Velentine’s Day Special: ತೆಲುಗಿನ ಮಹೇಶ್ ಬಾಬು ನಟನೆಯ ಭರತ್ ಆನೆ ನೇನು ಸಿನಿಮಾ ನೀವು ನೋಡಿರಬಹುದು. ಅದರಲ್ಲಿ ಮಹೇಶ್ ಬಾಬು ಸಿಎಂ ಪಾತ್ರ ಮಾಡಿದ್ದಾರೆ. ರಸ್ತೆಯಲ್ಲಿ ನಾಯಕಿಯನ್ನು ಕಂಡು ಅವರಿಗೆ ಪ್ರೀತಿ ಹುಟ್ಟುತ್ತದೆ. ಆಕೆ ಇರುವ ಹಾಸ್ಟೆಲ್ನ ರೂಮ್ಗೆ ಫೋನ್ ಮಾಡುತ್ತಾರೆ. ತಾನು ಸಿಎಂ ಭರತ್ ಎಂದು ಹೇಳಿದಾಗ ವಸುಮತಿ ಹೆಸರಿನ ನಾಯಕಿ ಪಾತ್ರ ನಂಬುದಿಲ್ಲ. ಒಂದು ಹಂತದಲ್ಲಿ ಮುಖ್ಯಮಂತ್ರಿಯನ್ನೇ ಆಕೆ ಮತ್ತು ಸ್ನೇಹಿತರು ಬಯ್ಯುತ್ತಾರೆ. ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ರಿಯಲ್ ಲೈಫ್ ಪ್ರೇಮಕಥೆಯಲ್ಲಿ (Nita Ambani and Mukesh Ambani love story) ಮೇಲಿನ ಸಿನಿಮಾ ದೃಶ್ಯದ ಛಾಯೆ ಕಾಣುತ್ತದೆ. ಅಲ್ಲಿ ಸಿನಿಮಾದಲ್ಲಿ ನಾಯಕಿಗೆ ಫೋನ್ ಮಾಡಿದ್ದು ಖುದ್ದು ನಾಯಕನೇ. ಇಲ್ಲಿ ನೀತಾಗೆ ಫೋನ್ ಮಾಡಿದ್ದು ಮುಕೇಶ್ ಅಂಬಾನಿ ಅಪ್ಪ ಧೀರೂಭಾಯ್ ಅಂಬಾನಿ. ಧೀರೂಭಾಯ್ (Dhirubhai Ambani) ಫೋನ್ ಮಾಡಿದಾಗ ನೀತಾ ನಂಬುವುದಿಲ್ಲ. ಕರೆ ಕಟ್ ಮಾಡುತ್ತಾರೆ, ಬಯ್ಯುತ್ತಾರೆ. ಇದು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪ್ರೇಮಕಥೆಗೆ ಪೀಠಿಕೆ.
ಅಂದಹಾಗೆ, ಧೀರೂಭಾಯ್ ಅಂಬಾನಿ ಅವರು ನೀತಾಗೆ ಫೋನ್ ಮಾಡಲು ಕಾರಣ ಇತ್ತು. ನೀತಾ ಮೂಲತಃ ಟೀಚರ್ ಕೆಲಸ ಮಾಡುತ್ತಿದ್ದವರು. ಜೊತೆಗೆ ನೃತ್ಯಾಭ್ಯಾಸ ಮಾಡುತ್ತಿದ್ದರು. ಒಮ್ಮೆ ಕಾರ್ಯಕ್ರಮವೊಂದರಲ್ಲಿ ಅವರ ನೃತ್ಯ ಪ್ರದರ್ಶನ ನಡೆದಿತ್ತು. ಸಭಿಕರಲ್ಲಿ ಧೀರೂಭಾಯ್ ಅಂಬಾನಿ ಇದ್ದರು. ಆಗ ಭಾರತದ ದೊಡ್ಡ ಕೈಗಾರಿಕೋದ್ಯಮಿ ಎನಿಸಿದ್ದವರು ಧೀರೂಭಾಯ್. ನೀತಾ ಅವರನ್ನು ಕಂಡೊಡನೆ ಅವರಿಗೆ ಈಕೆ ತಮ್ಮ ಮನೆಯ ಸೊಸೆಯಾಗಬೇಕು ಎನ್ನುವ ಆಸೆ ಆಯಿತು. ಅಂತೆಯೇ ಆಕೆಯ ನಂಬರ್ ಪಡೆದು ತಾವೇ ಫೋನ್ ಮಾಡಿದ್ದರು. ಕೊನೆಗೆ ತಮ್ಮ ಮನೆಗೆ ಬರಬೇಕೆಂದು ನೀತಾಗೆ ಆಹ್ವಾನ ಕೊಟ್ಟರು.
ಅಂಬಾನಿ ಮನೆಗೆ ನೀತಾ ಮೊದಲ ಬಾರಿಗೆ ಹೋದಾಗ ಅವರನ್ನು ಸ್ವಾಗತಿಸಿದ್ದು ಮುಕೇಶ್ ಅಂಬಾನಿಯೇ. ಇವರಿಗೂ ಮೊದಲ ನೋಟದಲ್ಲಿ ನೀತಾ ಇಷ್ಟವಾಗಿ ಹೋಗಿದ್ದರು. ಆದರೆ, ಒಬ್ಬರೊಬ್ಬರ ಮನಸು ಅರಿತುಕೊಳ್ಳಬೇಕಿತ್ತು. ಡೇಟಿಂಗ್ ರೀತಿ ಇಬ್ಬರೂ ಕೆಲ ದಿನ ಮುಂಬೈ ಸುತ್ತಿದರು.
ಇದನ್ನೂ ಓದಿ: ಗೂಗಲ್ ಸಿಇಒ ಸುಂದರ್ ಪಿಚೈ ಬೆಳಗ್ಗೆ ಎದ್ದು ಮಾಡೋ ಮೊದಲ ಕೆಲಸ ಇದು…
ಕುಬೇರರಾಗಿದ್ದ ಮುಕೇಶ್ ಅಂಬಾನಿ ಮತ್ತು ಸಾಧಾರಣ ಮಧ್ಯಮವರ್ಗದ ನೀತಾ ಅಂಬಾನಿ ನಡುವಿನ ಈ ಬಾಂಧವ್ಯ ಗಟ್ಟಿಯಾಗತೊಡಗಿತು. ಗಲ್ಲಿಯಲ್ಲಿ ಪಾನಿಪುರಿ ತಿನ್ನುವುದರಿಂದ ಹಿಡಿದು ಅಂಬಾನಿಗೆ ಮುಂಬೈನ ಮಧ್ಯಮವರ್ಗದ ಜೀವನ ತೋರಿಸಿಕೊಟ್ಟರು ನೀತಾ. ಮದುವೆಯಾದರೆ ಈಕೆಯನ್ನೇ ಎಂದು ತೀರ್ಮಾನಿಸಿದರು ಅಂಬಾನಿ. ಒಂದು ದಿನ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿದ್ದಾಗ, ‘ನೀ ನನ್ನ ಕೈಹಿಡಿಯುವೆಯಾ?’ ಎಂದು ನೀತಾಗೆ ಅಂಬಾನಿ ಪ್ರೊಪೋಸ್ ಮಾಡಿಯೇ ಬಿಟ್ಟರು.
ಲಾಂಗ್ ಡ್ರೈವ್ ವೇಳೆ ಪ್ರೊಪೋಸ್ ಮಾಡಿದ ಮುಕೇಶ್ ಅಂಬಾನಿ, ತನಗೆ ಈಗಲೇ ಈ ಕಾರಿನಲ್ಲೇ ಉತ್ತರಬೇಕು ಎಂದು ನೀತಾಗೆ ತಿಳಿಸಿದರು. ಈ ದಿಢೀರ್ ಪ್ರಶ್ನೆಗೆ ನೀತಾ ಕಕ್ಕಾಬಿಕ್ಕಿಯಾದರೂ ಅವರಿಗೂ ಅಂಬಾನಿ ಇಷ್ಟವಾಗಿದ್ದರು. ತನಗೂ ಮದುವೆಯಾಗಲು ಇಷ್ಟ ಇದೆ. ಆದರೆ, ಒಂದು ಷರತ್ತು ಇದೆ ಎಂಬುದು ನೀತಾ ವರಸೆ ಇತ್ತು. ಮದುವೆ ಆದ ಬಳಿಕವೂ ತಾನು ಕೆಲಸ ಮಾಡುತ್ತೇನೆ ಎಂಬುದು ನೀತಾ ಒಡ್ಡಿದ ಏಕೈಕ ಕಂಡೀಷನ್. ಇದಕ್ಕೆ ಮುಕೇಶ್ ಕೂಡ ಒಪ್ಪಿದರು. ಅವರಿಬ್ಬರ ಮದುವೆಯಾಗಿದ್ದು 1985ರಲ್ಲಿ.
ನೀತಾ ಅವರು ಮುಕೇಶ್ರನ್ನು ವರಿಸುವ ಮುನ್ನ ಶಾಲಾ ಶಿಕ್ಷಕಿಯಾಗಿದ್ದರು. ಮದುವೆ ಬಳಿಕವೂ ಅವರು ಟೀಚರ್ ಕೆಲಸ ಸ್ವಲ್ಪ ಕಾಲ ಮುಂದುವರಿಸಿದ್ದು ಹೌದು. ಕುತೂಹಲ ಎಂದರೆ ಮುಕೇಶ್ ಅಂಬಾನಿ ಅವರಿಗೂ ಒಂದು ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಆಸೆ ಹೊಂದಿದ್ದರಂತೆ. ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗುವ ಅಥವಾ ಬ್ಯಾಂಕರ್ ಆಗುವ ಆಸೆ ಇಟ್ಟುಕೊಂಡಿದ್ದರಂತೆ. ಅಪ್ಪ ದೊಡ್ಡ ಉದ್ಯಮಿಯಾದ್ದರಿಂದ ಮತ್ತು ಹಿರಿಯ ಮಗನಾದ್ದರಿಂದ ಅನಿವಾರ್ಯವಾಗಿ ಉದ್ಯಮಿ ಆಗಬೇಕಾಯಿತು ಅಂಬಾನಿ.
ಇದನ್ನೂ ಓದಿ: ಪ್ರೇಮಿಗಳು ಸಿಹಿಮುತ್ತು ನೀಡಲೆಂದೇ ನಿರ್ಮಿಸಿರುವ ಮೆಕ್ಸಿಕೋದ ಕಿಸ್ ಸ್ಟ್ರೀಟ್
ತಾನು ಕಂಡಿದ್ದ ಶಿಕ್ಷಕ ವೃತ್ತಿಯ ಕನಸನ್ನು ಅಂಬಾನಿ ತನ್ನ ಪತ್ನಿ ಕೂಡ ನೆರವೇರಿಸಿಕೊಂಡರು. ಧೀರೂಭಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ಅನ್ನು ನೀತಾ ನಿರ್ವಹಿಸುತ್ತಾರೆ. ರಿಲಾಯನ್ಸ್ ಫೌಂಡೇಶನ್ ಅನ್ನೂ ಕಟ್ಟಿ ಹಲವು ಸಾಮಾಜಿಕ ಕೈಂಕರ್ಯಗಳನ್ನು ನೀತಾ ಕೈಗೊಳ್ಳುತ್ತಾರೆ. ಹೆಚ್ಚೂಕಡಿಮೆ ನಾಲ್ಕು ದಶಕಗಳ ಅವರ ದಾಂಪತ್ಯ ಪ್ರೀತಿ, ಪ್ರೇಮ, ನಂಬುಗೆಯಿಂದ ಶ್ರೀಮಂತವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ