ಭಾರತೀಯ ನೌಕರರು ನಾಲಾಯಕ್, ಬೇಜವಾಬ್ದಾರಿಗಳು ಎಂದು ಕಡ್ಡಿತುಂಡು ಮಾಡಿದಂತೆ ಕುಟುಕಿದ ಅಮೆರಿಕನ್ ಸಿಇಒ
Indian American CEO Hari Raghavan blasts Indian workers: ಭಾರತದ ಆರ್ಥಿಕತೆ ಚುರುಕಾಗಿಲ್ಲದಿರುವುದಕ್ಕೆ ಕೆಲಸಗಾರರಲ್ಲಿ ಕ್ಷಮತೆ ಇಲ್ಲದಿರುವುದು ಕಾರಣ ಎಂದು ಭಾರತೀಯ ಅಮೆರಿಕನ್ ಉದ್ಯಮಿ ಹರಿ ರಾಘವನ್ ಹೇಳಿದ್ದಾರೆ. ಇತ್ತೀಚೆಗೆ ಭಾರತದಿಂದ ವಾಪಸ್ಸಾಗಿರುವ ತನಗೆ ಮತ್ತೆ ವಾಪಸ್ ಹೋಗಬಾರದು ಎನಿಸುವಷ್ಟು ಅಸಹ್ಯ ಆಗುತ್ತಿದೆ ಎಂದು ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕದ ಸರಾಸರಿ ನೌಕರರಿಗಿರುವ ಕ್ಷಮತೆಯ ಶೇ. 10 ಭಾಗವೂ ಭಾರತೀಯ ನೌಕರರಿಗೆ ಇಲ್ಲ ಎಂದು ನಿಷ್ಠುರವಾಗಿ ಹೇಳಿದ್ದಾರೆ.

ನವದೆಹಲಿ, ಮಾರ್ಚ್ 6: ಭಾರತದಲ್ಲಿ ಉದ್ಯೋಗಿಗಳು ವಾರಕ್ಕೆ 60 ಗಂಟೆ ಕೆಲಸ, 70 ಗಂಟೆ ಕೆಲಸ, 90 ಗಂಟೆ ಕೆಲಸ ಮಾಡಬೇಕಾ, ಬೇಡವಾ ಎನ್ನುವ ಚರ್ಚೆ ಆಗಾಗ್ಗೆ ನಡೆಯುತ್ತಿದೆ. ಇದೇ ಹೊತ್ತಲ್ಲಿ ಭಾರತೀಯ ಅಮೆರಿಕನ್ ಉದ್ಯಮಿಯೊಬ್ಬರು ಭಾರತೀಯ ನೌಕರರ ವಿರುದ್ದ ಬೇಸರ ಹೊರಹಾಕುತ್ತಾ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಅಮೆರಿಕದ ಆಟೊಗ್ರಾಫ್ (AutographHQ) ಕಂಪನಿಯ ಸಿಇಒ ಹರಿ ರಾಘವನ್ (Hari Raghavan) ತಮ್ಮ ಎಕ್ಸ್ ಅಕೌಂಟ್ನಲ್ಲಿ ಹಾಕಿದ ಪೋಸ್ಟ್ನಲ್ಲಿ ಭಾರತೀಯ ನೌಕರರನ್ನು ಬೇಜವಾಬ್ದಾರಿಗಳೆಂದು ಬಣ್ಣಿಸಿ ಆಕ್ರೋಶ ಹೊರಹಾಕಿದ್ದಾರೆ. ಭಾರತೀಯ ಉದ್ಯೋಗಿಗಳಿಗೆ ಕೆಲಸದಲ್ಲಿ ಶ್ರದ್ಧೆ ಇಲ್ಲ. ಬೆನ್ನು ಬಿದ್ದು ಅವರಿಂದ ಕೆಲಸ ಮಾಡಿಸಬೇಕು ಎಂದು ಕುಟುಕಿದ್ದಾರೆ.
ಫ್ಯಾಕ್ಟರಿ ಕಾರ್ಮಿಕರ ಕೆಲಸಗಳನ್ನು ಟ್ರ್ಯಾಕ್ ಮಾಡುವ ವಿಡಿಯೋ ಸಿಸ್ಟಂವೊಂದನ್ನು ವಿವಾನ್ ಬೇದ್ ಮತ್ತು ಕುಸಾಲ್ ಮೋಹತಾ ಎಂಬಿಬ್ಬರು ವ್ಯಕ್ತಿಗಳು ಕಂಡು ಹಿಡಿದದ್ದರು. ಈ ಉತ್ಪನ್ನದ ಬಗ್ಗೆ ತೀವ್ರ ಟೀಕೆ ಕೇಳಿಬಂದಿತ್ತು. ಹರಿ ರಾಘವನ್ ಈ ಟ್ರ್ಯಾಕಿಂಗ್ ವಿಡಿಯೋ ಅನ್ನು ಉಲ್ಲೇಖಿಸುತ್ತಾ, ಭಾರತೀಯ ಉದ್ಯಮಿಗಳಿಗೆ ಮತ್ತು ಕಂಪನಿಗಳಿಗೆ ಈ ಸೇವೆ ಎಷ್ಟು ಅಗತ್ಯ ಇದೆ ಎಂದು ವಿವರಿಸುವ ಪ್ರಯತ್ನದಲ್ಲಿ ಭಾರತೀಯ ನೌಕರರ ವಿರುದ್ಧ ಅಸಮಾಧಾನಗಳ ಸುರಿಮಳೆಯನ್ನೇ ಮಾಡಿದ್ದಾರೆ. ಅಮೆರಿಕದ ಕೆಲಸಗಾರರಲ್ಲಿ ಇರುವ ಉತ್ಪನ್ನಶೀಲತೆಯ ಹತ್ತನೇ ಒಂದು ಭಾಗವೂ ಭಾರತೀಯರಲ್ಲಿ ಇಲ್ಲ ಎಂದು ಲೇವಡಿ ಕೂಡ ಮಾಡಿದ್ದಾರೆ.
‘ನೀವು ಭಾರತದಲ್ಲಿ ನೌಕರರ ಒಂದು ಗುಂಪನ್ನು ನಿಭಾಯಿಸಬೇಕೆಂದರೆ ಪ್ರತಿ 10 ನಿಮಿಷಕ್ಕೊಮ್ಮೆ ಪ್ರತಿಯೊಬ್ಬ ವ್ಯಕ್ತಿಯ ತಲೆ ಮೇಲೆ ಕೂತು ಕೆಲಸ ಮಾಡಿಸಬೇಕು. ಅಷ್ಟು ಮಾಡಿಯೂ ಅಮೆರಿಕದ ಸರಾಸರಿ ನೌಕರ ಮಾಡುವ ಅರ್ಧದಷ್ಟು ಕೆಲಸವನ್ನು ಭಾರತೀಯ ನೌಕರ ಮಾಡಿದರೆ ನಿಮ್ಮ ಪುಣ್ಯ… ಇದು ದೈಹಿಕ ಶ್ರಮ ಬೇಡುವ ಕೆಲಸದಿಂದ ಹಿಡಿದು ಜ್ಞಾನದ ಕೆಲಸದವರೆಗೂ ಎಲ್ಲಕ್ಕೂ ಅನ್ವಯ ಆಗುತ್ತದೆ’ ಎಂದು ಹೇಳುತ್ತಾ ಹರಿ ರಾಘವನ್ ಅವರು ತಾನು ಇಂಟರ್ನ್ ಮಾಡಿ ವಿವಿಧ ಕಂಪನಿಗಳ ನೌಕರರ ಉತ್ಪನ್ನಶೀಲತೆಯನ್ನು ಹೋಲಿಸಿದ್ದಾರೆ.
ಇದನ್ನೂ ಓದಿ: ಚೀನಾ, ಮೆಕ್ಸಿಕೋ, ಕೆನಡಾ ಆಯ್ತು, ಏ. 2ರಿಂದ ಭಾರತದ ಮೇಲೂ ಅಮೆರಿಕದಿಂದ ಪ್ರತಿ ಸುಂಕ; ಏನಿದು ಟ್ಯಾರಿಫ್ ನೀತಿ?
‘ಭಾರತ ಹಾಗು ಅಮೆರಿಕದಾದ್ಯಂತ ಕೆಲ ಕಂಪನಿಗಳಲ್ಲಿ ನಾನು ಇಂಟರ್ನ್ ಮಾಡಿದ್ದೇನೆ. ಒಂದೇ ಕೆಲಸಕ್ಕೆ ಬೇರೆ ಬೇರೆ ಕಡೆ ಬೇರೆ ಬೇರೆ ಅವಧಿ ಆಗುತ್ತದೆ. ಚೆನ್ನೈನ ಬಿಎನ್ಪಿ ಪರಿಬಾಸ್ನಲ್ಲಿ 2 ತಿಂಗಳು, ಸಿಟಿ ಬಾಂಬೆಯಲ್ಲಿ 1 ತಿಂಗಳು, ಎಸ್ಎಪಿ ಪಾಲೋ ಆಲ್ಟೋದಲ್ಲಿ 2 ವಾರ, ಬಿಸಿಜಿ ಚಿಕಾಗೋದಲ್ಲಿ 3 ದಿನ ಆಗುತ್ತದೆ. ತಮಾಷೆಯಲ್ಲ, ಭಾರತೀಯ ನೌಕರರ ಕ್ಷಮತೆಯು ಹತ್ತು ಪಟ್ಟು ಕಡಿಮೆ ಇದೆ ಎಂದು ಬಹಳ ಮಾರ್ಮಿಕವಾಗಿ ಭಾರತೀಯ ಅಮೆರಿಕನ್ ಉದ್ಯಮಿ ಬರೆದುಕೊಂಡಿದ್ದಾರೆ.
Look, the factory monitoring video was cringe but…
I grew up in India and I don’t think y’all understand how unreliable the work ethic of the average Indian employee is. I don’t think it’s an accident that the company has a bunch of Indian founders and my guess is that they’re…
— hari (@haridigresses) February 26, 2025
ಕಾರ್ಮಿಕರು ದಿಢೀರ್ ನಾಪತ್ತೆಯಾಗ್ತಾರೆ
ಹರಿ ರಾಘವನ್ ಅವರು ದೈಹಿಕ ಶ್ರಮ ಬೇಡುವ ಕೆಲಸ ಮಾಡುವ ಕಾರ್ಮಿಕರ ಕೆಲಸಗಳ್ಳತನವನ್ನು ಹೈಲೈಟ್ ಮಾಡಿದ್ದಾರೆ. ಚೆನ್ನೈನಲ್ಲಿ ಕೆಲ ವರ್ಷಗಳ ಹಿಂದೆ ತಮ್ಮ ಪೋಷಕರು ಮನೆ ಕಟ್ಟಿಸಿದಾಗಿನ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ. ಕೆಲಸಗಾರರು ಕುಡಿದು ಕೆಲಸಕ್ಕೆ ಬರದೇ ಇರುವುದು, ಏಕಾಏಕಿ ಊರಿಗೆ ಹೋಗುವುದು ಈ ಕಾರಣಕ್ಕೆ ಮನೆ ಕಟ್ಟುವ ಕೆಲಸ ವಿಳಂಬವಾಯಿತು ಎಂದು ಹೇಳಿಕೊಂಡಿರುವ ಇವರು, ಕೆಲಸ ಹೋಗುತ್ತದೆಂದರೂ ಈ ಜನರು ಕೇರ್ ಮಾಡುವುದಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: ಸಾಲ ವಿಪರೀತವಾಯ್ತು; ಅಮೆರಿಕಕ್ಕೆ ‘ಹಾರ್ಟ್ ಅಟ್ಯಾಕ್’ ಆಗೋ ಮುನ್ನ ಸರಿಮಾಡಿ: ರೇ ಡೇಲಿಯೋ
ಈ ಕಾರಣಕ್ಕೆ ಭಾರತೀಯ ತಯಾರಿಕಾ ಉದ್ಯಮವು ಜಪಾನ್, ತೈವಾನ್, ಸ್ವಿಟ್ಜರ್ಲ್ಯಾಂಡ್, ಇಟಲಿ, ಟರ್ಕಿ, ಚೀನೀ ಉತ್ಪನ್ನಗಳ ಮಟ್ಟ ಮುಟ್ಟಲು ಆಗಿಲ್ಲ ಎಂದು ಹೇಳಿರುವ ಅವರು, ಭಾರತದ ಆರ್ಥಿಕತೆ ಚುರುಕಾಗಿ ಸಾಗದೇ ಇರುವುದಕ್ಕೆ ಈ ಕೆಲಸದಲ್ಲಿನ ಶ್ರದ್ಧತೆಯ ಕೊರತೆ ಒಂದು ಕಾರಣ ಇರಬಹುದು ಎಂದಿದ್ದಾರೆ.
ಹಾಗೆಯೇ, ಭಾರತೀಯ ಆರ್ಥಿಕತೆ ವೇಗವಾಗಿ ಅಭಿವೃದ್ಧಿ ಆಗಬೇಕೆಂದು ನೀವು ಬಯಸುತ್ತಿದ್ದರೆ ಭಾರತದಲ್ಲಿ ಕಾರ್ಯಕ್ಷಮತೆಯ ಸಂಸ್ಕೃತಿ ನೆಲಸಬೇಕೆಂದು ಅಪೇಕ್ಷಿಸುತ್ತೀರಿ ಎಂದು ಹರಿ ರಾಘವನ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಫೆಬ್ರುವರಿ 26ಕ್ಕೆ ಪ್ರಕಟವಾದ ಈ ಪೋಸ್ಟ್ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಹೆಚ್ಚಿನ ಜನರು ಸಹಮತ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:06 pm, Thu, 6 March 25








