ರಾಜ್ಯಗಳ ಪೈಕಿ ಕರ್ನಾಟಕದ್ದು 5ನೇ ಅತಿಹೆಚ್ಚು ಸಾಲ; ಆದರೆ, ಜಿಡಿಪಿಗೆ ಹೋಲಿಸಿದರೆ ಇತರ ರಾಜ್ಯಗಳಿಗಿಂತ ಉತ್ತಮ
Debts of Indian states in 2024: ವಿವಿಧ ರಾಜ್ಯಗಳು ಹೊಂದಿರುವ ಸಾಲದ ಪ್ರಮಾನ ಐದು ವರ್ಷದಲ್ಲಿ ಶೇ. 74ರಷ್ಟು ಹೆಚ್ಚಳ ಆಗಿದೆ. 2019ರಲ್ಲಿ ಇದ್ದ 47.9 ಲಕ್ಷ ಕೋಟಿ ರೂ ಒಟ್ಟು ಸಾಲ 2024ರಲ್ಲಿ 83.3 ಲಕ್ಷ ಕೋಟಿ ರೂಗೆ ಏರಿದೆ. ತಮಿಳುನಾಡು 8.3 ಲಕ್ಷ ಕೋಟಿ ರೂ ಸಾಲ ಹೊಂದಿದೆ. ಅತಿಹೆಚ್ಚು ಸಾಲ ಹೊಂದಿದ ರಾಜ್ಯವೆನಿಸಿದೆ. ಈ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಕರ್ನಾಟಕದ ಸಾಲ 6 ಲಕ್ಷ ಕೋಟಿ ರೂನಷ್ಟಿದೆ.

ನವದೆಹಲಿ, ಮಾರ್ಚ್ 4: ಭಾರತದಲ್ಲಿ ಕೇಂದ್ರವಲ್ಲದೆ, ವಿವಿಧ ರಾಜ್ಯ ಸರ್ಕಾರಗಳು ಮಾಡುತ್ತಿರುವ ಸಾಲದಲ್ಲಿ ದಿನೇ ದಿನೇ ಏರಿಕೆ ಆಗುತ್ತಿದೆ. ಇತ್ತೀಚೆಗೆ ಆರ್ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಕಳೆದ ಐದು ವರ್ಷದಲ್ಲಿ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಡಿರುವ ಸಾಲದಲ್ಲಿ ಶೇ. 74ರಷ್ಟು ಹೆಚ್ಚಳ ಆಗಿದೆ. 2019ರಲ್ಲಿ ಒಟ್ಟು ಸಾಲ 47.9 ಲಕ್ಷ ಕೋಟಿ ರೂ ಇತ್ತು. 2024ರಲ್ಲಿ ಇದು 83.3 ಲಕ್ಷ ಕೋಟಿ ರೂಗೆ ಏರಿಕೆ ಆಗಿದೆ. ಹೆಚ್ಚೂಕಡಿಮೆ ಒಂದು ಟ್ರಿಲಿಯನ್ ಡಾಲರ್ನಷ್ಟು ಸಾಲವನ್ನು ರಾಜ್ಯ ಸರ್ಕಾರಗಳು ಹೊಂದಿವೆ.
ಅತಿಹೆಚ್ಚು ಸಾಲ ಹೊಂದಿರುವ ರಾಜ್ಯಗಳ ಟಾಪ್-5 ಪಟ್ಟಿಯಲ್ಲಿ ಕರ್ನಾಟಕವೂ ಇದೆ. ಆದರೆ, ನಮ್ಮ ರಾಜ್ಯದ ಜಿಡಿಪಿ ಉತ್ತಮವಾಗಿದ್ದು, ಜಿಡಿಪಿ ಪ್ರಮಾಣಕ್ಕೆ ಹೋಲಿಸಿದರೆ ಕರ್ನಾಟಕದ ಸಾಲ ಗಂಭೀರ ಎನಿಸುವುದಿಲ್ಲ. ಏಳೆಂಟು ಕೋಟಿ ಜನಸಂಖ್ಯೆಯ ಕರ್ನಾಟಕ ಆರು ಲಕ್ಷ ಕೋಟಿ ರೂ ಸಾಲ ಹೊಂದಿದೆ.
ಇದನ್ನೂ ಓದಿ: ಭಾರತದಲ್ಲಿ ಷೇರು ಮಾರುಕಟ್ಟೆ ಕುಸಿತಕ್ಕೆ ಏನು ಕಾರಣ? ಜೆಫರೀಸ್ನ ಕ್ರಿಸ್ ವುಡ್ ಹೇಳುವುದಿದು…
ತಮಿಳುನಾಡು ಅತಿಹೆಚ್ಚು ಸಾಲ; ಇಲ್ಲಿದೆ ಟಾಪ್-10 ಪಟ್ಟಿ
- ತಮಿಳುನಾಡು: 8.3 ಲಕ್ಷ ಕೋಟಿ ರೂ
- ಉತ್ತರಪ್ರದೇಶ: 7.7 ಲಕ್ಷ ಕೋಟಿ ರೂ
- ಮಹಾರಾಷ್ಟ್ರ: 7.2 ಲಕ್ಷ ಕೋಟಿ ರೂ
- ಪಶ್ಚಿಮ ಬಂಗಾಳ: 6.6 ಲಕ್ಷ ಕೋಟಿ ರೂ
- ಕರ್ನಾಟಕ: 6 ಲಕ್ಷ ಕೋಟಿ ರೂ
- ರಾಜಸ್ಥಾನ: 5.6 ಲಕ್ಷ ಕೋಟಿ ರೂ
- ಆಂಧ್ರಪ್ರದೇಶ: 4.9 ಲಕ್ಷ ಕೋಟಿ ರೂ
- ಗುಜರಾತ್: 4.7 ಲಕ್ಷ ಕೋಟಿ ರೂ
- ಕೇರಳ: 4.3 ಲಕ್ಷ ಕೋಟಿ ರೂ
- ಮಧ್ಯಪ್ರದೇಶ: 4.2 ಲಕ್ಷ ಕೋಟಿ ರೂ
ಕಳೆದ ಐದು ವರ್ಷದಲ್ಲಿ ಅತಿಹೆಚ್ಚು ಸಾಲ ಹೆಚ್ಚಿಸಿಕೊಂಡ ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಬಳಿಕ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮಧ್ಯಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಾಲ ಐದು ವರ್ಷದಲ್ಲಿ ಎರಡು ಪಟ್ಟು ಹೆಚ್ಚಾಗಿವೆ. ಉತ್ತರಪ್ರದೇಶದ ಸಾಲ ಶೇ. 35 ಮಾತ್ರವೇ ಏರಿಕೆ ಆಗಿದೆ. ಅತಿ ಕಡಿಮೆ ಸಾಲ ಹೆಚ್ಚಳ ಕಂಡ ರಾಜ್ಯ ಅದು.
ಇದನ್ನೂ ಓದಿ: ಆ ದೇವತೆ ಕಟ್ಟುತ್ತಾಳಾ? ಟ್ರಂಪ್ ಟ್ಯಾಕ್ಸ್ ಬಗ್ಗೆ ಪ್ರತಿಕ್ರಿಯಿಸಿದ ವಾರನ್ ಬಫೆಟ್; ಇದು ಯುದ್ಧ ಕಾಲದ ಕ್ರಮವಾ?
ಕರ್ನಾಟಕದ ಜಿಡಿಪಿ ಶಕ್ತಿಗೆ ಹೋಲಿಸಿದರೆ ಸಾಲದ ಭಾರ ಕಡಿಮೆ
ಒಬ್ಬ ಶ್ರೀಮಂತ ವ್ಯಕ್ತಿ ಒಂದು ಕೋಟಿ ರೂ ಸಾಲ ಹೊಂದಿರುವುದಕ್ಕೂ ಒಬ್ಬ ಬಡವ ಒಂದು ಕೋಟಿ ರೂ ಸಾಲ ಹೊಂದಿರುವುದಕ್ಕೂ ವ್ಯತ್ಯಾಸ ಇದೆ. ಹಾಗೆಯೇ, ಸರ್ಕಾರಗಳ ವಿಚಾರದಲ್ಲೂ ಆ ಅಂಶ ಪ್ರಮುಖವಾಗಿ ಕಾಣುತ್ತದೆ. ರಾಜ್ಯಗಳು ಅವುಗಳ ಜಿಡಿಪಿಗೆ ಅನುಗುಣವಾಗಿ ಸಾಲದ ಶಕ್ತಿ ಹೊಂದಿರುತ್ತವೆ. ಈ ರೀತಿಯಲ್ಲಿ ಜಿಡಿಪಿಗೆ ಹೋಲಿಸಿದಾಗ ಅತಿ ಕಡಿಮೆ ಸಾಲ ಹೊಂದಿದ ರಾಜ್ಯಗಳಲ್ಲಿ ಕರ್ನಾಟಕ ಸೇರುತ್ತದೆ.
ಮಹಾರಾಷ್ಟ್ರದ ಜಿಡಿಪಿ ಸಾಲ ಅನುಪಾತ ಶೇ. 18ರಷ್ಟಿದೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರದ್ದು ಮೊದಲ ಸ್ಥಾನ. ನಂತರದ ಸ್ಥಾನ ಕರ್ನಾಟಕದ್ದು. ಇದರ ಜಿಡಿಪಿ ಸಾಲ ಅನುಪಾತ ಶೇ. 24 ಮಾತ್ರವೇ ಇದೆ. ಆದರೆ, ಪಶ್ಚಿಮ ಬಂಗಾಳದ ಅನುಪಾತ ಶೇ. 39ರಷ್ಟಿದೆ. ತನ್ನ ಶಕ್ತಿಗಿಂತ ಹೆಚ್ಚು ಸಾಲ ಪಡೆದ ರಾಜ್ಯ ಪಶ್ಚಿಮ ಬಂಗಾಳ.
ಇದನ್ನೂ ಓದಿ: ಹೂಡಿಕೆದಾರರಿಗೆ ‘ಚಿನ್ನ’ದ ಮೊಟ್ಟೆಯ ಗುಟ್ಟು ಬಿಚ್ಚಿಟ್ಟ ಮುಖ್ಯ ಆರ್ಥಿಕ ಸಲಹೆಗಾರ ಅನಂತನಾಗೇಶ್ವರನ್
ಪ್ರಮುಖ ರಾಜ್ಯಗಳ ಜಿಡಿಪಿ ಪಟ್ಟಿ
- ಮಹಾರಾಷ್ಟ್ರ: 40.44 ಲಕ್ಷ ಕೋಟಿ ರು.
- ತಮಿಳುನಾಡು: 27.22 ಲಕ್ಷ ಕೋಟಿ ರೂ
- ಉತ್ತರಪ್ರದೇಶ: 25.48 ಲಕ್ಷ ಕೋಟಿ ರು.
- ಕರ್ನಾಟಕ: 25.01 ಲಕ್ಷ ಕೋಟಿ ರೂ
- ಪಶ್ಚಿಮ ಬಂಗಾಳ: 17.01 ಲಕ್ಷ ಕೋಟಿ ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ