ಮಾರುಕಟ್ಟೆ ಅಸ್ಥಿರತೆ ತಾತ್ಕಾಲಿಕ, ಮುಂದುವರಿಸಿ ನಿಮ್ಮ ಎಸ್ಐಪಿ ಕಾಯಕ: ತಜ್ಞರ ಅನಿಸಿಕೆ
Mutual Funds industry leaders speak at Money9 Financial Freedom Summit 2025: ಷೇರು ಮಾರುಕಟ್ಟೆಯ ಸತತ ಕುಸಿತದಿಂದ ಕಂಗಾಲಾಗಿರುವ ಹೂಡಿಕೆದಾರರಿಗೆ ತಜ್ಞರು ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ ಕಾರ್ಯಕ್ರಮದಲ್ಲಿ ಮ್ಯೂಚುವಲ್ ಫಂಡ್ ಉದ್ಯಮಿಗಳು ಮಾತನಾಡುತ್ತಾ, ಮಾರುಕಟ್ಟೆ ಕುಸಿತ ಸಹಜ ಕ್ರಿಯೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾರುಕಟ್ಟೆಯ ಅಸ್ಥಿರತೆ ತಾತ್ಕಾಲಿಕ ಮಾತ್ರವೇ ಆಗಿರುತ್ತದೆ. ಕುಸಿತ ಕಂಡ ಬಳಿಕ ಏರಿಕೆ ಆಗಿಯೇ ಆಗುತ್ತದೆ ಎಂದು ಹೇಳಿದ್ದಾರೆ.

ಮುಂಬೈ, ಮಾರ್ಚ್ 6: ಭಾರತದ ಷೇರು ಮಾರುಕಟ್ಟೆಯ ಪ್ರಮುಖ ಸೂಚ್ಯಂಕವಾದ ನಿಫ್ಟಿ ಸತತ ಐದು ತಿಂಗಳು ಕುಸಿತ ಕಂಡಿದೆ. ಮಾರುಕಟ್ಟೆಯ ಬುಲ್ ರನ್ ವೇಳೆ ಅಡಿ ಇಟ್ಟ ಹೊಸ ಹೂಡಿಕೆದಾರರು ಕಂಗಾಲಾಗಿ ಹೋಗಿದ್ದಾರೆ. ಆದರೆ, ಈ ಅಸ್ಥಿರ ಮಾರುಕಟ್ಟೆ ಪರಿಸ್ಥಿತಿ ಬಂದಿರುವುದು ಇದೇ ಮೊದಲಲ್ಲ. ಭಾರತದ ಷೇರು ಬಜಾರಿನಲ್ಲಿ ಈ ಹಿಂದೆ ಹಲವು ಬಾರಿ ಕುಸಿತದ ಪರ್ವಗಳಿದ್ದುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ 2025 (Money9 Financial Freedom Summit 2025) ಕಾರ್ಯಕ್ರಮದಲ್ಲಿ ಮ್ಯೂಚುವಲ್ ಫಂಡ್ ಉದ್ಯಮದ ನಿಷ್ಣಾತರು ಈ ಮಾರುಕಟ್ಟೆ ಅಸ್ಥಿರತೆ ವಿಚಾರದ ಬಗ್ಗೆ ಮಾತನಾಡಿ, ಕೆಲ ಭಯಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡಿದರು.
‘ಮಾರುಕಟ್ಟೆಗಳು ಆವರ್ತನದಲ್ಲಿ ಕಾರ್ಯ ವಹಿಸುತ್ತವೆ. ಮೇಲೇರುವುದು, ಸ್ಥಿರವಾಗಿರುವುದು, ಕೆಳಗಿಳಿಯುವುದು ಈ ಮೂರು ಕೂಡ ಸಮವಾಗಿ ಆವರ್ತನಗೊಳ್ಳುತ್ತವೆ. ಈ ಕುಸಿತದ ಘಟ್ಟವನ್ನು ಹೂಡಿಕೆದಾರರು ಒಂದು ಅವಕಾಶವಾಗಿ ಪರಿಗಣಿಸಬೇಕು. ಕಿರು ಅವಧಿಗೆ ರಿಟರ್ನ್ ಪಡೆಯುವ ನಿರೀಕ್ಷೆ ಬಿಟ್ಟುಬಿಡಬೇಕು. ದೀರ್ಘಾವಧಿ ಹೂಡಿಕೆ ಮಾಡಬೇಕೆನ್ನುವವರಿಗೆ ಇದು ಅಮೃತ ಕಾಲ. ಕಡಿಮೆ ಬೆಲೆಗಳಿಗೆ ಹೆಚ್ಚು ಯುನಿಟ್ಗಳನ್ನು ಗಳಿಸುವ ಸುಸಮಯ ಇದು’ ಎಂದು ಡಿಎಸ್ಪಿ ಮ್ಯೂಚುವಲ್ ಫಂಡ್ನ ಸಿಇಒ ಮತ್ತು ಎಂಡಿ ಕಲ್ಪೇನ್ ಪರೇಖ್ ಹೇಳಿದರು.
ಇದನ್ನೂ ಓದಿ: ಷೇರು ಮಾರುಕಟ್ಟೆ, ಗೂಳಿ, ಕರಡಿ, ಮೂರ್ಖ, ಜಾಣ… ಫೈನಾನ್ಷಿಯಲ್ ಫ್ರೀಡಂ ಸಮಿಟ್ನಲ್ಲಿ ಸತ್ಯ ಬಿಚ್ಚಿಟ್ಟ ವಿಜಯ್ ಕೆದಿಯಾ
ಮಾರ್ಕೆಟ್ ಕರೆಕ್ಷನ್ ಅವಶ್ಯಕ: ಬಾಲಸುಬ್ರಮಣಿಯನ್
ಆದಿತ್ಯ ಬಿರ್ಲಾ ಸನ್ ಲೈಫ್ ಎಎಂಸಿ ಸಂಸ್ಥೆಯ ಸಿಇಒ ಎ ಬಾಲಸುಬ್ರಮಣಿಯನ್ ಅವರು 10-15 ವರ್ಷ ದೀರ್ಘಾವಧಿ ಕಾಲ ಹೂಡಿಕೆಯ ಗುರಿ ಇಟ್ಟುಕೊಳ್ಳಬೇಕು ಎಂದು ಹೂಡಿಕೆದಾರರಿಗೆ ತಿಳಿಹೇಳಿದರು.
‘ಈಗ ಆಗುತ್ತಿರುವ ಹಿನ್ನಡೆಯು ಮಾರ್ಕೆಟ್ ಕರೆಕ್ಷನ್ ಮಾತ್ರ. ಬಹಳ ವೇಗದ ಬೆಳವಣಿಗೆ ಬಳಿಕ ಈ ಮಾರ್ಕೆಟ್ ಕರೆಕ್ಷನ್ಸ್ ಆಗುವುದು ಬಹಳ ಸಹಜ. ಅತಿಯಾದ ಬೆಲೆಗಳನ್ನು ಇಳಿಸಲು ಮಾರುಕಟ್ಟೆಯ ಸ್ವಾಭಾವಿಕ ಕ್ರಿಯೆ ಇದು’ ಎಂದು ಬಾಲಸುಬ್ರಮಣಿಯನ್ ಅಭಿಪ್ರಾಯಪಟ್ಟರು.
ಎಸ್ಐಪಿ ಹೂಡಿಕೆ ಮುಂದುವರಿಯಲಿ…
ಮನಿ9 ಫೈನಾನ್ಷಿಯಲ್ ಫ್ರೀಡಂ ಸಮಿಟ್ನ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮ್ಯೂಚುವಲ್ ಫಂಡ್ ಉದ್ಯಮ ಮುಂದಾಳುಗಳೆಲ್ಲರೂ ಎಸ್ಐಪಿಗಳ ಉಪಯುಕ್ತತೆಯನ್ನು ಎತ್ತಿ ತೋರಿಸಿದರು. ಹಣದುಬ್ಬರದ ಮಧ್ಯೆ ಸಂಪತ್ತು ಗಳಿಕೆಗೆ ಎಸ್ಐಪಿಯೇ ಅತ್ಯುತ್ತಮ ಸಾಧನವಾಗಿದೆ ಎಂದು ಕ್ವಾಂಟಂ ಎಎಂಸಿಯ ಸಿಇಒ ಜಿಮ್ಮಿ ಪಟೇಲ್ ಹೇಳುತ್ತಾರೆ.
‘ಬ್ಯಾಂಕ್ ಎಫ್ಡಿಗಳು ಹಣದುಬ್ಬರವನ್ನು ಹಿಂದಿಕ್ಕುವುದಿಲ್ಲ. ಆದರೆ, ಕಾಲಾನಂತರದಲ್ಲಿ ಹೂಡಿಕೆದಾರರಿಗೆ ಸಂಪತ್ತು ಕ್ರೋಢೀಕರಿಸಲು ಮ್ಯುಚುವಲ್ ಫಂಡ್ಗಳು ಸಹಾಯಕವಾಗಬಲ್ಲುವು. ಹೂಡಿಕೆದಾರರು ಶಿಸ್ತು ತೋರಬೇಕು, ಹೂಡಿಕೆಗಳನ್ನು ಮುಂದುವರಿಸಬೇಕು. ಬೇರೆ ಬೇರೆ ಅಸೆಟ್ ಕ್ಲಾಸ್ಗಳಿಗೆ ಹೂಡಿಕೆಗಳನ್ನು ವಿಸ್ತರಿಸಬೇಕು’ ಎಂದು ಜಿಮ್ಮಿ ಪಟೇಲ್ ಸಲಹೆ ನೀಡಿದರು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ