2035ಕ್ಕೆ ಭಾರತದಲ್ಲಿ ಸ್ಟಾರ್ಪಟ್ ಸಂಖ್ಯೆ 10,00,000 ಆಗುವ ನಿರೀಕ್ಷೆ: ನಂದನ್ ನಿಲೇಕಣಿ ನಿರೀಕ್ಷೆ
Startup ecosystem in India: ಭಾರತದಲ್ಲಿ ಸ್ಟಾರ್ಟಪ್ಗಳ ಸಂಖ್ಯೆ ವರ್ಷಕ್ಕೆ ಶೇ. 20ರಷ್ಟು ಹೆಚ್ಚಾಗುತ್ತಿದೆ. ಒಂದೂವರೆ ಲಕ್ಷ ಇರುವ ಸ್ಟಾರ್ಟಪ್ಗಳ ಸಂಖ್ಯೆ 2035ಕ್ಕೆ 10 ಲಕ್ಷಕ್ಕೆ ಏರಬಹುದು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ಮುಂದಿನ ಮೂರು ವರ್ಷದಲ್ಲಿ ಭಾರತದಲ್ಲಿ 600 ಬಿಲಿಯನ್ ಡಾಲರ್ನಷ್ಟು ಪರ್ಯಾಯ ಹೂಡಿಕೆ ಹರಿದುಬರಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ.

ನವದೆಹಲಿ, ಮಾರ್ಚ್ 13: ಭಾರತದಲ್ಲಿ ಆರ್ಥಿಕತೆ ಭರ್ಜರಿಯಾಗಿ ಬೆಳೆಯುತ್ತಿರುವ ಸಂಕೇತವಾಗಿ ಸ್ಟಾರ್ಟಪ್ಗಳ ಇಕೋಸಿಸ್ಟಂ (startup ecosystem) ಕೂಡ ದಿನೇದಿನೇ ಸುದೃಢಗೊಳ್ಳುತ್ತಿದೆ. ಪ್ರತೀ ವರ್ಷವೂ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಹೊಸ ಸ್ಟಾರ್ಟಪ್ಗಳು ಭಾರತದಲ್ಲಿ ಶುರುವಾಗುತ್ತಿವೆ. ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಅವರ ಪ್ರಕಾರ ಭಾರತದಲ್ಲಿ ಪ್ರತೀ ವರ್ಷ ಹೊಸ ಸ್ಟಾರ್ಟಪ್ಗಳ ಸಂಖ್ಯೆ ಶೇ. 20ರಷ್ಟು ಹೆಚ್ಚುತ್ತಾ ಹೋಗುತ್ತದಂತೆ. ಮುಂದಿನ ಹತ್ತು ವರ್ಷದಲ್ಲಿ ಇದೇ ರೀತಿ ಬೆಳವಣಿಗೆ ಆಗಲಿದೆ. 2035ರೊಳಗೆ ಭಾರತದಲ್ಲಿ ಇರುವ ಸ್ಟಾರ್ಟಪ್ಗಳ ಸಂಖ್ಯೆ 10 ಲಕ್ಷ ದಾಟಲಿದೆ ಎಂದು ನಂದನ್ ನಿಲೇಕಣಿ ನಿರೀಕ್ಷಿಸಿದ್ದಾರೆ.
ಭಾರತದಲ್ಲಿ ಈಗ ಆಂಟ್ರಪ್ರನ್ಯೂರ್ ಆಗಬೇಕೆನ್ನುವ ತುಡಿತ ಹೊಂದಿರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಒಂದು ಸ್ಟಾರ್ಟಪ್ ಹಲವು ಸ್ಟಾರ್ಟಪ್ಗಳ ಸೃಷ್ಟಿಗೆ ಕಾರಣವಾಗುತ್ತಿದೆ. ದೊಡ್ಡ ಸ್ಟಾರ್ಟಪ್ಗಳಲ್ಲಿ ಕೆಲಸ ಮಾಡಿದವರು ತಮ್ಮದೇ ಸ್ವಂತ ಬ್ಯುಸಿನೆಸ್ ಆರಂಭಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಉದಾಹರಣೆಗೆ, ಫ್ಲಿಪ್ಕಾರ್ಟ್ನಲ್ಲಿ ಕೆಲಸ ಮಾಡಿದವರಲ್ಲಿ ಹಲವರು ತಮ್ಮದೇ ಸ್ವಂತ ಸ್ಟಾರ್ಟಪ್ ಆರಂಭಿಸಿದ್ದಾರೆ. ಮಾಜಿ ಫ್ಲಿಪ್ಕಾರ್ಟ್ ಉದ್ಯೋಗಿಗಳಿಂದ ಬರೋಬ್ಬರಿ 44 ಸ್ಟಾರ್ಟಪ್ಗಳು ಆರಂಭವಾಗಿವೆ.
ಇದನ್ನೂ ಓದಿ: ಡಯಾಬಿಟಿಸ್ ರೋಗಿಗಳಿಗೆ ಖುಷಿ ಸುದ್ದಿ; ಈ ಪರಿಣಾಮಕಾರಿ ಔಷಧದ ಬೆಲೆ ಶೇ. 90ರಷ್ಟು ಇಳಿಕೆ
ಸದ್ಯ, ಭಾರತದಲ್ಲಿ ಒಂದೂವರೆ ಲಕ್ಷ ಸ್ಟಾರ್ಟಪ್ಗಳಿವೆ. ನೂರಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳಿವೆ. ಯೂನಿಕಾರ್ನ್ ಎಂದರೆ ಕನಿಷ್ಠ ಒಂದು ಬಿಲಿಯನ್ ಡಾಲರ್ನಷ್ಟಾದರೂ ವ್ಯಾಲ್ಯುಯೇಶನ್ ಇರುವ ಕಂಪನಿಯಾಗಿರಬೇಕು ಮತ್ತು ಷೇರು ಮಾರುಕಟ್ಟೆಯಲ್ಲಿ ಇನ್ನೂ ಲಿಸ್ಟ್ ಆಗಿರಬಾರದು. ಭಾರತದಲ್ಲಿ ಈ ರೀತಿಯ ಯೂನಿಕಾರ್ನ್ ಕಂಪನಿಗಳು ನೂರಕ್ಕೂ ಹೆಚ್ಚಿವೆ. ಈ ಯೂನಿಕಾರ್ನ್ಗಳು ಎರಡು ಸಾವಿರದಷ್ಟು ಸ್ಟಾರ್ಟಪ್ಗಳ ಸೃಷ್ಟಿಗೆ ಕಾರಣವಾಗಿವೆ.
ನಂದನ್ ನಿಲೇಕಣಿ ಅವರು ಈ ಬೆಳವಣಿಗೆಯನ್ನು ಗುರುತಿಸಿದ್ದಾರೆ. ‘ಒಂದು ರೀತಿಯಲ್ಲಿ ಬೈನರಿ ಫಿಶನ್ ಆಗುತ್ತಿದೆ. ಸ್ಟಾರ್ಟಪ್ಗಳು ಮತ್ತಷ್ಟು ಸ್ಟಾರ್ಟಪ್ಗಳ ಸೃಷ್ಟಿಗೆ ಕಾರಣವಾಗುತ್ತಿವೆ,’ ಎಂದು ಆಧಾರ್ ಇನ್ಫ್ರಾಸ್ಟ್ರಕ್ಚರ್ ಸೃಷ್ಟಿಯ ಹರಿಕಾರರಾದ ಅವರು ಹೇಳಿದ್ದಾರೆ.
ಇದನ್ನೂ ಓದಿ: ಪಿಎಂ ಸೂರ್ಯಘರ್: ಕೇವಲ 13 ತಿಂಗಳಲ್ಲಿ 10 ಲಕ್ಷ ಮೈಲಿಗಲ್ಲು ಮುಟ್ಟಿದ ರೂಫ್ಟಾಪ್ ಸೋಲಾರ್ ಸ್ಕೀಮ್
ಸ್ಟಾರ್ಟಪ್ಗಳಿಗೆ ಪುಷ್ಟಿ ನೀಡಲಿರುವ 600 ಬಿಲಿಯನ್ ಡಾಲರ್ ಹೂಡಿಕೆ
ಮುಂದಿನ ಮೂರು ವರ್ಷದಲ್ಲಿ ಭಾರತದಲ್ಲಿ 600 ಬಿಲಿಯನ್ ಡಾಲರ್ನಷ್ಟು ಪರ್ಯಾಯ ಹೂಡಿಕೆಗಳು ಹರಿದುಬರಲಿವೆ. ಇದರಿಂದ ಸ್ಟಾರ್ಟಪ್ ಇಕೋಸಿಸ್ಟಂಗೆ ಪುಷ್ಟಿ ಸಿಗುತ್ತದೆ. ನಾವೀನ್ಯತೆ ಅಥವಾ ಇನ್ನೋವೇಶನ್, ಉದ್ಯಮಶೀಲತೆಯ ಪ್ರವೃತ್ತಿ ಹೆಚ್ಚಿಸುತ್ತದೆ. ಹೊಸ ಉದ್ದಿಮೆಗಳ ಬೆಳವಣಿಗೆಗೆ ಪೂರಕವಾಗುವಂತಹ ವಾತಾವರಣ ಸೃಷ್ಟಿಗೆ ಈ ಬಂಡವಾಳ ಹೂಡಿಕೆಯು ಸಹಕಾರಿಯಾಗಬಹುದು ಎಂದು ಮುಂಬೈನಲ್ಲಿ ಕಳೆದ ವಾರ ನಡೆದ ಸೆಂಟರ್ ಫಾರ್ ಫೈನಾನ್ಷಿಯಲ್ ಮಾರ್ಕೆಟ್ಸ್ನ ಉದ್ಘಾಟನೆಯ ವೇಳೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ