ಐಫೋನ್ ಆಯ್ತು ಈಗ ಆ್ಯಪಲ್ ಏರ್ಪೋಡ್ಗಳ ಸರದಿ; ಅಮೆರಿಕ, ಯೂರೋಪ್ಗೆ ರಫ್ತಾಗಲಿವೆ ಮೇಡ್ ಇನ್ ಇಂಡಿಯಾ ಏರ್ಪೋಡ್ಗಳು
Made-in-India Apple AirPods to be exported to US and Europe: ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾದ ಆ್ಯಪಲ್ ಕಂಪನಿ ಭಾರತದಲ್ಲಿ ತಯಾರಿಕೆ ಪ್ರಮಾಣ ಏರಿಸುತ್ತಿದೆ. ಐಫೋನ್ ಬಳಿಕ ಏರ್ಪೋಡ್ಗಳನ್ನೂ ಭಾರತದಲ್ಲಿ ತಯಾರಿಸುತ್ತಿದೆ. ಭಾರತದ ತಯಾರಿಕಾ ವಲಯದ ಗುಣಮಟ್ಟದ ಬಗ್ಗೆ ಆ್ಯಪಲ್ ಕಂಪನಿಯ ನಂಬುಗೆ ಹೆಚ್ಚುತ್ತಿದೆ. ಭಾರತದಲ್ಲಿ ತಯಾರಾದ ಏರ್ಪೋಡ್ಗಳನ್ನು ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಗೆ ಅದು ರಫ್ತು ಮಾಡುತ್ತಿದೆ.

ನವದೆಹಲಿ, ಮಾರ್ಚ್ 17: ಭಾರತದಲ್ಲಿ ತಯಾರಾಗುತ್ತಿರುವ ಆ್ಯಪಲ್ ಉತ್ಪನ್ನಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚುತ್ತಿದೆ. ಐಫೋನ್ ಜೊತೆಗೆ ಆ್ಯಪಲ್ನ ಏರ್ಪೋಡ್ಗಳೂ (Apple AirPod) ಭಾರತದಲ್ಲಿ ತಯಾರಾಗುತ್ತಿವೆ. ಈಗ ಈ ಏರ್ಪೋಡ್ಗಳು ಜಾಗತಿಕ ಮಾರುಕಟ್ಟೆಗೆ ಸರಬರಾಜಾಗಲು ಸಿದ್ಧವಾಗಿವೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಏಪ್ರಿಲ್ ತಿಂಗಳಿಂದ ಮೇಡ್ ಇನ್ ಇಂಡಿಯಾ ಏರ್ಪೋಡ್ಗಳು (Made in India AirPod) ಅಮೆರಿಕ ಮತ್ತು ಯೂರೋಪ್ ಮಾರುಕಟ್ಟೆಗಳಿಗೆ ಸರಬರಾಜು ಮಾಡಲಾಗುತ್ತದೆ. ಹೈದರಾಬಾದ್ನಲ್ಲಿ ಇತ್ತೀಚೆಗಷ್ಟೇ ಸ್ಥಾಪನೆಯಾದ ಫಾಕ್ಸ್ಕಾನ್ನ ಹೊಸ ಘಟಕದಲ್ಲಿ ಈ ಐಪ್ಯಾಡ್ಗಳ ತಯಾರಿಕೆ ನಡೆಯುತ್ತಿದೆ. 2024ರ ವರ್ಷದ ಕೊನೆಯಲ್ಲಿ ಆ ಘಟಕದಲ್ಲಿ ಪ್ರಾಯೋಗಿಕ ತಯಾರಿಕೆ ಆರಂಭವಾಗಿತ್ತು. ಈಗ ರಫ್ತು ಮಾಡಲು ಅಣಿಗೊಂಡಿದೆ ಈ ಘಟಕ.
ಮೊದಲಿಗೆ ಎರಡು ಏರ್ಪೋಡ್ ಮಾಡಲ್ಗಳನ್ನು ರಫ್ತು ಮಾಡಲಾಗುತ್ತದೆ. ಒಂದು, ಸ್ಟ್ಯಾಂಡರ್ಡ್ ಏರ್ಪೋಡ್ 4. ಇನ್ನೊಂದು, ಆ್ಯಕ್ಟಿವ್ ನಾಯ್ಸ್ ಕ್ಯಾನ್ಸಲೇಶನ್ (ಎಎನ್ಸಿ) ಇರುವ ಏರ್ಪೋಡ್4. ಮೊದಲಿಗೆ ಸೀಮಿತ ಪ್ರಮಾಣದಲ್ಲಿ ಮಾತ್ರ ಈ ಏರ್ಪೋಡ್ ಮಾಡಲ್ಗಳನ್ನು ರಫ್ತು ಮಾಡಲಾಗುತ್ತದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಫಾಕ್ಸ್ಕಾನ್ ಘಟಕಲ್ಲಿ ಈ ಏರ್ಪೋಡ್ಗಳ ತಯಾರಿಕೆ ಪ್ರಮಾಣವನ್ನು ಹೆಚ್ಚಿಸಲಾಗುತ್ತದೆ.
ಇದನ್ನೂ ಓದಿ: ಭಾರತದ್ದೇ ಸ್ವಂತ ಮೊಬೈಲ್ ಆಪರೇಟಿಂಗ್ ಸಿಸ್ಟಂ ನಿರ್ಮಾಣಕ್ಕೆ ಸರ್ಕಾರದ ಆಸಕ್ತಿ; ಏನಿದರ ಉಪಯೋಗ, ಇದು ಅಷ್ಟು ಸುಲಭವಾ?
ಆ್ಯಪಲ್ನ ಎಲ್ಲಾ ಉತ್ಪನ್ನಗಳು ಚೀನಾದಲ್ಲೇ ಈಗಲೂ ಕೂಡ ಅತಿಹೆಚ್ಚು ತಯಾರಾಗುತ್ತಿರುವುದು. ಚೀನಾ ಮೇಲೆ ಪೂರ್ಣವಾಗಿ ಅವಲಂಬನೆಯಾಗುವುದನ್ನು ತಪ್ಪಿಸಲು ಅ್ಯಪಲ್ ಕಂಪನಿ ತನ್ನ ಉತ್ಪನ್ನಗಳ ತಯಾರಿಕೆಯನ್ನು ಚೀನಾದಿಂದ ಆಚೆಗೆ ಕ್ರಮೇಣವಾಗಿ ವಿಸ್ತರಿಸುತ್ತಾ ಬರುತ್ತಿದೆ. ಭಾರತದಲ್ಲಿ ಐಫೋನ್ಗಳ ತಯಾರಿಕೆ ಕಳೆದ ಎರಡು ಮೂರು ವರ್ಷದಲ್ಲಿ ಗಣನೀಯವಾಗಿ ಹೆಚ್ಚುತ್ತಿದೆ. ಐಫೋನ್ ಬಳಿಕ ಈ ಏರ್ಪೋಡ್ಗಳ ತಯಾರಿಕೆ ಭಾರತದಲ್ಲಿ ಹೆಚ್ಚಳ ಆಗುತ್ತಿದೆ.
ಆ್ಯಪಲ್ ಕಂಪನಿಗೆ ಅದರ ಉತ್ಪನ್ನಗಳನ್ನು ಫಾಕ್ಸ್ಕಾನ್, ಪೆಗಾಟ್ರಾನ್, ವಿಸ್ಟ್ರಾನ್ ಮೊದಲಾದ ಕಂಪನಿಗಳು ತಯಾರಿಸಿ ಕೊಡುತ್ತವೆ. ಇತರೆಡೆ ತಯಾರಾದ ಬಿಡಿಭಾಗಗಳನ್ನು ಈ ಕಂಪನಿಗಳು ಅಸೆಂಬಲ್ ಮಾಡಿ ಅಂತಿಮ ಉತ್ಪನ್ನವಾಗಿ ಸಿದ್ಧಪಡಿಸುತ್ತವೆ. ತೈವಾನ್ ಮೂಲದ ಫಾಕ್ಸ್ಕಾನ್, ಪೆಗಾಟ್ರಾನ್ ಮತ್ತು ವಿಸ್ಟ್ರಾನ್ ಕಂಪನಿಗಳ ಘಟಕಗಳು ಭಾರತದಲ್ಲಿ ಇವೆ. ವಿಸ್ಟ್ರಾನ್ ಘಟಕವನ್ನು ಟಾಟಾ ಎಲೆಕ್ಟ್ರಾನಿಕ್ಸ್ ಖರೀದಿಸಿದೆ. ಆ್ಯಪಲ್ ಉತ್ಪನ್ನಗಳನ್ನು ತಯಾರಿಸುವ ಭಾರತದ ಮೊದಲ ಕಂಪನಿ ಟಾಟಾ.
ಆ್ಯಪಲ್ ಕಂಪನಿಯ ಬಿಡಿಭಾಗಗಳನ್ನು ತಯಾರಿಸುವ ಕಂಪನಿಗಳೂ ಭಾರತದಲ್ಲಿ ಘಟಕಗಳನ್ನು ಸ್ಥಾಪಿಸುತ್ತಿವೆ. ಇವೆಲ್ಲವುಗಳಿಂದ ಭಾರತದ ತಯಾರಿಕಾ ವಲಯ ಬಲಗೊಳ್ಳುತ್ತಿದೆ. ಪಿಎಲ್ಐ ಸ್ಕೀಮ್ಗಳು ಹಲವು ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳನ್ನು ಆಕರ್ಷಿಸಿವೆ. ಈ ಸೆಕ್ಟರ್ನಲ್ಲಿ ಉದ್ಯೋಗಸೃಷ್ಟಿಯೂ ಹೆಚ್ಚುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:07 am, Mon, 17 March 25








