ಆರ್ಬಿಐ ಈ ವರ್ಷ ಇನ್ನೂ ಮೂರು ಬಾರಿ ಬಡ್ಡಿದರ ಕಡಿತಗೊಳಿಸಬಹುದು: ಎಸ್ಬಿಐ ವರದಿ
SBI research ecowrap report: ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷದೊಳಗೆ ಇನ್ನೂ ಮೂರು ಬಾರಿ ರಿಪೊ ದರ ಕಡಿತ ಮಾಡಬಹುದು. ಏಪ್ರಿಲ್, ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ 25 ಮೂಲಾಂಕಗಳಷ್ಟು ಬಡ್ಡಿದರ ಕಡಿಮೆ ಮಾಡಬಹುದು ಎಂದು ಎಸ್ಬಿಐ ರಿಸರ್ಚ್ ಸಂಸ್ಥೆ ಅಂದಾಜು ಮಾಡಿದೆ. ಹಣದುಬ್ಬರ ಈ ವರ್ಷ ಮತ್ತು ಮುಂದಿನ ವರ್ಷ ಕಡಿಮೆ ಮಟ್ಟದಲ್ಲಿ ಇರುವುದರಿಂದ ಬಡ್ಡಿದರ ಕಡಿತ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ನವದೆಹಲಿ, ಮಾರ್ಚ್ 13: ಮುಂಬರುವ ಹಣಕಾಸು ವರ್ಷದಲ್ಲಿ (2025-26) ಆರ್ಬಿಐ ಮೂರು ಬಾರಿ ದರ ಕಡಿತ ಮಾಡಬಹುದು. ಒಟ್ಟು 75 ಮೂಲಾಂಕಗಳಷ್ಟು ಬಡ್ಡಿ ಇಳಿಕೆ ಆಗಬಹುದು ಎಂದು ಎಸ್ಬಿಐ ರಿಸರ್ಚ್ ಇಕೋವ್ರ್ಯಾಪ್ (SBI research ecowrap report) ವರದಿ ಅಭಿಪ್ರಾಯಪಟ್ಟಿದೆ. ಈ ವರ್ಷದ ಏಪ್ರಿಲ್, ಜೂನ್ ಮತ್ತು ಅಕ್ಟೋಬರ್ ತಿಂಗಳಲ್ಲಿ ತಲಾ 25 ಬೇಸಿಸ್ ಪಾಯಿಂಟ್ಗಳಷ್ಟು ಬಡ್ಡಿ ಇಳಿಕೆ ಮಾಡಬಹುದು ಎಂದು ಈ ವರದಿಲ್ಲಿ ಅಂದಾಜು ಮಾಡಲಾಗಿದೆ. ಫೆಬ್ರುವರಿ ತಿಂಗಳ ಹಣದುಬ್ಬರ (Inflation rate) ಶೇ. 3.61ಕ್ಕೆ ಇಳಿದಿರುವುದು, ಹಾಗೂ ಜನವರಿಯಿಂದ ಮಾರ್ಚ್ವರೆಗಿನ ಕ್ವಾರ್ಟರ್ನಲ್ಲಿ ಹಣದುಬ್ಬರ ಶೇ. 3.9ರಷ್ಟಿರುವ ಅಂದಾಜಿರುವುದರಿಂದ ಏಪ್ರಿಲ್ನಲ್ಲಿ ಆರ್ಬಿಐ ಎಂಪಿಸಿ ಸಭೆಯಲ್ಲಿ ಬಡ್ಡಿದರ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಆರ್ಬಿಐ ಈ ಫೆಬ್ರುವರಿಯಲ್ಲಿ 25 ಮೂಲಾಂಕಗಳಷ್ಟು ಬಡ್ಡಿದರ ಕಡಿತಗೊಳಿಸಿತ್ತು. ಶೇ. 6.50ರಷ್ಟಿದ್ದ ಬಡ್ಡಿದರ ಶೇ. 6.25ಕ್ಕೆ ಇಳಿದಿದೆ. ಈಗ ಏಪ್ರಿಲ್, ಜೂನ್ ಮತ್ತು ಅಕ್ಟೋಬರ್ನಲ್ಲೂ ರಿಪೋ ರೇಟ್ ಕಡಿಮೆ ಮಾಡಿದ್ದೇ ಆದಲ್ಲಿ ಒಂದು ಕ್ಯಾಲಂಡರ್ ವರ್ಷದಲ್ಲಿ ನಾಲ್ಕು ಬಾರಿ ಬಡ್ಡಿದರ ಕಡಿತಗೊಳಿಸಿದಂತೆ ಆಗಬಹುದು. ಹಣದುಬ್ಬರ ನಿಯಂತ್ರಣದಲ್ಲಿ ಇರುವ ಹಿನ್ನೆಲೆಯಲ್ಲಿ ರಿಪೋ ದರ ಇಳಿಸುವ ಅವಕಾಶ ಹೆಚ್ಚಿದೆ. ಈ ಬಡ್ಡಿದರ ಇಳಿಕೆ ಮಾಡಿದರೆ ಆರ್ಥಿಕತೆಗೆ ಇನ್ನಷ್ಟು ಪುಷ್ಟಿ ಸಿಗಬಹುದು. ಶೇ. 6-7ರ ಆಸುಪಾಸಿನಲ್ಲಿ ಗಿರಕಿ ಹೊಡೆಯುತ್ತಿರುವ ಆರ್ಥಿಕ ಬೆಳವಣಿಗೆಯ ವೇಗವನ್ನು ಶೇ. 7ರ ಗಡಿ ದಾಟಿಸುವ ಗುರಿ ಈಡೇರಿಸಲು ಸಾಧ್ಯ.
ಇದನ್ನೂ ಓದಿ: 2035ಕ್ಕೆ ಭಾರತದಲ್ಲಿ ಸ್ಟಾರ್ಪಟ್ ಸಂಖ್ಯೆ 10,00,000 ಆಗುವ ನಿರೀಕ್ಷೆ: ನಂದನ್ ನಿಲೇಕಣಿ ನಿರೀಕ್ಷೆ
ಹಣದುಬ್ಬರ ಶೇ. 5ರ ಒಳಗಿರುವ ಸಾಧ್ಯತೆ
ಎಸ್ಬಿಐ ರಿಸರ್ಚ್ ವರದಿ ಪ್ರಕಾರ ಹಣದುಬ್ಬರ 2024-25ರಲ್ಲಿ ಶೇ. 4.7ರಷ್ಟಿರಬಹುದು. 2025-26ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಶೇ. 4.0ರಿಂದ ಶೇ. 4.2ರ ಶ್ರೇಣಿಯಲ್ಲಿ ಇರಬಹುದು. ಈ ಒಂದು ಕಾರಣಕ್ಕೆ ಆರ್ಬಿಐ ತನ್ನ ರಿಪೋ ರೇಟ್ ಅನ್ನು ಇಳಿಸಲು ಮುಂದಾಗಬಹುದು ಎಂದು ಈ ವರದಿಯಲ್ಲಿ ಅಂದಾಜು ಮಾಡಲಾಗಿದೆ.
ತರಕಾರಿ ಬೆಲೆ ಇಳಿಕೆಯ ಭಾಗ್ಯ
ಫೆಬ್ರುವರಿ ತಿಂಗಳ ಹಣದುಬ್ಬರ ಕೇವಲ ಶೇ 3.61 ಇದೆ. ತರಕಾರಿಯ ಬೆಲೆ 20 ತಿಂಗಳಲ್ಲಿ ಮೊದಲ ಬಾರಿಗೆ ಮೈನಸ್ ಆಗಿದೆ. ಅಂದರೆ, ಬೆಲೆ ಏರಿಕೆ ಬದಲು ಇಳಿಕೆ ಆಗಿದೆ. ಅದರಲ್ಲೂ ಬೆಳ್ಳುಳ್ಳಿ, ಟೊಮೆಟೋ ಮತ್ತು ಆಲೂಗಡ್ಡೆ ಬೆಲೆಗಳಂತೂ ಭಾರೀ ಇಳಿಕೆ ಆಗಿವೆ. ಮಹಾಕುಂಭ ಮೇಳದ ಪರಿಣಾಮವಾಗಿ ಬೆಳ್ಳುಳ್ಳಿ ಬಳಕೆ ಬಹಳಷ್ಟು ಕಡಿಮೆ ಆಯಿತು ಎನ್ನಲಾಗಿದೆ.
ಇದನ್ನೂ ಓದಿ: ಫೆಬ್ರುವರಿಯಲ್ಲಿ ಹಣದುಬ್ಬರ ಶೇ 3.61ಕ್ಕೆ ಇಳಿಕೆ; ನಿರೀಕ್ಷೆಗಿಂತ ಕೆಳಗಿಳಿದ ಬೆಲೆ ಏರಿಕೆ ದರ
ಔದ್ಯಮಿಕ ಉತ್ಪಾದನೆ ಹೆಚ್ಚಳ
ಇದೇ ವೇಳೆ, ಭಾರತದ ಔದ್ಯಮಿಕ ಉತ್ಪಾದನೆ ದರ (ಐಐಪಿ) ಜನವರಿ ತಿಂಗಳಲ್ಲಿ ಶೇ. 5ರಷ್ಟಾಗಿದೆ. ಡಿಸೆಂಬರ್ನಲ್ಲಿ ಇದು ಶೇ. 3.2ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಜನವರಿಯಲ್ಲಿ ಆಗಿರುವುದು ಒಳ್ಳೆಯ ಜಿಗಿತ.
ಔದ್ಯಮಿಕ ಉತ್ಪಾದನೆ ಹೆಚ್ಚಳದಲ್ಲಿ ತಯಾರಿಕಾ ವಲಯ ಅಥವಾ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಪಾತ್ರ ಮಹತ್ವದ್ದು. ಇದು ಶೇ. 5.5ರಷ್ಟು ಬೆಳವಣಿಗೆ ಕಂಡಿದೆ. ಭಾರತದ ಕಾರ್ಪೊರೇಟ್ ಸೆಕ್ಟರ್ನ ಆದಾಯ ಕೂಡ ಉತ್ತಮವಾಗಿ ಆಗಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ 4,000 ಕಂಪನಿಗಳು ಮೂರನೇ ಕ್ವಾರ್ಟರ್ನಲ್ಲಿ (ಅಕ್ಟೋಬರ್ನಿಂದ ಡಿಸೆಂಬರ್)ಸರಾಸರಿಯಾಗಿ ಶೇ. 6.2ರಷ್ಟು ಆದಾಯ ಹೆಚ್ಚಳ ಕಂಡಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ