ಭಾರತವೇ ಬೆಸ್ಟ್; ಸಾಲುಸಾಲಾಗಿ ತವರಿಗೆ ಬರುತ್ತಿರುವ ಭಾರತೀಯ ಸ್ಟಾರ್ಟಪ್ಗಳು
Indian startups returning to India: ವಿದೇಶಗಳಲ್ಲಿ ಬ್ಯುಸಿನೆಸ್ ನೊಂದಣಿ ಮಾಡಿಸಿ ಅಲ್ಲಿಂದಲೇ ವ್ಯವಹಾರ ನಡೆಸುತ್ತಿದ್ದ ಹಲವು ಭಾರತೀಯ ಸ್ಟಾರ್ಟಪ್ಗಳು ಭಾರತಕ್ಕೆ ವರ್ಗವಾಗತೊಡಗಿವೆ. ವರದಿ ಪ್ರಕಾರ ಸುಮಾರು 500 ಭಾರತೀಯ ಸ್ಟಾರ್ಟಪ್ಗಳು ವಿದೇಶಗಳಲ್ಲಿ ಮುಖ್ಯ ಕಚೇರಿ ಹೊಂದಿವೆ. ಈ ಪೈಕಿ ಸದ್ಯ 70ಕ್ಕೂ ಹೆಚ್ಚು ಸ್ಟಾರ್ಟಪ್ಗಳು ಭಾರತಕ್ಕೆ ಬರತೊಡಗಿವೆ.

ನವದೆಹಲಿ, ಮಾರ್ಚ್ 9: ಬೇರೆ ಬೇರೆ ಕಾರಣಕ್ಕೆ ಬೇರೆ ದೇಶಗಳಲ್ಲಿ ಮುಖ್ಯ ಕಚೇರಿಗಳನ್ನು ಬದಲಾಯಿಸಿಕೊಂಡಿದ್ದ ಭಾರತೀಯ ಸ್ಟಾರ್ಟಪ್ಗಳು (Indian startups) ಈಗ ಸಾಲುಸಾಲಾಗಿ ತವರಿಗೆ ಮರಳುತ್ತಿವೆ. ಭಾರತದ ಪ್ರಾಥಮಿಕ ಮಾರುಕಟ್ಟೆ ಬಹಳ ಪ್ರಬಲವಾಗಿರುವುದು, ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿ ಸಾಗುತ್ತಿರುವುದು ಇವೇ ಮುಂತಾದ ಕಾರಣಗಳಿಗೆ ಭಾರತೀಯ ಸ್ಟಾರ್ಟಪ್ಗಳು ಮರಳಿ ಬರುತ್ತಿವೆ ಎನ್ನಲಾಗಿದೆ. ಝೆಪ್ಟೋದ ಮುಖ್ಯಕಚೇರಿ ಸಿಂಗಾಪುರದಲ್ಲಿ ಇದ್ದದ್ದು ಮುಂಬೈಗೆ ಬಂದು ಈಗ ಬೆಂಗಳೂರಿಗೆ ವರ್ಗಾವಣೆ ಆಗಿದೆ. ರೇಜರ್ಪೇ, ಉಡಾನ್, ಪೈನ್ ಲ್ಯಾಬ್ಸ್, ಮೀಶೋ ಮೊದಲಾದ ಕಂಪನಿಗಳೂ ಕೂಡ ತಮ್ಮ ಮುಖ್ಯಕಚೇರಿಗಳನ್ನು ಭಾರತಕ್ಕೆ ಬದಲಾಯಿಸಿಕೊಳ್ಳುತ್ತಿವೆ.
ಭಾರತಕ್ಕೆ ವರ್ಗಾವಣೆ ಆಗಲು ಕಾರಣಗಳೇನು?
ಕಂಪನಿಯೊಂದು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ನೆಲೆ ಬದಲಾಯಿಸಬೇಕೆಂದರೆ ಸಾಕಷ್ಟು ಕಾನೂನು ನಿಯಮಗಳನ್ನು ಪಾಲಿಸಬೇಕು. ಸರ್ಕಾರದ ವಿವಿಧ ಇಲಾಖೆಗಳ ಅನುಮೋದನೆ ಪಡೆಯಬೇಕು. ದೊಡ್ಡ ಮೊತ್ತದ ತೆರಿಗೆಗಳನ್ನೂ ಕಟ್ಟಬೇಕು. ಫೋನ್ ಪೇ ಸಂಸ್ಥೆ ಸಿಂಗಾಪುರದಿಂದ ಭಾರತಕ್ಕೆ ತಮ್ಮ ಕಂಪನಿಯ ನೊಂದಣಿ ಬದಲಾಯಿಸಿಕೊಳ್ಳಲು 8,000 ಕೋಟಿ ರೂ ತೆರಿಗೆ ಕಟ್ಟಿತ್ತು. ಇಷ್ಟಾದರೂ ಈ ಕಂಪನಿಗಳು ಸಿಂಗಾಪುರ ಮೊದಲಾದ ದೇಶಗಳಲ್ಲಿದ್ದ ತಮ್ಮ ಮುಖ್ಯ ಕಚೇರಿಗಳನ್ನು ಭಾರತಕ್ಕೆ ವರ್ಗ ಮಾಡಲು ಪ್ರಬಲ ಕಾರಣಗಳಂತೂ ಇವೆ. ಈ ಮೊದಲೇ ತಿಳಿಸಿದರೆ ಪ್ರೈಮರಿ ಮಾರ್ಕೆಟ್ ಸುದೃಢ ಮತ್ತು ಮೆಚ್ಯೂರ್ ಆಗಿದೆ. ಬಹುತೇಕ ಎಲ್ಲಾ ಐಪಿಒಗಳೂ ಕೂಡ ನಿರೀಕ್ಷೆಮೀರಿದ ರೀತಿಯಲ್ಲಿ ಬಂಡವಾಳ ಸಂಗ್ರಹಣೆಗೆ ಸ್ಪಂದನೆ ಪಡೆಯುತ್ತಿವೆ. ಈ ಅಂಶವು ವಿದೇಶಗಳಲ್ಲಿದ್ದ ಭಾರತೀಯ ಸ್ಟಾರ್ಟಪ್ಗಳನ್ನು ಆಕರ್ಷಿಸಿದೆ.
ಅಮೆರಿಕದಲ್ಲಿ ಒಂದು ಐಟಿ ಕಂಪನಿ ಐಪಿಒಗೆ ಬರಬೇಕಾದರೆ ಕನಿಷ್ಠ 500 ಮಿಲಿಯನ್ ಡಾಲರ್ ವಾರ್ಷಿಕ ಆದಾಯ ಹೊಂದಿರಬೇಕು. ಆದರೆ, ಭಾರತದಲ್ಲಿ ಷೇರು ಮಾರುಕಟ್ಟೆಗೆ ಅಡಿ ಇಡಲು 50ರಿಂದ 60 ಮಿಲಿಯನ್ ಡಾಲರ್ ಆದಾಯ ಇದ್ದರೆ ಸಾಕು. ಅಷ್ಟೇ ಅಲ್ಲ, ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ವ್ಯಾಲ್ಯುಯೇಶನ್ ಕೂಡ ಸಿಗುತ್ತದೆ.
ಇದನ್ನೂ ಓದಿ: ಮಹಾಕುಂಭದಲ್ಲಿ ದಾಖಲೆಯ 12 ಕೋಟಿ ರೂ ಖಾದಿ ಉತ್ಪನ್ನಗಳ ಮಾರಾಟ
ಈ ಸ್ಟಾರ್ಟಪ್ಗಳು ಭಾರತಕ್ಕೆ ಕಚೇರಿ ಬದಲಾಯಿಸಲು ಮತ್ತೊಂದು ಕಾರಣ?
ಭಾರತಕ್ಕೆ ಹೆಡ್ಕ್ವಾರ್ಟರ್ಸ್ ಬದಲಾಯಿಸುತ್ತಿರುವ ಸ್ಟಾರ್ಟಪ್ಗಳ ಬಹುತೇಕ ಬ್ಯುಸಿನೆಸ್ ಭಾರತದಲ್ಲೇ ಇರುವುದು. ಭಾರತದ ಹಣಕಾಸು ವ್ಯವಸ್ಥೆಯ ಚೌಕಟ್ಟಿನಲ್ಲೇ ಅವರು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ, ಭಾರತದಲ್ಲಿ ಮುಖ್ಯ ಕಚೇರಿ ಬದಲಾಯಿಸುವುದರಿಂದ ಭಾರತೀಯ ಕಾನೂನುಗಳಿಗೆ ಹೊಂದಿಕೊಳ್ಳುವುದು ಸುಲಭವಾಗಿರುತ್ತದೆ.
ಮತ್ತೊಂದು ಪ್ರಬಲ ಕಾರಣ, ಸುಲಭ ಬಂಡವಾಳ ಲಭ್ಯತೆ. ಹಿಂದೆಲ್ಲಾ ಅಮೆರಿಕ, ಸಿಂಗಾಪುರದಲ್ಲಿ ನೆಲೆ ಹೊಂದಿದ ಸ್ಟಾರ್ಟಪ್ಗಳಿಗೆ ಜಾಗತಿಕ ಹೂಡಿಕೆದಾರರ ಲಭ್ಯತೆ ಸುಲಭವಾಗಿ ಆಗುತ್ತಿತ್ತು. ಭಾರತೀಯ ಕಂಪನಿಗಳಿಗೆ ಈ ಬಂಡವಾಳ ಆಕರ್ಷಿಸುವುದು ತುಸು ಕಷ್ಟವೆನಿಸುತ್ತಿತ್ತು. ಆದರೆ, ಈಗ ಭಾರತದಲ್ಲೇ ಹಲವು ವೆಂಚರ್ ಕ್ಯಾಪಿಟಲ್ ಫಂಡ್ಗಳು ತಲೆ ಎತ್ತಿವೆ. ಭಾರತದ ಸ್ಟಾರ್ಟಪ್ಗಳಿಗೆ ಈಗ ಬಂಡವಾಳ ಸಿಗುವುದು ಹೆಚ್ಚು ಸುಲಭವಾಗಿದೆ.
ಹೀಗಾಗಿ, ಐಪಿಒ ಆಸೆಗಾಗಿ ಮಾತ್ರವಲ್ಲ, ಭಾರತ ಬಹಳ ವೇಗದಲ್ಲಿ ಬೆಳೆಯುತ್ತಿರುವ ಮಾರುಕಟ್ಟೆ ಮತ್ತು ಅರ್ಥವ್ಯವಸ್ಥೆಯಾದ್ದರಿಂದ ಸ್ಟಾರ್ಟಪ್ಗಳು ಭಾರತದ ಬೆಳವಣಿಗೆ ಜೊತೆಜೊತೆಗೆ ಬೆಳೆಯುವ ಇರಾದೆಯಲ್ಲಿ ಮರಳಿ ಬರುತ್ತಿವೆ. ‘ಭಾರತದಲ್ಲಿ ಶುರು ಮಾಡಿದ್ದು, ಭಾರತದಲ್ಲೇ ನಮ್ಮ ಗಮನ ಇರುವುದು. ದಶಕಗಳಾದರೂ ಭಾರತದಲ್ಲೇ ನಾವು ಉಳಿಯುವುದು’ ಎಂದು ಫೋನ್ ಪೇ ಭಾರತಕ್ಕೆ ಕಚೇರಿ ಬದಲಾಯಿಸಿದ ವೇಳೆ ಅದರ ಸಿಇಒ ಸಮೀರ್ ನಿಗಮ್ ಹೇಳಿದ್ದು.
ಇದನ್ನೂ ಓದಿ: ದುಬೈಗೆ ಹೋಗಿ ಅಧಿಕೃತವಾಗಿ ಎಷ್ಟು ಚಿನ್ನ ತರಲು ಸಾಧ್ಯ? ಅಲ್ಲಿಗೂ ಇಲ್ಲಿಗೂ ಬೆಲೆ ವ್ಯತ್ಯಾಸ ಎಷ್ಟು?
ಸದ್ಯ 500ಕ್ಕೂ ಹೆಚ್ಚು ಭಾರತೀಯ ಕಂಪನಿಗಳು ವಿದೇಶಗಳಲ್ಲಿ ನೊಂದಾಯಿಸಿಕೊಂಡಿವೆ. ಈ ಪೈಕಿ ಅತಿಹೆಚ್ಚು ಇರುವುದು ಸಿಂಗಾಪುರ್ ಮತ್ತು ಅಮೆರಿಕದಲ್ಲಿ. ಈ 500 ಸ್ಟಾರ್ಟಪ್ಗಳಲ್ಲಿ ಮೀಶೋ ಸೇರಿದಂತೆ 70ಕ್ಕೂ ಹೆಚ್ಚು ಸ್ಟಾರ್ಟಪ್ಗಳು ಭಾರತಕ್ಕೆ ಮರಳುವ ಹಾದಿಯಲ್ಲಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ