ಡಯಾಬಿಟಿಸ್ ರೋಗಿಗಳಿಗೆ ಖುಷಿ ಸುದ್ದಿ; ಈ ಪರಿಣಾಮಕಾರಿ ಔಷಧದ ಬೆಲೆ ಶೇ. 90ರಷ್ಟು ಇಳಿಕೆ
Prices of diabetes drug down: ಡಯಾಬಿಟಿಸ್ ರೋಗದ ಚಿಕಿತ್ಸೆಗೆ ಬಳಸುವ ಎಂಪಗ್ಲೈಫ್ಲೋಝಿನ್ ಎನ್ನುವ ಔಷಧ ಇನ್ಮುಂದೆ ಬಹಳ ಕಡಿಮೆ ಬೆಲೆಗೆ ಲಭ್ಯ ಇರಲಿದೆ. ಒಂದು ಮಾತ್ರೆಗೆ 50ರಿಂದ 80 ರೂ ಇದ್ದದ್ದು ಈಗ 10 ರೂಗಿಂತ ಕಡಿಮೆಗೆ ಲಭ್ಯ ಇರಲಿದೆ. ದುಬಾರಿ ಎನ್ನುವ ಕಾರಣಕ್ಕೆ ಹೆಚ್ಚು ಪ್ರಿಸ್ಕ್ರೈಬ್ ಆದ ಈ ಔಷಧ ಇನ್ಮುಂದೆ ವ್ಯಾಪಕ ಬಳಕೆಯಾಗಬಹುದು. ಜರ್ಮನಿಯ ಫಾರ್ಮಾ ಕಂಪನಿಯೊಂದು ಹೊಂದಿದ್ದ ಈ ಔಷಧದ ಪೇಟೆಂಟ್ ಅವಧಿ ಮಾರ್ಚ್ 1ಕ್ಕೆ ಮುಗಿದ ಹಿನ್ನೆಲೆಯಲ್ಲಿ ಜೆನೆರಿಕ್ ಮೆಡಿಸಿನ್ಗಳ ತಯಾರಿಕೆ ನಡೆಯುತ್ತಿದೆ. ಹೀಗಾಗಿ, ಬೆಲೆ ಇಳಿಕೆ ಸಾಧ್ಯವಾಗಿದೆ.

ನವದೆಹಲಿ, ಮಾರ್ಚ್ 13: ಡಯಾಬಿಟಿಸ್ ರೋಗಗಳ (Diabetes disease) ಚಿಕಿತ್ಸೆಗಾಗಿ ಪರಿಣಾಮಕಾರಿ ಔಷಧ ಎಂದು ಪರಿಗಣಿಸಲಾದ ಎಂಪಗ್ಲೈಫ್ಲೋಝಿನ್ (Empagliflozin) ಬೆಲೆ ಬಹಳ ಕಡಿಮೆ ಆಗಿದೆ. ಈ ಔಷಧಿಯ ಪೇಟೆಂಟ್ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಜೆನೆರಿಕ್ ಉತ್ಪನ್ನಗಳು (Generic medicines) ಆರಂಭವಾಗಿವೆ. ಈ ಹಿನ್ನೆಲೆಯಲ್ಲಿ ಬ್ರ್ಯಾಂಡೆಡ್ ಕಂಪನಿಗಳೂ ಕೂಡ ಎಂಪಗ್ಲೈಫೋಝಿನ್ ಔಷಧದ ಬೆಲೆಯನ್ನು ಇಳಿಸಿವೆ. ವರದಿ ಪ್ರಕಾರ, ಶೇ. 90ರವರೆಗೂ ಬೆಲೆ ಇಳಿಕೆ ಮಾಡುತ್ತಿವೆ.
ಜರ್ಮನಿಯ ಬರೀನರ್ ಇಂಗಲೈಮ್ (Boehringer Ingelheim) ಎನ್ನುವ ಫಾರ್ಮಾ ಕಂಪನಿ ಎಂಪಗ್ಲೈಫೋಝಿನ್ ಔಷಧದ ಪೇಟೆಂಟ್ ಹೊಂದಿತ್ತು. 2025ರ ಮಾರ್ಚ್ 1ಕ್ಕೆ ಅದರ ಪೇಟೆಂಟ್ ಅವಧಿ ಮುಗಿದಿತ್ತು. ಹೀಗಾಗಿ, ಎಂಪಗ್ಲೈಫೋಝಿನ್ನ ಜೆನೆರಿಕ್ ಔಷಧಗಳ ಉತ್ಪಾದನೆ ಆರಂಭವಾಗಿದೆ. ಜೆನೆರಿಕ್ ಮೆಡಿಸಿನ್ಗೂ ಮೂಲ ಮೆಡಿಸಿನ್ಗೂ ವ್ಯತ್ಯಾಸ ಏನಿರುವುದಿಲ್ಲ. ಔಷಧ ಸಂಯೋಜನೆ ಒಂದೇ ಇರುತ್ತದೆ. ರೆಗ್ಯುಲರ್ ಮೆಡಿಸಿಲ್ ಆದರೆ ಪೇಟೆಂಟ್ ಅಥವಾ ರಾಯಧನವನ್ನು ಪೇಟೆಂಟ್ಧಾರರಿಗೆ ನೀಡಬೇಕಾಗುತ್ತದೆ. ಹೀಗಾಗಿ, ಔಷಧದ ಬೆಲೆ ಹೆಚ್ಚಿರುತ್ತದೆ. ಜೆನೆರಿಕ್ ಔಷಧಗಳಲ್ಲಿ ಯಾವ ಪೇಟೆಂಟ್ ಇರುವುದಿಲ್ಲ. ಇವು ಪೇಟೆಂಟ್ಮುಕ್ತ ಔಷಧ. ಈ ಕಾರಣಕ್ಕೆ ಈ ಔಷಧದ ಬೆಲೆ ಕಡಿಮೆ ಇರುತ್ತದೆ.
ಇದನ್ನೂ ಓದಿ: ಸ್ಟಾರ್ಲಿಂಕ್ ಇಂಟರ್ನೆಟ್ ಬೇಕೆಂದರೆ ತಿಂಗಳಿಗೆ 5,000 ರೂ ನೀಡಬೇಕಾ? ಉಪಕರಣ ವೆಚ್ಚ ಇನ್ನೂ ದುಬಾರಿ
ಎಂಪಗ್ಲೈಫ್ಲೋಝಿನ್ ಔಷಧವನ್ನು ಭಾರತದಲ್ಲಿ ಮ್ಯಾನ್ಕೈಂಡ್ ಫಾರ್ಮಾ, ಆಲ್ಕೆಮ್ ಲ್ಯಾಬೊರೇಟರೀಸ್, ಗ್ಲೆನ್ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಮೊದಲಾದ ಕಂಪನಿಗಳು ತಯಾರಿಸುತ್ತವೆ. ಈಗ ಇದರ ಪೇಟೆಂಟ್ ಮುಗಿದಿರುವುದರಿಂದ ಈ ಕಂಪನಿಗಳು ಜೆನೆರಿಕ್ ಔಷಧಗಳನ್ನು ತಯಾರಿಸಲು ಆರಂಭಿಸಿವೆ. ಮ್ಯಾನ್ಕೈಂಡ್ ಫಾರ್ಮಾ ಈ ಔಷಧದ ಒಂದು ಮಾತ್ರೆಯನ್ನು 59 ರೂ ಬೆಲೆಗೆ ಮಾರುತ್ತಿತ್ತು. ಈಗ ಜೆನೆರಿಕ್ ಮೆಡಿಸಿನ್ ಅನ್ನು 5.50 ರೂಗೆ ಮಾರುತ್ತಿದೆ. ಶೇ. 90ಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಬೆಲೆ ಇಳಿಕೆ ಆಗಿದೆ.
ಎಂಪಗ್ಲೈಫ್ಲೋಝಿನ್ ಅಥವಾ ಜಾರ್ಡಿಯಾನ್ಸ್ ಔಷಧ ಟೈಪ್ 2 ಡಯಾಬಿಟಿಸ್ ರೋಗದ ಚಿಕಿತ್ಸೆಗೆ ಬಳಸಲಾಗುತ್ತದೆ. ಕಿಡ್ನಿಗಳು ಗ್ಲೂಕೋಸ್ ಅನ್ನು ಹೀರಿಕೊಳ್ಳದಂತೆ ಈ ಔಷಧ ನಿಯಂತ್ರಿಸುತ್ತದೆ. ಇದರಿಂದ ಗ್ಲೂಕೋಸ್ ರಕ್ತ ಸೇರದೆ ಮೂತ್ರದ ಮೂಲಕ ಹೊರಟು ಹೋಗುತ್ತದೆ. ಹೀಗಾಗಿ, ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿನ ಮಟ್ಟಕ್ಕೆ ಹೋಗದಂತೆ ನಿಯಂತ್ರಿಸುತ್ತದೆ ಈ ಔಷಧ. ಕಿಡ್ನಿ ಕಾಯಿಲೆ ಬಂದಿದ್ದರೆ, ಅದು ಉಲ್ಬಣವಾದಂತೆ ಇದು ನಿಯಂತ್ರಿಸಬಲ್ಲುದು.
ಇದನ್ನೂ ಓದಿ: ಅಸ್ತಿತ್ವದಲ್ಲೇ ಇಲ್ಲದ 22 ನೌಕರರ ಸೃಷ್ಟಿ; 8 ವರ್ಷ 22 ಮಂದಿಯ ಸಂಬಳ ಗುಡ್ಡೆಹಾಕಿದ ಚೀನೀ ವ್ಯಕ್ತಿ
ಎಂಪಗ್ಲೈಫ್ಲೋಝಿನ್ ಔಷಧ ಭಾರತದಲ್ಲಿ ಈ ಮುಂಚಿನಿಂದಲೂ ಲಭ್ಯ ಇತ್ತಾದರೂ, ಇದರ ದುಬಾರಿ ಬೆಲೆಯಿಂದಾಗಿ ಹೆಚ್ಚು ವ್ಯಾಪಕ ಬಳಕೆಯಲ್ಲಿ ಇರಲಿಲ್ಲ. ವೈದ್ಯರು ಅಪರೂಪದ ಪ್ರಕರಣಗಳಲ್ಲಿ ಈ ಔಷಧವನ್ನು ಪ್ರಿಸ್ಕ್ರೈಬ್ ಮಾಡುತ್ತಿದ್ದರು. ಈಗ ಇದರ ಜೆನೆರಿಕ್ ಅವತಾರಗಳು ಬಂದಿರುವುದರಿಂದ ಭಾರತದಲ್ಲಿ ವೈದ್ಯರು ಡಯಾಬಿಟಿಸ್ ಚಿಕಿತ್ಸೆಗೆ ಎಂಪಗ್ಲೈಫ್ಲೋಝಿನ್ ಅನ್ನು ಪ್ರಿಸ್ಕ್ರೈಬ್ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ