
ನವದೆಹಲಿ, ಅಕ್ಟೋಬರ್ 1: ಭಾರತದ ಷೇರು ಮಾರುಕಟ್ಟೆ ಕುಸಿತದ ಜಾರುಬಂಡಿಯಲ್ಲಿ ಸಿಲುಕಿದೆ. ಸೆನ್ಸೆಕ್ಸ್, ನಿಫ್ಟಿ ಇತ್ಯಾದಿ ಪ್ರಮುಖ ಸೂಚ್ಯಂಕಗಳು ಸತತ ಎಂಟನೇ ವಾರ ಕೆಂಪುಬಣ್ಣದಲ್ಲಿ ಮಿಂದಿವೆ. ಇವತ್ತು ಗುರುವಾರ ನಿಫ್ಟಿ 198 ಅಂಕ ಕುಸಿದು 22,421 ಮಟ್ಟಕ್ಕೆ ಇಳಿದಿದೆ. ಸೆನ್ಸೆಕ್ಸ್ 570 ಅಂಕಗಳಷ್ಟು ನಷ್ಟ ಕಂಡು 71,909 ಮಟ್ಟಕ್ಕೆ ಇಳಿದಿದೆ. ಐಟಿ, ಟೆಲಿಕಾಂ ಸೇರಿ ಕೆಲವೇ ಸೆಕ್ಟರ್ಗಳು ಇವತ್ತು ಹಸಿರು ಬಣ್ಣ ಕಂಡಿವೆ. ಉಳಿದಂತೆ ಹೆಚ್ಚಿನ ಸೂಚ್ಯಂಕಗಳು ರಕ್ತದೋಕುಳಿ ಕಂಡಿವೆ.
ನಾಳೆ, ಅಕ್ಟೋಬರ್ 2, ಗಾಂಧಿ ಜಯಂತಿಯಾದ್ದರಿಂದ ಮಾರುಕಟ್ಟೆಗೆ ರಜೆ ಇರುತ್ತದೆ. ಇವತ್ತು ಈ ವಾರದ ಕೊನೆಯ ವರ್ಕಿಂಗ್ ಡೇ. ಮಾರುಕಟ್ಟೆ ಸತತ ಎಂಟು ವಾರ ಕುಸಿತ ಕಂಡಂತಾಗಿದೆ. 2001ರ ನಂತರ ಇಷ್ಟು ದೀರ್ಘಾವಧಿ ಮಾರುಕಟ್ಟೆ ಕುಸಿದಿರುವುದು ಇದೇ ಮೊದಲು. ನಿಫ್ಟಿ50 ಇತಿಹಾಸ ತೆಗೆದರೆ, 1992ರ ನಂತರ ಈ ಸತತ ಎಂಟು ವಾರಗಳ ನಿರಂತರ ಕುಸಿತದ ಘಟನೆ ಸಂಭವಿಸಿರುವುದು ಆರು ಬಾರಿ. 2001ರಲ್ಲಿ ಸತತ 9 ವಾರ ನಿಫ್ಟಿ50 ನಷ್ಟ ಕಂಡಿದ್ದು ದಾಖಲೆಯಾಗಿ ಉಳಿದಿದೆ.
ಸತತ ಎಂಟು ವಾರ ಕುಸಿತ ಕಂಡಿರುವ ಆರು ಸಂದರ್ಭಗಳಲ್ಲಿ ನಿಫ್ಟಿ ತತ್ಕ್ಷಣವೇ ಪುಟಿದೆದ್ದಿರುವುದುಂಟು. ನಷ್ಟದ ಅವಧಿ ಮುಗಿದ ಒಂದು ತಿಂಗಳಲ್ಲಿ ಶೇ. 11ರಷ್ಟು ಸರಾಸರಿ ರಿಟರ್ನ್ ಗಳಿಸಿದೆ. ಒಂದು ವರ್ಷದಲ್ಲಿ ಸರಾಸರಿ ಶೇ. 39ರಷ್ಟು ರಿಟರ್ನ್ ಸಿಕ್ಕಿದೆ.
ಎಫ್ಐಐಗಳ ನಿರ್ಗಮನ: ವಿದೇಶೀ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಭಾರತದ ಈಕ್ವಿಟಿ ಮಾರುಕಟ್ಟೆಗೆ ಮಗ್ಗುಲಮುಳ್ಳಾಗಿ ಪರಿಣಮಿಸಿದ್ದಾರೆ. ಈಕ್ವಿಟಿಗಳಿಂದ ಎಫ್ಐಐಗಳು ನಿರಂತರವಾಗಿ ಹೊರಬೀಳುವುದು ಮುಂದುವರಿದಿದೆ. ಸೆಪ್ಟೆಂಬರ್ 30, ಒಂದೇ ದಿನದಂದು ಎಫ್ಐಐಗಳು 10,148 ಕೋಟಿ ರೂ ಹೂಡಿಕೆ ಹೊರತೆಗೆದುಕೊಂಡಿದ್ದಾರೆ. ಸೆಪ್ಟೆಂಬರ್ನಲ್ಲಿ ಒಟ್ಟಾರೆ ಅವರ 44,013 ಕೋಟಿ ರೂ ಹೂಡಿಕೆಗಳು ಹೊರಹೋಗಿವೆ. ಇದು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲೊಂದೆನಿಸಿದೆ.
ಅಮೆರಿಕದ ಬಾಂಡ್ ಯೀಲ್ಡ್: ಅಮೆರಿಕದ ಟ್ರೆಷರಿ ಬಾಂಡ್ಗಳ ಯೀಲ್ಡ್ ಬಹಳ ಅಧಿಕಗೊಂಡಿರುವುದು ಭಾರತದ ಈಕ್ವಿಟಿ ಮಾರುಕಟ್ಟೆಗೆ ಹಿನ್ನಡೆ ತಂದಿದೆ. ಯೀಲ್ಡ್ ಅಧಿಕ ಇರುವ ಕಾರಣ ಡಾಲರ್ ಆಸ್ತಿಗಳಲ್ಲಿ ಹೂಡಿಕೆ ಮಾಡಲು ಎಫ್ಐಐಗಳು ಉತ್ಸುಕವಾಗಿವೆ.
ಕಚ್ಚಾ ತೈಲ ಬೆಲೆ: ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ಸರಿದಿಲ್ಲ. ಕಚ್ಚಾ ತೈಲ ಬೆಲೆ 100 ಡಾಲರ್ ಮೇಲ್ಪಟ್ಟೇ ಇದೆ. ಭಾರತಕ್ಕೆ ಆಮದು ವೆಚ್ಚ ಹೆಚ್ಚುವುದು ಮತ್ತು ಹಣದುಬ್ಬರ ಹೆಚ್ಚಾಗಲಿರುವುದು ಆರ್ಥಿಕತೆಗೆ ತುಸು ಹಿನ್ನಡೆ ತರುತ್ತದೆ. ಈ ಅಂಶವು ಹೂಡಿಕೆದಾರರನ್ನು ಅಧೈರ್ಯಗೊಳಿಸಿರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:56 pm, Thu, 1 October 26