ವಿಯೆಟ್ನಾಂನಿಂದ ಭಾರತಕ್ಕೆ ವರ್ಗವಾಗುತ್ತಿರುವ ಗೂಗಲ್ ಪಿಕ್ಸೆಲ್ ತಯಾರಿಕೆ; ಆ್ಯಪಲ್ ಹಾದಿ ಹಿಡಿದ ಆಲ್ಫಬೆಟ್
Google Pixel production shifting from Vietnam to India: ವಿಯೆಟ್ನಾಂನಲ್ಲಿ ಅತಿಹೆಚ್ಚು ತಯಾರಾಗುತ್ತಿರುವ ಗೂಗಲ್ ಪಿಕ್ಸೆಲ್ ಫೋನ್ಗಳು ಈಗ ಭಾರತದಲ್ಲೂ ಹೆಚ್ಚೆಚ್ಚಾಗಿ ತಯಾರಾಗಲಿವೆ. ಭಾರತದಲ್ಲಿ ಪಿಕ್ಸೆಲ್ ಫೋನ್ ಅಸೆಂಬ್ಲಿಂಗ್ ಮಾಡುವ ಡಿಕ್ಸನ್ ಟೆಕ್ನಾಲಜೀಸ್ ಮತ್ತು ಫಾಕ್ಸ್ಕಾನ್ ಜೊತೆ ಆಲ್ಫಬೆಟ್ ಮಾತುಕತೆ ನಡೆಸುತ್ತಿದೆ. ವಿಯೆಟ್ನಾಂ ಮೇಲೆ ಟ್ರಂಪ್ ಶೇ. 46ರಷ್ಟು ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ವಿಯೆಟ್ನಾಂ ಮೇಲಿನ ಅವಲಂಬನೆ ಕಡಿಮೆ ಮಾಡಲು ಆಲ್ಫಬೆಟ್ ನಿರ್ಧರಿಸಿದೆ.

ನವದೆಹಲಿ, ಏಪ್ರಿಲ್ 22: ಆ್ಯಪಲ್ನ ಶೇ. 20ರಷ್ಟು ಐಫೋನ್ಗಳು ಈಗ ಭಾರತದಲ್ಲಿ ತಯಾರಾಗುತ್ತಿವೆ. ಗೂಗಲ್ನ ಮಾಲೀಕಸಂಸ್ಥೆಯಾದ ಆಲ್ಫಬೆಟ್ (Alphabet Inc) ಕೂಡ ಇದೇ ಹಾದಿ ಹಿಡಿಯುತ್ತಿದೆ. ವಿಶ್ವದ ಅತಿದೊಡ್ಡ ಕಂಪನಿಗಳಲ್ಲೊಂದಾದ ಆಲ್ಫಬೆಟ್ ಇದೀಗ ಭಾರತದತ್ತ ಗಮನ ಹೆಚ್ಚಿಸುತ್ತಿದೆ. ಭಾರತದಲ್ಲಿ ಗೂಗಲ್ ಪಿಕ್ಸೆಲ್ (Google Pixel) ಸ್ಮಾರ್ಟ್ಫೋನ್ಗಳ ತಯಾರಿಕೆಯ ಪ್ರಮಾಣ ಹೆಚ್ಚಿಸಲು ಯೋಜಿಸಿದೆ. ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ, ವಿಯೆಟ್ನಾಂನಲ್ಲಿದ್ದ ಪಿಕ್ಸೆಲ್ ಫೋನ್ ತಯಾರಿಕೆಯ ಕೆಲ ಭಾಗವನ್ನು ಭಾರತಕ್ಕೆ ವರ್ಗಾಯಿಸುವುದು ಆಲ್ಫಬೆಟ್ ಪ್ಲಾನ್ ಆಗಿದೆ. ಈ ಸಂಬಂಧ ಡಿಕ್ಸನ್ ಟೆಕ್ನಾಲಜೀಸ್ ಮತ್ತು ಫಾಕ್ಸ್ಕಾನ್ ಜೊತೆ ಆಲ್ಫಬೆಟ್ ಮಾತುಕತೆ ನಡೆಸುತ್ತಿದೆಯಂತೆ.
ವರದಿ ಪ್ರಕಾರ, ಎರಡು ವಾರಗಳ ಹಿಂದೆ ಡಿಕ್ಸನ್ ಮತ್ತು ಫಾಕ್ಸ್ಕಾನ್ ಜೊತೆ ಆಲ್ಫಬೆಟ್ ಮೊದಲ ಸುತ್ತಿನ ಮಾತುಕತೆ ನಡೆಸಿದೆ. ವಿಯೆಟ್ನಾಂ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಆಲ್ಫಬೆಟ್ ಈ ಹೆಜ್ಜೆ ಹಾಕುತ್ತಿದೆ.
ಇದನ್ನೂ ಓದಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಮೋದಿ-ವ್ಯಾನ್ಸ್ ಮಾತುಕತೆಯ ಪ್ರಮುಖ ಅಂಶಗಳು
ವಿಯೆಟ್ನಾಂಗೆ ಟ್ರಂಪ್ ಟ್ಯಾರಿಫ್ ಬರೆ…
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನೂ ಒಳಗೊಂಡಂತೆ ಬಹುತೇಕ ಎಲ್ಲಾ ದೇಶಗಳ ಮೇಲೆ ಅಧಿಕ ಮಟ್ಟದ ಆಮದು ಸುಂಕವನ್ನು ಘೋಷಿಸಿದ್ದಾರೆ. ಭಾರತದ ಮೇಲೆ ಶೇ. 26-27ರಷ್ಟು ಟ್ಯಾರಿಫ್ ಇದ್ದರೆ, ವಿಯೆಟ್ನಾಂ ಸರಕುಗಳಿಗೆ ಶೇ. 46ರಷ್ಟು ಸುಂಕ ಹಾಕಿದ್ದಾರೆ. ಸದ್ಯ ಚೀನಾ ಹೊರತುಪಡಿಸಿ ಉಳಿದೆಲ್ಲಾ ದೇಶಗಳಿಗೆ ಹಾಕಿದ್ದ ಟ್ಯಾರಿಫ್ ಅನ್ನು 90 ದಿನಗಳ ಕಾಲ ನಿಲ್ಲಿಸಿ, ಕೇವಲ ಶೇ. 10 ಮೂಲ ತೆರಿಗೆ ಮಾತ್ರವನ್ನೇ ಟ್ರಂಪ್ ಮುಂದುವರಿಸಿದ್ದಾರೆ. ಆದರೂ ಕೂಡ ಮುಂದಿನ ದಿನಗಳಲ್ಲಿ ಏನು ಬೇಕಾದರೂ ಆಗಬಹುದು. ಈ ಕಾರಣಕ್ಕೆ ಆಲ್ಫಬೆಟ್ ಸಂಸ್ಥೆ ತನ್ನ ಗೂಗಲ್ ಪಿಕ್ಸೆಲ್ ಸ್ಮಾರ್ಟ್ಫೋನ್ಗಳ ಅಸೆಂಬ್ಲಿಂಗ್ ಯೂನಿಟ್ಗಳನ್ನು ವಿಯೆಟ್ನಾಂನಿಂದ ಭಾರತಕ್ಕೂ ಸ್ವಲ್ಪ ಭಾಗ ವರ್ಗಾಯಿಸಲು ಮುಂದಾಗಿದೆ.
ಪಿಕ್ಸೆಲ್ ಅಸೆಂಬ್ಲಿಂಗ್ ಜೊತೆಗೆ ಬಿಡಿಭಾಗಗಳ ತಯಾರಿಕೆಯೂ ಭಾರತದಲ್ಲೇ?
ಆಲ್ಫಬೆಟ್ನಲ ಅರ್ಧಕ್ಕಿಂತ ಹೆಚ್ಚು ಗೂಗಲ್ ಪಿಕ್ಸೆಲ್ ಫೋನ್ಗಳು ಸದ್ಯ ವಿಯೆಟ್ನಾಂನಲ್ಲಿ ತಯಾರಾಗುತ್ತಿವೆ. ಭಾರತದಲ್ಲೂ ಸ್ವಲ್ಪ ಬಾಗದ ಪಿಕ್ಸೆಲ್ ಫೋನ್ಗಳ ಅಸೆಂಬ್ಲಿಂಗ್ ನಡೆಯುತ್ತದೆ. ಡಿಕ್ಸನ್ ಟೆಕ್ನಾಲಜೀಸ್ ಮತ್ತು ಫಾಕ್ಸ್ಕಾನ್ ಸಂಸ್ಥೆಗಳು ತಿಂಗಳಿಗೆ ಸುಮಾರು 45,000 ಪಿಕ್ಸೆಲ್ ಫೋನ್ಗಳನ್ನು ಅಸೆಂಬಲ್ ಮಾಡುತ್ತವೆ. ಈ ಪೈಕಿ ಡಿಕ್ಸನ್ನಿಂದಲೇ ಶೇ. 65-70ರಷ್ಟು ಫೋನ್ ತಯಾರಿಕೆ ನಡೆಯುತ್ತಿದೆ.
ಇದನ್ನೂ ಓದಿ: ಬ್ರಿಟನ್ನ ಅತಿದೊಡ್ಡ ಬ್ಯಾಟರಿ ಫ್ಯಾಕ್ಟರಿ ನಿರ್ಮಿಸಲಿರುವ ಭಾರತೀಯ ಕಂಪನಿ; ಟಾಟಾ ಸನ್ಸ್ಗೆ 750 ಮಿಲಿಯನ್ ಪೌಂಡ್ ಸಾಲ ಸೌಲಭ್ಯ
ಈಗ ಮತ್ತಷ್ಟು ಪಿಕ್ಸೆಲ್ ಫೋನ್ಗಳ ಮ್ಯಾನುಫ್ಯಾಕ್ಚಿಂಗ್ ಅನ್ನು ಭಾರತದಲ್ಲಿ ಮಾಡಲು ಮುಂದಾಗಲಾಗಿದೆ. ಸದ್ಯ ಭಾರತದಲ್ಲಿ ಅಸೆಂಬ್ಲಿಂಗ್ ಮಾತ್ರವೇ ನಡೆಯುತ್ತಿದೆ. ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಬಿಡಿಭಾಗಗಳನ್ನೂ ಭಾರತದಲ್ಲೇ ತಯಾರಿಸುವ ಬಗ್ಗೆ ಆಲ್ಫಬೆಟ್ ಯೋಜಿಸಿದೆ. ಹೀಗೇನಾದರೂ ಆದಲ್ಲಿ, ಭಾರತದ ಆರ್ಥಿಕತೆಗೆ ಮತ್ತಷ್ಟು ಪುಷ್ಟಿ ಸಿಗುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ