ಚಿನ್ನದ ಬೆಲೆ ಇಷ್ಟು ಕ್ಷಿಪ್ರವಾಗಿ ಏರುತ್ತಿರುವುದ್ಯಾಕೆ? ಇಳಿಕೆಯಾಗೋದು ಯಾವಾಗ?
Gold investments: ಚಿನ್ನದ ಬೆಲೆ ಕಳೆದ ಕೆಲ ವಾರಗಳಿಂದ ನಾಗಾಲೋಟ ಮಾಡುತ್ತಿದೆ. ಅಮೆರಿಕದಲ್ಲಿ ಹೂಡಿಕೆದಾರರು ಈಕ್ವಿಟಿ ಬಿಟ್ಟು ಚಿನ್ನದತ್ತ ವಲಸೆ ಹೋಗುವುದು ಹೆಚ್ಚಾಗಿದೆ. ಯೂರೋಪ್ನಲ್ಲಿ ಗೋಲ್ಡ್ ಇಟಿಎಫ್ಗಳ ಮೇಲೆ ಹೂಡಿಕೆ ಹೆಚ್ಚುತ್ತಿದೆ. ಅಮೆರಿಕದಲ್ಲೂ ಇದೇ ಟ್ರೆಂಡ್ ಶುರುವಾಗಿದೆ. ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿ ಅಮೆರಿಕ ಮಾತ್ರವಲ್ಲ ಜಾಗತಿಕ ಮಾರುಕಟ್ಟೆಯನ್ನೇ ಸಂಚಲನಗೊಳಿಸಿದೆ.

ನವದೆಹಲಿ, ಮಾರ್ಚ್ 16: ಚಿನ್ನದ ಬೆಲೆ ದಾಖಲೆಯ ಮಟ್ಟಕ್ಕೆ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಸುಮ್ಮನೆ ಇಲ್ಲ. ಅದೂ ಭರ್ಜರಿ ಏರಿಕೆಯಾಗತೊಡಗಿದೆ. ಇವೆರಡು ಲೋಹಗಳ ಬೆಲೆ (Gold and Silver rates) ಏರಿಕೆ ಸಹಜವಾಗಿ ಆಗುತ್ತಿಲ್ಲ ಎನ್ನುವುದು ಸ್ಪಷ್ಟ. ನಿರೀಕ್ಷೆಯಂತೆ ಜಾಗತಿಕ ವಿದ್ಯಮಾನಗಳು, ಅನಿಶ್ಚಿತ ಸ್ಥಿತಿ, ಆರ್ಥಿಕ ಹಿಂಜರಿತದ ಅಪಾಯ, ಅಮೆರಿಕದ ಹೊಸ ನೀತಿ ಸೃಷ್ಟಿಸಿರುವ ಭಯ ಇವೆಲ್ಲವೂ ಕೂಡ ವಿಶ್ವಾದ್ಯಂತ ಮಾರುಕಟ್ಟೆಗಳನ್ನು ಅಲುಗಾಡಿಸುತ್ತಿವೆ. ಇಂಥ ಸಂಕಟ ಕಾಲದಲ್ಲಿ ನೈಜ ಆಸ್ತಿಗಳಿಗೆ ಬೇಡಿಕೆ ಹೆಚ್ಚುವುದು ಸ್ವಾಭಾವಿಕ. ಅಂತೆಯೇ, ಚಿನ್ನ, ಬೆಳ್ಳಿ ಮತ್ತಿತರ ವಸ್ತುಗಳ ಬೆಲೆ ಏರುತ್ತಿದೆ.
ಷೇರು ಮಾರುಕಟ್ಟೆ ಕುಸಿದಾಗ ಚಿನಿವಾರ ಮಾರುಕಟ್ಟೆ ಗರಿಗೆದರುತ್ತದೆ. ಅಮೆರಿಕದ ಈಕ್ವಿಟಿ ಮಾರುಕಟ್ಟೆ ಕುಸಿತ ಕಾಣತೊಡಗಿದೆ. ಅಲ್ಲಿ ಈಕ್ವಿಟಿ ಬಿಟ್ಟು ಗೋಲ್ಡ್ ಇಟಿಎಫ್ಗಳ ಮೇಲೆ ಹೆಚ್ಚಿನ ಹೂಡಿಕೆಗಳಾಗುತ್ತಿವೆಯಂತೆ. ಇದಕ್ಕೂ ಮುನ್ನ ಯೂರೋಪ್ನಲ್ಲಿ ಗೋಲ್ಡ್ ಇಟಿಎಫ್ನತ್ತ ವಲಸೆ ಆರಂಭವಾಯಿತು. ಈಗ ಅಮೆರಿಕದ ಸರದಿ. ಯೂರೋಪ್ನ ಗೋಲ್ಡ್ ಇಟಿಎಫ್ಗಳಲ್ಲಿರುವ ಚಿನ್ನ ಜನವರಿಯಿಂದೀಚೆ 1,334 ಟನ್ಗಳಷ್ಟು ಹೆಚ್ಚಾಗಿದೆ. ಈಗ ಅಮೆರಿಕನ್ ಹೂಡಿಕೆದಾರರೂ ಕೂಡ ಗೋಲ್ಡ್ ಇಟಿಎಫ್ಗಳಲ್ಲಿ ಹೂಡಿಕೆ ಮಾಡತೊಡಗಿದ್ದಾರೆ. ಪರಿಣಾಮವಾಗಿ ಚಿನ್ನದ ಬೆಲೆ ಅಮೆರಿಕದಲ್ಲಿ ಒಂದು ಔನ್ಸ್ಗೆ 3,000 ಡಾಲರ್ಗಿಂತಲೂ ಅಧಿಕಗೊಂಡಿದೆ.
ಇದನ್ನೂ ಓದಿ: 654 ಬಿಲಿಯನ್ ಡಾಲರ್ ಮುಟ್ಟಿದ ಫಾರೆಕ್ಸ್ ರಿಸರ್ವ್ಸ್; ಎರಡು ವರ್ಷದಲ್ಲೇ ಅತಿಹೆಚ್ಚು ಏರಿಕೆ
ಸಾಮಾನ್ಯವಾಗಿ ಅಮೆರಿಕದ ಹೂಡಿಕೆದಾರರಿಗೆ ಈಕ್ವಿಟಿ ನೆಚ್ಚಿನ ಆಸ್ತಿ. ಆದಾಗ್ಯೂ ಕಳೆದ ಎರಡು ತಿಂಗಳಿಂದ ಅಲ್ಲಿಯ ಇನ್ವೆಸ್ಟರ್ಗಳು ಚಿನ್ನದತ್ತ ಮುಖ ಮಾಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ವಿವಿಧ ದೇಶಗಳ ಮೇಲೆ ಹೇರುತ್ತಿರುವ ಆಮದು ಸುಂಕ ನೀತಿ ಈ ಅಲ್ಲೋಲಕಲ್ಲೋಲ ಸೃಷ್ಟಿಗೆ ಕಾರಣವಾಗಿದೆ. ಈ ಪರಿಸ್ಥಿತಿ ತಿಳಿಯಾಗುವವರೆಗೂ ಚಿನ್ನಕ್ಕೆ ಬೇಡಿಕೆ ಮುಂದುವರಿಯುತ್ತಲೇ ಇರುತ್ತದೆ.
ಕುತೂಹಲ ಎಂದರೆ, ಫೆಬ್ರುವರಿ ತಿಂಗಳಲ್ಲಿ ಅಮೆರಿಕದಲ್ಲಿ ಚಿನ್ನದ ಮೇಲೆ ಮೊದಲ ಬಾರಿಗೆ ಹೂಡಿಕೆ ಮಾಡಿದವರ ಸಂಖ್ಯೆ ಗಣನೀಯವಾಗಿ ಏರಿದೆ. 2021ರ ಮೇ ಬಳಿಕ, ಇಂಥ ಹೂಡಿಕೆದಾರರ ಸಂಖ್ಯೆಯಲ್ಲಿ ಅತಿ ಹೆಚ್ಚಳ ಆಗಿರುವುದು ಫೆಬ್ರುವರಿಯಲ್ಲೇ ಅಂತೆ.
ಇದನ್ನೂ ಓದಿ: ಭಾರತದ್ದೇ ಸ್ವಂತ ಮೊಬೈಲ್ ಆಪರೇಟಿಂಗ್ ಸಿಸ್ಟಂ ನಿರ್ಮಾಣಕ್ಕೆ ಸರ್ಕಾರದ ಆಸಕ್ತಿ; ಏನಿದರ ಉಪಯೋಗ, ಇದು ಅಷ್ಟು ಸುಲಭವಾ?
ಚಿನ್ನದ ಬೆಲೆ ಯಾವಾಗ ಇಳಿಯುತ್ತೆ?
ಈಗ ಚಿನ್ನದ ಬೆಲೆ ಏರಿಕೆ ಆಗುತ್ತಿರುವುದು ಸ್ವಾಭಾವಿಕ ಸಂಗತಿ ಅಲ್ಲ. ಅನಿಶ್ಚಿತ ಪರಿಸ್ಥಿತಿಯಿಂದ ಉದ್ಭವವಾದ ಬೇಡಿಕೆ. ಈ ಅನಿಶ್ಚಿತ ಪರಿಸ್ಥಿತಿ ತಿಳಿಯಾದ ಬಳಿಕ ಚಿನ್ನದ ಬೆಲೆ ತನ್ನ ಸಹಜ ಬೆಲೆಗೆ ಮರಳಬಹುದು. ಪರಿಸ್ಥಿತಿ ತಿಳಿಯಾಗುವುದು ಯಾವಾಗ ಎಂದು ಯಾರೂ ಕೂಡ ಊಹಿಸಲು ಕಷ್ಟಸಾಧ್ಯ. ಟ್ರಂಪ್ ಅವರ ಸುಂಕ ಹೇರಿಕೆ ನೀತಿ ಏಪ್ರಿಲ್ 1ರಿಂದ ಜಾರಿಗೆ ಬರುತ್ತದೆ. ಅದರ ಪರಿಣಾಮ ಏನೇನು ಆಗಬಹುದು, ಅವರು ತಮ್ಮ ನೀತಿಯನ್ನು ರದ್ದು ಮಾಡುವರಾ ಎಂಬುದರ ಮೇಲೆ ಭವಿಷ್ಯ ಪರಿಸ್ಥಿತಿ ನಿಂತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:10 pm, Sun, 16 March 25