ಕಷ್ಟಕಾಲಕ್ಕೆ ಬೇಕು ಚಿನ್ನ; ಜಗತ್ತಿನ ಸೆಂಟ್ರಲ್ ಬ್ಯಾಂಕುಗಳಿಗೂ ನಮ್ಮಜ್ಜಿ ಬುದ್ದಿ..!
'The Jitters behind the glitter', article by R Sridharan: ಓದಿ ಬರಹ ಬರದ ಅಜ್ಜಿಯಿಂದ ಹಿಡಿದು ಸೆಂಟ್ರಲ್ ಬ್ಯಾಂಕ್ವರೆಗೆ ಪ್ರತಿಯೊಬ್ಬರೂ ಕೂಡ ಚಿನ್ನ ಶೇಖರಿಸುವ ಉಮೇದಿನಲ್ಲಿದ್ದಾರೆ. ದೇಶದೇಶಗಳ ನಡುವೆ ಹೆಚ್ಚುತ್ತಿರುವ ಅಪನಂಬಿಕೆ, ಅವಿಶ್ವಾಸಗಳ ಮಧ್ಯೆ ದೀರ್ಘಾವಧಿಯಲ್ಲಿ ಚಿನ್ನಕ್ಕೆ ಹೆಚ್ಚಿನ ಬೆಲೆ ಇರುತ್ತದೆ.

ನವದೆಹಲಿ, ಮಾರ್ಚ್ 9: ಹತ್ತು ವರ್ಷದ ಹಿಂದೆ (2015) ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಎನಿಸಿದ ಗೋಲ್ಡ್ ಮಾನಿಟೈಸೇಶನ್ ಸ್ಕೀಮ್ (Gold Monetization Scheme) ಆರಂಭಿಸಿತು. ಭಾರತೀಯ ನಿವಾಸಿಗಳ ಬಳಿ ಅಂದಾಜು 25,000 ದಿಂದ 30,000 ಟನ್ಗಳಷ್ಟು ಚಿನ್ನ ಇದ್ದಿರಬಹುದು. ಇದರಲ್ಲಿ 10,000 ಟನ್ಗಳಷ್ಟಾದರೂ ಚಿನ್ನ ಮನೆ ಮತ್ತು ಬ್ಯಾಂಕ್ ಲಾಕರ್ಗಳಿಂದ ಹೊರಬಂದು ಬ್ಯಾಂಕಿಂಗ್ ಸಿಸ್ಟಂಗೆ ಸೇರುವಂತೆ ಮಾಡಿ, ಆ ಮೂಲಕ ಲಕ್ಷಾಂತರ ಕೋಟಿ ರೂ ಹಣ ಆರ್ಥಿಕತೆಗೆ ಪುಷ್ಟಿ ಕೊಡಬಹುದು ಎಂಬುದು ಸರ್ಕಾರದ ನಿರೀಕ್ಷೆಯಾಗಿತ್ತು.
ಆ ಸ್ಕೀಮ್ ಆರಂಭವಾಗಿ ಒಂದು ದಶಕವಾಯಿತು. ಈಗಲೂ ಕೂಡ ಅದು ಜನರನ್ನು ಆಕರ್ಷಿಸಲು ಶಕ್ಯವಾಗಿಲ್ಲ. ಇದೂವರೆಗೂ ಮಾನಿಟೈಸ್ ಅಥವಾ ನಗದೀಕರಣವಾಗಿರುವ ಚಿನ್ನ 25 ಟನ್ ಕೂಡ ಇಲ್ಲ. ಚಿನ್ನವು ಸರ್ಕಾರಿ ಲಾಕರ್ಗಳಲ್ಲಿರುವುದಕ್ಕಿಂತ ಕುಟುಂಬದ ಲಾಕರ್ಗಳಲ್ಲಿ ಇರುವುದು ಉತ್ತಮ ಎನ್ನುವ ಸ್ಪಷ್ಟ ಸಂದೇಶ ರವಾನೆಯಾಗಿದೆ. ಸರ್ಕಾರ, ಕರೆನ್ಸಿ ಅಥವಾ ಹಣಕಾಸು ಸಂಸ್ಥೆಗಳ ಮೇಲೆ ನಂಬಿಕೆ ಇಲ್ಲದ್ದರಿಂದಲೇ ಅಲ್ಲವಾ ನೀವು ಚಿನ್ನವನ್ನು ಕೊಳ್ಳುತ್ತಿದ್ದೀರಿ. ಹಾಗಿದ್ದ ಮೇಲೆ ನಿಮ್ಮ ಚಿನ್ನ ಇಟ್ಟುಕೊಳ್ಳಲು ಯಾವುದೇ ರೀತಿಯ ಮಧ್ಯವರ್ತಿ ಬರುವುದು ಸರಿ ಅನಿಸುವುದಿಲ್ಲ. ಬ್ಯಾಂಕ್ ಠೇವಣಿ ರೀತಿಯಲ್ಲಿ ಚಿನ್ನ ಯಾವುದೇ ರಿಟರ್ನ್ ನೀಡೋದಿಲ್ಲ ಎಂದು ವಾದಿಸುವವರಿಗೆ ಒಂದು ವಿಷಯ ನೆನಪಿರಲಿ. ಈ ಕಾಲದಲ್ಲಿ ಸರ್ಕಾರಗಳೇ ಋಣಬಾಧೆ ತೊಡೆದುಕೊಳ್ಳುವುದಿಲ್ಲ. ಕೆಲ ಸರ್ಕಾರಗಳ ಬಾಂಡ್ ಅಥವಾ ಸಾಲಪತ್ರಗಳಿಗೆ (govt bond) ಹೋಲಿಸಿದರೆ ಭೌತಿಕ ಚಿನ್ನ (physical gold) ಎಷ್ಟೋ ಸುರಕ್ಷಿತ ಎನಿಸುತ್ತದೆ.
ಈ ಕಾರಣಕ್ಕೆ ಭೌತಿಕ ಚಿನ್ನ ಸಾವಿರಾರು ವರ್ಷಗಳಿಂದಲೂ ಆದ್ಯತೆಯ ಸಂಪತ್ತಾಗಿದೆ. ಎಮರ್ಜೆನ್ಸಿ ಫಂಡ್ ಅಥವಾ ಆಪತ್ಕಾಲದ ಸಂಪತ್ತಾಗಿಯಾದರೂ ಚಿನ್ನಕ್ಕೆ ಆದ್ಯತೆ ಇದೆ. ಭೌತಿಕವಾಗಿ ಅದಕ್ಕಿರುವ ಬೆಲೆ, ಸುಲಭ ವರ್ಗಾವಣೆ ಇವೆಲ್ಲವೂ ಚಿನ್ನಕ್ಕೆ ವಿಶೇಷ ಸ್ಥಾನ ತಂದುಕೊಟ್ಟಿವೆ.
ಅಜ್ಜಿಗೆ ಹೇಳಿ ಥ್ಯಾಂಕ್ಸ್
ಓದಿನ ಗಂಧಗಾಳಿಯೇ ಇಲ್ಲದ, ಅಪ್ಪಟ ನಿರಕ್ಷರಕುಕ್ಷಿಗಳಾಗಿದ್ದ ಭಾರತೀಯ ಅಜ್ಜಿಯಂದಿರಿಗೆ ತಿಳಿದ ಸತ್ಯ ಈಗ ಜಾಗತಿಕ ಹಣಕಾಸು ನೀತಿಯಲ್ಲಿ ದರ್ಶನವಾಗುತ್ತಿದೆ. ವಿವಿಧ ಕೇಂದ್ರೀಯ ಬ್ಯಾಂಕುಗಳು 2020ರ ಬಳಿಕ ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿವೆ. 2022ರಲ್ಲಿ ಸೆಂಟ್ರಲ್ ಬ್ಯಾಂಕುಗಳು ದಾಖಲೆಯ 1,082 ಟನ್ಗಳಷ್ಟು ಚಿನ್ನವನ್ನು ಖರೀದಿಸಿದವು. ಹಿಂದಿನ ದಶಕದಲ್ಲಿ ಸರಾಸರಿಯಾಗಿ ಸುಮಾರು 500 ಟನ್ಗಳಷ್ಟು ಚಿನ್ನ ಖರೀದಿಸಲಾಗುತ್ತಿತ್ತು. 2022ರಲ್ಲಿ ಖರೀದಿಸಲಾದ ಚಿನ್ನ ಎರಡು ಪಟ್ಟು ಹೆಚ್ಚು. ನಂತರದ ವರ್ಷಗಳಲ್ಲಿ, ಅಂದರೆ 2023 ಮತ್ತು 2024ರಲ್ಲೂ ಕೂಡ ಜಾಗತಿಕವಾಗಿ ಎಲ್ಲಾ ಸೆಂಟ್ರಲ್ ಬ್ಯಾಂಕುಗಳು ಖರೀದಿಸಿದ ಭೌತಿಕ ಚಿನ್ನ ಒಂದು ಸಾವಿರ ಟನ್ ಗಡಿ ದಾಟಿತ್ತು.
ಇದನ್ನೂ ಓದಿ: ದುಬೈಗೆ ಹೋಗಿ ಅಧಿಕೃತವಾಗಿ ಎಷ್ಟು ಚಿನ್ನ ತರಲು ಸಾಧ್ಯ? ಅಲ್ಲಿಗೂ ಇಲ್ಲಿಗೂ ಬೆಲೆ ವ್ಯತ್ಯಾಸ ಎಷ್ಟು?
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಣಕಾಸು ಸ್ಥಿರತೆ ಕಾಯ್ದುಕೊಳ್ಳುವ ಪ್ರಮುಖ ಹೊಣೆಗಾರಿಕೆ ಇರುವ ಸೆಂಟ್ರಲ್ ಬ್ಯಾಂಕುಗಳು ಯಾಕೆ ಚಿನ್ನವನ್ನು ಶೇಖರಿಸಿಕೊಳ್ಳುತ್ತಿವೆ? ಕಾರಣ ಹಲವಿವೆ. ಆದರೆ, ಎಲ್ಲವೂ ಕೂಡ ಅನಿಶ್ಚಿತತೆ ಮತ್ತು ಅಪನಂಬಿಕೆಗೆ ಸಂಬಂಧಿಸಿದ್ದೇ ಆಗಿವೆ. ಸರ್ಕಾರಗಳ ಸಾಲ ಹೆಚ್ಚುತ್ತಿರುವುದು, ಕರೆನ್ಸಿಗಳ ವಿಪರೀತ ಮುದ್ರಣ, ಅದರ ಪರಿಣಾಮವಾಗಿ ಹೆಚ್ಚುತ್ತಿರುವ ಹಣದುಬ್ಬರ, ಇದರಿಂದ ಅನಿಶ್ಚಿತತೆ ನೆಲಸುತ್ತದೆ. ಈಗ ಜಾಗತಿಕ ರಾಜಕೀಯ ಸಹಕಾರ ದುರ್ಬಲಗೊಳ್ಳುತ್ತಿದೆ. ಜಾಗತಿಕ ಆರ್ಥಿಕ ವ್ಯವಸ್ಥೆ, ಅರ್ಥಾತ್ ಜಾಗತೀಕರಣ ಒಡೆದು ಹೋಳಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ರಚನೆಯಾಗುತ್ತಿರುವ ಹೊಸ ವಿಶ್ವ ಶ್ರೇಣಿ ಬಗ್ಗೆ ವಿಶ್ವಾಸ ಮೂಡಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಯೊಂದು ದೇಶವೂ ಪ್ರತ್ಯೇಕತೆಯಲ್ಲಿ ಇರಬೇಕಾಗಬಹುದು.
ಇದು ಒಟ್ಟಾರೆ ಸ್ಥೂಲವಾಗಿ ಕಾಣುವ ಸ್ವರೂಪ. ಇದರಲ್ಲಿ ಪ್ರಮುಖ ಪಾತ್ರಧಾರಿಗಳು ಅಮೆರಿಕ ಮತ್ತು ಚೀನಾ ದೇಶಗಳೇ. ವಿಶ್ವ ಆರ್ಥಿಕತೆಯ ಶೇ. 40ರಷ್ಟು ಪಾಲನ್ನು ಇವೆರಡು ದೇಶಗಳೇ ಹೊಂದಿವೆ. ಅಮೆರಿಕದ ಸರ್ಕಾರಿ ಬಾಂಡ್ಗಳನ್ನು ಅತಿಹೆಚ್ಚು ಹೊಂದಿರುವ ದೇಶಗಳಲ್ಲಿ ಚೀನಾ ಎರಡನೇ ಸ್ಥಾನದಲ್ಲಿದೆ. ಅಮೆರಿಕದ ಜೊತೆ ಪೂರ್ಣ ಪ್ರಮಾಣದ ವ್ಯಾಪಾರ ಸಮರ ನಡೆಯಬಹುದು ಎನ್ನುವಂತಹ ವಾತಾವರಣ ಇರುವುದರಿಂದ ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕ್ರಮೇಣವಾಗಿ ಇಳಿಸುವುದು ಚೀನಾದ ಇರಾದೆಯಾಗಿದೆ. ಹೀಗಾಗಿ, ಕಳೆದ ಐದು ವರ್ಷದಲ್ಲಿ ಅದು ಸಾಕಷ್ಟು ಚಿನ್ನವನ್ನು ಖರೀದಿಸುತ್ತಿದೆ. ಉದಾಹರಣೆಗೆ, 2020ರಲ್ಲಿ ಅದು 62 ಟನ್ ಚಿನ್ನ ಖರೀದಿಸಿತು. 2021ರಲ್ಲಿ ಖರೀದಿಸಿದ ಚಿನ್ನ 108 ಟನ್ನಷ್ಟಿತ್ತು. 2022ರಲ್ಲೂ ಚಿನ್ನದ ಖರೀದಿ ನೂರು ಟನ್ ದಾಟಿತು. ಆದರೆ, ಆರ್ಥಿಕತೆಯ ಮಂದ ಬೆಳವಣಿಗೆಯ ಕಾರಣವೋ ಮತ್ತು ದುಬಾರಿ ಬೆಲೆಗೆ ಚಿನ್ನ ಖರೀದಿಸುವುದನ್ನು ತಪ್ಪಿಸುವ ಕಾರಣವೋ ಕಳೆದ ಎರಡು ವರ್ಷದಲ್ಲಿ (2023, 2024) ಚೀನಾ ಚಿನ್ನದ ಖರೀದಿಯನ್ನು ಕಡಿಮೆ ಮಾಡಿತು. ಆದರೂ ಕೂಡ ಜಾಗತಿಕ ಚಿನಿವಾರ ಮಾರುಕಟ್ಟೆಯಲ್ಲಿ ಚೀನಾ ಈಗಲೂ ಕೂಡ ಪ್ರಮುಖ ಖರೀದಿದಾರನಾಗಿಯೇ ಉಳಿದಿದೆ.
ಭಾರತದ ಸೆಂಟ್ರಲ್ ಬ್ಯಾಂಕ್ ಆಗಿರುವ ಆರ್ಬಿಐ ಕೂಡ ಚಿನ್ನ ಖರೀದಿಯ ಭರಾಟೆಯಲ್ಲಿದೆ. ಅದರಲ್ಲೂ 2018ರಿಂದ ಸಾಕಷ್ಟು ಖರೀದಿ ಮಾಡುತ್ತಿದೆ. ವರ್ಷಗಳು ಕಳೆದಂತೆ ಅದರ ವಾರ್ಷಿಕ ಚಿನ್ನ ಖರೀದಿ ಸಾಕಷ್ಟು ಏರಿಕೆ ಆಗಿದೆ. ಕಳೆದ ವರ್ಷ (2024) ಭಾರತ 72.6 ಟನ್ ಚಿನ್ನ ಕೊಂಡುಕೊಂಡಿತ್ತು. ಇದರಿಂದ ಅದರ ಗೋಲ್ಡ್ ರಿಸರ್ವ್ಸ್ 876 ಟನ್ಗೆ ಹೆಚ್ಚಾಗಿದೆ. ಕಳೆದ ವರ್ಷ ಅತಿಹೆಚ್ಚು ಚಿನ್ನ ಖರೀದಿಸಿದ ದೇಶಗಳ ಪೈಕಿ ಭಾರತಕ್ಕೆ ಎರಡನೇ ಸ್ಥಾನ.
ಅನಿಶ್ಚಿತತೆಯ ಆಗರ
ಟ್ರಂಪ್ 2.0 ಆಡಳಿತದಿಂದ ಟ್ಯಾರಿಫ್ ಹೇರಿಕೆಯಾಗುತ್ತಿರುವುದು, ನ್ಯಾಟೋ ದುರ್ಬಲಗೊಳ್ಳುತ್ತಿರುವುದು ಇವು ಯೂರೋಪ್ನಲ್ಲಿರುವ ಅಮೆರಿಕದ ಮಿತ್ರ ದೇಶಗಳಿಗೆ ಆರ್ಥಿಕವಾಗಿ ಮತ್ತು ಮಿಲಿಟರಿಯಾಗಿ ಪೇಚಿಗಿಟ್ಟುಕೊಳ್ಳುವಂತೆ ಮಾಡುತ್ತಿವೆ. ಯೂರೋಪ್ ಅನ್ನು ಅತಿಕ್ರಮಿಸಲು ಹೊರಟಿರುವ ರಷ್ಯಾ ವಿರುದ್ಧದ ಹೋರಾಟದಲ್ಲಿ ಯೂರೋಪ್ ಒಂಟಿಯಾಗಬಹುದು ಎನ್ನುವ ಭಯ ಇದೆ. ಐರೋಪ್ಯ ಒಕ್ಕೂಟದಲ್ಲಿರುವ ಕೆಲ ದುರ್ಬಲ ಸದಸ್ಯ ದೇಶಗಳು ಪ್ರಬಲ ಯೂರೋ ಕರೆನ್ಸಿಯ ಭಾರಕ್ಕೆ ನಲುಗಿ ಹೋಗುತ್ತಿದ್ದು, ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ನ ನೆರವು ಯಾಚಿಸುವ ಪರಿಸ್ಥಿತಿ ಬರಬಹುದು. ಈ ಒತ್ತಡಗಳನ್ನು ಐರೋಪ್ಯ ಒಕ್ಕೂಟ ಹೇಗೆ ನಿಭಾಯಿಸುತ್ತದೆ ಎಂದು ನೋಡಬೇಕು. ಆದರೆ, ಒಟ್ಟಾರೆ ಅನಿಶ್ಚಿತ ಪರಿಸ್ಥಿತಿಯಲ್ಲಿ ಯೂರೋಪ್ ಇದೆ.
ಇದನ್ನೂ ಓದಿ: ಭಾರತೀಯ ಹೆಂಗಸರ ಬಳಿ ಇರುವ ಚಿನ್ನ ಅಮೆರಿಕ ಸೇರಿ ಐದು ದೇಶಗಳ ಗೋಲ್ಡ್ ರಿಸರ್ವ್ಗಿಂತಲೂ ಹೆಚ್ಚು..!
ಇಂಥ ಗೊಂದಲಮಯ ಸನ್ನಿವೇಶದಲ್ಲಿ ಚಿನ್ನದ ಹೊಳಪು ಇನ್ನಷ್ಟು ಎದ್ದುಗಾಣುತ್ತಿರುವುದು ಹೌದು. ಜಾಗತಿಕ ಗೋಲ್ಡ್ ಇಟಿಎಫ್ ಮಾರುಕಟ್ಟೆಯಲ್ಲಿ 294 ಬಿಲಿಯನ್ ಡಾಲರ್ನಷ್ಟು ಮೌಲ್ಯದ ಆಸ್ತಿ ನಿರ್ವಹಣೆ ಆಗುತ್ತಿದೆ. ಅಂದಾಜು, 3,200 ಟನ್ಗಳಷ್ಟು ಚಿನ್ನ ಇದರಲ್ಲಿದೆ. ಕೆಲ ಇಟಿಎಫ್ ಹೂಡಿಕೆದಾರರು ತಮ್ಮ ಹಣವನ್ನು ಭೌತಿಕ ಚಿನ್ನ ಖರೀದಿಸಲು ಉಪಯೋಗಿಸಿದರೆ, ಆಗ ಹಳದಿ ಲೋಹದ ಬೆಲೆ ಗಗನಕ್ಕೇರುವ ಸಾಧ್ಯತೆ ಇರುತ್ತದೆ.
ಅದೇನೇ ಆಗಲಿ, ವಿಶ್ವಾದ್ಯಂತ ಬಹಳಷ್ಟು ಚಿನ್ನದ ಗಣಿಗಳ ಅವಧಿ ಮುಗಿಯುತ್ತಾ ಬಂದಿದೆ. ಜಾಗತಿಕವಾಗಿ ವರ್ಷಕ್ಕೆ 3,300 ಟನ್ಗಳಷ್ಟು ಚಿನ್ನದ ಉತ್ಪಾದನೆ ಆಗುತ್ತಿದೆ. ಬಹುಶಃ ಇದು ಗರಿಷ್ಠ ಉತ್ಪಾದನಾ ಮಟ್ಟ ಇರಬಹುದು. ಈ ಗಣಿಗಳಿಂದ ಹೆಚ್ಚು ಚಿನ್ನ ಹೊರತೆಗೆಯಲು ಹೊಸ ಹೂಡಿಕೆ ಆಗದೇ ಹೋದಲ್ಲಿ ಚಿನ್ನದ ಉತ್ಪಾದನೆ ಕಡಿಮೆ ಆಗುತ್ತದೆ. ಪರಿಣಾಮವಾಗಿ ಚಿನ್ನ ಮತ್ತಷ್ಟು ದುಬಾರಿಯಾಗುತ್ತದೆ. ಹೀಗಾಗಿ, ನೀವು ಯಾವ ಕೋನದಲ್ಲಿ ನೋಡಿದರೂ ಚಿನ್ನಕ್ಕೆ ದೀರ್ಘಾವಧಿಯಲ್ಲಿ ಸಖತ್ ಬೇಡಿಕೆ ಇರುವುದಂತೂ ಹೌದು.
ನನ್ನ ಸಲಹೆ: ನೀವು ಮ್ಯೂಚುವಲ್ ಫಂಡ್ ಎಸ್ಐಪಿಗಳ ಜೊತೆಜೊತೆಗೆ ನಿಮ್ಮ ಅಜ್ಜಿಯ ರೀತಿಯಲ್ಲಿ ಕೆಲ ಭೌತಿಕ ಚಿನ್ನದ ಮೇಲೂ ಹೂಡಿಕೆ ಮಾಡುವುದು ಉತ್ತಮ ಅನಿಸುತ್ತದೆ.
ಲೇಖಕರು: ಆರ್ ಶ್ರೀಧರನ್, News9 ನೆಟ್ವರ್ಕ್ ಸಂಪಾದಕರು
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:20 pm, Sun, 9 March 25