ಜ್ಯಾಕ್ಪಾಟ್ ತರುವ ಮಲ್ಟಿಬ್ಯಾಗರ್ ಷೇರು ಪತ್ತೆ ಮಾಡುವುದು ಹೇಗೆ? ಕ್ರಿಸ್ ಮೇಯರ್ ಫಾರ್ಮುಲಾ ಇದು
Finding multibagger stocks: ಬಿಎಸ್ಇ ಮತ್ತು ಎನ್ಎಸ್ಇನಲ್ಲಿ ಐದು ಸಾವಿರಕ್ಕೂ ಹೆಚ್ಚು ಷೇರುಗಳು ಲಿಸ್ಟ್ ಆಗಿವೆ. ಇದರಲ್ಲಿ ಉತ್ತಮ ಷೇರುಗಳನ್ನು ಪತ್ತೆ ಮಾಡಲು ಟೆಕ್ನಿಕಲ್ ಮೆಟ್ರಿಕ್ಸ್ ಹಲವುಂಟು. ಅದಕ್ಕಿಂತ ಬಹಳ ಮೂಲಭೂತವಾದ ಮತ್ತು ಬಹಳ ಮುಖ್ಯವಾದ ಮೂರ್ನಾಲ್ಕು ಅಂಶಗಳನ್ನು ಗಮನಿಸಬೇಕೆಂದು ಕ್ರಿಸ್ ಮೇಯರ್ ಹೇಳುತ್ತಾರೆ. ‘100 ಬ್ಯಾಗರ್ಸ್’ ಪುಸ್ತಕದ ಕರ್ತೃವಾದ ಅವರು ಹೇಳಿದ ಅಂಶಗಳು ಇಲ್ಲಿವೆ...

ನವದೆಹಲಿ, ಮಾರ್ಚ್ 10: ಷೇರು ಮಾರುಕಟ್ಟೆಯಲ್ಲಿ ಸಾವಿರಾರು ಷೇರುಗಳಿದ್ದು, ಆ ರಾಶಿಯೊಳಗೆ ಮಲ್ಟಿಬ್ಯಾಗರ್ಗಳನ್ನು (multibagger stocks) ಗುರುತಿಸುವುದು ಬಹಳ ಕಷ್ಟ. ಈಗಾಗಲೇ ಉಚ್ಚ ಮಟ್ಟಕ್ಕೆ ಏರಿ ಮಲ್ಟಿಬ್ಯಾಗರ್ ಪಾತ್ರ ಮುಗಿಸಿರುವ ಷೇರುಗಳು ಸುಲಭವಾಗಿ ಕಣ್ಣಿಗೆ ಬೀಳುತ್ತವೆ. ಆದರೆ, ಗಣನೀಯ ಏರಿಕೆ ಸಾಧ್ಯತೆ ಇರುವ ಮತ್ತು ಭವಿಷ್ಯದಲ್ಲಿ ಮಲ್ಟಿಬ್ಯಾಗರ್ ಎನಿಸಬಹುದಾದ, ಮತ್ತು ಈಗಾಗಲೇ ಮಲ್ಟಿಬ್ಯಾಗರ್ ಹಾದಿಯಲ್ಲಿ ಇದ್ದಿರಬಹುದಾದ ಷೇರುಗಳನ್ನು ಕಂಡು ಹಿಡಿಯುವುದು ಎಂಥ ನಿಪುಣನೇ ಆಗಲಿ ಕಷ್ಟದ ಕೆಲಸ. ಒಂದು ಉತ್ತಮ ಷೇರುಗಳನ್ನು ಗುರುತಿಸಲು ಹಲವು ಮಾನದಂಡಗಳಿವೆ. ಟೆಕ್ನಿಕಲ್ ಅಂಶಗಳಿವೆ. ‘100 ಬ್ಯಾಗರ್ಸ್’ ಎನ್ನುವ ಪುಸ್ತಕದ ಬರೆದಿರುವ ಕ್ರಿಸ್ ಮೇಯರ್ (Chris Mayer) ಕೆಲ ಪ್ರಮುಖ ಮೆಟ್ರಿಕ್ಗಳನ್ನು ಗಮನಿಸಬೇಕೆಂದು ಸಲಹೆ ನೀಡಿದ್ದಾರೆ.
ಉತ್ತಮ ಷೇರುಗಳ ಆಯ್ಕೆಗೆ ಇಪಿಎಸ್, ಪಿಇ ರೇಶಿಯೋ, ಪಿಬಿ ರೇಶಿಯೋ, ಕಂಪನಿಯ ಹಣಕಾಸು ಸ್ಥಿತಿ ಇತ್ಯಾದಿ ಹಲವು ಸಂಗತಿಗಳನ್ನು ಗಮನಿಸಲಾಗುತ್ತದೆ. ಇಷ್ಟಾದರೂ ಸಂಭಾವ್ಯ ಮಲ್ಟಿಬ್ಯಾಗರ್ ಅನ್ನು ಗುರುತಿಸುವುದು ಕಷ್ಟದ ಸಂಗತಿ. ಕ್ರಿಸ್ ಮೇಯರ್ ಅವರು ಒಂದು ಒಳ್ಳೆಯ ಕಂಪನಿಯ ಷೇರುಗಳನ್ನು ಆಯ್ದುಕೊಳ್ಳಲು ಪ್ರಮುಖ ನಾಲ್ಕು ಅಂಶಗಳನ್ನು ಗಮನಿಸುವುದು ಮುಖ್ಯ ಎಂದು ಹೇಳಿದ್ದಾರೆ.
ಇದನ್ನೂ ಓದಿ: 65,000 ಕೋಟಿ ರೂ ಮೌಲ್ಯದ ಕಂಪನಿಯ ಸಿಇಒಗೆ ಇನ್ಸ್ಟಾಗ್ರಾಮ್ ಬಳಸಲು ಕನ್ಫ್ಯೂಷನ್
ಕಂಪನಿಯ ಲಾಭ ಹೇಗಿದೆ ಎಂದು ನೋಡಿ
ಕಂಪನಿಯು ತಾನು ಹಾಕಿದ ಬಂಡವಾಳದಿಂದ ಎಷ್ಟು ಲಾಭ ಸೃಷ್ಟಿಸುತ್ತಿದೆ ಎಂಬುದನ್ನು ಗಮನಿಸಬೇಕು. ಸಂಪನ್ಮೂಲದ ಸಮರ್ಪಕ ಬಳಕೆ ಮಾಡುವ ಕಂಪನಿಯಿಂದ ಉತ್ತಮ ಲಾಭದ ನಿರೀಕ್ಷೆ ಸಾಧ್ಯ. ಇಂಥ ಕಂಪನಿಯ ಭವಿಷ್ಯ ಉತ್ತಮವಾಗಿರುತ್ತದೆ.
ಆದಾಯ ವೃದ್ಧಿಯಲ್ಲಿ ಸ್ಥಿರತೆ ಇದೆಯಾ ನೋಡಿ…
ಒಂದು ಕಂಪನಿಯ ಆದಾಯದಲ್ಲಿ ನಿರಂತರ ಹೆಚ್ಚಳ ಆಗುತ್ತಿದ್ದರೆ ಅದು ಅದರ ಆರೋಗ್ಯದ ಕುರುಹಾಗಿರುತ್ತದೆ. ಕಂಪನಿಗೆ ಮಾರುಕಟ್ಟೆ ವಿಸ್ತರಣೆ, ವ್ಯವಹಾರ ಹೆಚ್ಚಳ ಆಗುತ್ತಿರುವುದರ ಫಲ ಅದು.
ಕಂಪನಿಯ ವ್ಯವಹಾರ ವಿಸ್ತರಣೆ ಎಷ್ಟು ಸಾಧ್ಯ ಎಂದು ಗಮನಿಸಿ
ಒಂದು ಕಂಪನಿಯ ವ್ಯವಹಾರಕ್ಕೆ ಸೀಮಿತ ಮಾರುಕಟ್ಟೆ ಇದ್ದರೆ ಅದಕ್ಕೆ ಬೆಳವಣಿಗೆ ಹೆಚ್ಚಳದ ವ್ಯಾಪ್ತಿ ಕಡಿಮೆ ಇರುತ್ತದೆ. ಮಾರುಕಟ್ಟೆ ವಿಸ್ತಾರ ಸಾಧ್ಯತೆ, ಆ ವಿಸ್ತಾರ ಮಾಡಲು ಕಂಪನಿಗೆ ಇರುವ ತಾಕತ್ತು ಇವೆಲ್ಲವನ್ನೂ ಗಮನಿಸಬೇಕು ಎಂದು ಕ್ರಿಸ್ ಮೇಯರ್ ಹೇಳುತ್ತಾರೆ.
ಇದನ್ನೂ ಓದಿ: ಭಾರತದ ಷೇರುಪೇಟೆ W ಆಕಾರದಲ್ಲಿ ಚೇತರಿಕೆ ಕಾಣಲಿದೆಯಂತೆ; ಏನಿದು ಡಬ್ಲ್ಯು ಶೇಪ್ ರಿಕವರಿ?
ಕಂಪನಿಯ ಆಡಳಿತ ತಂಡ ಉತ್ತಮವಾಗಿರಬೇಕು
ಕಂಪನಿಗೆ ಎಷ್ಟೇ ದೊಡ್ಡ ಬಂಡವಾಳ ಇರಲಿ, ಎಷ್ಟೇ ಮಾರುಕಟ್ಟೆ ವಿಸ್ತಾರ ಇರಲಿ, ಆದರೆ, ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಮ್ಯಾನೇಜ್ಮೆಂಟ್ ಇಲ್ಲದಿದ್ದರೆ ಫೇಲ್ ಆಗುತ್ತದೆ. ಆದ್ದರಿಂದ ದೂರದೃಷ್ಟಿಕೋನ ಇರುವ ಮತ್ತು ಆಡಳಿತ ಚಾಕಚಕ್ಯತೆ ಇರುವ ಮ್ಯಾನೇಜ್ಮೆಂಟ್ ಇದೆಯಾ ಎನ್ನುವುದು ಮುಖ್ಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ