SIP power: ಷೇರು ಮಾರುಕಟ್ಟೆಯನ್ನು ಕಾಪಾಡುತ್ತಿರುವ ಸಾಮಾನ್ಯ ಜನರ ಎಸ್ಐಪಿ
Indian stock market updates: ಭಾರತೀಯ ಷೇರು ಮಾರುಕಟ್ಟೆ ಕಳೆದ ಕೆಲ ತಿಂಗಳಿಂದ ಹಿನ್ನಡೆಯಲ್ಲಿದೆ. ಸಾಕಷ್ಟು ವಿದೇಶೀ ಹೂಡಿಕೆಗಳು ಹೊರಹೋಗುತ್ತಿವೆ. ಆದಾಗ್ಯೂ ಮಾರುಕಟ್ಟೆ ಒಂದು ದಿನವೂ ಲೋಯರ್ ಸರ್ಕ್ಯೂಟ್ಗೆ ಬಂದಿಲ್ಲ. ಇದಕ್ಕೆ ಕಾರಣ ಎಸ್ಐಪಿ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಹೂಡಿಕೆದಾರರು ಮ್ಯೂಚುವಲ್ ಫಂಡ್ಗಳ ಮೇಲೆ ಹಣ ಹಾಕುತ್ತಿರುವುದರಿಂದ ಮಾರುಕಟ್ಟೆ ಹೆಚ್ಚು ಹಿನ್ನಡೆ ಕಂಡಿಲ್ಲ.

ನವದೆಹಲಿ, ಫೆಬ್ರುವರಿ 13: ಷೇರು ಮಾರುಕಟ್ಟೆಯಿಂದ ಸಾವಿರಾರು ಕೋಟಿ ರೂ ಮೌಲ್ಯದ ಹೂಡಿಕೆಗಳನ್ನು ವಿದೇಶೀ ಹೂಡಿಕೆದಾರರು ಹೊರತೆಗೆದುಕೊಳ್ಳುತ್ತಿದ್ದರೂ ಭಾರತೀಯ ಷೇರು ಬಜಾರು ತೀರಾ ನೆಲಕಚ್ಚದೆ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ಮ್ಯುಚುವಲ್ ಫಂಡ್ ಸಂಸ್ಥೆಯಿಂದ (ಎಎಂಎಫ್ಐ) ಬಿಡುಗಡೆ ಮಾಡಲಾದ ದತ್ತಾಂಶದ ಪ್ರಕಾರ ಜನವರಿ ತಿಂಗಳಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ 39,687.78 ಕೋಟಿ ರೂ ಬಂಡವಾಳ ಸಿಕ್ಕಿದೆ. ಇದು ಫಂಡ್ಗಳಿಂದ ಹಿಂಪಡೆಯಲಾದ ಹಣವನ್ನು ಕಳೆದು ಸಿಕ್ಕಿರುವ ನಿವ್ವಳ ಒಳಹರಿವು. ಹಿಂದಿನ ತಿಂಗಳಾದ ಡಿಸೆಂಬರ್ಗೆ ಹೋಲಿಸಿದರೆ ಜನವರಿಯಲ್ಲಿ ಈ ನಿವ್ವಳ ಒಳಹರಿವಿನಲ್ಲಿ ಶೇ. 4ರಷ್ಟು ಕಡಿಮೆ ಆಗಿದೆ. ಆದರೂ ಕೂಡ ಹೊರಹರಿವಿಗಿಂತ ಒಳಹರಿವು ಹೆಚ್ಚು ಇದೆ. ಕುತೂಹಲ ಎಂದರೆ, ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಪ್ರತೀ ತಿಂಗಳೂ ನಿವ್ವಳ ಒಳಹರಿವು ಸಿಕ್ಕಿದೆ.
ಮಾರುಕಟ್ಟೆ ಕೈಹಿಡಿದ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಎಸ್ಐಪಿ)
ಮ್ಯೂಚುವಲ್ ಫಂಡ್ಗಳಲ್ಲಿ ನಿಯಮಿತವಾಗಿ ಹೂಡಿಕೆ ಮಾಡುವ ಒಂದು ವಿಧಾನ ಎಸ್ಐಪಿ. ಈ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ ಮೂಲಕ ಸಾಕಷ್ಟು ಹೂಡಿಕೆದಾರರು ಹಣ ತೊಡಗಿಸುತ್ತಾರೆ. ಮಾರುಕಟ್ಟೆ ಕುಸಿತದ ಟ್ರೆಂಡ್ನಲ್ಲಿದ್ದರೂ ಜನವರಿಯಲ್ಲಿ ಎಸ್ಐಪಿ ಮೂಲಕ 26,400 ಕೋಟಿ ರೂ ಹಣ ಮ್ಯೂಚುವಲ್ ಫಂಡ್ಗಳಿಗೆ ಸಂದಾಯವಾಗಿದೆ. ಡಿಸೆಂಬರ್ ತಿಂಗಳಲ್ಲಿ 26,459 ಕೋಟಿ ರೂ ಎಸ್ಐಪಿ ಮೂಲಕ ಬಂದಿತ್ತು. ಜನವರಿಯಲ್ಲಿ 26,000 ಕೋಟಿ ರೂ ಮಟ್ಟಕ್ಕಿಂತ ಮೇಲೆಯೇ ಎಸ್ಐಪಿ ಹೂಡಿಕೆಗಳಿವೆ.
ಇದನ್ನೂ ಓದಿ: ಷೇರುಪೇಟೆ ರಕ್ತದೋಕುಳಿ; ಮಕಾಡೆ ಮಲಗಿರುವ ಸಾವಿರಕ್ಕೂ ಹೆಚ್ಚು ಷೇರುಗಳು
ಈಕ್ವಿಟಿ ಮ್ಯೂಚುವಲ್ ಫಂಡ್ಗಳಿಗೆ ಬಂದ ಹೂಡಿಕೆ ಒಳ ಹರಿವಿನಲ್ಲಿ ಎಸ್ಐಪಿ ಪಾಲು ದೊಡ್ಡದು. ವಿದೇಶೀ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರುಕಟ್ಟೆಯಿಂದ ತಮ್ಮ ಹಣ ಹಿಂಪಡೆಯುತ್ತಿದ್ದರೂ ಒಮ್ಮೆಯೂ ಕೂಡ ಮಾರುಕಟ್ಟೆ ಲೋಯರ್ ಸರ್ಕ್ಯುಟ್ಗೆ ಬರಲಿಲ್ಲ. ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ಗಳ ಮೂಲಕ ದೇಶೀಯ ಹೂಡಿಕೆದಾರರು ಮಾರುಕಟ್ಟೆಗೆ ಹಣ ಹರಿಸುತ್ತಿರುವುದು ಈ ಪತನ ಕುಸಿತ ತಡೆಯಲು ಪ್ರಮುಕ ಕಾರಣ.
ಒಟ್ಟಾರೆ ನಿರ್ವಹಿತ ಆಸ್ತಿಯಲ್ಲಿ ತುಸು ಇಳಿಮುಖ….
ಈಕ್ವಿಟಿ ಮ್ಯೂಚುವಲ್ ಫಂಡ್ಗಳ ಬಳಿ ಇರುವ ಒಟ್ಟು ನಿರ್ವಹಿತ ಆಸ್ತಿ (ಎಯುಎಂ- ಅಸೆಟ್ಸ್ ಅಂಡರ್ ಮ್ಯಾನೇಜ್ಮೆಂಟ್) ಮೊತ್ತ ಶೇ. 4ರಷ್ಟು ಕಡಿಮೆ ಆಗಿದೆ. ಡಿಸೆಂಬರ್ನಲ್ಲಿ 30.57 ಲಕ್ಷ ಕೋಟಿ ರೂ ಇದ್ದ ಬಂಡವಾಳವು ಜನವರಿಯಲ್ಲಿ 29.47ಕ್ಕೆ ಇಳಿದಿದೆ. ನಿರ್ವಹಿತ ಆಸ್ತಿಯಲ್ಲಿ ಸುಮಾರು ಒಂದು ಲಕ್ಷ ಕೋಟಿ ರೂಗೂ ಅಧಿಕ ಮೊತ್ತದಷ್ಟು ಇಳಿಕೆ ಆಗಿದೆ.
ಈಕ್ವಿಟಿ ಮ್ಯೂಚುವಲ್ ಫಂಡ್ಗಳ ಪೈಕಿ ಜನವರಿಯಲ್ಲಿ ಲಾರ್ಜ್ ಕ್ಯಾಪ್ ಫಂಡ್ಗಳಿಗೆ ಬಂದ ಬಂಡವಾಳ ಒಳಹರಿವು ಶೇ. 52.3ರಷ್ಟು ಹೆಚ್ಚಾಗಿದೆ. ಸ್ಮಾಲ್ಕ್ಯಾಪ್ ಫಂಡ್ಗಳಿಗೆ ಶೇ. 22.6ರಷ್ಟು ಹೆಚ್ಚು ಹೂಡಿಕೆ ಬಂದಿವೆ.
ಆದರೆ, ಸೆಕ್ಟರ್ ಅಥವಾ ಥೀಮ್ಯಾಟಿಕ್ ಮ್ಯೂಚುವಲ್ ಫಂಡ್ಗಳಿಗೆ ಬಂದ ಹೂಡಿಕೆ ಒಳ ಹರಿವಿನಲ್ಲಿ ಶೇ. 41.2ರಷ್ಟು ಇಈಲಿಮುಖವಾಗಿದೆ. ಆದಾಗ್ಯೂ, ಸ್ಮಾಲ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಫಂಡ್ಗಳಿಗೆ ಹೋಲಿಸಿದರೆ ಥೀಮ್ಯಾಟಿಕ್ ಫಂಡ್ಗಳಿಗೆ ಅತಿಹೆಚ್ಚು ಹೂಡಿಕೆಗಳು ಬಂದಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ