22 ವರ್ಷದ ಕನ್ನಡಿಗ ಆದರ್ಶ್ ಹಿರೇಮಠ ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್
Mercor co-founders are youngest self-made billionaires: ಮೆರ್ಕರ್ ಎನ್ನುವ ಎಐ ಸರ್ವಿಸ್ ಕಂಪನಿಯ ಸಹ-ಸಂಸ್ಥಾಪಕ ಆದರ್ಶ್ ಹಿರೇಮಠ ಅವರು ವಿಶ್ವದ ಅತೀ ಕಿರಿಯ ವಯಸ್ಸಿನ ಸೆಲ್ಫ್ ಮೇಡ್ ಬಿಲಿಯನೇರ್ ಎನಿಸಿದ್ದಾರೆ. ಈ ಕಂಪನಿಯ ಮೂವರು ಸಂಸ್ಥಾಪಕರಲ್ಲಿ 23 ವರ್ಷದ ಹಿರೇಮಠರೂ ಒಬ್ಬರು. ಎಲ್ಲಾ ಮೂವರು ಸಂಸ್ಥಾಪಕರು ಸಮಾನ ವಯಸ್ಕರು. 22ರ ವಯಸ್ಸಿನಲ್ಲಿ ಈ ಮೂವರೂ ಕೂಡ ಬಿಲಿಯನೇರ್ ಪಟ್ಟ ಗಿಟ್ಟಿಸಿ ಹೊಸ ದಾಖಲೆ ಬರೆದಿದ್ದಾರೆ.

ಕ್ಯಾಲಿಫೋರ್ನಿಯಾ, ಡಿಸೆಂಬರ್ 2: ಅಮೆರಿಕದ ಎಐ ಸರ್ವಿಸ್ ಸ್ಟಾರ್ಟಪ್ ಆಗಿರುವ ಮರ್ಕರ್ನ ಮೂವರು ಸಂಸ್ಥಾಪಕರು ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಸ್ವನಿರ್ಮಿತ ಶತಕೋಟ್ಯಾಧಿಪತಿಗಳೆನಿಸಿದ್ದಾರೆ (Self-made billionaires). ಶಾಲಾ ಕಾಲೇಜು ದಿನಗಳಿದ ಗೆಳೆಯರಾಗಿರುವ, ಸಮಾನ ವಯಸ್ಕರೂ, ಸಮಾನ ಮನಸ್ಕರೂ ಆಗಿರುವ ಆದರ್ಶ್ ಹಿರೇಮಠ (Adarsh Hiremath), ಸೂರ್ಯ ಮಿಧ (Surya Midha) ಮತ್ತು ಬ್ರೆಂಡಾನ್ ಫೂಡಿ (Brendon Foody) ಅವರು ವಿಶ್ವದ ಅತೀ ಕಿರಿಯ ಸೆಲ್ಫ್ ಮೇಡ್ ಬಿಲಿಯನೇರ್ ಎನ್ನುವ ದಾಖಲೆಗೆ ಬಾಜನರಾಗಿದ್ದಾರೆ. 22 ವರ್ಷದ ವಯಸ್ಸಿನಲ್ಲಿ ಈ ಮೂವರು ಶತಕೋಟ್ಯಾಧಿಪತಿಗಳಾಗಿದ್ದಾರೆ. ಈ ಮೂವರಲ್ಲಿ ಆದರ್ಶ್ ಹಿರೇಮಠ್ ಕರ್ನಾಟಕ ಮೂಲದ ಕುಟುಬದವರು. ಸೂರ್ಯ ಮಿಧಾ ಕೂಡ ಭಾರತ ಮೂಲದ ಕುಟುಂಬದವರು. ಫೂಡಿ ಮಾತ್ರ ಸ್ಥಳೀಯ ಅಮೆರಿಕನ್.
ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಅವರು 2008ರಲ್ಲಿ 23ರ ವಯಸ್ಸಿನಲ್ಲಿ ಬಿಲಿಯನೇರ್ ಎನಿಸಿದ್ದರು. ಈವರೆಗೆ ಅದೇ ದಾಖಲೆಯಾಗಿತ್ತು. ಈಗ ಆದರ್ಶ್ ಹಿರೇಮಠ್ ಹಾಗೂ ಅವರ ಸ್ನೇಹಿತರು ಆ ದಾಖಲೆ ಮುರಿದಿದ್ದಾರೆ.
ಇದನ್ನೂ ಓದಿ: ಗಿಫ್ಟ್ ಡೀಡ್ ಮಾಡಿದ ಆಸ್ತಿಯನ್ನು ಹಿಂಪಡೆಯಲು ಸಾಧ್ಯವಾ? ಕೋರ್ಟ್ ನೀಡಿದ ಮಹತ್ವದ ತೀರ್ಪಿದು
ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿರುವ ಬಹಳ ಪ್ರತಿಷ್ಠಿತ ಬೇ ಏರಿಯಾದಲ್ಲಿ ಬೆಳೆದು ಬಂದವರು ಈ ಮೂವರು ಗೆಳೆಯರು. ಶಾಲೆಯಲ್ಲಿ ಓದುವಾಗ ನಡೆದ ಡಿಬೇಟ್ ಕಾರ್ಯಕ್ರಮದಲ್ಲಿ ಈ ಮೂವರ ಸಮಾಗಮವಾಗಿತ್ತು. ಅಲ್ಲಿಂದ ಮುಂದೆ ಇವರ ಬೆಸುಗೆ ಗಟ್ಟಿಯಾಗುತ್ತಾ ಹೋಯಿತು.

ಮೆರ್ಕರ್ ಸ್ಟಾರ್ಟಪ್ನ ಮೂವರು ಸಂಸ್ಥಾಪಕರು
ಉದಯೋನ್ಮುಖ ಪ್ರತಿಭೆಗಳನ್ನು ಉತ್ತೇಜಿಸಲೆಂದು ನೀಡಲಾಗುವ ಥಿಯೆಲ್ ಫೆಲೋಶಿಪ್ಗೆ ಈ ಮೂವರು ಸ್ನೇಹಿತರನ್ನು ಆಯ್ಕೆ ಮಾಡಲಾಯಿತು. ಆ ಫೆಲೋಶಿಪ್ ಸಿಕ್ಕಬಳಿಕ ಆದರ್ಶ್ ಹಿರೇಮಠ್ ಹಾಗೂ ಅವರ ಇಬ್ಬರು ಸ್ನೇಹಿತರು ಕಾಲೇಜು ಓದಿಗೆ ತಿಲಾಂಜಲಿ ಹಾಡಿ, ಫೆಲೋಶಿಪ್ನಿಂದ ಸಿಕ್ಕ ಗ್ರ್ಯಾಂಟ್ ಬಳಸಿ ಸ್ಟಾರ್ಟಪ್ ಆರಂಭಿಸಿದರು.
ಇದನ್ನೂ ಓದಿ: ಹಣದ ಹಿಂದೆ ಬೀಳದಿರಿ; ನೀವೀ ಕೆಲಸ ಮಾಡಿದರೆ ಕಾಂಚಾಣ ತಾನಾಗೇ ಬರುತ್ತೆ: ಇಲಾನ್ ಮಸ್ಕ್ ಮಸ್ತ್ ಟಿಪ್ಸ್
2023ರಲ್ಲಿ ಮರ್ಕರ್ ಸ್ಥಾಪನೆ
ಮೂವರು ಸ್ನೇಹಿತರು ಮೊದಲಿಗೆ ಅಮೆರಿಕನ್ ಕಂಪನಿಗಳಿಗೆ ಭಾರತದಿಂದ ಫ್ರೀಲ್ಯಾನ್ಸ್ ಕೋಡರ್ಗಳನ್ನು ರೆಫರ್ ಮಾಡುವ ಪ್ಲಾಟ್ಫಾರ್ಮ್ ಸೃಷ್ಟಿಸುತ್ತಾರೆ. ಭಾರತಲ್ಲಿರುವ ಉದ್ಯೋಗಿಗಳು ಹಾಗೂ ಅಮೆರಿಕನ್ ಕಂಪನಿಗಳ ನಡುವೆ ಕೊಂಡಿಯಾಗಿ ಎಐ ಚಾಲಿತ ಅಪ್ಲಿಕೇಶನ್ ಆಗುತ್ತದೆ. ಬಳಿಕ ಅವರ ಕಾರ್ಯಕ್ಷೇತ್ರ ವಿಸ್ತರಣೆಯಾಗುತ್ತಾ ಹೋಗುತ್ತದೆ. ಡಾಟಾ ಲೇಬಲಿಂಗ್ ಸಿಸ್ಟಂಗಳನ್ನು ಅಭಿವೃದ್ಧಿಪಡಿಸಲು ತೊಡಗುತ್ತದೆ. ಹಾಗೆಯೇ, ದೊಡ್ಡದೊಡ್ಡ ಎಐ ಲ್ಯಾಬ್ಗಳಿಗೆ ಮಾಡಲ್ಗಳನ್ನು ಟ್ರೈನ್ ಮಾಡಲು ಮಾನವ ಸಂಪನ್ಮೂಲವನ್ನು ಒದಗಿಸುವ ಸೇವೆ ನೀಡುತ್ತದೆ ಮೆರ್ಕರ್ ಕಂಪನಿ.

ಮೆರ್ಕರ್ ಸ್ಟಾರ್ಟಪ್ನ ಮೂವರು ಸಂಸ್ಥಾಪಕರು
ಆದರ್ಶ್ ಹಿರೇಮಠ್ ಅವರು ಈ ಸ್ಟಾರ್ಟಪ್ನಲ್ಲಿ ಸಿಟಿಒ ಆಗಿದ್ದಾರೆ. ಬ್ರೆಂಡಾನ್ ಫುಡ್ ಸಿಇಒ ಆಗಿದ್ದರೆ, ಸೂರ್ಯ ಮೀಧಾ ಅವರು ಬೋರ್ಡ್ ಛೇರ್ಮನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




