್ತು ಡಿಆರ್ ತಡೆಹಿಡಿಯಲಾಗಿತ್ತು. ಈ ವರ್ಷದ ಮಾರ್ಚ್ನಲ್ಲಿ ಘೋಷಣೆ ಮಾಡಿದ ಪ್ರಕಾರ, ಜುಲೈ 1, 2021ರಿಂದ ಡಿಎ ಮತ್ತು ಡಿಆರ್ ಮತ್ತೆ ಹೆಚ್ಚಳ ಮಾಡುವುದಾಗಿ ತಿಳಿಸಲಾಗಿತ್ತು. ಇದರರ್ಥ ಏನೆಂದರೆ, ಜನವರಿ 1, 2021ರಿಂದಲೇ ಬಾಕಿ ಇರುವ ಡಿಎ ಹೆಚ್ಚಳವನ್ನು ಈಗ ಘೋಷಣೆ ಮಾಡಿದರೂ ಇದು ಜಾರಿಗೆ ಬರುವುದು ಜುಲೈ 1ರಿಂದಲೇ. ಇನ್ನು ಡಿಎ ಹೆಚ್ಚಳದ ಬಗ್ಗೆ ಮಿಶ್ರಾ ಮಾತನಾಡಿದ್ದು, 2020ರ ಜುಲೈನಿಂದ ಡಿಸೆಎಂಬರ್ ಮಧ್ಯೆ ಸರಾಸರಿ ಹಣದುಬ್ಬರ ಶೇ 3.5ರಷ್ಟಿದೆ. ಆದ್ದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಕನಿಷ್ಠ ಡಿಎ ಹೆಚ್ಚಳ ಶೇ 3.5ರಷ್ಟು ಮಾಡಬಹುದು.
ಇನ್ನು ಮೂರು ಡಿ.ಎ. ಕಂತಿನ ಬಗ್ಗೆ ಪ್ರತಿಕ್ರಿಯೆ ನೀಡಿ, ಜೆಸಿಎಂ ಮತ್ತು ಇತರ ಸರ್ಕಾರಿ ಕೇಂದ್ರ ಸರ್ಕಾರಿ ನೌಕರರು ನಿರಂತರವಾಗಿ ಸಂಪರ್ಕದಲ್ಲಿದ್ದು, ಎಲ್ಲರೂ ಒಟ್ಟುಗೂಡಿ ಮೂರು ಡಿಎ ಕಂತುಗಳ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಅಂದಹಾಗೆ ಜೆಸಿಎಂ ರಾಷ್ಟ್ರೀಯ ಸಮಿತಿ ಮತ್ತು ಡಿಒಪಿಟಿ ಹಾಗೂ ಆರ್ಥಿಕ ಸಚಿವಾಲಯ (ವೆಚ್ಚ ಇಲಾಖೆ) ಅಧಿಕಾರಿಗಳು ಏಳನೇ ವೇತನ ಆಯೋಗದ ಬಗ್ಗೆ ಚರ್ಚಿಸಲು ಆಯೋಜಿಸಿದ್ದ ಸಭೆಯು ಕೋವಿಡ್ ಕಾರಣದಿಂದಾಗಿ ಮಂದೆ ಹೋಗಿದೆ. ಈ ಸಬೆಯು ಮೇ 8, 2021ಕ್ಕೆ ನಿಗದಿ ಆಗಿತ್ತು. ಅದೀಗ ಮೇ ತಿಂಗಳ ಕೊನೆ ವಾರಕ್ಕೆ ಹೋಗಿದೆ. ಬಾಕಿ ಇರುವ ಡಿ.ಎ. ನೀಡುವುದಕ್ಕೆ ಮತ್ತೆ ಶುರು ಮಾಡಿದ ಮೇಲೆ, ಏಳನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರಿ ನೌಕರರ ಸಂಬಳ ಹೆಚ್ಚಾಗಲಿದೆ. ಅದಕ್ಕೆ ಮುಖ್ಯ ಕಾರಣ ಏನೆಂದರೆ ಡಿಎ ಶೇ 17ರಿಂದ 28ಕ್ಕೆ ಹೆಚ್ಚಾಗಲಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಪರಿಷ್ಕೃತ ಡಿಎ ಪಾವತಿ
(Central government employees may need to wait till June for announcement about DA hike)