ಷೇರುಪೇಟೆ ರಕ್ತದೋಕುಳಿ; ಮಕಾಡೆ ಮಲಗಿರುವ ಸಾವಿರಕ್ಕೂ ಹೆಚ್ಚು ಷೇರುಗಳು
India stock market bleeding continues: ಬಿಎಸ್ಇನಲ್ಲಿರುವ 4,000ಕ್ಕೂ ಅಧಿಕ ಷೇರುಗಳ ಪೈಕಿ 1,058 ಷೇರುಗಳ ಮೌಲ್ಯ ತನ್ನ ಗರಿಷ್ಠ ಮಟ್ಟದಿಂದ ಶೇ. 30ಕ್ಕಿಂತ ಒಳಗೆ ಕುಸಿತ ಕಂಡಿದೆ. ಎನ್ಎಸ್ಇನ ನಿಫ್ಟಿ500 ಸೂಚ್ಯಂಕದ ಶೇ. 81ರಷ್ಟು ಸ್ಟಾಕ್ಗಳು 200 ಡಿಎಂಎ ಸರಾಸರಿಗಿಂತ ಕಡಿಮೆಗೆ ಹೋಗಿದೆ. ಇದು ಷೇರು ಮಾರುಕಟ್ಟೆಯ ಋಣಾತ್ಮಕ ಟ್ರೆಂಡ್ನ ಸಂಕೇತವಾಗಿದೆ.

ನವದೆಹಲಿ, ಫೆಬ್ರುವರಿ 12: ಭಾರತದ ಷೇರು ಮಾರುಕಟ್ಟೆಯ ಪತನ ಮುಂದುವರಿದಿದೆ. ಹಲವು ಬಾರಿ ಸಕಾರಗಳಿಂದ ಮಾರುಕಟ್ಟೆ ಬಿದ್ದಿದೆ. ಬಲವಾದ ಕಾರಣ ಇಲ್ಲದೇ ಬಿದ್ದಿದಿದೆ. ವಿದೇಶೀ ಹೂಡಿಕೆದಾರರ ಬಂಡವಾಳ ಹೊರ ಹೋಗುತ್ತಿರುವುದು ಮಾರುಕಟ್ಟೆಯ ಇಳಿಮುಖಕ್ಕೆ ಪ್ರಮುಖ ಕಾರಣ. ಈ ಬಂಡವಾಳ ಹೊರಹರಿವಿಗೆ ಕಾರಣಗಳು ಹಲವಿವೆ. ಅದೇನೇ ಇರಲಿ, ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಗಿ ಟ್ರೇಡ್ ಆಗುತ್ತಿರುವ 4,000 ಕ್ಕೂ ಅಧಿಕ ಸ್ಟಾಕ್ಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಸ್ಟಾಕ್ಗಳ ಮೌಲ್ಯ ಗಣನೀಯವಾಗಿ ಕುಸಿದಿರುವುದು ತಿಳಿದುಬಂದಿದೆ.
ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, ಬಿಎಸ್ಇನಲ್ಲಿ ಕನಿಷ್ಠ 500 ಕೋಟಿ ರೂ ಮಾರುಕಟ್ಟೆ ಬಂಡವಾಳ ಹೊಂದಿರುವ ಕಂಪನಿಗಳ ಪೈಕಿ 1,058 ಕಂಪನಿಗಳ ಷೇರು ಮೌಲ್ಯ ತಮ್ಮ ಗರಿಷ್ಠ ಮಟ್ಟದಿಂದ ಶೇ. 30ರಷ್ಟು ಕುಸಿತ ಕಂಡಿವೆ. ಭರ್ಜರಿ ಐಪಿಒ ಪಡೆದಿದ್ದ ವಾರೀ ರಿನಿವಬಲ್ ಎನರ್ಜಿಯಂತೂ ಶೇ. 70ರಷ್ಟು ಕುಸಿತ ಕಂಡಿದೆ. ಒಲಾ ಎಲೆಕ್ಟ್ರಿಕ್, ಹೊನಸ ಕನ್ಸೂಮರ್, ಅದಾನಿ ಗ್ರೀನ್, ತೀತಾಗಡ್, ಕೊಚಿನ್ ಶಿಪ್ಯಾರ್ಡ್ ಇತ್ಯಾದಿ ಕಂಪನಿಗಳ ಷೇರು ಮೌಲ್ಯ ದೊಡ್ಡ ಕುಸಿತ ಕಂಡಿದೆ.
ಎನ್ಎಸ್ಇಯಲ್ಲೂ ರಕ್ತದೋಕುಳಿ….
ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಅಗ್ರಗಣ್ಯ 500 ಸ್ಟಾಕ್ಗಳ ಪೈಕಿ 404 ಸ್ಟಾಕ್ಗಳು, ಅಂದರೆ ನಿಫ್ಟಿ 500 ಇಂಡೆಕ್ಸ್ನ ಶೇ. 81ರಷ್ಟು ಸ್ಟಾಕ್ಗಳು 200 ಡಿಎಂಎಗಿಂತ ಕಡಿಮೆ ಮಟ್ಟಕ್ಕೆ ಕುಸಿದಿವೆಯಂತೆ.
ಡಿಎಂಎ ಎಂದರೆ ಡೈಲಿ ಮೂವಿಂಗ್ ಆವರೇಜ್. ಅಂದರೆ, ದಿನದ ಸರಾಸರಿ ದರ ಬದಲಾವಣೆ. 200 ದಿನಗಳ ಸರಾಸರಿ ಮೌಲ್ಯಕ್ಕಿಂತ ಕಡಿಮೆ ಮಟ್ಟಕ್ಕೆ ಈ 404 ಸ್ಟಾಕ್ಗಳು ಬಿದ್ದಿವೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿದೆ. 200 ಡಿಎಂಎ ಮಟ್ಟಕ್ಕಿಂತ ಕಡಿಮೆಗೆ ಹೋದರೆ ಅದು ಬೇರಿಶ್ ಟ್ರೆಂಡ್ ಎಂದು ಪರಿಗಣಿಸಲಾಗುತ್ತದೆ. ಅಂದರೆ ಕರಡಿ ಕುಣಿತ ಸಂಭವಿಸುತ್ತಿದೆ ಎನ್ನುವ ಅಪಾಯದ ಸಂಕೇತ ಇದು.
ಇದನ್ನೂ ಓದಿ: ವಿಆರ್ಆರ್ ಹರಾಜು ಮೂಲಕ ಬ್ಯಾಂಕುಗಳಿಗೆ 2.50 ಲಕ್ಷ ಕೋಟಿ ರೂ ಹಣ; ಡಾಲರ್ ಮಾರಾಟದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ದೊಡ್ಡ ಕ್ರಮ
ದೊಡ್ಡ ಮಾರುಕಟ್ಟೆ ಬಂಡವಾಳ ಇರುವ ಕಂಪನಿಗಳ ಕಥೆಯೇ ಹೀಗಿರುವಾಗ, ಸಣ್ಣ ಷೇರುಗಳ ಪರಿಸ್ಥಿತಿ ಹೇಗಿರಬಹುದು? ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸುದೀರ್ಘವಾದ ಮಾರ್ಕೆಟ್ ಕರೆಕ್ಷನ್ ಆಗುತ್ತಿದೆ ಎನ್ನುವ ಅಭಿಪ್ರಾಯ ಇದೆ. ಆದರೆ, ಅಮೆರಿಕದ ಹೂಡಿಕೆದಾರ ಜಿಮ್ ರೋಜರ್ಸ್ ಅವರು ಈ ಭಾರತೀಯ ಮಾರುಕಟ್ಟೆ ಪತನ ಮತ್ತಷ್ಟಾಗಬೇಕು ಎಂದು ಹೇಳುತ್ತಿದ್ದಾರೆ. ಈಗ ಆಗುತ್ತಿರುವ ಕುಸಿತ ಸಾಲದು, ಮತ್ತಷ್ಟು ಇಳಿಮುಖವಾಗಿ ಹೂಡಿಕೆದಾರರು ಕಂಗಾಲು ಆಗುವ ಪರಿಸ್ಥಿತಿ ಬಂದಾಗ ಇಲ್ಲಿಯ ಷೇರುಗಳ ಮೇಲೆ ಹೂಡಿಕೆ ಮಾಡುವುದಾಗಿ ಅವರು ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ