ವಿಆರ್ಆರ್ ಹರಾಜು ಮೂಲಕ ಬ್ಯಾಂಕುಗಳಿಗೆ 2.50 ಲಕ್ಷ ಕೋಟಿ ರೂ ಹಣ; ಡಾಲರ್ ಮಾರಾಟದ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ದೊಡ್ಡ ಕ್ರಮ
RBI to infuse Rs 2.5 trillion into Indian banking system: ಭಾರತೀಯ ರಿಸರ್ವ್ ಬ್ಯಾಂಕ್ ಇಂದು (ಫೆ. 12) ವೇರಿಯಬಲ್ ರೇಟ್ ರಿಪೋ ಹರಾಜು ಪ್ರಕ್ರಿಯೆ ನಡೆಸುತ್ತಿದೆ. ಇದು ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕೆ 2.50 ಲಕ್ಷ ಕೋಟಿ ರೂ ಹಣ ತುಂಬಿಸಲು ಆರ್ಬಿಐ ತೆಗೆದುಕೊಳ್ಳುತ್ತಿರುವ ಕ್ರಮವಾಗಿದೆ. ಬ್ಯಾಂಕುಗಳು ಈ ಹರಾಜಿನಲ್ಲಿ ಪಾಲ್ಗೊಂಡು, ತಮಗೆ ಅವಶ್ಯಕ ಇರುವಷ್ಟು ಫಂಡಿಂಗ್ ಪಡೆಯಬಹುದು.

ನವದೆಹಲಿ, ಫೆಬ್ರುವರಿ 12: ಲಿಕ್ವಿಡಿಟಿ ಸಮಸ್ಯೆ ಎದುರಿಸುತ್ತಿರುವ ಭಾರತದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹಣ ಹರಿವು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ವಿಆರ್ಆರ್ ಹರಾಜು (Variable Rate Repo Auction) ಪ್ರಕ್ರಿಯೆ ನಡೆಸಲು ನಿಶ್ಚಯಿಸಿದೆ. ಇವತ್ತು ನಡೆಯಲಿರುವ ವೇರಿಯಬಲ್ ರೇಟ್ ರಿಪೋ ಆಕ್ಷನ್ನಲ್ಲಿ ಎರಡೂವರೆ ಲಕ್ಷ ಕೋಟಿ ರೂ ಹಣವನ್ನು ಬ್ಯಾಂಕುಗಳಿಗೆ ಒದಗಿಸುವ ಗುರಿ ಆರ್ಬಿಐಗೆ ಇದೆ.
ಹಿಂದಿನ ಎರಡು ದಿನಗಳಲ್ಲಿ ಆರ್ಬಿಐ ಸಾಕಷ್ಟು ಡಾಲರ್ಗಳನ್ನು ಮಾರಾಟ ಮಾಡಿತ್ತು. ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತವನ್ನು ತಡೆಯಲು ಆರ್ಬಿಐ ಸುಮಾರು ಆರೇಳು ಬಿಲಿಯನ್ ಡಾಲರ್ ಮೌಲ್ಯದಷ್ಟು ಡಾಲರ್ಗಳನ್ನು ಮಾರಿತ್ತು. ಇದರಿಂದ ಬ್ಯಾಂಕಿಂಗ್ ವಲಯದಲ್ಲಿ ತುಸು ಹಣದ ಕೊರತೆ (liquidity deficit) ಸೃಷ್ಟಿಯಾಗಿದೆ. ಈ ಕೊರತೆಯನ್ನು ನೀಗಿಸಲು ಆರ್ಬಿಐ ವಿಆರ್ಆರ್ ಹರಾಜು ಅಸ್ತ್ರ ಉಪಯೋಗಿಸಲು ಹೊರಟಿದೆ.
ಆರ್ಬಿಐ ಆಗಾಗ್ಗೆ ಅಗತ್ಯ ಇರುವಾಗೆಲ್ಲಾ ಈ ವಿಆರ್ಆರ್ ಹರಾಜು ಮಾರ್ಗ ಅನುಸರಿಸುತ್ತಿರುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ಲಿಕ್ವಿಡಿಟಿ ಸಮಸ್ಯೆ ಎದುರಾದಾಗ ಈ ರೀತಿಯ ಕ್ರಮ ಅನಿವಾರ್ಯವಾಗಿರುತ್ತದೆ. ಕಳೆದ ಒಂದು ತಿಂಗಳಿಂದಲೂ ಆರ್ಬಿಐ ಬಹುತೇಕ ದಿನನಿತ್ಯವೂ ವೇರಿಯಬಲ್ ರೇಟ್ ರಿಪೋ ಆಕ್ಷನ್ ಪ್ರಕ್ರಿಯೆ ನಡೆಸುತ್ತಿದೆ. ಲಿಕ್ವಿಡಿಟಿ ಸಮಸ್ಯೆ, ಅಥವಾ ಫಂಡಿಂಗ್ ಕೊರತೆ ಎದುರಿಸುತ್ತಿರುವ ಬ್ಯಾಂಕುಗಳು ಈ ಹರಾಜಿನಲ್ಲಿ ಪಾಲ್ಗೊಂಡು ಹಣ ಪಡೆಯಬಹುದು.
ಆರ್ಬಿಐನಿಂದ ಡಾಲರ್ಗಳ ಮಾರಾಟ ದೊಡ್ಡ ಪ್ರಮಾಣದಲ್ಲಿ ಆಗಿರುವುದು, ಹಾಗೂ ತೆರಿಗೆಗಳ ಹೊರಹರಿವು ಹೆಚ್ಚಾಗಿರುವುದು ಬ್ಯಾಂಕಿಂಗ್ ಸಿಸ್ಟಂನಲ್ಲಿ ಲಿಕ್ವಿಡಿಟಿ ಕೊರತೆ ಎದುರಾಗಲು ಕಾರಣ. ಕೆಲ ದಿನಗಳ ಅಂತರದಲ್ಲೇ ಎರಡು ಲಕ್ಷ ಕೋಟಿ ರೂ ಹಣದ ಕೊರತೆ ಎದುರಾಗಿದೆ ಎಂಬುದು ಟ್ರೇಡರ್ಗಳ ಅನಿಸಿಕೆ.
ಇದನ್ನೂ ಓದಿ: ಸೈಬರ್ ವಂಚನೆ ತಡೆಯಲು ಆರ್ಬಿಐ ಕ್ರಮ; ಬ್ಯಾಂಕುಗಳಿಗೆ ಬೇರೆ ಡೊಮೇನ್, ಅಂತಾರಾಷ್ಟ್ರೀಯ ಪಾವತಿಗೆ ಹೆಚ್ಚುವರಿ ಸೆಕ್ಯುರಿಟಿ
ಜನವರಿ ಕೊನೆಯ ವಾರದಲ್ಲಿ ಆರ್ಬಿಐ ವಿಆರ್ಆರ್ ಹರಾಜು ಮೂಲಕ ಎರಡು ದಿನದಲ್ಲಿ ಮೂರೂವರೆ ಲಕ್ಷ ಕೋಟಿ ರೂಗೂ ಅಧಿಕ ಹಣವನ್ನು ಬ್ಯಾಂಕುಗಳಿಗೆ ನೀಡಿತ್ತು. ಈಗ ಒಂದೇ ದಿನದಲ್ಲಿ ಎರಡೂವರೆ ಲಕ್ಷ ಕೋಟಿ ರೂ ನೀಡಲು ಹೊರಟಿದೆ. ಇದು ಒಂದು ದಿನದಲ್ಲಿ ಆರ್ಬಿಐ ಕೈಗೊಂಡ ಅತಿದೊಡ್ಡ ಮೊತ್ತದ ಹರಾಜೆನಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




