Intel Layoffs: ಇಂಟೆಲ್ಗೆ ಹೊಸ ಸಿಇಒ, ಹೊಸ ಕತ್ತರಿ; ನೂರಕ್ಕೆ ಇಪ್ಪತ್ತು ಮಂದಿಗೆ ಕೆಲಸ ಹೋಗುವ ಸಾಧ್ಯತೆ
Big Intel layoffs: ಇಂಟೆಲ್ ಸಂಸ್ಥೆ ಈ ವರ್ಷ ಬಹಳ ದೊಡ್ಡ ಲೇ ಆಫ್ಗೆ ಮುಂದಾಗಿದೆ. ಬ್ಲೂಮ್ಬರ್ಗ್ ವರದಿ ಪ್ರಕಾರ ಶೇ. 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಸಾಧ್ಯತೆ ಇದೆ. 21,000 ಮಂದಿಯ ಲೇ ಆಫ್ ಆಗಬಹುದು. ಕಳೆದ ವರ್ಷ ಶೇ. 15 ಮಂದಿಯನ್ನು ಇಂಟೆಲ್ ಲೇ ಆಫ್ ಮಾಡಿತ್ತು. ಎರಡು ವರ್ಷದಲ್ಲಿ ಸುಮಾರು 35,000 ಮಂದಿ ಉದ್ಯೋಗಿಗಳಿಗೆ ಕೆಲಸ ಹೋದಂತಾಗುತ್ತದೆ.

ನವದೆಹಲಿ, ಏಪ್ರಿಲ್ 23: ಕಳೆದ ವರ್ಷ ಬರೋಬ್ಬರಿ ಶೇ. 15ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಇಂಟೆಲ್ ಸಂಸ್ಥೆ (Intel layoffs) ಈ ಬಾರಿ ಇನ್ನೂ ಕಾಠಿಣ್ಯ ನಿಲುವು ತೋರುತ್ತಿದೆ. ವರದಿಗಳ ಪ್ರಕಾರ, ಇದೀಗ ಶೇ. 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದೆ. ಈ ವಾರವೇ ಹೊಸ ಲೇ ಆಫ್ ಪ್ರಕ್ರಿಯೆ ಆರಂಭವಾಗಬಹುದು ಎಂದು ಬ್ಲೂಮ್ಬರ್ಗ್ ವರದಿಯಲ್ಲಿ ಹೇಳಲಾಗಿದೆ. ಇಂಟೆಲ್ ಇತಿಹಾಸದಲ್ಲೆ ಇದು ಅತಿದೊಡ್ಡ ಲೇ ಆಫ್ ಎನಿಸಬಹುದು. ಕಳೆದ ವರ್ಷದ ಲೇ ಆಫ್ನಲ್ಲಿ 15,000 ಮಂದಿ ಕೆಲಸ ಕಳೆದುಕೊಂಡಿದ್ದರು. ಈ ಬಾರಿ ಇನ್ನೂ ಹೆಚ್ಚು ಮಂದಿಗೆ (21,000) ಕೆಲಸ ಹೋಗಬಹುದು ಎನ್ನುವ ಅಂದಾಜಿದೆ.
ಇತ್ತೀಚೆಗಷ್ಟೇ ಇಂಟೆಲ್ ಸಂಸ್ಥೆ ತನ್ನ ಸಿಇಒ ಪ್ಯಾಟ್ ಜೆಲ್ಸಿಂಗರ್ ಅವರನ್ನು ಕೆಲಸದಿಂದ ತೆಗೆದುಹಾಕಿತ್ತು. ಇದೀಗ ಲಿಪ್ ಬು ಟಾನ್ ಎನ್ನುವವರು ಹೊಸ ಸಿಇಒ ಆಗಿ ನೇಮಕವಾಗಿದ್ದಾರೆ. ಅವರು ಬರುಬರುತ್ತಲೇ ಕಂಪನಿಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಹೊರಟಂತಿದೆ. ವರದಿಗಳು ಹೇಳಿದಂತೆ ಇಂಟೆಲ್ ಒಂದು ವೇಳೆ ಶೇ. 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದಲ್ಲಿ, ಎರಡು ವರ್ಷದಲ್ಲಿ ಬರೋಬ್ಬರಿ 30,000 ಕ್ಕೂ ಅಧಿಕ ಉದ್ಯೋಗಿಗಳನ್ನು ಕಂಪನಿಯು ಮನೆಗೆ ಕಳುಹಿಸಿದಂತಾಗುತ್ತದೆ. ಆದರೆ, ಇಂಟೆಲ್ ಸಂಸ್ಥೆಯಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಬಂದಿಲ್ಲ.
ಇದನ್ನೂ ಓದಿ: ವಿಯೆಟ್ನಾಂನಿಂದ ಭಾರತಕ್ಕೆ ವರ್ಗವಾಗುತ್ತಿರುವ ಗೂಗಲ್ ಪಿಕ್ಸೆಲ್ ತಯಾರಿಕೆ; ಆ್ಯಪಲ್ ಹಾದಿ ಹಿಡಿದ ಆಲ್ಫಬೆಟ್
ಲೇ ಆಫ್ ಪ್ಲಾನ್ ಹಿಂದೆ ಕಂಪನಿಯ ಆಡಳಿತ ವ್ಯವಸ್ಥೆಯನ್ನು ಸರಳಗೊಳಿಸುವ ಉದ್ದೇಶ ಇದೆಯಂತೆ. ಹಾಗೆಯೇ, ಕಂಪನಿಯಲ್ಲಿ ಎಂಜಿನಿಯರಿಂಗ್ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶ ಇದೆ ಎಂದು ಹೇಳಲಾಗುತ್ತಿದೆ.
ನೊಕಿಯಾ ಕಥೆಯಾಯ್ತು ಇಂಟೆಲ್
ಇಂಟೆಲ್ ಸಂಸ್ಥೆ ಮೊದಲಿಂದಲೂ ಚಿಪ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದ ಕಂಪನಿ. ಆದರೆ, ಎಐ ಚಿಪ್ ಕಾಲಘಟ್ಟದಲ್ಲಿ ಇಂಟೆಲ್ ಬೆಳವಣಿಗೆ ಮಂದಗೊಂಡಿತು. ಮೊಬೈಲ್ ಫೋನ್ ಕ್ಷೇತ್ರದಲ್ಲಿ ಅಗ್ರಜನಾಗಿದ್ದ ನೊಕಿಯಾ ಸಂಸ್ಥೆ ಸ್ಮಾರ್ಟ್ಫೋನ್ ಕಾಲಘಟ್ಟದಲ್ಲಿ ಹೇಗೆ ಬೆಳವಣಿಗೆ ಹೊಂದದೆ ಮಾರುಕಟ್ಟೆಯನ್ನು ಕಳೆದುಕೊಂಡಿತೋ, ಇಂಟೆಲ್ ಕಥೆಯೂ ಹೀಗೆ ಆಗಿದೆ.
ನಿವಿಡಿಯಾ ಕಂಪನಿ ಈಗ ಎಐ ಚಿಪ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ. ನಿವಿಡಿಯಾದ ಮಾರುಕಟ್ಟೆ ಮೌಲ್ಯ ಈಗ ಇಂಟೆಲ್ನದಕ್ಕಿಂತ ಮೂವತ್ತು ಪಟ್ಟು ಹೆಚ್ಚು ಇದೆ.
ಇದನ್ನೂ ಓದಿ: ಭಾರತದಲ್ಲಿ ಹೊಸ ಐಡಿಯಾ ಹುಟ್ಟುವ ಮೊದಲೇ ಸತ್ತುಬಿಡುತ್ತಾ? ವಿಷಾದ ಮೂಡಿಸುತ್ತೆ ಉದ್ಯಮಿ ಸಬೀರ್ ಭಾಟಿಯಾ ನೋವಿನ ನುಡಿ
ಹಿಂದಿನ ಸಿಇಒ ತಮ್ಮ ನಾಯಕತ್ವದಲ್ಲಿ ಕಂಪನಿ ಎಲ್ಲಿ ಎಡವಿತ್ತು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಈಗ ಮಾರ್ಚ್ ತಿಂಗಳಲ್ಲಿ ಸಿಇಒ ಆಗಿರುವ ಲಿಪ್ ಬು ಟಾನ್ ಅವರು ಕಂಪನಿಯನ್ನು ಮತ್ತೆ ಬಲಿಷ್ಠಗೊಳಿಸುವ ಸಂಕಲ್ಪ ತೊಟ್ಟಿದ್ದಾರೆ. ‘ಹೊಸ ಅಗತ್ಯಗಳಿಗೆ ಹೊಂದಿಕೊಳ್ಳಲು ನಾವು ಬಹಳ ನಿಧಾನಗೊಂಡೆವು. ನಾವು ಸುಧಾರಣೆಗೊಳ್ಳುವ ಅವಶ್ಯಕತೆ ಇದೆ. ಖಂಡಿತ ಉತ್ತಮಗೊಳ್ಳುತ್ತೇವೆ’ ಎಂದು ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:34 pm, Wed, 23 April 25