Invest Karnataka: ಜಿಂದಾಲ್ ಗ್ರೂಪ್ಗೆ ‘ದಶಕದ ಹೂಡಿಕೆದಾರ’ ಪ್ರಶಸ್ತಿ ಕೊಟ್ಟ ಕರ್ನಾಟಕ ಸರ್ಕಾರ
JSW Group gets Investor of the Decade Award of Karnataka Govt: ಕರ್ನಾಟಕದಲ್ಲಿ ಉಕ್ಕು, ಸಿಮೆಂಟ್, ಬಂದರು ಇತ್ಯಾದಿ ಬಿಸಿನೆಸ್ಗಳಲ್ಲಿ ತೊಡಗಿರುವ ಜೆಎಸ್ಡಬ್ಲ್ಯು ಗ್ರೂಪ್ಗೆ ರಾಜ್ಯ ಸರ್ಕಾರ ‘ದಶಕದ ಹೂಡಿಕೆದಾರ’ ಪ್ರಶಸ್ತಿ ನೀಡಿದೆ. ಇನ್ವೆಸ್ಟ್ ಕರ್ನಾಟಕ ಸಮಾವೇಶದ ಸಂದರ್ಭದಲ್ಲಿ ಬೆಂಗಳೂರು ಅರಮನೆಯಲ್ಲಿ ನಡೆದ ಸಮಾರಂಭದಲ್ಲಿ ಜೆಎಸ್ಡಬ್ಲ್ಯು ಸಿಮೆಂಟ್ನ ಎಂಡಿ ಪಾರ್ಥ್ ಜಿಂದಾಲ್ಗೆ ಈ ಪ್ರಶಸ್ತಿ ನೀಡಲಾಯಿತು. ಕೇಂದ್ರ ಸಚಿವ ಪೀಯುಶ್ ಗೋಯಲ್, ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಬೆಂಗಳೂರು, ಫೆಬ್ರವರಿ 13: ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಉದ್ದಿಮೆ ವ್ಯವಹಾರಗಳಲ್ಲಿ ತೊಡಗಿರುವ ಜೆಎಸ್ಡಬ್ಲ್ಯು ಗ್ರೂಪ್ಗೆ ರಾಜ್ಯ ಸರ್ಕಾರದಿಂದ ‘ದಶಕದ ಹೂಡಿಕೆದಾರ’ (Investor of the Decade) ಎನ್ನುವ ಪ್ರಶಸ್ತಿಯ ಗೌರವ ಪ್ರಾಪ್ತವಾಗಿದೆ. ಕರ್ನಾಟಕದಲ್ಲಿ ಉದ್ಯಮ ವಲಯದ ಬೆಳವಣಿಗೆಗೆ ಜೆಎಸ್ಡಬ್ಲ್ಯು ಗ್ರೂಪ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಈ ಪ್ರಶಸ್ತಿ ನೀಡಿದೆ. ಇಲ್ಲಿಯ ಅರಮನೆ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವ ಪೀಯುಶ್ ಗೋಯಲ್ ಅವರ ಸಮ್ಮುಖದಲ್ಲಿ ಜೆಎಸ್ಡಬ್ಲ್ಯೂ ಗ್ರೂಪ್ಗೆ ಈ ಪ್ರಶಸ್ತಿ ನೀಡಲಾಯಿತು.
ಜೆಎಸ್ಡಬ್ಲ್ಯು ಸಿಎಮೆಂಟ್ ಮತ್ತು ಜೆಎಸ್ಡಬ್ಲ್ಯು ಪೇಂಟ್ಸ್ನ ಎಂಡಿ ಪಾರ್ಥ್ ಜಿಂದಾಲ್ ಅವರು ಗ್ರೂಪ್ ಪರವಾಗಿ ಈ ಪ್ರಶಸ್ತಿ ಪಡೆದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಂಬಿ ಪಾಟೀಲ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜೆಎಸ್ಡಬ್ಲ್ಯು ಗ್ರೂಪ್ ಕರ್ನಾಟಕದಲ್ಲಿ ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ ಬೆಳೆಯಲು ಮತ್ತು ಔದ್ಯಮಿಕ ಮೂಲಸೌಕರ್ಯ ಅಭಿವೃದ್ಧಿಗೊಳ್ಳಲು ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಅದು ರಾಜ್ಯದಲ್ಲಿ 1.2 ಲಕ್ಷ ಕೋಟಿ ರೂ ಮೊತ್ತದ ಹೂಡಿಕೆಗಳನ್ನು ಮಾಡಿದೆ. ತನ್ನ ವಿವಿಧ ಉದ್ದಿಮೆಗಳ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿದೆ.
ಕಂಪನಿಯು ಉಕ್ಕು ಉತ್ಪಾದನೆ, ಗ್ರೀನ್ ಎನರ್ಜಿ, ಸಿಮೆಂಟ್ ಉತ್ಪಾದನೆ ಮತ್ತು ಬಂದರು ಮೂಲಸೌಕರ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಸಾಗುತ್ತಿದ್ದು, ಆರ್ಥಿಕ ದೃಢತೆ ಮತ್ತು ದೀರ್ಘಕಾಲೀನ ಅಭಿವೃದ್ಧಿ ಸಾಧಿಸಿದೆ.
ಜೆಎಸ್ಡಬ್ಲ್ಯೂ ಗ್ರೂಪ್ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ನಿಧಾನಕ್ಕೆ ಬೆಳೆಸುತ್ತಾ ಬಂದಿದೆ. ಜೆಎಸ್ಡಬ್ಲ್ಯೂ ಸ್ಟೀಲ್ನ ವಿಜಯನಗರ ಘಟಕವು ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಉಕ್ಕು ಸಾಮರ್ಥ್ಯ ಹೊಂದಿರುವ ಭಾರತದ ಅತಿದೊಡ್ಡ ಉಕ್ಕಿನ ಸ್ಥಾವರ ಎಂಬ ಖ್ಯಾತಿ ಗಳಿಸಿದೆ. ಜೊತೆಗೆ ನವೀಕರಿಸಬಹುದಾದ ಶಕ್ತಿ, ಸಿಮೆಂಟ್ ಮತ್ತು ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದು, ದೊಡ್ಡ ಮಟ್ಟದ ಸಾಧನೆ ಮಾಡಿದೆ. ಪ್ರಸ್ತುತ ದೊರೆತಿರುವ ಪ್ರಶಸ್ತಿಯು ಕರ್ನಾಟಕವನ್ನು ಕೈಗಾರಿಕಾ ಶ್ರೇಷ್ಠ ರಾಜ್ಯವನ್ನಾಗಿ ರೂಪಿಸುವ ವಿಚಾರದಲ್ಲಿ ಅತ್ಯಂತ ಪ್ರಮುಖ ಕಂಪನಿಯಾಗಿ ಜೆಎಸ್ಡಬ್ಲ್ಯೂ ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಮತ್ತಷ್ಟು ಲಕ್ಷ ಕೋಟಿ ರೂ ಹೂಡಿಕೆಗೆ ಜೆಎಸ್ಡಬ್ಲ್ಯು ಒಪ್ಪಂದ
ಕರ್ನಾಟಕ ಹೂಡಿಕೆದಾರರ ಸಮಾವೇಶದಲ್ಲಿ ಜೆಎಸ್ಡಬ್ಲ್ಯೂ ರಾಜ್ಯದಲ್ಲಿ ಒಂದು ಲಕ್ಷ ಕೋಟಿ ರೂ ಹೂಡಿಕೆಗೆ ಒಪ್ಪಿದ್ದು, ಎಂಒಯುಗೆ ಸಹಿ ಹಾಕಿದೆ. ಮುಂದಿನ ಕೆಲ ವರ್ಷಗಳಲ್ಲಿ 1.2 ಲಕ್ಷ ಕೋಟಿ ರೂ ಹೂಡಿಕೆ ಮಾಡಲು ಕಂಪನಿ ಬದ್ಧವಾಗಿದೆ ಎಂದು ಮೊನ್ನೆ ಜೆಎಸ್ಡಬ್ಲ್ಯು ಗ್ರೂಪ್ನ ಛೇರ್ಮನ್ ಸಜ್ಜನ್ ಜಿಂದಾಲ್ ಹೇಳಿದ್ದಾರೆ.
ಇದನ್ನೂ ಓದಿ: ಜನವರಿಯಲ್ಲಿ ಹಣದುಬ್ಬರ ಶೇ. 4.31ಕ್ಕೆ ಇಳಿಕೆ; ಆರ್ಬಿಐ ಗುರಿ ಸಮೀಪಕ್ಕೆ ಬಂದ ಬೆಲೆ ಏರಿಕೆ ದರ
ಕರ್ನಾಟಕ ನಾಡು ತಮ್ಮ ಕರ್ಮಭೂಮಿ ಎಂದು ಹೇಳಿದ ಸಜ್ಜನ್ ಜಿಂದಾಲ್, ರಾಜ್ಯದ ಪ್ರಗತಿಪರ ಆಡಳಿತ, ಕೌಶಲ್ಯವಂತ ಕಾರ್ಮಿಕರು, ಹೂಡಿಕೆಸ್ನೇಹಿ ನೀತಿ ಇತ್ಯಾದಿ ಕಾರಣದಿಂದ ಕರ್ನಾಟಕವು ಉದ್ಯಮಗಳ ಬೆಳವಣಿಗೆಗೆ ಉತ್ತಮ ವಾತಾರಣ ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ಧಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ