ಸಾಲ ವಿಪರೀತವಾಯ್ತು; ಅಮೆರಿಕಕ್ಕೆ ‘ಹಾರ್ಟ್ ಅಟ್ಯಾಕ್’ ಆಗೋ ಮುನ್ನ ಸರಿಮಾಡಿ: ರೇ ಡೇಲಿಯೋ
Rising US debts: ಹೂಡಿಕೆದಾರ ರೇ ಡೇಲಿಯೋ ಅವರು ಅಮೆರಿಕದ ಸಾಲದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಮೆರಿಕ ಟಿಕ್ ಆಗುತ್ತಿರುವ ಟೈಮ್ ಬಾಂಬ್ ಮೇಲೆ ಕೂತಿದೆ ಎಂದಿದ್ದಾರೆ. ದೇಹದ ಅಂಗಗಳ ಮೇಲೆ ನಿರ್ಮಾಣವಾಗುವ ಗೆಡ್ಡೆಗಳಿಗೆ ಸಾಲವನ್ನು ಹೋಲಿಕೆ ಮಾಡಿರುವ ರೇ ಡೇಲಿಯೋ, ಅಮೆರಿಕಕ್ಕೆ ‘ಹಾರ್ಟ್ ಅಟ್ಯಾಕ್’ ಅದೀತು ಎಂದು ಎಚ್ಚರಿಸಿದ್ದಾರೆ. ಅಮೆರಿಕದ ರಾಷ್ಟ್ರೀಯ ಸಾಲ 36 ಟ್ರಿಲಿಯನ್ ಡಾಲರ್ ದಾಟಿದೆ. ಕಳೆದ 20 ವರ್ಷದಲ್ಲಿ ಸಾಲ ಮೂರು ಪಟ್ಟು ಹೆಚ್ಚಾಗಿದೆ.

ವಾಷಿಂಗ್ಟನ್, ಮಾರ್ಚ್ 4: ಅಮೆರಿಕದ ಸಾಲ ವಿಪರೀತವಾಗಿ ಹೋಗಿದೆ. ಟೈಮ್ ಬಾಂಬ್ (ticking time bomb) ಮೇಲೆ ಅಮೆರಿಕ ಕೂತಿದೆ. ಅಮೆರಿಕದ ಸಾಲವು ಅದರ ಆರ್ಥಿಕತೆಯನ್ನು ಕುಂದಿಸಬಹುದು. ಮಾರುಕಟ್ಟೆಗಳನ್ನು ಅಪಾಯಕ್ಕೆ ಸಿಲುಕಿಸಬಹುದು. ಡಾಲರ್ ಮೌಲ್ಯ ಕುಸಿಯುವಂತೆ ಮಾಡಬಹುದು. ಈ ದೇಶದ ಹಣಕಾಸು ವ್ಯವಸ್ಥೆಗೆ ‘ಹಾರ್ಟ್ ಅಟ್ಯಾಕ್’ ಆಗುವ ಮುನ್ನ ಸಮಸ್ಯೆ ಸರಿಪಡಿಸಿ ಎಂದು ಹೂಡಿಕೆದಾರ ರೇ ಡೇಲಿಯೋ (Ray Dalio) ಒತ್ತಾಯಿಸಿದ್ದಾರೆ.
ಒಂದು ಅಂದಾಜು ಪ್ರಕಾರ ಅಮೆರಿಕ ಹೊಂದಿರುವ ಸಾಲ ಬರೋಬ್ಬರಿ 40 ಟ್ರಿಲಿಯನ್ ಡಾಲರ್ ಎನ್ನಲಾಗಿದೆ. ಅದರ ಜಿಡಿಪಿಗಿಂತ ಹೆಚ್ಚು ಸಾಲ ಹೊಂದಿರುವ ಅಮೆರಿಕ ಟೈಮ್ ಬಾಂಬ್ ಮೇಲೆ ಕೂತಿದೆ ಎಂಬುದು ಡೇಲಿಯೋ ಎಚ್ಚರಿಕೆ.
ಇದನ್ನೂ ಓದಿ: ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಜೆಫರೀಸ್ನ ಕ್ರಿಸ್ ವುಡ್ ಹೇಳುವುದಿದು…
ರೇ ಡೇಲಿಯೋ ಅವರು ಸಾಲವನ್ನು ಹಣಕಾಸು ವ್ಯವಸ್ಥೆಯಲ್ಲಿ ಸೇರ್ಪಡೆಯಾಗುತ್ತಿರುವ ಪ್ಲೇಕ್ಗೆ (Plaque) ಹೋಲಿಕೆ ಮಾಡಿದ್ದಾರೆ. ಪ್ಲೇಕ್ ಎಂದರೆ ವಿವಿಧ ಅಂಗಾಂಗಗಳಲ್ಲಿ ಶೇಖರಣೆಯಾಗುವ ಬ್ಯಾಕ್ಟಿರಿಯಾಯುಕ್ತ ಪದರ. ಇದರಿಂದ ಅಂಗಗಳ ಕಾರ್ಯನಿರ್ವಹಣೆಗೆ ಅಡ್ಡಿಯಾಗುವುದು ಮಾತ್ರವಲ್ಲ, ಪ್ರಾಣಾಪಾಯವೂ ಹೆಚ್ಚಿರುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಅಮೆರಿಕದ ಹಣಕಾಸು ವ್ಯವಸ್ಥೆಗೆ ಸಾಲದ ಪರಿಣಾಮ ಹೇಗಿರುತ್ತದೆ ಎಂದು ಡೇಲಿಯೋ ಅವರು ಪ್ಲೇಕ್ಗೆ ಹೋಲಿಕೆ ಮಾಡಿದ್ದಾರೆ.
ಅಮೆರಿಕದ ಸಾಲ ಹೇಗೆ ಹೆಚ್ಚುತ್ತಿದೆ ನೋಡಿ…
ಅಮೆರಿಕ ಒಂದು ಅಂದಾಜು ಪ್ರಕಾರ 36.2 ಟ್ರಿಲಿಯನ್ ಡಾಲರ್ನಷ್ಟು ರಾಷ್ಟ್ರೀಯ ಸಾಲ ಹೊಂದಿದೆ. ಕಳೆದ ಎರಡು ದಶಕದಲ್ಲಿ ಅದರ ಸಾಲ ಮೂರು ಪಟ್ಟು ಹೆಚ್ಚಳ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಅಮೆರಿಕ ಸರ್ಕಾರ 6.75 ಟ್ರಿಲಿಯನ್ ಡಾಲರ್ ವೆಚ್ಚ ಮಾಡಿದೆ. ಆದರೆ, ಆದಾಯ ಸಿಕ್ಕಿದ್ದು 4.92 ಟ್ರಿಲಿಯನ್ ಡಾಲರ್ನಷ್ಟು ಮಾತ್ರ. ಅಂದರೆ, 1.8 ಟ್ರಿಲಿಯನ್ ಡಾಲರ್ನಷ್ಟು ಕೊರತೆ ಬಂದಿತು.
ಇದನ್ನೂ ಓದಿ: ಆ ದೇವತೆ ಕಟ್ಟುತ್ತಾಳಾ? ಟ್ರಂಪ್ ಟ್ಯಾಕ್ಸ್ ಬಗ್ಗೆ ಪ್ರತಿಕ್ರಿಯಿಸಿದ ವಾರನ್ ಬಫೆಟ್; ಇದು ಯುದ್ಧ ಕಾಲದ ಕ್ರಮವಾ?
ಸಾಲದ ಹೊರೆ ತಗ್ಗಿಸಲು ಏನು ಮಾಡಬೇಕು?
ಅಮೆರಿಕ ಮುಂದಿನ ನಾಲ್ಕು ವರ್ಷದಲ್ಲಿ ತನ್ನ ವಿತ್ತೀಯ ಕೊರತೆಯನ್ನು ಶೇ. 6ರಿಂದ ಶೇ. 3ಕ್ಕೆ ಇಳಿಸಬೇಕು. ಇಲ್ಲದಿದ್ದರೆ ಸರ್ಕಾರಿ ಬಾಂಡ್ಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಬಡ್ಡಿದರವೂ ಹೆಚ್ಚುತ್ತದೆ. ಹಣಕಾಸು ಮಾರುಕಟ್ಟೆ ನಿಯಂತ್ರಣ ತಪ್ಪಿ ಹೋಗುತ್ತದೆ. ಹಣಕಾಸು ವ್ಯವಸ್ಥೆಯಲ್ಲಿನ ಈ ಆಘಾತವು ಎಲ್ಲಾ ಮಾರುಕಟ್ಟೆಗಳ ಮೇಲೂ ಪ್ರಭಾವ ಬೀರುತ್ತದೆ ಎಂದು ರೇ ಡೇಲಿಯೋ ಎಚ್ಚರಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:15 pm, Tue, 4 March 25