ಜನವರಿಯಲ್ಲಿ ಹಣದುಬ್ಬರ ಶೇ. 4.31ಕ್ಕೆ ಇಳಿಕೆ; ಆರ್ಬಿಐ ಗುರಿ ಸಮೀಪಕ್ಕೆ ಬಂದ ಬೆಲೆ ಏರಿಕೆ ದರ
Retail Inflation in 2025 January comes down to 4.31%: ಡಿಸೆಂಬರ್ ತಿಂಗಳಲ್ಲಿ ಶೇ. 5.22ರಷ್ಟಿದ್ದ ರೀಟೇಲ್ ಹಣದುಬ್ಬರ ಜನವರಿ ತಿಂಗಳಲ್ಲಿ ಶೇ. 4.31ಕ್ಕೆ ಇಳಿದಿದೆ. ಆಹಾರವಸ್ತುಗಳ ಬೆಲೆ ಏರಿಕೆ ಮಟ್ಟ ಕಡಿಮೆ ಆಗಿರುವುದು ಹಣದುಬ್ಬರ ಇಳಿಕೆಗೆ ಎಡೆ ಮಾಡಿಕೊಟ್ಟಿದೆ. ಅಕ್ಟೋಬರ್ ತಿಂಗಳಲ್ಲಿ ಆಹಾರ ಹಣದುಬ್ಬರ ಶೇ. 10.9ರಷ್ಟಿತ್ತು. ಆಗ ರೀಟೇಲ್ ಹಣದುಬ್ಬರ ಶೇ. 6.2 ತಲುಪಿತ್ತು. ಅದಾದ ಬಳಿಕ ಹಣದುಬ್ಬರ ಸತತವಾಗಿ ಕಡಿಮೆ ಆಗುತ್ತಾ ಬಂದಿದೆ.

ನವದೆಹಲಿ, ಫೆಬ್ರುವರಿ 12: ಭಾರತದ ರೀಟೇಲ್ ಹಣದುಬ್ಬರ ಕಡಿಮೆ ಆಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಜನವರಿ ತಿಂಗಳಲ್ಲಿ ರೀಟೇಲ್ ಹಣದುಬ್ಬರ ಶೇ. 4.31ರಷ್ಟಿದೆ. ಹಿಂದಿನ ತಿಂಗಳು, ಅಂದರೆ 2024ರ ಡಿಸೆಂಬರ್ನಲ್ಲಿ ಹಣದುಬ್ಬರ ಶೇ. 5.22 ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಜನವರಿಯಲ್ಲಿ ಬೆಲೆ ಏರಿಕೆ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಆರ್ಬಿಐನ ಹಣದುಬ್ಬರ ಗುರಿಯಾದ ಶೇ. 4ರ ದರಕ್ಕೆ ಸಮೀಪ ಬಂದಿದೆ.
ಹಣದುಬ್ಬರ ಜನವರಿಯಲ್ಲಿ ತಗ್ಗಬಹುದು ಎಂದು ಬಹುತೇಕ ಆರ್ಥಿಕ ತಜ್ಞರು ಅಂದಾಜು ಮಾಡಿದ್ದರು. ಆರ್ಬಿಐ ಹಾಗೂ ಹಲವು ಸಂಸ್ಥೆಗಳೂ ಕೂಡ ಬೆಲೆ ಏರಿಕೆ ಮಟ್ಟ ಇಳಿಯಬಹುದು ಎಂದು ನಿರೀಕ್ಷಿಸಿದ್ದವು. ಆದರೆ, ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣದುಬ್ಬರ ಕಡಿಮೆ ಆಗಿರುವುದು ಗಮನಾರ್ಹ. ರಾಯ್ಟರ್ಸ್ ಪೋಲ್ನಲ್ಲಿ ಸರಾಸರಿಯಾಗಿ ಹಣದುಬ್ಬರ ಜನವರಿಯಲ್ಲಿ ಶೇ 4.6ರಷ್ಟಿರಬಹುದು ಎನ್ನಲಾಗಿತ್ತು. ಅಂತಿಮವಾಗಿ ಹಣದುಬ್ಬರ ಶೇ. 4.31ಕ್ಕೆ ಇಳಿದಿದೆ.
ಇದನ್ನೂ ಓದಿ: ಷೇರುಪೇಟೆ ರಕ್ತದೋಕುಳಿ; ಮಕಾಡೆ ಮಲಗಿರುವ ಸಾವಿರಕ್ಕೂ ಹೆಚ್ಚು ಷೇರುಗಳು
ಆಹಾರವಸ್ತುಗಳ ಬೆಲೆಗಳು ನಿರೀಕ್ಷೆಯಂತೆ ಕಡಿಮೆ ಆಗಿವೆ. ಇದು ಒಟ್ಟಾರೆ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಗ್ರಾಮೀಣ ಭಾಗದ ಹಣದುಬ್ಬರ ಶೇ. 5.76ರಿಂದ ಶೇ. 4.64ಕ್ಕೆ ಇಳಿದಿದೆ. ನಗರ ಭಾಗದ ಹಣದುಬ್ಬರ ಶೇ. 4.58ರಿಂದ ಶೇ. 3.87ಕ್ಕೆ ಇಳಿದಿದೆ. ಅಕ್ಟೋಬರ್ ತಿಂಗಳಲ್ಲಿ ಫೂಡ್ ಇನ್ಫ್ಲೇಶನ್ ಶೇ. 11ರ ಸಮೀಪಕ್ಕೆ ಏರಿತ್ತು. ಆಗ ರೀಟೇಲ್ ಹಣದುಬ್ಬರ ಶೇ. 6.2 ತಲುಪಿತ್ತು. ಅದಕ್ಕೆ ಹೋಲಿಸಿದರೆ ಈಗ ಆಹಾರ ಹಣದುಬ್ಬರ ಗಣನೀಯವಾಗಿ ಇಳಿಮುಖವಾಗಿದೆ.
ಆರ್ಬಿಐ ಕೂಡ ಹಣದುಬ್ಬರ ಇಳಿಕೆ ಆಗುವ ನಿರೀಕ್ಷೆಯಲ್ಲಿ ಕಳೆದ ವಾರ ರಿಪೋ ದರವನ್ನು ಶೇ. 6.25ಕ್ಕೆ ಇಳಿಸಿದೆ. ಫೆಬ್ರುವರಿ ತಿಂಗಳಲ್ಲೂ ಹಣದುಬ್ಬರ ಇದೇ ಮಟ್ಟದಲ್ಲಿ ಇದ್ದರೆ ಏಪ್ರಿಲ್ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಮತ್ತಷ್ಟು 25 ಮೂಲಾಂಕಗಳಷ್ಟು ಕಡಿಮೆ ಮಾಡಲು ಆರ್ಬಿಐ ನಿರ್ಧರಿಸುವ ಸಾಧ್ಯತೆ ಇಲ್ಲದಿಲ್ಲ.
ಇದನ್ನೂ ಓದಿ: ವಿಆರ್ಆರ್ ಹರಾಜು ಮೂಲಕ ಬ್ಯಾಂಕುಗಳಿಗೆ 2.50 ಲಕ್ಷ ಕೋಟಿ ರೂ ಹಣ; ಡಾಲರ್ ಮಾರಾಟದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ದೊಡ್ಡ ಕ್ರಮ
ಈ ಬಾರಿಯ ಬಜೆಟ್ನಲ್ಲಿ ಸರ್ಕಾರವು ಆದಾಯ ತೆರಿಗೆಯನ್ನು ಸಾಕಷ್ಟು ಕಡಿಮೆ ಮಾಡಿದೆ. ಇದರಿಂದ ಮಧ್ಯಮ ವರ್ಗದವರಿಗೆ ಹೆಚ್ಚಿನ ತೆರಿಗೆ ಉಳಿತಾಯ ಸಾಧ್ಯವಾಗುತ್ತದೆ. ಇದರ ಜೊತೆಗೆ ಆರ್ಬಿಐ ತನ್ನ ರಿಪೋ ದರ ಕಡಿಮೆ ಮಾಡಿದೆ. ಈಗ ಹಣದುಬ್ಬರವೂ ಕಡಿಮೆ ಆಗಿರುವ ಮಾಹಿತಿ ಬಂದಿದೆ. ಇವೆಲ್ಲವೂ ಕೂಡ ಜನಸಾಮಾನ್ಯರ ಕೈಗೆ ಹೆಚ್ಚಿನ ಹಣದ ಹರಿವು ಸಿಕ್ಕಂತಾಗುತ್ತದೆ. ಇದರಿಂದ ಅನುಭೋಗ ಅಥವಾ ಕನ್ಷಂಪ್ಷನ್ಗೆ ಪುಷ್ಟಿ ಸಿಕ್ಕು ಆರ್ಥಿಕತೆ ಮತ್ತೆ ಚುರುಕುಗೊಳ್ಳಲು ಸಾಧ್ಯವಿದೆ ಎಂಬುದು ಸರ್ಕಾರದ ಆಶಯ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




