ಚಿನ್ನದ ಬೆಲೆ ಎಷ್ಟು ದಿನ ಹೀಗೆ ಏರುತ್ತೆ? ಬೆಲೆ ಕಡಿಮೆ ಆಗೋ ಸಾಧ್ಯತೆ ಎಷ್ಟು? ಇಲ್ಲಿದೆ ಡೀಟೇಲ್ಸ್
Know why gold rates rising: ಚಿನ್ನದ ಬೆಲೆ ಕೆಲ ತಿಂಗಳಿಂದ ಸಿಕ್ಕಾಪಟ್ಟೆ ಏರುತ್ತಿದೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ ಚಿನ್ನದ ಬೆಲೆ ಶೇ. 30ರಷ್ಟು ಏರಿದೆ. ಅಮೆರಿಕದ ಡಾಲರ್ ಮತ್ತು ಆರ್ಥಿಕತೆ ದುರ್ಬಲಗೊಳ್ಳುತ್ತಿರುವುದು ಚಿನ್ನದ ಬೆಲೆ ಏರಿಕೆಗೆ ಪ್ರಮುಖ ಕಾರಣ. ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ತೀವ್ರಗತಿಯಲ್ಲಿ ಇಳಿಕೆ ಆಗುವ ಸಾಧ್ಯತೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.

ನವದೆಹಲಿ, ಏಪ್ರಿಲ್ 22: ಚಿನ್ನದ ಬೆಲೆ (24 ಕ್ಯಾರಟ್) ಭಾರತದಲ್ಲಿ ಮೊದಲ ಬಾರಿಗೆ 10,000 ರೂ ಗಡಿ ದಾಟಿದೆ. ಬಹುತೇಕ ಎಲ್ಲಾ ದೇಶಗಳಲ್ಲಿ ಚಿನ್ನದ ಬೆಲೆ (Gold rates) ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಹೋಗಿದೆ. ಕೆಲ ನಿರ್ದಿಷ್ಟ ಕಾರಣಗಳಿಗೆ ಭಾರತದಲ್ಲಿ ಚಿನ್ನದ ಬೆಲೆ ಏರಿಕೆ ಬಹಳ ಗಂಭೀರ ಸ್ವರೂಪದ್ದೆನಿಸಿದೆ. ಭಾರತೀಯರಿಗೆ ಚಿನ್ನಕ್ಕೆ ಅದರದ್ದೇ ಸ್ಥಾನಮಾನ ಇದೆ. ಶಾಸ್ತ್ರೀಯ ಮತ್ತು ಸಾಂಪ್ರದಾಯಿಕವಾಗಿ ಚಿನ್ನ ಮಹತ್ವ ಇದೆ. ಹೀಗಾಗಿ, ಭಾರತೀಯರು ಚಿನ್ನದ ಬೆಲೆ ಏರಿಕೆಯಿಂದ ಸಹಜವಾಗಿ ಕಂಗೆಡುತ್ತಿದ್ದಾರೆ. ಬೆಲೆ ಇದೇ ವೇಗದಲ್ಲಿ ಹೆಚ್ಚಾಗಬಹುದಾ ಎಂದು ನಿರಾಸೆಯಲ್ಲಿದ್ದಾರೆ.
ಈ ವರ್ಷ ಚಿನ್ನದ ಬೆಲೆ ಶೇ. 30ರಷ್ಟು ಹೆಚ್ಚಿದೆ. ಇದೇ ದರದಲ್ಲಿ ಚಿನ್ನದ ಬೆಲೆ ಏರಿಕೆ ಮುಂದುವರಿದರೆ ಈ ವರ್ಷಾಂತ್ಯದೊಳಗೆ ಬೆಲೆ ಗ್ರಾಮ್ಗೆ 18,000 ರೂ ಆದರೂ ಅಚ್ಚರಿ ಆಗದು. ಆದರೆ, ಇದೇ ರೀತಿಯ ಓಟ ಮುಂದುವರಿಯುತ್ತದಾ ಎಂಬುದು ಪ್ರಶ್ನೆ.
ಚಿನ್ನದ ಬೆಲೆ ಯಾಕೆ ತೀವ್ರವಾಗಿ ಹೆಚ್ಚುತ್ತಿದೆ?
ಚಿನ್ನ ಭೂಮಿಯಲ್ಲಿ ಸೀಮಿತವಾಗಿ ಸಿಗುವ ಸಂಪತ್ತಾದ್ದರಿಂದ, ಅದಕ್ಕೆ ಸದಾ ಬೇಡಿಕೆ ಇದ್ದೇ ಇದೆ. ಆದರೆ, ಅದರ ಬೆಲೆ ಏರಿಕೆಗೆ ಒಂದು ಸಹಜ ಗತಿ ಇರುತ್ತದೆ. ಈಗ ಕಳೆದ ಕೆಲ ತಿಂಗಳಿಂದ ಅಸಹಜ ರೀತಿಯಲ್ಲಿ ಚಿನ್ನದ ಬೆಲೆ ಏರಿಕೆ ಆಗುತ್ತಿದೆ. ಭಾರತೀಯರು ಹೆಚ್ಚು ಚಿನ್ನ ಕೊಳ್ಳುತ್ತಿದ್ದಾರೆ ಎಂದಲ್ಲ. ಬೆಲೆ ಏರಿಕೆಗೆ ಬೇರೆ ಕೆಲ ಪ್ರಮುಖ ಕಾರಣಗಳಿವೆ. ಅವುಗಳೇನು, ಮುಂದಿವೆ ಓದಿ:
ಇದನ್ನೂ ಓದಿ: ದಾಖಲೆ ಚಿನ್ನದ ಬೆಲೆ; 24 ಕ್ಯಾರಟ್ ಸ್ವರ್ಣ 10,135 ರೂ
ಡಾಲರ್ ದುರ್ಬಲವಾಗಿರುವುದು ಚಿನ್ನದ ಬೆಲೆ ಏರಿಕೆಗೆ ಒಂದು ಕಾರಣ
ಅಮೆರಿಕದ ಡಾಲರ್ ಕರೆನ್ಸಿ ಮೌಲ್ಯ ಕಡಿಮೆ ಆಗುತ್ತಿದೆ. ಇದು ಒಟ್ಟಾರೆ ಜಾಗತಿಕ ಆರ್ಥಿಕ ಅನಿಶ್ಚಿತ ಸ್ಥಿತಿಯನ್ನು ಸೂಚಿಸುತ್ತದೆ. ಇಂಥ ಸಂದರ್ಭದಲ್ಲಿ ಹೂಡಿಕೆದಾರರು ಚಿನ್ನವನ್ನು ಆಶ್ರಯಿಸುತ್ತಾರೆ. ಭಾರತೀಯರಿಗೆ ಚಿನ್ನ ಆಪತ್ಕಾಲದ ನಿಧಿ ಎನಿಸಿದ ರೀತಿಯಲ್ಲೇ ಹೂಡಿಕೆದಾರರಿಗೂ ಚಿನ್ನ ಆಪತ್ಕಾಲದ ಸಂಪತ್ತೆನಿಸಿದೆ. ಚಿನ್ನದ ಮೇಲೆ ಹೂಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆ ಆಗಿರುವುದರಿಂದ ಬೆಲೆಯೂ ಬಹಳ ಹೆಚ್ಚಿದೆ.
ಅಮೆರಿಕದ ಆರ್ಥಿಕ ದುರ್ಬಲಗೊಳ್ಳುವ ಸೂಚನೆ
ಅಮೆರಿಕದ ಫೆಡರಲ್ ರಿಸರ್ವ್ ಮುಖ್ಯಸ್ಥರಾದ ಜಿರೋಮ್ ಪೋವೆಲ್ ಅವರು ಅಮೆರಿಕಕ್ಕೆ ಎದುರಾಗಲಿರುವ ಆರ್ಥಿಕ ಸಂಕಷ್ಟದ ಮುನ್ಸೂಚನೆ ನೀಡಿದ್ದಾರೆ. ಅಮೆರಿಕಕ್ಕೆ ಸ್ಟ್ಯಾಗ್ಫ್ಲೇಶನ್ ಪರಿಸ್ಥಿತಿ ಬರಬಹುದು ಎಂದಿದ್ದಾರೆ. ಸ್ಟ್ಯಾಗ್ಫ್ಲೇಶನ್ ಎಂದರೆ, ಮಂದ ಆರ್ಥಿಕ ಬೆಳವಣಿಗೆ ಜೊತೆಗೆ ಸತತ ಹಣದುಬ್ಬರ ಇರುವ ಸ್ಥಿತಿ. ಟ್ರಂಪ್ ಅವರ ಟ್ಯಾರಿಫ್ ಕ್ರಮಗಳು ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹಲವರು ಎಚ್ಚರಿಸಿದ್ದಾರೆ. ಇದರಿಂದ ಹೂಡಿಕೆದಾರರು ಹೆದರಿ ಚಿನ್ನವನ್ನು ಅಪ್ಪಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಆಸ್ತಿ ಮಾರಲ್ಲ, ಸಾಲ ಬಿಡಲ್ಲ… ಶ್ರೀಮಂತರ ಟ್ರಿಕ್ಸ್ ಹೀಗಿರುತ್ತೆ ನೋಡಿ
ಸೆಂಟ್ರಲ್ ಬ್ಯಾಂಕುಗಳಿಂದಲೂ ಚಿನ್ನದ ಖರೀದಿ ಭರಾಟೆ
ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನವನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ತಮ್ಮ ಫಾರೆಕ್ಸ್ ಮೀಸಲು ನಿಧಿಯಲ್ಲಿ ಶೇಖರಿಸಲು ಮುಂದಾಗಿವೆ. 2024ರಲ್ಲಿ ಸೆಂಟ್ರಲ್ ಬ್ಯಾಂಕುಗಳು ಒಂದು ಸಾವಿರಕ್ಕೂ ಅಧಿಕ ಟನ್ಗಳಷ್ಟು ಚಿನ್ನವನ್ನು ಖರೀದಿಸಿವೆ. 2025ರಲ್ಲೂ ಈ ಖರೀದಿ ಭರಾಟೆ ಮುಂದುವರಿದಿದೆ. ಇದು ಸಹಜವಾಗಿ ಚಿನ್ನದ ಬೆಲೆ ಏರುವಂತೆ ಮಾಡಿದೆ.
ಚಿನ್ನದ ಬೆಲೆ ಕಡಿಮೆ ಆಗುತ್ತಾ?
ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಅರ್ಧದಷ್ಟು ಕುಸಿಯಬಹುದು ಎಂದು ಕೆಲವರು ವಾದಿಸುತ್ತಿದ್ದಾರೆ. ಆದರೆ, ತಜ್ಞರ ಪ್ರಕಾರ ಆ ಸಾಧ್ಯತೆ ಕಡಿಮೆ. ಜಾಗತಿಕ ಅನಿಶ್ಚಿತ ಸ್ಥಿತಿ ಕಡಿಮೆ ಆದಲ್ಲಿ ಬೆಲೆ ಸ್ವಲ್ಪ ಇಳಿಯಬಹುದು. ಆದರೆ, ತೀವ್ರಗತಿಯಲ್ಲಿ ಇಳಿಮುಖವಾಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:52 pm, Tue, 22 April 25