ಆರ್ ಅಂಡ್ ಡಿ ಮೇಲೆ ವೆಚ್ಚ; 2014ರಲ್ಲಿ 60,196 ಕೋಟಿ, 2024ರಲ್ಲಿ 1.27 ಲಕ್ಷ ಕೋಟಿ ರೂ ವೆಚ್ಚ
R & D spending in India: ಕಳೆದ ಹತ್ತು ವರ್ಷದಲ್ಲಿ ಭಾರತದಲ್ಲಿ ರಿಸರ್ಚ್ ಮತ್ತು ಡೆವಲಪ್ಮೆಂಟ್ಗೆ ಮಾಡಲಾಗುತ್ತಿರುವ ವೆಚ್ಚ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. 2013-14ರಲ್ಲಿ ಆರ್ ಅಂಡ್ ಡಿಗೆ 60,196 ಕೋಟಿ ವ್ಯಯಿಸಲಾಗಿತ್ತು. 2023-24ರಲ್ಲಿ 1.27 ಲಕ್ಷ ಕೋಟಿ ರೂ ವ್ಯಯವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಶೈಕ್ಷಣಿಕ ಮತ್ತು ಔದ್ಯಮಿಕ ರಂಗಗಳಿಂದ ಬೌದ್ಧಿಕ ಸಂಪತ್ತು ಹೆಚ್ಚುತ್ತಿರುವುದನ್ನು ಸಚಿವರು ಉಲ್ಲೇಖಿಸಿದ್ದಾರೆ.

ನವದೆಹಲಿ, ಮಾರ್ಚ್ 6: ಭಾರತದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಮಾಡಲಾಗುತ್ತಿರುವ ವೆಚ್ಚ ಕಳೆದ ಒಂದು ದಶಕದಲ್ಲಿ ಎರಡು ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ. ದಿಶಾ (DISHA- Developing Innovations, Successful Harnessing, and Adoption) ಯೋಜನೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಚಿವರು, ಆರ್ ಅಂಡ್ ಡಿಗೆ ವೆಚ್ಚ ಮಾಡುತ್ತಿರುವುದು ದೇಶದ ಆರ್ಥಿಕತೆಗೆ ಹೇಗೆ ಸಹಾಯಕವಾಗುತ್ತಿದೆ ಎಂಬುದನ್ನು ವಿವರಿಸಿದರು. ಹಾಗೆಯೇ, ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಸಂಶೋಧನೆಗೆ ಹೇಗೆ ಮಹತ್ವ ಕೊಡಲಾಗುತ್ತಿದೆ ಎಂದು ತಿಳಿಸಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಳೆದ ಒಂದು ದಶಕದಲ್ಲಿ ಭಾರತದ ಆರ್ ಅಂಡ್ ಡಿ ವೆಚ್ಚ ಎರಡು ಪಟ್ಟು ಹೆಚ್ಚಾಗಿದೆ. 2013-14ರಲ್ಲಿ ಆರ್ ಅಂಡ್ ಡಿಗೆ 60,196 ಕೋಟಿ ರೂ ವೆಚ್ಚ ಮಾಡಲಾಗಿತ್ತು. ಈಗ ಅದು 1,27,381 ಕೋಟಿ ರೂಗೆ ಏರಿದೆ. ಆರ್ ಅಂಡ್ ಡಿಗೆ ಒತ್ತು ಕೊಟ್ಟಿರುವುದರಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಯೋಟೆಕ್ನಾಲಜಿ, ಕ್ವಾಂಟಂ ಕಂಪ್ಯೂಟಿಂಗ್ ಕ್ಷೇತ್ರಗಳಲ್ಲಿ ದೇಶೀಯವಾಗಿ ಆವಿಷ್ಕಾರಗಳಿಗೆ ಉತ್ತೇಜನ ಸಿಗುತ್ತಿದೆ. ಇವು ಭಾರತದ ಭವಿಷ್ಯದ ಆರ್ಥಿಕತೆಯನ್ನು ರೂಪಿಸುತ್ತಿವೆ’ ಎಂದು ಭೂ ವಿಜ್ಞಾನ, ಅಣು ಶಕ್ತಿ, ಬಾಹ್ಯಾಕಾಶ ಖಾತೆ ಸಚಿವರೂ ಆದ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದ ನಾಗಪುರದಲ್ಲಿ ಪತಂಜಲಿಯಿಂದ ಬೃಹತ್ ಆಹಾರ ಘಟಕ; 1,500 ಕೋಟಿ ರೂ ಹೂಡಿಕೆ
ಸರ್ಕಾರದಿಂದ ತೆಗೆದುಕೊಳ್ಳಲಾಗುತ್ತಿರುವ ಹಲುವು ಉಪಕ್ರಮಗಳು ದೇಶದಲ್ಲಿ ವೈಜ್ಞಾನಿಕ ಪ್ರಗತಿಗೆ ಪುಷ್ಟಿ ನೀಡಲಾಗುತ್ತಿರುವುದನ್ನು ವಿವರಿಸಿದ ಸಚಿವರು, ಅದಕ್ಕೆ ಉದಾಹರಣೆಯಾಗಿ ಶೈಕ್ಷಣಿಕ ಮತ್ತು ಔದ್ಯಮಿಕ ರಂಗದಲ್ಲಿ ಪ್ರಬಲಗೊಳ್ಳುತ್ತಿರುವ ಇಂಟೆಲೆಕ್ಚುವಲ್ ಪ್ರಾಪರ್ಟಿ ಇಕೋಸಿಸ್ಟಂ ಅನ್ನು ಉಲ್ಲೇಖಿಸಿದ್ದಾರೆ.
ಸರಿಯಾದ ದಿಶೆಯಲ್ಲಿ ದಿಶಾ
ದೇಶದಲ್ಲಿ ಜ್ಞಾನ ಆಧಾರಿತ ಆರ್ಥಿಕತೆಯ ನಿರ್ಮಾಣದಲ್ಲಿ DISHA ಯೋಜನೆಯೂ ಒಂದು ಹೆಜ್ಜೆ. ಇದು ಸಂಶೋಧನಾ ಆಧಾರಿತ ಪರಿಹಾರಗಳು ಉದ್ಯಮಗಳ ಪರಿವರ್ತನೆಗೆ ಎಡೆ ಮಾಡಿಕೊಡುತ್ತಿವೆ. ಜಾಗತಿಕ ಇನ್ನೋವೇಶನ್ಗಳಲ್ಲಿ ಭಾರತ ಮುಂಚೂಣಿಯಲ್ಲಿರಲು ಈ ಯೋಜನೆ ಸಹಕಾರಿಯಾಗುತ್ತಿದೆ ಎಂದು ಡಾ. ಜಿತೇಂದ್ರ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಅನುಸಂಧಾನ್ ನ್ಯಾಷನಲ್ ರಿಸರ್ಚ್ ಫೌಂಡೇಶನ್ಗೆ ಪೂರಕವಾಗಿ DISHA ಕಾರ್ಯನಿರ್ವಹಿಸುತ್ತದೆ. ವಿಜ್ಞಾನ, ಮಾನವತೆ ಮತ್ತು ಸಮಾಜ ವಿಜ್ಞಾನಗಳನ್ನು ಮೇಳೈಸುವ ಏಕೀಕೃತ ಸಂಶೋಧನಾ ವ್ಯವಸ್ಥೆಯನ್ನು ಇದು ರಚಿಸುತ್ತದೆ. ವಿವಿಧ ವಲಯಗಳ ಮಧ್ಯೆ ಸಹಭಾಗಿತ್ವ ಹೊಂದಲು ಸಂಶೋಧಕರಿಗೆ ಸಾಧ್ಯವಾಗುತ್ತದೆ. ಇದು ಸಂಶೋಧನೆಯ ವ್ಯಾಪ್ತಿ ಹೆಚ್ಚಲು ಎಡೆ ಮಾಡಿಕೊಡುತ್ತದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಷೇರು ಮಾರುಕಟ್ಟೆ, ಗೂಳಿ, ಕರಡಿ, ಮೂರ್ಖ, ಜಾಣ… ಫೈನಾನ್ಷಿಯಲ್ ಫ್ರೀಡಂ ಸಮಿಟ್ನಲ್ಲಿ ಸತ್ಯ ಬಿಚ್ಚಿಟ್ಟ ವಿಜಯ್ ಕೆದಿಯಾ
ಬಾಹ್ಯಾಕಾಶ ಕ್ಷೇತ್ರದಲ್ಲಿ ಕಲರವ
ಆರ್ ಅಂಡ್ ಡಿ ಫಲಶೃತಿಗೆ ಬಾಹ್ಯಾಕಾಶ ಕ್ಷೇತ್ರ ಒಳ್ಳೆಯ ನಿದರ್ಶನವಾಗಿದೆ. ಈ ಕ್ಷೇತ್ರದಲ್ಲಿ ನಾವೀನ್ಯತೆ ಅಥವಾ ಆವಿಷ್ಕಾರಗಳು ಗಣನೀಯವಾಗಿ ಹೆಚ್ಚಾಗಿವೆ. ಸಾಕಷ್ಟು ಸ್ಟಾರ್ಟಪ್ಗಳು ಶುರುವಾಗಿದ್ದು, ಸೆಟಿಲೈಟ್ ಅಭಿವೃದ್ಧಿ, ಉಡಾವಣೆ ಸೇವೆ, ಬಾಹ್ಯಾಕಾಶ ಆಧಾರಿತ ಆ್ಯಪ್ಗಳ ಸೃಷ್ಟಿ ಇವೆಲ್ಲವೂ ಹುಲುಸಾಗಿ ನಡೆಯುತ್ತಿವೆ. ಪರಮಾಣು ಶಕ್ತಿ ಕ್ಷೇತ್ರವನ್ನು ಖಾಸಗಿಯವರಿಗೂ ತೆರೆಯಲಾಗಿರುವುದು ದೇಶದ ಇಂಧನ ಭದ್ರತೆ ಮತ್ತು ಸುಸ್ಥಿರತೆಗೆ ಎಡೆ ಮಾಡಿಕೊಡಬಹುದು ಎಂದು ನಿರೀಕ್ಷಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ








