ಲಲಿತ್ ಮೋದಿ ಕೈತಪ್ಪಿದ ವಾನೋಟೂ ದೇಶದ ಪಾಸ್ಪೋರ್ಟ್; ಭಾರತದ ಮನವಿಗೆ ಸ್ಪಂದಿಸದ ಇಂಟರ್ಪೋಲ್
Lalit Modi and Vanuatu passport: ಇತ್ತೀಚೆಗೆ ಲಲಿತ್ ಮೋದಿಗೆ ನೀಡಿದ್ದ ಪಾಸ್ಪೋರ್ಟ್ ಅನ್ನು ರದ್ದುಗೊಳಿಸುವಂತೆ ವಾನೋಟೂ ದೇಶದ ಪ್ರಧಾನಿ ಜೋಥಮ್ ವಾಪಾಟ್ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಲಲಿತ್ ಮೋದಿ ಅವರನ್ನು ಬಂಧಿಸಲು ಭಾರತ ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ಲಲಿತ್ ಮೋದಿಗೆ ಪಾಸ್ಪೋರ್ಟ್ ರದ್ದುಗೊಳಿಸಲು ಕಾರಣ ಎನ್ನಲಾಗಿದೆ. ಇದೇ ವೇಳೆ, ಲಲಿತ್ ಮೋದಿಯನ್ನು ಹಿಡಿಯಲು ರೆಡ್ ನೋಟೀಸ್ ನೀಡುವಂತೆ ಭಾರತ ಎರಡು ಬಾರಿ ಮಾಡಿಕೊಂಡ ಮನವಿಯನ್ನು ಇಂಟರ್ಪೋಲ್ ತಿರಸ್ಕರಿಸಿದೆ.

ನವದೆಹಲಿ, ಮಾರ್ಚ್ 10: ಮಾಜಿ ಐಪಿಎಲ್ ಛೇರ್ಮನ್ ಲಲಿತ್ ಮೋದಿ (Lalit Modi) ಅವರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂಥ ಸ್ಥಿತಿ ಆಗಿದೆ. ಕೆಲ ತಿಂಗಳ ಹಿಂದೆ ಅವರಿಗೆ ನೀಡಲಾಗಿದ್ದ ವಾನೋಟೂ (Vanuatu) ದೇಶದ ಪಾಸ್ಪೋರ್ಟ್ ಅನ್ನು ರದ್ದು ಮಾಡಲಾಗಿದೆ. ಭಾರತದ ವಶಕ್ಕೆ ಬೀಳುವುದನ್ನು (Extradition) ತಪ್ಪಿಸಿಕೊಳ್ಳಲು ವಾನೋಟೂಗೆ ಹೋಗುವ ಲಲಿತ್ ಮೋದಿ ಪ್ರಯತ್ನ ನೀರಲ್ಲಿ ಹೋಮ ಮಾಡಿದಂತಾಗಬಹುದು. ಭಾರತಕ್ಕೆ ಹಸ್ತಾಂತರಗೊಳ್ಳುವುದನ್ನು ತಪ್ಪಿಸಿಕೊಳ್ಳಲು ಲಲಿತ್ ಮೋದಿ ಯತ್ನಿಸುತ್ತಿದ್ದಾರೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ವಾನೋಟೂ ದೇಶದ ಪ್ರಧಾನಿ ಜೋಥಮ್ ನಾಪಾಟ್ (Jotham Napat) ಅವರು ಮೋದಿಯ ಪಾಸ್ಪೋರ್ಟ್ ರದ್ದುಗೊಳಿಸುವಂತೆ ತನ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಾನೋಟೂ ದೇಶದ ಪಾಸ್ಪೋರ್ಟ್ ಸಿಕ್ಕ ಬಳಿಕ ಲಲಿತ್ ಮೋದಿ ಅವರು ಕೆಲ ದಿನಗಳ ಹಿಂದಷ್ಟೇ ತನ್ನ ಭಾರತೀಯ ಪಾಸ್ಪೋರ್ಟ್ ಅನ್ನು ಮರಳಿಸಲು ಅರ್ಜಿ ಹಾಕಿದ್ದರು. ಆದರೆ, ವಾನೋಟೂ ಪಾಸ್ಪೋರ್ಟ್ ರದ್ದುಗೊಳ್ಳಬಹುದು ಎಂದು ಅವರು ನಿರೀಕ್ಷಿಸಿರಲಿಲ್ಲ.
ವಾನೋಟೂ ಪಾಸ್ಪೋರ್ಟ್ನಿಂದ ಲಲಿತ್ ಮೋದಿಗೆ ಏನು ಉಪಯೋಗ..?
ವಾನೋಟೂ ಎಂಬುದು ಆಸ್ಟ್ರೇಲಿಯಾ ಸಮೀಪ ಇರುವ ಒಂದು ಪುಟ್ಟ ದ್ವೀಪ ರಾಷ್ಟ್ರ. ಇದು ಹೆಚ್ಚಿನ ದೇಶಗಳ ಜೊತೆ ಗಡೀಪಾರು ಒಪ್ಪಂದಗಳಿಗೆ ಸಹಿ ಹಾಕಿಲ್ಲ. ಅಂದರೆ, ಯಾವುದೇ ದೇಶದ ಪ್ರಜೆಗಳು ವಾನೋಟೂನಲ್ಲಿ ಆಶ್ರಯ ಪಡೆದಿದ್ದು, ಅವರನ್ನು ಹಸ್ತಾಂತರಿಸುವಂತೆ ಅಥವಾ ಗಡೀಪಾರು ಮಾಡುವಂತೆ ಆ ದೇಶವು ಮನವಿ ಮಾಡಿಕೊಳ್ಳಬಹುದು ಅಷ್ಟೇ. ಆದರೆ, ಗಡೀಪಾರು ಮಾಡುವ ಯಾವ ಕಟ್ಟುಪಾಡಿಗೂ ವಾನೋಟೂ ಒಳಪಟ್ಟಿರುವುದಿಲ್ಲ. ಈ ಕಾರಣಕ್ಕೆ ಲಲಿತ್ ಮೋದಿ ಅವರು ಈ ಪುಟ್ಟ ದ್ವೀಪ ದೇಶದ ಆಶ್ರಯ ಬಯಸಿ ಹೋಗುತ್ತಿದ್ದಿರಬಹುದು.
ಇದನ್ನೂ ಓದಿ: ಕಷ್ಟಕಾಲಕ್ಕೆ ಬೇಕು ಚಿನ್ನ; ಜಗತ್ತಿನ ಸೆಂಟ್ರಲ್ ಬ್ಯಾಂಕುಗಳಿಗೂ ನಮ್ಮಜ್ಜಿ ಬುದ್ದಿ..!
ಲಲಿತ್ ಮೋದಿಯನ್ನು ಹಿಡಿಯುವ ಪ್ರಯತ್ನವೇಕೆ?
ಲಲಿತ್ ಮೋದಿ ಐಪಿಎಲ್ ಹುಟ್ಟುಹಾಕಿದವರಲ್ಲಿ ಒಬ್ಬರು. ಐಪಿಎಲ್ನ ಛೇರ್ಮನ್ ಆಗಿದ್ದವರು. ಐಪಿಎಲ್ ಗುತ್ತಿಗೆಗಳನ್ನು ನೀಡುವಾಗ, ಬಿಡ್ಡಿಂಗ್ ಪ್ರಕ್ರಿಯೆ ನಡೆಸುವಾಗ ಅಕ್ರಮ ಎಸಗಿರುವ ಗಂಭೀರ ಆರೋಪ ಅವರ ಮೇಲಿದೆ. ಹಾಗೆಯೇ, ಐಪಿಎಲ್ ಫಂಡ್ಗಳನ್ನು ಬೇರೆಡೆ ಅಕ್ರಮವಾಗಿ ವರ್ಗಾಯಿಸಿದ ಆರೋಪವೂ ಇದೆ. ಅವರ ವಿರುದ್ದ ಪ್ರಕರಣ ದಾಖಲಾಗಿವೆ.
2010ರಲ್ಲಿ ಲಲಿತ್ ಮೋದಿಯನ್ನು ಐಪಿಎಲ್ ಛೇರ್ಮನ್ ಸ್ಥಾನದಿಂದ ಕೆಳಗಿಳಿಸಲಾಯಿತು. ಅದೇ ವರ್ಷ ಮೋದಿ ಬ್ರಿಟನ್ ದೇಶಕ್ಕೆ ಓಡಿ ಹೋಗಿದ್ದರು. ಆ ಬಳಿಕ ಭಾರತಕ್ಕೆ ಅವರು ಮರಳೇ ಇಲ್ಲ.
ರೆಡ್ ಕಾರ್ನರ್ ನೋಟೀಸ್ ನೀಡಲು ಇಂಟರ್ಪೋಲ್ ನಕಾರ
ಲಲಿತ್ ಮೋದಿ ಅವರನ್ನು ಹಿಡಿಯುವ ಪ್ರಯತ್ನದ ಭಾಗವಾಗಿ ಅವರ ವಿರುದ್ಧ ರೆಡ್ ನೋಟೀಸ್ ನೀಡುವಂತೆ ಇಂಟರ್ಪೋಲ್ಗೆ ಭಾರತೀಯ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ, ಮೋದಿ ವಿರುದ್ಧ ಸರಿಯಾದ ಸಾಕ್ಷ್ಯಾಧಾರ ಕೊರತೆ ಇರುವ ಕಾರಣ ಎರಡು ಬಾರಿ ಭಾರತೀಯ ಅಧಿಕಾರಿಗಳ ಮನವಿಯನ್ನು ಇಂಟರ್ಪೋಲ್ ತಿರಸ್ಕರಿಸಿತೆನ್ನಲಾಗಿದೆ.
ಇದನ್ನೂ ಓದಿ: ಭಾರತವೇ ಬೆಸ್ಟ್; ಸಾಲುಸಾಲಾಗಿ ತವರಿಗೆ ಬರುತ್ತಿರುವ ಭಾರತೀಯ ಸ್ಟಾರ್ಟಪ್ಗಳು
ಭಾರತೀಯ ಪಾಸ್ಪೋರ್ಟ್ ರದ್ದುಗೊಳಿಸಲು ಮೋದಿ ಅರ್ಜಿ ಸಲ್ಲಿಸಿದ್ದಾಕೆ?
ಭಾರತೀಯ ಪಾಸ್ಪೋರ್ಟ್ ಇದ್ದಲ್ಲಿ ಅವರು ಭಾರತದ ಕಾನೂನಿನ ಕಟ್ಟುಪಾಡುಗಳಿಗೆ ಒಳಪಡಬೇಕಾಗುತ್ತದೆ. ಹೀಗಾಗಿ, ವಾನೋಟೂ ದೇಶದ ಪಾಸ್ಪೋರ್ಟ್ ಲಭಿಸಿದ ಬಳಿಕ ಲಲಿತ್ ಮೋದಿ ತಮ್ಮ ಭಾರತೀಯ ಪಾಸ್ಪೋರ್ಟ್ ಅನ್ನು ಮರಳಿಸಲು ಅರ್ಜಿ ಹಾಕಿದ್ದರು. ಈಗ ವಾನೋಟೂ ಪ್ರಧಾನಿಗಳೇ ಲಲಿತ್ ಮೋದಿಯ ಪಾಸ್ಪೋರ್ಟ್ ರದ್ದುಗೊಳಿಸಲು ಆದೇಶಿಸಿದ್ದಾರೆ. ಲಲಿತ್ ಮೋದಿ ಸದ್ಯ ಎಲ್ಲಿ ಇದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಇಲ್ಲ. ವರದಿಗಳ ಪ್ರಕಾರ ಅವರು ಬ್ರಿಟನ್ನಲ್ಲೇ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:39 am, Mon, 10 March 25