India-US: ಭಾರತ-ಅಮೆರಿಕ ವ್ಯಾಪಾರ ಒಪ್ಪಂದ: ಮೋದಿ-ವ್ಯಾನ್ಸ್ ಮಾತುಕತೆಯ ಪ್ರಮುಖ ಅಂಶಗಳು
Narendra Modi- JD Vance meet: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪ್ರಧಾನಿ ಮೋದಿ ಅವರ ನಡುವೆ ನಡೆದ ಮಹತ್ವದ ಮಾತುಕತೆಗಳಲ್ಲಿ ಭಾರತ ಮತ್ತು ಅಮೆರಿಕದ ನಡುವಿನ ವ್ಯಾಪಾರ ಸಂಬಂಧವನ್ನು ಬಲಪಡಿಸುವ ಒಂದು ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗಿದೆ. ಈ ಮಾರ್ಗಸೂಚಿ ಮುಂದಿನ ಮಾತುಕತೆಗಳಿಗೆ ದಾರಿ ಮಾಡಿಕೊಡಲಿದೆ ಮತ್ತು ಹೊಸ ವ್ಯಾಪಾರ ಒಪ್ಪಂದಕ್ಕೆ ಕಾರಣವಾಗುವ ನಿರೀಕ್ಷೆಯಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರು ಈ ಸಂಬಂಧದಲ್ಲಿ ಕೊಡುಕೊಳ್ಳುವಿಕೆಯ ಸಮತೋಲನವನ್ನು ತರುವುದು ಮುಖ್ಯ ಎಂದು ಹೇಳಿದ್ದಾರೆ.

ನವದೆಹಲಿ, ಏಪ್ರಿಲ್ 22: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ (JD Vance – Narendra Modi meeting) ನಿನ್ನೆ ಸೋಮವಾರ ನಡೆಸಿದ ಕೆಲ ಮಹತ್ವದ ಮಾತುಕತೆಗಳು ಫಲಪ್ರದವಾಗುವಂತಿವೆ. ಎರಡೂ ದೇಶಗಳು ಒಂದು ಮಾರ್ಗಸೂಚಿಯನ್ನು (Terms of Reference) ಅಂತಿಮಗೊಳಿಸಿವೆ. ಅಮೆರಿಕದ ವ್ಯಾಪಾರ ಪ್ರತಿನಿಧಿ ಕಾರ್ಯಾಲಯ (USTR) ಬಿಡುಗಡೆ ಮಾಡಿದ ಜಂಟಿ ಹೇಳಿಕೆಯೊಂದರಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದೆ. ಈ ಮಾರ್ಗಸೂಚಿ ಪ್ರಕಾರ ಮುಂದಿನ ಸಂಧಾನ ಮತ್ತು ಮಾತುಕತೆಗಳು ನಡೆಯಲಿವೆ. ಇವೆಲ್ಲವೂ ಸಲೀಸಾಗಿ ನಡೆದಲ್ಲಿ ಭಾರತ ಮತ್ತು ಅಮೆರಿಕ ನಡುವೆ ಬಹಳ ಬೇಗ ಮಹತ್ವದ ಹೊಸ ಸಮಗ್ರ ವ್ಯಾಪಾರ ಒಪ್ಪಂದ ಏರ್ಪಡುವ ನಿರೀಕ್ಷೆ ಇದೆ.
‘ಭಾರತದೊಂದಿಗಿನ ಅಮೆರಿಕದ ವ್ಯಾಪಾರ ಸಂಬಂಧದಲ್ಲಿ ಕೊಡುಕೊಳ್ಳುವಿಕೆಯ ಕೊರತೆ ಗಂಭೀರವಾಗಿದೆ. ಈಗ ನಡೆಯುತ್ತಿರುವ ಮಾತುಕತೆಗಳು ಈ ಸಂಬಂಧದಲ್ಲಿ ಸಮತೋಲನ ತರಲು ಸಹಾಯವಾಗಬಹುದು. ಅಮೆರಿಕದ ಸರಕುಗಳಿಗೆ ಹೊಸ ಮಾರುಕಟ್ಟೆ ತೆರೆಯುವ ಮೂಲಕ ಕೊಡುಕೊಳ್ಳುವಿಕೆಯನ್ನು ಹೆಚ್ಚಿಸಬಹುದು. ಅಮೆರಿಕದ ಕಾರ್ಮಿಕರಿಗೆ ಹಾನಿ ಮಾಡುವಂತಹ ನಿಲುವುಗಳನ್ನು ತಗ್ಗಿಸಬಹುದು’ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಹಾಗೂ ರಾಯಭಾರಿಯೂ ಆದ ಜೇಮಿಸನ್ ಗ್ರೀರ್ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತಕ್ಕೆ 4 ದಿನಗಳ ಪ್ರವಾಸ ಬಂದಿದ್ದಾರೆ. ಕುಟುಂಬ ಸಮೇತ ನಿನ್ನೆ ಸೋಮವಾರ ಆಗಮಿಸಿದ ವ್ಯಾನ್ಸ್, ಸಂಜೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದರು. ವ್ಯಾನ್ಸ್ ಕುಟುಂಬವನ್ನು ಆಪ್ಯಾಯಮಾನವಾಗಿ ಬರಮಾಡಿಕೊಂಡ ಮೋದಿ, ರಾತ್ರಿ ಔತಣಕೂಟ ಏರ್ಪಡಿಸಿದ್ದರು.
ಇದಕ್ಕೆ ಮುನ್ನ ವ್ಯಾನ್ಸ್ ಮತ್ತು ಮೋದಿ ಮಧ್ಯೆ ಮಹತ್ವದ ಮಾತುಕತೆಗಳು ನಡೆದವು. ವ್ಯಾಪಾರದಿಂದ ಹಿಡಿದು ರಾಜಕೀಯದವರೆಗೆ ಕೆಲ ವಿಚಾರಗಳ್ನು ಈ ಮಾತುಕತೆಯಲ್ಲಿ ಪ್ರಸ್ತಾಪಿಸಲಾಗಿತ್ತು. ಆದರೆ, ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಸಂಬಂಧ ಗಟ್ಟಿಗೊಳಿಸುವುದ ವ್ಯಾನ್ಸ್ ಅವರ ಪ್ರಮುಖ ಅಜೆಂಡಾ ಆಗಿದೆ.
ಇನ್ನೂ 3 ದಿನ ಇರುವ ವ್ಯಾನ್ಸ್ ಕುಟುಂಬ
ಜೆ.ಡಿ. ವ್ಯಾನ್ಸ್ ಅವರು ಭಾರತದಲ್ಲಿ ಏಪ್ರಿಲ್ 24ರವರೆಗೂ ಇರಲಿದ್ದಾರೆ. ನಿನ್ನೆ ತಮ್ಮ ಪತ್ನಿ ಉಷಾ ಹಾಗು ಮೂವರು ಮಕ್ಕಳ ಜೊತೆ ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ಮಂದಿರಕ್ಕೆ ಭೇಟಿ ನೀಡಿದ್ದರು. ಇವತ್ತು ಮತ್ತು ನಾಳೆ ಅವರು ಜೈಪುರ್, ಆಗ್ರಾ ಸ್ಥಳಗಳಿಗೆ ಹೋಗಲಿದ್ದಾರೆ. ಏಪ್ರಿಲ್ 24, ಗುರುವಾರ ಅವರು ಅಮೆರಿಕಕ್ಕೆ ಮರಳಿ ಹೋಗಲಿದ್ದಾರೆ.
ಇದನ್ನೂ ಓದಿ: ಅಕ್ಷರಧಾಮಕ್ಕೆ ಭೇಟಿ ನೀಡಿದ ಅಮೆರಿಕ ಉಪಾಧ್ಯಕ್ಷರ ಕುಟುಂಬ; ಭಾರತೀಯ ಉಡುಗೆಯಲ್ಲಿ ಕಂಗೊಳಿಸಿದ ಮಕ್ಕಳು
ಸೌದಿ ಅರೇಬಿಯಾಗೆ ಹೊರಟ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಜೆ.ಡಿ. ವ್ಯಾನ್ಸ್ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಇವತ್ತು ಸೌದಿ ಅರೇಬಿಯಾಗೆ ತೆರಳಿದ್ದಾರೆ. ಅಲ್ಲಿ ಎರಡು ದಿನದ ಪ್ರವಾಸ ಅವರದ್ದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:24 am, Tue, 22 April 25