ಏರ್ಪೋರ್ಟ್ನಲ್ಲಿ ಅಗ್ಗದ ಬೆಲೆ ಚಹಾ; ಉಡಾನ್ ಯಾತ್ರಿ ಕೆಫೆ ಸಖತ್ ಸಕ್ಸಸ್; ಅಹ್ಮದಾಬಾದ್ ಏರ್ಪೋರ್ಟ್ನಲ್ಲೂ ಕೆಫೆ ಆರಂಭ
Udaan Yatri Cafe sells Tea at Rs 10: ಕೋಲ್ಕತಾ, ಚೆನ್ನೈ ಬಳಿಕ ಅಹ್ಮದಾಬಾದ್ನ ಏರ್ಪೋರ್ಟ್ನಲ್ಲೂ ಉಡಾನ್ ಯಾತ್ರಿ ಕೆಫೆ ಆರಂಭವಾಗಿದೆ. ಈ ಮಳಿಗೆಯಲ್ಲಿ ಕಾಫಿ, ಟೀ, ಸಮೋಸಾ, ವಡೆ ಇತ್ಯಾದಿ ತಿಂಡಿ ಮತ್ತು ಪಾನೀಯಗಳು ಸಿಗುತ್ತವೆ. ಚಹಾ ಬೆಲೆ ಕೇವಲ 10 ರೂ ಇದೆ. ತಿಂಡಿಗಳ ಬೆಲೆ 20 ರೂ ಮಾತ್ರವೇ. ಕೋಲ್ಕತಾದಲ್ಲಿರುವ ಕೆಫೆಯಲ್ಲಿ ದಿನಕ್ಕೆ 35,000 ರೂ ವ್ಯಾಪಾರ ಆಗುತ್ತದೆ. ಚೆನ್ನೈನಲ್ಲಿ 24,000 ರೂ ಬ್ಯುಸಿನೆಸ್ ಆಗುತ್ತಿದೆ.

ಚೆನ್ನೈ, ಮಾರ್ಚ್ 10: ಸಿನಿಮಾ ಮಾಲ್, ಏರ್ಪೋರ್ಟ್ ಇತ್ಯಾದಿ ಕಡೆ ಮಾರಲಾಗುವ ಆಹಾರವಸ್ತುಗಳ ಬೆಲೆ ತೀರಾ ಅತಿರೇಕವಾಗಿರುತ್ತವೆ ಎನ್ನುವ ದೂರುಗಳು ಸಾಕಷ್ಟು ಕೇಳಿಬರುತ್ತವೆ. ಈ ಮಧ್ಯೆ ಕೇಂದ್ರ ಸರ್ಕಾರ ಏರ್ಪೋರ್ಟ್ಗಳಲ್ಲಿ ಉಡಾನ್ ಯಾತ್ರಿ ಕೆಫೆ (Udaan Yatri Cafe) ಎನ್ನುವ ಸ್ನ್ಯಾಕ್ಸ್ ಮತ್ತು ಪಾನೀಯಗಳ ಅಂಗಡಿಗಳನ್ನು ತೆರೆಯಲು ಉದ್ದೇಶಿಸಿದೆ. ಈಗಾಗಲೇ ಎರಡು ಏರ್ಪೋರ್ಟ್ಗಳಲ್ಲಿ ಇದನ್ನು ಆರಂಭಿಸಲಾಗಿದೆ. ಎರಡು ವಾರದ ಹಿಂದಷ್ಟೇ ಚೆನ್ನೈ ಏರ್ಪೋರ್ಟ್ನಲ್ಲಿ ಕೇಂದ್ರ ವಿಮಾನಯಾನ ಸಚಿವ ಕಿಂಜರಪು ರಾಮಮೋಹನ್ ನಾಯ್ಡು ಅವರು ಉಡಾನ್ ಯಾತ್ರಿ ಕೆಫೆಯನ್ನು ಆರಂಭಿಸಿದ್ದರು. ಫೆಬ್ರುವರಿ 27ರಂದು ಶುರುವಾದ ಉಡಾನ್ ಯಾತ್ರಿ ಕೆಫೆ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದ್ದು ದಿನಕ್ಕೆ 24,000 ರೂ ಬಿಸಿನೆಸ್ ಆಗುತ್ತಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ ಉಡಾನ್ ಸ್ಕೀಮ್ ಜಾರಿಗೆ ತಂದ ಬಳಿಕ ವಿಮಾನ ಹಾರಾಟದ ದರ ಅಗ್ಗಗೊಂಡಿದೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರೂ ಕೂಡ ಫ್ಲೈಟ್ನಲ್ಲಿ ಪ್ರಯಾಣಿಸುವುದು ಸಾಮಾನ್ಯವಾಗಿದೆ. ಅಗ್ಗದ ವಿಮಾನ ಟಿಕೆಟ್ ಪಡೆದು ಬರುವ ಜನರಿಗೆ ಏರ್ಪೋರ್ಟ್ನಲ್ಲಿ ದುಬಾರಿ ಬೆಲೆಯ ಆಹಾರ ಖರೀದಿಸಬೇಕಾದ ಪರಿಸ್ಥಿತಿ ಇತ್ತು. ಇದನ್ನು ತಪ್ಪಿಸಲು ಸರ್ಕಾರ ಉಡಾನ್ ಯಾತ್ರಿ ಕೆಫೆಯನ್ನು ಏರ್ಪೋರ್ಟ್ಗಳಲ್ಲಿ ಆರಂಭಿಸುವ ಯೋಜನೆ ಹಮ್ಮಿಕೊಂಡಿದೆ.
ಇದನ್ನೂ ಓದಿ: ಲಲಿತ್ ಮೋದಿ ಕೈತಪ್ಪಿದ ವಾನೋಟೂ ದೇಶದ ಪಾಸ್ಪೋರ್ಟ್; ಭಾರತದ ಮನವಿಗೆ ಸ್ಪಂದಿಸದ ಇಂಟರ್ಪೋಲ್
ಕಾಫಿ, ಟೀ, ಸೋಮಾಸ, ವಡೆ ಕಡಿಮೆ ಬೆಲೆಗೆ ಮಾರಾಟ
ನಂದಿನಿ ಮಿಲ್ಕ್ ಪಾರ್ಲರ್ ರೀತಿಯಲ್ಲಿ ಉಡಾನ್ ಯಾತ್ರಿ ಕೆಫೆಯಲ್ಲಿ ಟೀ, ಕಾಫಿ, ವಿವಿಧ ಸ್ನ್ಯಾಕ್ಸ್ಗಳು ಹಾಗೂ ತಂಪು ಪಾನೀಯಗಳು ಸಾಧಾರಣ ಬೆಲೆಗೆ ದೊರೆಯುತ್ತವೆ. ಇಲ್ಲಿ ಚಹಾ ಬೆಲೆ ಕೇವಲ 10 ರೂ ಮಾತ್ರವೇ ಇದೆ. ನಗರದ ಸಾಮಾನ್ಯ ಫಾಸ್ಟ್ ಫೂಡ್ ಹೋಟೆಲ್ಗಳಲ್ಲಿ ಇರುವ ಚಹಾ ಬೆಲೆ ಉಡಾನ್ ಯಾತ್ರಿ ಕೆಫೆಯಲ್ಲೂ ಇರುತ್ತದೆ. ಸಮೋಸಾ, ಬಡೆ, ಕಾಫಿಯ ಬೆಲೆ 20 ರೂ ಇದೆ. ಅದೇ ಏರ್ಪೋರ್ಟ್ಗಳಲ್ಲಿ ಬೇರೆ ಮಳಿಗೆಯಲ್ಲಿ ನೀವು ಚಹಾ ಕುಡಿಯಬೇಕೆಂದರೆ ಒಂದು ಕಪ್ಗೆ 50ರಿಂದ 100 ರೂ ತೆರಬೇಕಾಗುತ್ತದೆ.
ಕೋಲ್ಕತಾ ಏರ್ಪೋರ್ಟ್ನಲ್ಲಿ ಮೊದಲ ಉಡಾನ್ ಯಾತ್ರಿ ಕೆಫೆ ಶುರುವಾಗಿದ್ದು. ಅಲ್ಲಿ ದಿನನಿತ್ಯ ಈ ಕೆಫೆ 35,000 ರೂ ಬಿಸಿನೆಸ್ ನಡೆಸುತ್ತಿದೆ. ಉಡಾನ್ ಯಾತ್ರಿ ಕೆಫೆಗಳಲ್ಲಿ ಆಹಾರ ಬೆಲೆ ಅಗ್ಗ ಇರುವುದು ಮಾತ್ರವಲ್ಲ, ರುಚಿ ಶುಚಿ ಮತ್ತು ಗುಣಮಟ್ಟದಲ್ಲೂ ಗಮನಾರ್ಹ ಎನಿಸಿದೆ.
ಇದನ್ನೂ ಓದಿ: ಕಷ್ಟಕಾಲಕ್ಕೆ ಬೇಕು ಚಿನ್ನ; ಜಗತ್ತಿನ ಸೆಂಟ್ರಲ್ ಬ್ಯಾಂಕುಗಳಿಗೂ ನಮ್ಮಜ್ಜಿ ಬುದ್ದಿ..!
ಅಹ್ಮದಾಬಾದ್ ಏರ್ಪೋರ್ಟ್ನಲ್ಲೂ ಉಡಾನ್ ಕೆಫೆ
ಕೋಲ್ಕತಾ ಏರ್ಪೋರ್ಟ್ನಲ್ಲಿರುವ ಉಡಾನ್ ಯಾತ್ರಿ ಕೆಫೆ ಸಾಕಷ್ಟು ಜನಪ್ರಿಯವಾಗಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿರುವ ಕೆಫೆಯೂ ಕೂಡ ಆ ಮಟ್ಟಕ್ಕೆ ಬೇಗನೇ ತಲುಪುವ ನಿರೀಕ್ಷೆ ಇದೆ. ಅಹ್ಮದಾಬಾದ್ನಲ್ಲಿರುವ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲೂ ಉಡಾನ್ ಯಾತ್ರಿ ಕೆಫೆಯನ್ನು ಇದೀಗ ಉದ್ಘಾಟನೆ ಮಾಡಲಾಗಿದೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಪುಣೆ ಮತ್ತು ಜೈಪುರ್ ಏರ್ಪೋರ್ಟ್ಗಳಲ್ಲೂ ಯಾತ್ರಿ ಕೆಫೆಗಳನ್ನು ಆರಂಭಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Mon, 10 March 25