Dividend Funds: ಐದು ವರ್ಷಗಳಿಂದ ಶೇ. 20ಕ್ಕೂ ಹೆಚ್ಚು ಲಾಭ ತರುತ್ತಿರುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳು
Dividend Yielding Mutual Funds: ಷೇರುಗಳಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಸುಲಭ ಮತ್ತು ಸುರಕ್ಷಿತ ಸಾಧನವಾಗಿ ಮ್ಯೂಚುವಲ್ ಫಂಡ್ಗಳಿವೆ. ಷೇರುದಾರರಿಗೆ ಡಿವಿಡೆಂಡ್ ನೀಡುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುವ ಫಂಡ್‌ಗಳು ಜನಪ್ರಿಯವಾಗುತ್ತಿವೆ. ಇಂಥ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳು ಮಾಮೂಲಿಯ ಮೌಲ್ಯ ವರ್ಧನೆ ಜೊತೆಗೆ ಡಿವಿಡೆಂಡ್ ಆದಾಯವನ್ನೂ ನೀಡುತ್ತವೆ. ಈ ಬಗ್ಗೆ ಒಂದು ವರದಿ.

ಸಾವರೀನ್ ಗೋಲ್ಡ್ ಬಾಂಡ್ ಸ್ಕೀಮ್ನಲ್ಲಿ ಹೂಡಿಕೆ ಮಾಡಿದವರಿಗೆ ಎರಡು ರೀತಿಯ ಲಾಭ ಇರುವುದು ತಿಳಿದಿರುತ್ತದೆ. ಒಂದು, ಹೂಡಿಕೆ ಅವಧಿಯಾದ್ಯಂತ ಹೂಡಿಕೆ ಮೌಲ್ಯ ಹೆಚ್ಚುತ್ತಾ ಹೋಗುತ್ತದೆ. ಮತ್ತೊಂದು, ಹೂಡಿಕೆಯ ಮೊತ್ತಕ್ಕೆ ನಿರ್ದಿಷ್ಟ ಬಡ್ಡಿ ಆದಾಯ ಕೂಡ ಸಿಗುತ್ತಿರುತ್ತದೆ. ಅಂತೆಯೇ, ಷೇರುಗಳ ಹೂಡಿಕೆಯಲ್ಲೂ ಇದನ್ನು ಕಾಣಬಹುದು. ಹೆಚ್ಚಿನ ಕಂಪನಿಗಳು ತಮ್ಮ ಷೇರುದಾರರಿಗೆ ಪ್ರತೀ ಷೇರುಗಳಿಗೆ ನಿರ್ದಿಷ್ಟ ಡಿವಿಡೆಂಡ್ ಅನ್ನು ನೀಡುತ್ತವೆ. ಕೆಲ ಕಂಪನಿಗಳು ಹೆಚ್ಚಿನ ಡಿವಿಡೆಂಡ್ (share dividends) ನೀಡುತ್ತವೆ. ಇಂಥ ಷೇರುಗಳಲ್ಲಿ ಹೂಡಿಕೆ ಮಾಡಿದವರಿಗೆ ಡಿವಿಡೆಂಡ್ಗಳಿಂದ ನಿಯಮಿತವಾಗಿ ಆದಾಯ ಸಿಗುತ್ತಿರುತ್ತದೆ. ಕೆಲ ಮ್ಯೂಚುವಲ್ ಫಂಡ್‌ಗಳು ಈ ರೀತಿಯ ಡಿವಿಡೆಂಡ್ ನೀಡುವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡುತ್ತವೆ. ಈ ಲಾಭಾಂಶವನ್ನು ಫಂಡ್ನ ಹೂಡಿಕೆದಾರರಿಗೆ ಹಂಚಿಕೆ ಮಾಡುತ್ತವೆ. ಒಂದು ಷೇರಿನ ಮೌಲ್ಯದ ಏರಿಳಿತ ಎಷ್ಟೇ ತೀವ್ರವಾಗಿದ್ದರೂ, ಅದು ನೀಡುವ ಲಾಭಾಂಶ ಬಹುತೇಕ ಸ್ಥಿರವಾಗಿರುತ್ತದೆ. ಹೀಗಾಗಿ, ಸಾಕಷ್ಟು ಹೂಡಿಕೆದಾರರು ಇಂಥ ಡಿವಿಡೆಂಡ್ ಯೀಲ್ಡ್ ಕೊಡುವ ಮ್ಯೂಚುವಲ್ ಫಂಡ್ಗಳಲ್ಲಿ (Dividend Yield Mutual Funds) ಹೂಡಿಕೆ ಮಾಡಲು ಆಸಕ್ತಿ ತೋರುವುದುಂಟು.
ಡಿವಿಡೆಂಡ್ ಯೀಲ್ಡ್ ನೀಡುವ ಟಾಪ್-5 ಮ್ಯೂಚುವಲ್ ಫಂಡ್ಗಳಿವು
ಕಳೆದ ಐದು ವರ್ಷಗಳಲ್ಲಿ, ಕೆಲ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್‌ಗಳು ಹೂಡಿಕೆದಾರರಿಗೆ ಅತ್ಯುತ್ತಮ ಆದಾಯವನ್ನು ನೀಡಿವೆ. ಇವುಗಳಲ್ಲಿ, ಐಸಿಐಸಿಐ ಪ್ರುಡೆನ್ಶಿಯಲ್ ಡಿವಿಡೆಂಡ್ ಇಳುವರಿ ಇಕ್ವಿಟಿ ಫಂಡ್, ಡೈರೆಕ್ಟ್ ಪ್ಲಾನ್ ಅತಿ ಹೆಚ್ಚು ಆದಾಯವನ್ನು ನೀಡಿದೆ. ಯುಟಿಐ ಡಿವಿಡೆಂಡ್ ಯೀಲ್ಡ್ ಫಂಡ್, ಟೆಂಪಲ್ಟನ್ ಇಂಡಿಯಾ ಇಕ್ವಿಟಿ ಇನ್ಕಮ್ ಫಂಡ್, ಆದಿತ್ಯ ಬಿರ್ಲಾ ಸನ್ ಲೈಫ್ ಡಿವಿಡೆಂಡ್ ಯೀಲ್ಡ್ ಫಂಡ್, ಮತ್ತು ಸುಂದರಂ ಡಿವಿಡೆಂಡ್ ಯೀಲ್ಡ್ ಫಂಡ್ ಸೇರಿವೆ. ಐದು ವರ್ಷಗಳ ಅವಧಿಯಲ್ಲಿ ಈ ಪ್ರತಿ ಫಂಡ್ ಕೂಡ ಪ್ರತಿ ವರ್ಷ ನೀಡುವ ಆದಾಯದ ವಿವರ ಈ ಕೆಳಕಂಡಂತಿದೆ:
ಡಿವಿಡೆಂಡ್ ಯೀಲ್ಡ್ ಫಂಡ್ ಮತ್ತು 5 ವರ್ಷದ ಸರಾಸರಿ ರಿಟರ್ನ್
- ಐಸಿಐಸಿಐ ಪ್ರುಡೆನ್ಶಿಯಲ್ ಡಿವಿಡೆಂಡ್ ಯೀಲ್ಡ್ ಇಕ್ವಿಟಿ ಫಂಡ್ – ಡೈರೆಕ್ಟ್ ಪ್ಲಾನ್: 28.85%
- ಟೆಂಪಲ್ಟನ್ ಇಂಡಿಯಾ ಇಕ್ವಿಟಿ ಇನ್ಕಮ್ ಫಂಡ್ – ಡೈರೆಕ್ಟ್ ಪ್ಲಾನ್: 25.74%
- ಆದಿತ್ಯ ಬಿರ್ಲಾ ಸನ್ ಲೈಫ್ ಡಿವಿಡೆಂಡ್ ಯೀಲ್ಡ್ ಫಂಡ್ – ಡೈರೆಕ್ಟ್ ಪ್ಲಾನ್: 22.75%
- LIC MF ಡಿವಿಡೆಂಡ್ ಯೀಲ್ಡ್ ಫಂಡ್ – ಡೈರೆಕ್ಟ್ ಪ್ಲಾನ್: 21.81%
- UTI ಡಿವಿಡೆಂಡ್ ಯೀಲ್ಡ್ ಫಂಡ್ – ಡೈರೆಕ್ಟ್ ಪ್ಲಾನ್: 21.69%
ಇದನ್ನೂ ಓದಿ: ಜ್ಯಾಕ್ಪಾಟ್ ತರುವ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ? ಕ್ರಿಸ್ ಮೇಯರ್ ಫಾರ್ಮುಲಾ ಇದು
ಡಿವಿಡೆಂಡ್ ಯೀಲ್ಡ್ ಮ್ಯೂಚುಯಲ್ ಫಂಡ್‌ಗಳ ಸಾಧಕ ಮತ್ತು ಬಾಧಕಗಳು
ಈ ಫಂಡ್ಗಳಲ್ಲಿ ಹೂಡಿಕೆ ಮಾಡುವುದರಿಂದ, ನೀವು ಕಾಲಕಾಲಕ್ಕೆ ಲಾಭಾಂಶದ ರೂಪದಲ್ಲಿ ನಿಯಮಿತ ಆದಾಯವನ್ನು ಪಡೆಯಬಹುದು. ದೀರ್ಘಾವಧಿಯಲ್ಲಿ ಈಕ್ವಿಟಿಯಲ್ಲಿ ಹೂಡಿಕೆ ಮಾಡುವುದರಿಂದ, ಕಾಲಾನಂತರದಲ್ಲಿ ನಿಮ್ಮ ಹೂಡಿಕೆ ಬಂಡವಾಳ ಹೆಚ್ಚಾಗುವ ಸಾಧ್ಯತೆಯಿದೆ. ಈ ನಿಧಿಗಳು ಸ್ಥಿರ ಮತ್ತು ಪ್ರಬಲ ತಳಹದಿಯ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಇದರಿಂದಾಗಿ ಮಾರುಕಟ್ಟೆಯ ಏರಿಳಿತಗಳ ಅಪಾಯ ಕಡಿಮೆ ಇರುತ್ತದೆ. ಮಾರುಕಟ್ಟೆ ಕುಸಿತದ ಸಮಯದಲ್ಲೂ, ಈ ಕಂಪನಿಗಳು ಸ್ಥಿರವಾಗಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ, ಹೂಡಿಕೆ ಸುರಕ್ಷಿತವಾಗಿರುತ್ತದೆ.
ಆದರೆ, ಬುಲ್ ರನ್ ವೇಳೆ, ಅಂದರೆ ಮಾರುಕಟ್ಟೆ ಬಹಳ ಲಾಭ ಕಾಣುತ್ತಿರುವಾಗ ಬೇರೆ ಕೆಲ ಷೇರುಗಳಂತೆ ಈ ಡಿವಿಡೆಂಡ್ ಯೀಲ್ಡ್ ಷೇರುಗಳು ವೇಗವಾಗಿ ವೃದ್ಧಿಸುವುದಿಲ್ಲ. ಹೀಗಾಗಿ, ಹೆಚ್ಚು ಮಾರುಕಟ್ಟೆ ರಿಸ್ಕ್ ತೆಗೆದುಕೊಳ್ಳಲು ಬಯಸದವರು ಮತ್ತು ನಿಯಮಿತ ಆದಾಯ ಬಯಸುವವರು ಡಿವಿಡೆಂಡ್ ಯೀಲ್ಡ್ ಸ್ಟಾಕುಗಳತ್ತ ಗಮನಹರಿಸಬಹುದು. ಅಥವಾ ಅಂಥ ಸ್ಟಾಕುಗಳಲ್ಲಿ ಹೂಡಿಕೆ ಮಾಡುವ ಫಂಡ್ಗಳನ್ನು ಆಯ್ದುಕೊಳ್ಳಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ