ಮ್ಯೂಚುವಲ್ ಫಂಡ್ಗಳು (Mutual Funds) ಒಂದು ವರ್ಷದಲ್ಲಿ ಅಷ್ಟು ಲಾಭ ತಂದಿದೆ, ಇಷ್ಟು ಲಾಭ ತಂದಿದೆ ಎಂಬ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಅಬ್ಬಾ, ಮ್ಯೂಚುವಲ್ ಫಂಡ್ಗಳೆಲ್ಲವೂ ಭರ್ಜರಿ ಲಾಭಮೂಲಗಳಾಗಬಹುದು ಎಂದು ಭಾವಿಸಿ ಕಣ್ಮುಚ್ಚಿ ಹೂಡಿಕೆ ಮಾಡಲು ಹೋಗುವವರು ಹೆಚ್ಚು. ವಾಸ್ತವದಲ್ಲಿ, ಎಲ್ಲಾ ಮ್ಯುಚುವಲ್ ಫಂಡ್ಗಳು ದೊಡ್ಡ ಲಾಭ ಮಾಡುವುದಿಲ್ಲ. ಬಹುಪಾಲು ಮ್ಯೂಚುವಲ್ ಫಂಡ್ಗಳು ತೀರಾ ಕಡಿಮೆ ಲಾಭ ಅಥವಾ ನಷ್ಟ ತರುವುದುಂಟು. ಒಂದು ಸಮೀಕ್ಷೆ ಪ್ರಕಾರ, ಶೇ. 26.67ರಷ್ಟು ಮ್ಯೂಚುವಲ್ ಫಂಡ್ಗಳು ಮಾತ್ರ 5 ವರ್ಷಗಳು ಬೆಂಚ್ಮಾರ್ಕ್ ಇಂಡೆಕ್ಸ್ಗಿಂತ (Benchmark Index) ಹೆಚ್ಚಿನ ಮಟ್ಟದ ರಿಟರ್ನ್ ಕೊಟ್ಟಿವೆಯಂತೆ. ದೊಡ್ಡ ಭರವಸೆಗಳನ್ನು ನಂಬಿ ಮ್ಯೂಚುವಲ್ ಫಂಡ್ ಮೇಲೆ ಹಣ ಹಾಕಿದ ಜನರು ಅಲವತ್ತುಕೊಳ್ಳದೇ ಬೇರೆ ದಾರಿ ಇಲ್ಲ. ಇಂಥ ಜನರಿಗೆ ಹೊರೆ ತಗ್ಗಿಸಲೆಂದು ಸೆಬಿ (SEBI) ಹೊಸ ದಾರಿ ಹುಡುಕಿದೆ. ಅದೇ ಮ್ಯೂಚುವಲ್ ಫಂಡ್ಗಳಿಗೆ ಚಳಿ ಮೂಡಿಸುವ ದಾರಿ. ನಿರ್ದಿಷ್ಟ ಲಾಭ ತರದ ಮ್ಯೂಚುವಲ್ ಫಂಡ್ಗಳು ಮ್ಯಾನೇಜ್ಮೆಂಟ್ ಫೀಸ್ ಪಡೆಯುವಂತಿಲ್ಲ ಎಂಬ ನಿಯಮ. ಇದು ಇನ್ನೂ ಪ್ರಸ್ತಾವದ ಹಂತದಲ್ಲಿದೆ. ಆಗಲೇ ಇದು ಫಂಡ್ ಉದ್ಯಮವನ್ನು ಅಲ್ಲೋಲಕಲ್ಲೋಲಗೊಳಿಸತೊಡಗಿದೆ.
ಇಲ್ಲಿ ಬೆಂಚ್ಮಾರ್ಕ್ ಇಂಡೆಕ್ಸ್ಗಿಂತ ಹೆಚ್ಚಿನ ಮಟ್ಟದ ಲಾಭ ತರದ ಮ್ಯೂಚುವಲ್ ಫಂಡ್ಗಳು ಮ್ಯಾನೇಜ್ಮೆಂಟ್ ಫೀಸ್ ಪಡೆಯುವಂತಿಲ್ಲ ಎಂಬ ಪ್ರಸ್ತಾವವನ್ನು ಸೆಬಿ ಮುಂದಿಟ್ಟಿದೆ. ಬೆಂಚ್ಮಾರ್ಕ್ ಇಂಡೆಕ್ಸ್ ಎಂದರೆ ಷೇರುಪೇಟೆಯಲ್ಲಿ ಆಯ್ದ ಷೇರುಗಳ ಸರಾಸರಿ ಬೆಲೆ. ಉದಾಹರಣೆಗೆ, ಬಿಎಸ್ಇ ಸೆನ್ಸೆಕ್ಸ್30, ನಿಫ್ಟಿ50 ಇತ್ಯಾದಿ ಸೂಚ್ಯಂಕಗಳು. ಸೆನ್ಸೆಕ್ಸ್30 ಎಂಬುದು ಆಯ್ದ 30 ಪ್ರಮುಖ ಕಂಪನಿಗಳ ಷೇರುಗಳಾಗಿವೆ. ಈ ಷೇರುಗಳ ಬೆಲೆ ಏರಿಳಿಕೆಯ ಮೇಲೆ ಸೂಚ್ಯಂಕದಲ್ಲಿ ವ್ಯತ್ಯಾಸವಾಗುತ್ತವೆ. ಸಾಮಾನ್ಯವಾಗಿ ಈ ಸೂಚ್ಯಂಕಗಳು ವರ್ಷದಲ್ಲಿ ಶೇ. 10ರಷ್ಟು ಹೆಚ್ಚಾಗುತ್ತವೆ. ಈ ಸೂಚ್ಯಂಕಗಳ ದರವನ್ನು ಮ್ಯೂಚುವಲ್ ಫಂಡ್ಗಳಿಗೆ ಮಾನದಂಡವಾಗಿ ಮಾಡಲು ಸೆಬಿ ಹೊರಟಿದೆ. ಮೇ 18ರಂದು ಸೆಬಿ ಬರೆದ ಕನ್ಸಲ್ಟೇಶನ್ ಪೇಪರ್ನಲ್ಲಿ ಈ ಕಾರ್ಯನಿರ್ವಹಣೆ ಆಧಾರಿತ ಶುಲ್ಕ ಮಾದರಿ ವ್ಯವಸ್ಥೆಯ ಪ್ರಸ್ತಾವ ಇದೆ.
ಮ್ಯೂಚುವಲ್ ಫಂಡ್ಗಳು ಜನರು ಹಾಕುವ ಹೂಡಿಕೆ ಹಣವನ್ನು ವಿವಿಧ ಷೇರುಗಳು, ಬಾಂಡ್ಗಳು ಇತ್ಯಾದಿಗಳಲ್ಲಿ ಮರುಹೂಡಿಕೆ ಮಾಡುತ್ತವೆ. ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೂಡಿಕೆ ಆಗುತ್ತದೆ. ಒಂದು ಕಂಪನಿಯ ಷೇರು ಬೆಲೆ ಏರಿಕೆ ಅಥವಾ ಇಳಿಕೆಯಾಗುವುದು ಆ ಕಂಪನಿಯ ಕ್ಷೇತ್ರ ಎಷ್ಟು ಆರೋಗ್ಯದಿಂದಿದೆ, ಕಂಪನಿ ಎಷ್ಟು ಲಾಭದಾಯಕವಾಗಿದೆ, ಭವಿಷ್ಯದಲ್ಲಿ ಈ ಉದ್ಯಮಕ್ಕೆ ಹೇಗಿದೆ ವಾತಾವರಣ ಇವೆಲ್ಲವೂ ಅವಲಂಬಿತವಾಗಬಹುದು. ಈ ಹಿನ್ನೆಲೆಯಲ್ಲಿ ಯಾವ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಕ್ಷೇಮಕರ ಎಂಬುದನ್ನು ನಿರ್ಧರಿಸಲು ಫಂಡ್ ಮ್ಯಾನೇಜರ್ಗಳನ್ನು ನಿಯೋಜಿಸಲಾಗುತ್ತದೆ. ಈ ಫಂಡ್ ಮ್ಯಾನೇಜರ್ಗಳ ಅಡಿಯಲ್ಲಿ ಪಕ್ಕಾ ವೃತ್ತಿಪರ ತಂಡ ಕಾರ್ಯನಿರ್ವಹಿಸುತ್ತದೆ. ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಎಂದು ನಿರ್ಧರಿಸುವುದೇ ಈ ತಂಡದ ಕೆಲಸ. ಇಂಥ ಮ್ಯೂಚುವಲ್ ಫಂಡ್ಗಳಲ್ಲಿ ಹಣ ಹೂಡಿಕೆ ಮಾಡಲು ನಿರ್ದಿಷ್ಟ ಮ್ಯಾನೇಜ್ಮೆಂಟ್ ಶುಲ್ಕ ಪಾವತಿಸಬೇಕು. ಫಂಡ್ನಿಂದ ಲಾಭವಾಗಲಿ, ನಷ್ಟವಾಗಲೀ ನಿರ್ದಿಷ್ಟ ಶುಲ್ಕ ಸಂದಾಯವಾಗಲೇಬೇಕು.
ಈಗ ಸೆಬಿ ಈ ನಿಯಮ ಬದಲಾವಣೆ ಮಾಡಲು ಹೊರಟಿದೆ. ಬೆಂಚ್ಮಾರ್ಕ್ ಇಂಡೆಕ್ಸ್ಗಿಂತ ಕಡಿಮೆ ಲಾಭ ತರುವ ಮ್ಯೂಚುವಲ್ ಫಂಡ್ಗಳು ಹೂಡಿಕೆದಾರರಿಂದ ಯಾವುದೇ ನಿರ್ವಹಣ ಶುಲ್ಕ ಪಡೆಯುವಂತಿಲ್ಲ ಎಂದು ಹೇಳಿದೆ. ಇಂಡೆಕ್ಸ್ಗಿಂತ ಉತ್ತಮ ಲಾಭ ತಂದರೆ ಆಗ ಹೆಚ್ಚಿನ ಫೀಸ್ ವಸೂಲಿ ಮಾಡುವ ಅವಕಾಶವನ್ನೂ ಈ ಪ್ರಸ್ತಾವ ಮುಂದಿಟ್ಟಿರುವುದು ವಿಶೇಷ.