ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ಕೊಡುವ ಅಲರ್ಟ್ ಸಿಸ್ಟಂ; ರಿಲಾಯನ್ಸ್ ಜಿಯೋ ಜೊತೆ ಹೆದ್ದಾರಿ ಪ್ರಾಧಿಕಾರ ಒಪ್ಪಂದ

NHAI plans for highway safety system: ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂಬರಬಹುದಾದ ರಸ್ತೆ ಅಪಾಯಗಳ ಬಗ್ಗೆ ಅಲರ್ಟ್ ಮೆಸೇಜ್​ಗಳು ಅಥವಾ ಕರೆಗಳು ಬರಬಹುದು. ಇಂಥದ್ದೊಂದು ಅಲರ್ಟ್ ಸಿಸ್ಟಂ ಜಾರಿಗೆ ರಿಲಾಯನ್ಸ್ ಜಿಯೋ ಜೊತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಪ್ಪಂದ ಮಾಡಿಕೊಂಡಿದೆ. ಸದ್ಯ ಜಿಯೋ ಬಳಕೆದಾರರಿಗೆ ಈ ಸಿಸ್ಟಂ ಇರುತ್ತದೆ. ಮುಂದಿನ ದಿನಗಳಲ್ಲಿ ಇತರ ಟೆಲಿಕಾಂ ಕಂಪನಿಗಳೊಂದಿಗೂ ಪ್ರಾಧಿಕಾರ ಒಪ್ಪಂದ ಮಾಡಿಕೊಳ್ಳಬಹುದು.

ಹೆದ್ದಾರಿಯಲ್ಲಿ ಪ್ರಯಾಣಿಕರಿಗೆ ಅಪಾಯದ ಮುನ್ಸೂಚನೆ ಕೊಡುವ ಅಲರ್ಟ್ ಸಿಸ್ಟಂ; ರಿಲಾಯನ್ಸ್ ಜಿಯೋ ಜೊತೆ ಹೆದ್ದಾರಿ ಪ್ರಾಧಿಕಾರ ಒಪ್ಪಂದ
ಹೆದ್ದಾರಿ

Updated on: Dec 02, 2025 | 6:57 PM

ನವದೆಹಲಿ, ಡಿಸೆಂಬರ್ 2: ದೇಶಾದ್ಯಂತ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಎದುರಾಗಬಹುದಾದ ವಿವಿಧ ಅಪಾಯಗಳ ಮುನ್ಸೂಚನೆ ನೀಡುವಂತಹ ಅಲರ್ಟ್ ಸಿಸ್ಟಂ (Highway alert system) ಅನ್ನು ಜಾರಿಗೆ ತರಲು ರಿಲಾಯನ್ಸ್ ಜಿಯೋ (Reliance Jio) ಸಂಸ್ಥೆಯೊಂದಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI- National Highways Authority of India) ಎಂಒಯು ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆ ಪ್ರಕಾರ, ಮೊಬೈಲ್ ಮೂಲಕ ಈ ಅಲರ್ಟ್ ಮೆಸೇಜ್​ಗಳು ಪ್ರಯಾಣಿಕರಿಗೆ ಮುಂಚಿತವಾಗಿ ಹೋಗುತ್ತವೆ.

ಹೆದ್ದಾರಿಗಳಲ್ಲಿ ಹೋಗುವಾಗ ಮುಂದೆ ಆಕ್ಸಿಡೆಂಟ್ ಝೋನ್ ಇದ್ದರೆ, ಅಥವಾ ಬೀಡಾಡಿ ದನಗಳ ಸಂಚಾರ ಹೆಚ್ಚಾಗಿದ್ದರೆ, ದಟ್ಟ ಮಂಜು ಕವಿದ ಪ್ರದೇಶವಿದ್ದರೆ, ಅಥವಾ ತುರ್ತು ತಿರುವು ಇದ್ದರೆ ಅಂಥ ಸಂದರ್ಭದಲ್ಲಿ ಪ್ರಯಾಣಿಕರಿಗೆ ಮುಂಚಿತವಾಗಿ ಅಲರ್ಟ್ ಮೆಸೇಜ್​ಗಳನ್ನು ಕಳುಹಿಸುವ ಉದ್ದೇಶ ಈ ಯೋಜನೆಯಲ್ಲಿದೆ.

ಇದನ್ನೂ ಓದಿ: 22 ವರ್ಷದ ಕನ್ನಡಿಗ ಆದರ್ಶ್ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್

ಮುನ್ನೆಚ್ಚರಿಕೆಯ ಸಂದೇಶಗಳನ್ನು ವಿವಿಧ ರೀತಿಯಲ್ಲಿ ಕಳುಹಿಸಲಾಗಬಹುದು. ಎಸ್ಸೆಮ್ಮೆಸ್ ಮೂಲಕ ಹೋಗಬಹುದು, ವಾಟ್ಸಾಪ್ ಮೂಲಕ ಹೋಗಬಹುದು. ಅಥವಾ ಹೈ ಪ್ರಯಾರಿಟಿ ಕಾಲ್​ಗಳ ಮೂಲಕ ಅಲರ್ಟ್ ಕಳುಹಿಸಲಾಗಬಹುದು. ಈ ಮೆಸೇಜ್​ಗಳನ್ನು ನೋಡಿ ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸಲು ಸಾಧ್ಯವಾಗಬಹುದು.

ರಾಜಮಾರ್ಗ ಯಾತ್ರಾ ಮೊಬೈಲ್ ಆ್ಯಪ್, ಎಮರ್ಜೆನ್ಸಿ ಸಹಾಯವಾಣಿ 1022 ಸೇರಿದಂತೆ ಹೆದ್ದಾರಿ ಪ್ರಾಧಿಕಾರದ ವಿವಿಧ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಕ್ರಮೇಣವಾಗಿ ಈ ಅಲರ್ಟ್ ಸಿಸ್ಟಂ ಅನ್ನು ಜೋಡಿಸಲಾಗುವ ಉದ್ದೇಶ ಇದೆ.

ಇದನ್ನೂ ಓದಿ: ಗಿಫ್ಟ್ ಡೀಡ್ ಮಾಡಿದ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಾ? ಕೋರ್ಟ್ ನೀಡಿದ ಮಹತ್ವದ ತೀರ್ಪಿದು

ಸದ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಎಲ್ಲಾ ಜಿಯೊ ಬಳಕೆದಾರರ ಮೊಬೈಲ್​ಗಳಲ್ಲಿ ಈ ಆಟೊಮೇಟೆಡ್ ಸಿಸ್ಟಂ ಕೆಲಸ ಮಾಡುತ್ತದೆ. ದೇಶಾದ್ಯಂತ ಇರುವ ಜಿಯೋದ 4ಜಿ ಮತ್ತು 5ಜಿ ನೆಟ್ವರ್ಕ್​ಗಳು ಈ ಅಡ್ವಾನ್ಸ್ಡ್ ಸಿಸ್ಟಂ ಜಾರಿಗೆ ಸಹಾಯಕವಾಗಿವೆ. ಇದೇ ವೇಳೆ, ಎನ್​ಎಚ್​ಎಐ ಇತರ ಟೆಲಿಕಾಂ ಕಂಪನಿಗಳೊಂದಿಗೂ ಇದೇ ರೀತಿ ಒಪ್ಪಂದಕ್ಕೆ ಮುಂದಾಗಲಿದೆ. ಏರ್ಟೆಲ್ ಹಾಗೂ ಇತರ ಟೆಲಿಕಾಂ ಬಳಕೆದಾರರಿಗೂ ಈ ಸೇವೆ ಮುಂದಿನ ದಿನಗಳಲ್ಲಿ ಲಭ್ಯವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ