Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ್ದೇ ಸ್ವಂತ ಮೊಬೈಲ್ ಆಪರೇಟಿಂಗ್ ಸಿಸ್ಟಂ ನಿರ್ಮಾಣಕ್ಕೆ ಸರ್ಕಾರದ ಆಸಕ್ತಿ; ಏನಿದರ ಉಪಯೋಗ, ಇದು ಅಷ್ಟು ಸುಲಭವಾ?

India's indigenous mobile OS to be built? ಭಾರತದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಸರ್ಕಾರ ಅತೀವ ಆಸಕ್ತಿ ತೋರುತ್ತಿದೆ. ಸೆಮಿಕಂಡ್ಕಟರ್ ಚಿಪ್ ನಿರ್ಮಾಣ, ಎಐ ಮಾಡಲ್​​ಗಳ ನಿರ್ಮಾಣಕ್ಕೆ ಸರ್ಕಾರ ಹೆಜ್ಜೆ ಇಟ್ಟಿದೆ. ಈಗ ಮೊಬೈಲ್ ಆಪರೇಟಿಂಗ್ ಸಿಸ್ಟಂ ಅಭಿವೃದ್ಧಿಗೆ ಮತ್ತೊಮ್ಮೆ ಪ್ರಯತ್ನ ಮಾಡುವ ಇಚ್ಛೆ ತೋರುತ್ತಿದೆ. ಕಳೆದ ವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತದಲ್ಲಿ ಮೊಬೈಲ್ ಒಎಸ್ ನಿರ್ಮಿಸುವಂತೆ ಭಾರತದ ಐಟಿ ಕಂಪನಿಗಳಿಗೆ ಕರೆ ನೀಡಿದ್ದರು. ಈ ಕಾರ್ಯದ ಸಾಧಕ ಬಾಧಕಗಳೇನು ಎಂದು ನೋಡುವುದಾದರೆ...

ಭಾರತದ್ದೇ ಸ್ವಂತ ಮೊಬೈಲ್ ಆಪರೇಟಿಂಗ್ ಸಿಸ್ಟಂ ನಿರ್ಮಾಣಕ್ಕೆ ಸರ್ಕಾರದ ಆಸಕ್ತಿ; ಏನಿದರ ಉಪಯೋಗ, ಇದು ಅಷ್ಟು ಸುಲಭವಾ?
ಸ್ಮಾರ್ಟ್​​ಫೋನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 16, 2025 | 1:52 PM

ನವದೆಹಲಿ, ಮಾರ್ಚ್ 16: ಕೇಂದ್ರ ಸರ್ಕಾರ ಸೆಮಿಕಂಡಕ್ಟರ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರಗಳಲ್ಲಿ ಸ್ವಂತವಾಗಿ ಹೆಜ್ಜೆ ಹಾಕಲು ಅತೀವ ಆಸಕ್ತಿ ತೋರಿದೆ. ಈಗಾಗಲೇ ಸೆಮಿಕಂಡಕ್ಟರ್ ಫ್ಯಾಕ್ಟರಿಗಳ ಸ್ಥಾಪನೆಯಾಗಿ ಅತಿಶೀಘ್ರದಲ್ಲಿ ಮೇಡ್ ಇನ್ ಇಂಡಿಯಾ ಚಿಪ್ ಹೊರಬರಲಿದೆ. ಚ್ಯಾಟ್​​ಜಿಪಿಟಿ, ಡೀಪ್​​ಸೀಕ್​​ನಂತೆ ಭಾರತದ್ದೇ ಆದ ಲಾರ್ಜ್ ಲ್ಯಾಂಗ್ವೇಜ್ ಮಾಡಲ್ ಅನ್ನು ಅಭಿವೃದ್ಧಿಪಡಿಸಲು ಉದ್ಯಮ ವಲಯವನ್ನು ಸರ್ಕಾರ ಹುರಿದುಂಬಿಸುತ್ತಿದೆ. ಹಾಗೆಯೇ, ಭಾರತದ್ದೇ ಆದ ಒಂದು ಮೊಬೈಲ್ ಆಪರೇಟಿಂಗ್ ಸಿಸ್ಟಂ ನಿರ್ಮಾಣ ಆಗಬೇಕೆಂದು ಸರ್ಕಾರ ಕನಸು ಕಾಣುತ್ತಿದೆ. ಕಳೆದ ವಾರ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಭಾರತದಲ್ಲಿ ಮೊಬೈಲ್ ಆಪರೇಟಿಂಗ್ ಸಿಸ್ಟಂ (Mobile OS) ಅನ್ನು ನಿರ್ಮಿಸುವಂತೆ ಐಟಿ ಕಂಪನಿಗಳಿಗೆ ಕರೆ ನೀಡಿದ್ದರು.

‘ನೀವು ಬಹಳ ಚೆನ್ನಾಗಿ ಐಟಿ ಸರ್ವಿಸ್ ನೀಡುತ್ತಿದ್ದೀರಿ. ಈಗ ಭಾರತವು ಉತ್ಪನ್ನ ಚಾಲಿತ ದೇಶವಾಗುವ ಸಮಯ ಬಂದಿದೆ. ನಾವು ಇವತ್ತಿನ ಸವಾಲುಗಳನ್ನು ಎದುರಿಸುವುದು ಮಾತ್ರವಲ್ಲ, ಭವಿಷ್ಯಕ್ಕೆ ಬುನಾದಿ ನಿರ್ಮಿಸುವ ಕೆಲಸವನ್ನೂ ಮಾಡಬೇಕು. ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಾ, ಜಿ7, ಜಿ20 ಗುಂಪಿನಲ್ಲಿ ಮಾತ್ರವಲ್ಲ ಟಾಪ್-5 ತಂತ್ರಜ್ಞಾನ ದೇಶಗಳ ಗುಂಪಿನಲ್ಲೂ ಇರುವಂತಾಗಬೇಕು’ ಎಂದು ಕೇಂದ್ರ ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವರು ಐಟಿ ಕಂಪನಿಗಳನ್ನು ಕೇಳಿಕೊಂಡರು.

ಮೊಬೈಲ್ ಆಪರೇಟಿಂಗ್ ಸಿಸ್ಟಂಗೆ ಸರ್ಕಾರ ಒತ್ತು ಕೊಡುತ್ತಿರುವುದು ಯಾಕೆ?

ಚೀನಾ ಬಿಟ್ಟರೆ ಭಾರತವೇ ವಿಶ್ವದ ಅತಿದೊಡ್ಡ ಸ್ಮಾರ್ಟ್​​ಫೋನ್ ಮಾರುಕಟ್ಟೆ ಎನಿಸಿದೆ. 70 ಕೋಟಿ ಸ್ಮಾರ್ಟ್​​ಫೋನ್ ಬಳಕೆದಾರರಿದ್ದಾರೆ. 120 ಕೋಟಿ ಜನರ ಬಳಿ ಮೊಬೈಲ್ ಇದೆ. ಈ ಮೊಬೈಲ್​​ನ ಆಪರೇಟಿಂಗ್ ಸಿಸ್ಟಂ ಅಥವಾ ತಂತ್ರಾಂಶ ಇರುವುದು ಗೂಗಲ್​ನ ಆಂಡ್ರಾಯ್ಡ್ ಮತ್ತು ಆ್ಯಪಲ್​ನ ಐಒಎಸ್​ನದ್ದೇ. ಈ ಎರಡು ಕಂಪನಿಗಳು ಶೇ. 99ರಷ್ಟು ಮಾರುಕಟ್ಟೆ ಪ್ರಾಬಲ್ಯ ಹೊಂದಿವೆ.

ಇದನ್ನೂ ಓದಿ
Image
ಏಪ್ರಿಲ್​ನಲ್ಲೂ ಬಡ್ಡಿದರ ಕಟ್; 2025ರಲ್ಲಿ 4 ಬಾರಿ ಬಡ್ಡಿಕಡಿತ?
Image
ಹತ್ತು ವರ್ಷದಲ್ಲಿ ಹತ್ತು ಲಕ್ಷಕ್ಕೇರಲಿದೆ ಸ್ಟಾರ್ಟಪ್ಸ್ ಸಂಖ್ಯೆ
Image
ಫೆಬ್ರುವರಿಯಲ್ಲಿ ಶೇ. 3.61ಕ್ಕೆ ಇಳಿದ ಹಣದುಬ್ಬರ
Image
ಇತಿಹಾಸದಲ್ಲೇ ಅತಿದೊಡ್ಡ ಮಾರುಕಟ್ಟೆ ಕುಸಿತವಾ ಇದು?

ಇದನ್ನೂ ಓದಿ: ಬೆಂಗಳೂರಿಂದ ಚೆನ್ನೈಗೆ ಕೇವಲ 30 ನಿಮಿಷದಲ್ಲಿ ಪ್ರಯಾಣ; ಇದು ವಿಮಾನ ಅಲ್ಲ, ಹೈಪರ್​​ಲೂಪ್; ವಿಶ್ವದ ಅತಿಉದ್ದದ ಟ್ರ್ಯಾಕ್ ಸದ್ಯದಲ್ಲೇ

ಆಂಡ್ರಾಯ್ಡ್ ಸ್ಮಾರ್ಟ್​​ಫೋನ್​​ಗಳಲ್ಲಿರುವ ಪ್ಲೇ ಸ್ಟೋರ್​​ನ ಶುಲ್ಕ, ಜಾಹೀರಾತು, ಪರವಾನಿಗೆ ಇತ್ಯಾದಿ ಮೂಲಕ ಗೂಗಲ್ ಸಂಸ್ಥೆ ಭಾರತದಿಂದ ವರ್ಷಕ್ಕೆ 4 ಬಿಲಿಯನ್ ಡಾಲರ್ ಆದಾಯ ಗಳಿಸುತ್ತದೆ. ಅಂದರೆ, ಸುಮಾರು 35,000 ಕೋಟಿ ರೂ ಆದಾಯವನ್ನು ಗೂಗಲ್ ಭಾರತದಿಂದ ಗಳಿಸುತ್ತದೆ. ಇದು ಪ್ಲೇಸ್ಟೋರ್ ಮೂಲಕ ಗಣಿಸುವ ಆದಾಯವಷ್ಟೇ.

ಭಾರತದ ಆ್ಯಪ್ ಡೆವಲಪರ್​​ಗಳು ಗೂಗಲ್ ಕಂಪನಿಯ ದಯೆ ಮೇಲೆ ಅವಲಂಬಿತವಾಗಬೇಕಾದ ಸ್ಥಿತಿ ಇದೆ. ಸಾಕಷ್ಟು ಭಾರತೀಯ ಆ್ಯಪ್​​ಗಳನ್ನು ಪ್ಲೇ ಸ್ಟೋರ್​​ನಿಂದ ಡೀಲಿಸ್ಟ್ ಮಾಡಲಾಗಿದೆ. ಇನ್ನು, ಸ್ಮಾರ್ಟ್​ಫೋನ್ ತಯಾರಿಸುವ ಕಂಪನಿಗಳಿಗೆ ಒಂದು ಸ್ಮಾರ್ಟ್​​ಫನ್​​ಗೆ ಆಂಡ್ರಾಯ್ಡ್ ತಂತ್ರಾಂಶ ಅಳವಡಿಸಲು 15ರಿಂದ 40 ಡಾಲರ್ ಶುಲ್ಕ ವಿಧಿಸುತ್ದೆ ಗೂಗಲ್. ಭಾರತದಲ್ಲಿ ವರ್ಷಕ್ಕೆ ಹಲವು ಕೋಟಿ ಸ್ಮಾರ್ಟ್​​ಫೋನ್​​ಗಳು ತಯಾರಾಗುತ್ತವೆ. ಇದರಿಂದ ಸಾಕಷ್ಟು ಆದಾಯ ಗೂಗಲ್​​ಗೆ ಹೋಗುತ್ತದೆ.

ಭಾರತದ್ದೇ ಆದ ಒಂದು ಆಪರೇಟಿಂಗ್ ಸಿಸ್ಟಂ ತಯಾರಾದರೆ, ಈ ಆದಾಯವೆಲ್ಲವೂ ಗೂಗಲ್ ಮತ್ತು ಆ್ಯಪಲ್​​ಗೆ ಹೋಗುವ ಬದಲು ಭಾರತದಲ್ಲೇ ಉಳಿಯಬಹುದು ಎನ್ನುವುದು ಸರ್ಕಾರದ ಎಣಿಕೆ. ಹಾಗೆಯೇ, ಮತ್ತೊಂದು ಪ್ರಬಲ ಕಾರಣವು, ದತ್ತಾಂಶ ಸುರಕ್ಷತೆಯದ್ದು. ಭಾರತೀಯರ ಮೊಬೈಲ್ ಬಳಕೆದಾರರ ದತ್ತಾಂಶವನ್ನು ವಿದೇಶೀ ತಂತ್ರಾಂಶಗಳು ನಿಯಂತ್ರಿಸುತ್ತಿವೆ. ಭಾರತದ ಆಪರೇಟಿಂಗ್ ಸಿಸ್ಟಂ ಇದ್ದರೆ ಬಳಕೆದಾರರ ದತ್ತಾಂಶದ ಸುರಕ್ಷತೆ ಬಗ್ಗೆ ಗಮನ ಹರಿಸಬಹುದು. ಸೈಬರ್ ಸೆಕ್ಯುರಿಟಿ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಹುದು ಎನ್ನುವುದು ಸರ್ಕಾರದ ಮತ್ತೊಂದು ಎಣಿಕೆ. ಹಾಗೆಯೇ, ಜಾಗತಿಕ ಮೊಬೈಲ್ ಇಕೋಸಿಸ್ಟಂನ ರೂಪುರೇಖೆಯನ್ನು ಮರುರಚಿಸುವ ಅವಕಾಶ ಭಾರತಕ್ಕೆ ಸಿಕ್ಕಂತಾಗುತ್ತದೆ ಎನ್ನುವ ಲೆಕ್ಕಾಚಾರವೂ ಇದೆ.

ಇದನ್ನೂ ಓದಿ: ಸ್ಟಾರ್​ಲಿಂಕ್ ಇಂಟರ್ನೆಟ್ ಬೇಕೆಂದರೆ ತಿಂಗಳಿಗೆ 5,000 ರೂ ನೀಡಬೇಕಾ? ಉಪಕರಣ ವೆಚ್ಚ ಇನ್ನೂ ದುಬಾರಿ

ಆಪರೇಟಿಂಗ್ ಸಿಸ್ಟಂ ನಿರ್ಮಾಣ ಅಷ್ಟು ಸುಲಭವಿಲ್ಲ….

ಮೊಬೈಲ್ ಆಪರೇಟಿಂಗ್ ಸಿಸ್ಟಂ ನಿರ್ಮಾಣ ಅಷ್ಟು ಸುಲಭವಲ್ಲ. ಗೂಗಲ್, ಆ್ಯಪಲ್ ಸಂಸ್ಥೆಗಳು ತಮ್ಮ ಆ್ಯಪ್ ಇಕೋಸಿಸ್ಟಂ ಮತ್ತು ಒಎಸ್ ಅನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಬಂಡವಾಳ ಹಾಗೂ ಶ್ರಮ ಹಾಕಿವೆ. ಒಂದು ನಿರ್ದಿಷ್ಟ ಗುರಿಗೆ ತಂತ್ರಾಂಶ ಅಭಿವೃದ್ಧಿಪಡಿಸುವುದು ಸುಲಭ. ಆದರೆ, ಮೊಬೈಲ್ ಇಕೋಸಿಸ್ಟಂ ತಯಾರಿಸಲು ವಿವಿಧ ಡೆವಲಪರ್​​ಗಳು, ಡಿಸೈನರ್​​ಗಳ ತಂಡಗಳ ಅವಶ್ಯಕತೆ ಇದೆ. ಹಾರ್ಡ್​​ವೇರ್ ಹೊಂದಾಣಿಕೆ, ಡೆವಲಪರ್ ಬೆಂಬಲ ಅವಶ್ಯಕತೆ ಇರುತ್ತದೆ. ಹಿಂದೆ ಭಾರತದಲ್ಲಿ ಸ್ವಂತವಾಗಿ ಒಎಸ್ ಅಭಿವೃದ್ಧಿಗೆ ಪ್ರಯತ್ನ ಆಗಿತ್ತು. ಆದರೆ, ಸರಿಯಾದ ಆ್ಯಪ್ ಇಕೋಸಿಸ್ಟಂ ಇಲ್ಲದೇ ಇದ್ದದ್ದು, ಹಾಗೂ ಸ್ಮಾರ್ಟ್​​ಫೋನ್ ತಯಾರಕರು ಅದನ್ನು ಅಳವಡಿಸಲು ಆಸಕ್ತಿ ತೋರದೇ ಇದ್ದದ್ದರಿಂದ ಪ್ರಯತ್ನ ವಿಫಲವಾಗಿತ್ತು. ಸರ್ಕಾರ ಈ ಸವಾಲುಗಳನ್ನು ಎದುರಿಸಲು ಏನು ಕ್ರಮ ವಹಿಸುತ್ತದೆ ಎನ್ನುವುದು ಪ್ರಶ್ನೆಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ