43 ಲಕ್ಷ ರೂ ಕೊಡ್ತೇವೆ, ಏ. 4ರೊಳಗೆ ಕೆಲಸ ಬಿಟ್ಟು ಹೋಗಿ: ಉದ್ಯೋಗಿಗಳಿಗೆ ಅಮೆರಿಕದ ಎಸ್ಇಸಿ ಆಫರ್
US SEC may fire employees: ಸರ್ಕಾರಿ ನೌಕರರ ಸಂಖ್ಯೆ ಇಳಿಸುವ ಪ್ರಯತ್ನ ಅಮೆರಿಕದ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿದೆ. ಷೇರು ಮಾರುಕಟ್ಟೆ ನಿಯಂತ್ರಕವಾದ ಎಸ್ಇಸಿಯಲ್ಲೂ ಈ ಪ್ರಕ್ರಿಯೆ ಚಾಲನೆಯಲ್ಲಿದೆ. ಸ್ವ ಇಚ್ಛೆಯಿಂದ ಕೆಲಸ ಬಿಟ್ಟರೆ, ಅಥವಾ ಬೇರೆ ಇಲಾಖೆಗೆ ವರ್ಗವಾದರೆ, ಅಥವಾ ತತ್ಕ್ಷಣವೇ ರಿಟೈರ್ ಆದರೆ 50,000 ಡಾಲರ್ ಕೊಡುವುದಾಗಿ ಆಫರ್ ಮಾಡಿದೆ.

ವಾಷಿಂಗ್ಟನ್, ಮಾರ್ಚ್4: ಅಮೆರಿಕದಲ್ಲಿ ಸರ್ಕಾರಿ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಕಾರ್ಯ ಭರಾಟೆಯಿಂದ ಜರುತ್ತಿದೆ. ವಿವಿಧ ಇಲಾಖೆಗಳಲ್ಲಿ ಲೇ ಆಫ್ ನಡೆಯುತ್ತಿದೆ. ಭಾರತದ ಸೆಬಿ ಇರುವಂತೆ ಅಮೆರಿಕದಲ್ಲಿ ಮಾರುಕಟ್ಟೆ ನಿಯಂತ್ರಣ ಪ್ರಾಧಿಕಾರವಾದ ಎಸ್ಇಸಿ ತನ್ನ ಕೆಲ ಆಯ್ದ ಉದ್ಯೋಗಿಗಳಿಗೆ ಕೆಲಸ ಬಿಡುವಂತೆ ಸೂಚಿಸಿದೆ. ಬ್ಲೂಮ್ಬರ್ಗ್ ವರದಿ ಪ್ರಕಾರ, 2025ರ ಏಪ್ರಿಲ್ 4ರೊಳಗೆ ರಾಜೀನಾಮೆ ನೀಡಿದರೆ ಅಥವಾ ನಿವೃತ್ತರಾದರೆ 50,000 ಡಾಲರ್ ಬಹುಮಾನ ಕೊಡುವುದಾಗಿ ಆಫರ್ ಕೊಡಲಾಗಿದೆಯಂತೆ. 50,000 ಡಾಲರ್ ಎಂದರೆ ಬಹುತೇಕ 43-44 ಲಕ್ಷ ರೂ ಆಗುತ್ತದೆ.
ಸೆಕ್ಯೂರಿಟೀಸ್ ಅಂಡ್ ಎಕ್ಸ್ಚೇಂಜ್ ಕಮಿಷನ್ (ಎಸ್ಇಸಿ) ಸಂಸ್ಥೆಯ ಸಿಒಒ ಕೆನ್ ಜಾನ್ಸನ್ ತಮ್ಮ ವಿಭಾಗದ ಎಲ್ಲಾ ಉದ್ಯೋಗಿಗಳಿಗೂ ಇಮೇಲ್ ಕಳುಹಿಸಿದ್ದು, ಅದರಲ್ಲಿ ಈ ಆಫರ್ ಮಾಡಲಾಗಿದೆ ಎಂದು ಬ್ಲೂಮ್ಬರ್ಗ್ ಸುದ್ದಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಈ ಆಫರ್ ಅನ್ನು ಸ್ವೀಕರಿಸಲು ಮಾರ್ಚ್ 21 ಕೊನೆಯ ದಿನವಾಗಿದೆ. ಈ ಆಫರ್ ಸ್ವೀಕರಿಸಿದವರು ಏಪ್ರಿಲ್ 4ರೊಳಗೆ ಕೆಲಸ ಬಿಡಬೇಕಾಗುತ್ತದೆ.
ಇದನ್ನೂ ಓದಿ: ಸಾಲ ವಿಪರೀತವಾಯ್ತು; ಅಮೆರಿಕಕ್ಕೆ ‘ಹಾರ್ಟ್ ಅಟ್ಯಾಕ್’ ಆಗೋ ಮುನ್ನ ಸರಿಮಾಡಿ: ರೇ ಡೇಲಿಯೋ
2024ರ ಜನವರಿಗೆ ಮುಂಚಿನಿಂದಲೂ ಸಿಇಸಿಯಲ್ಲಿ ಕೆಲಸ ಮಾಡುತ್ತಿದ್ದವರಿಗೆ ಈ ಅಫರ್ ಕೊಡಲಾಗಿದೆ. ಇಂಥವರು ಸ್ವಯಿಚ್ಛೆಯಿಂದ ರಾಜೀನಾಮೆ ನೀಡಬಹುದು. ಅಥವಾ ಬೇರೆ ಏಜೆನ್ಸಿಗೆ ವರ್ಗಾವಣೆ ಆಗಬಹುದು. ಅಥವಾ ಕೂಡಲೇ ನಿವೃತ್ತರಾಗಬಹುದು. ಹಾಗೆ ಮಾಡಿದರೆ ಆಫರ್ ಪ್ರಕಾರ ಆ ವ್ಯಕ್ತಿಗೆ 50,000 ಡಾಲರ್ ಹಣ ನೀಡಲಾಗುವುದು ಎನ್ನಲಾಗಿದೆ.
ವೆಚ್ಚ ತಗ್ಗಿಸಲು ಅಮೆರಿಕ ಸರ್ಕಾರ ಕ್ರಮ
ಅಮೆರಿಕದ ಆರ್ಥಿಕತೆ ಮಂದ ವೇಗದಲ್ಲಿ ಸಾಗುತ್ತಿದ್ದು, ಅದಕ್ಕೆ ಚೇತರಿಕೆ ಕೊಡಲು ಸರ್ಕಾರ ವಿವಿಧ ಕ್ರಮಗಳಿಗೆ ಮುಂದಾಗಿದೆ. ಅದರಲ್ಲಿ ಸರ್ಕಾರಿ ವೆಚ್ಚಗಳನ್ನು ತಗ್ಗಿಸುವುದೂ ಒಂದು. ಈ ನಿಟ್ಟಿನಲ್ಲಿ ಪ್ರತ್ಯೇಕ ಡೋಜೆ ವಿಭಾಗವನ್ನು ಆರಂಭಿಸಲಾಗಿದೆ. ಇದರ ಜೊತೆಗೆ ಸರ್ಕಾರಿ ನೌಕರರ ಸಂಖ್ಯೆಯನ್ನು ಗಣನೀಯವಾಗಿ ಇಳಿಸುವ ಪ್ರಯತ್ನಗಳಾಗುತ್ತಿವೆ.
ಇದನ್ನೂ ಓದಿ: ಆ ದೇವತೆ ಕಟ್ಟುತ್ತಾಳಾ? ಟ್ರಂಪ್ ಟ್ಯಾಕ್ಸ್ ಬಗ್ಗೆ ಪ್ರತಿಕ್ರಿಯಿಸಿದ ವಾರನ್ ಬಫೆಟ್; ಇದು ಯುದ್ಧ ಕಾಲದ ಕ್ರಮವಾ?
ಎಸ್ಇಸಿ ಸೇರಿದಂತೆ ವಿವಿಧ ಇಲಾಖೆಗಳು ತಮ್ಮ ನೌಕರರನ್ನು ವರ್ಕ್ ಫ್ರಂ ಹೋಂ ಬಿಟ್ಟು ಕಚೇರಿಗೆ ಬಂದು ಕೆಲಸ ಮಾಡುವಂತೆ ಸೂಚಿಸಿವೆ. ಕೆಲಸದಲ್ಲಿ ಇತ್ತೀಚಿನ ಸಾಧನೆಗಳನ್ನು ಪಟ್ಟಿ ಮಾಡಿ ವರದಿ ಸಲ್ಲಿಸುವಂತೆ ಉದ್ಯೋಗಿಗಳಿಗೆ ತಿಳಿಸಲಾಗಿದೆಯಂತೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:11 pm, Tue, 4 March 25