ನವದೆಹಲಿ: ಪತ್ನಿಗೆ ಡಿವೋರ್ಸ್ ನೀಡಿ ದಾಖಲೆಯ 3 ಲಕ್ಷ ಕೋಟಿ ರೂ ಜೀವನಾಂಶ ಕೊಟ್ಟು ಸೆಟಲ್ಮೆಂಟ್ ಮಾಡಿಕೊಂಡಿದ್ದ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ (Jeff Bezos) ಇದೀಗ ಪತ್ರಕರ್ತೆ ಲಾರೆನ್ ಸಾಂಚೆಜ್ (Lauren Sanchez) ಅವರನ್ನು ವರಿಸಲಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬುತ್ತಿದೆ. ಪೇಜ್ ಸಿಕ್ಸ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ ಜೆಫ್ ಬೇಜೋಸ್ ಮತ್ತು ಲಾರೆನ್ ಸಾಂಚೆಜ್ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಮೂಲಗಳನ್ನು ಉಲ್ಲೇಖಿಸುತ್ತಾ ಪತ್ರಿಕೆಯಲ್ಲಿ ಈ ಬಗ್ಗೆ ವರದಿ ಮಾಡಲಾಗಿದೆ. 4 ವರ್ಷಗಳಿಂದಲೂ ಈ ಇಬ್ಬರೂ ಜೋಡಿಗಳು ಬಹಿರಂಗವಾಗಿಯೇ ಕಾಣಿಸಿಕೊಳ್ಳುತ್ತಿರುವುದರಿಂದ ಎಂಗೇಜ್ಮೆಂಟ್ ಸುದ್ದಿ ಅಚ್ಚರಿ ಏನಿಲ್ಲ. ಅಲ್ಲದೇ ಸದ್ಯ ಇಬ್ಬರೂ ಕೂಡ ಫ್ರಾನ್ಸ್ನ ಪ್ಯಾರಿಸ್ನಲ್ಲಿ ಕಾನ್ ಚಲನಚಿತ್ರೋತ್ಸವದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಇಬ್ಬರೂ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗೆ ಇಂಬು ಕೊಟ್ಟಿರುವುದು ಲಾರೆನ್ ಸಾಂಚೆಜ್ ಕೈಯಲ್ಲಿರುವ ಉಂಗುರ. ಲವ್ ಚಿಹ್ನೆಯಾಗಿರುವ ಹೃದಯದಾಕಾರದ ರಿಂಗ್ ಲಾರೆನ್ ಸಾಂಚೆಜ್ ಕೈಯಲ್ಲಿದೆ. ಇದು ಕಾನ್ ಚಿತ್ರೋತ್ಸವದಲ್ಲಿ ಮಾತ್ರವಲ್ಲ ಕಳೆದ ಕೆಲ ತಿಂಗಳಿಂದಲೂ ಈ ಉಂಗುರವನ್ನು ಸಾಂಚೆಜ್ ಧರಿಸಿದ್ದಾರೆ. ಈ ಕಾರಣಕ್ಕೆ ಹಲವು ದಿನಗಳಿಂದಲೂ ಇಬ್ಬರಿಗೆ ಎಂಗೇಜ್ಮೆಂಟ್ ಆಗಿರುವ ಸುದ್ದಿ ಸಣ್ಣದಾಗಿ ಹಬ್ಬಿ ಈಗ ಗಟ್ಟಿಯಾಗಿ ಮಾರ್ದನಿಸುತ್ತಿದೆ.
ಇದನ್ನೂ ಓದಿ: SpaceX: ಸ್ಪೇಸ್ಎಕ್ಸ್ನ ರಾಕೆಟ್ನಲ್ಲಿ ಸೌದಿ ಅರೇಬಿಯಾದ ಮೊದಲ ಮಹಿಳಾ ಗಗನಯಾತ್ರಿ ಪ್ರಯಾಣ
ಜೆಫ್ ಬೇಜೋಸ್ ಮತ್ತು ಲಾರೆನ್ ಸಾಂಚೆಜ್ ಮಧ್ಯೆ ಡೇಟಿಂಗ್ ಅದೆಷ್ಟು ವರ್ಷಗಳಿಂದ ಇತ್ತೋ ಗೊತ್ತಿಲ್ಲ. ಆದರೆ, ಅವರಿಬ್ಬರು ಜೋಡಿಗಳಾಗಿರುವ ಸುದ್ದಿ ಬೆಳಕಿಗೆ ಬಂದಿದ್ದು 2019ರಲ್ಲಷ್ಟೇ. ಆಗ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಇನ್ನೂ ಮೊದಲ ವಿವಾಹದ ಸಂಸಾರದಲ್ಲಿದ್ದರು. 25 ವರ್ಷಗಳಿಂದ ಬೇಜೋಸ್ ಜೊತೆ ಜೀವನ ಹಂಚಿಕೊಂಡಿದ್ದ ಪತ್ನಿ ಮ್ಯಾಕೆನ್ಜಿ ಸ್ಕಾಟ್ ಡಿವೋರ್ಸ್ ಪಡೆಯಬೇಕಾಯಿತು. ಅಲ್ಲಿಯವರೆಗೆ ಬೇಜೋಸ್ ಮತ್ತು ಲಾರೆನ್ ಜೋಡಿ ಹೆಚ್ಚು ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಜೆಫ್ ಬೆಜೋಸ್ ತಮ್ಮ ಮೊದಲ ಪತ್ನಿಗೆ ಡಿವೋರ್ಸ್ ನೀಡಲು ತೆತ್ತರ ಬೆಲೆ ಅಷ್ಟಿಷ್ಟಲ್ಲ. ಬರೋಬ್ಬರಿ 38 ಬಿಲಿಯನ್ ಡಾಲರ್ನಷ್ಟು ಪರಿಹಾರ ಹಣವನ್ನು ಮ್ಯಾಕೆನ್ಜಿ ಸ್ಕಾಟ್ ಪಡೆದರು. ಇದು 3 ಲಕ್ಷ ಕೋಟಿ ರುಪಾಯಿ. ಇದೇನೂ ಸಾಧಾರಣ ಮೊತ್ತವಲ್ಲ. ಇಷ್ಟು ಹಣ ಹೊಂದಿದ ಸ್ಕಾಟ್ ವಿಶ್ವದ 3ನೇ ಶ್ರೀಮಂತ ಮಹಿಳೆ ಎನಿಸಿದ್ದರು.
ಇದನ್ನೂ ಓದಿ: Beer Record: ಬೇಸಿಗೆ ಎಫೆಕ್ಟ್; ತಂಪು ತಂಪು ಬಿಯರ್ ಬಿಯರ್; ತೆಲಂಗಾಣದಲ್ಲಿ ಹೊಸ ದಾಖಲೆ; ಕರ್ನಾಟಕದಲ್ಲಿ ಹೇಗೆ?
ಆದರೆ, ಜೆಫ್ ಬೇಜೋಸ್ ಮೊದಲ ಪತ್ನಿ ದುರಾಸೆಯವರಲ್ಲ. ತಮಗೆ ಸಿಕ್ಕಿದ ದಾಖಲೆಯ ಜೀವನಾಂಶ ಹಣದಲ್ಲಿ ಅರ್ಧಭಾಗವನ್ನು ಚಾರಿಟಿಗೆ ಕೊಟ್ಟು ತಾವೆಂಥ ಮಾನವೀಯ ವ್ಯಕ್ತಿ ಎಂಬುದನ್ನು ಸಾರಿ ಹೇಳಿದರು. ಇಂಥ ಪತ್ನಿಯನ್ನು ಬೇಜೋಸ್ ದೂರ ಮಾಡಿಕೊಂಡಿದ್ದಾದರೂ ಯಾಕೆ ಎಂದು ಯಾರಿಗಾದರೂ ಅನಿಸಬಹುದು. ಜೆಫ್ ಬೇಜೋಸ್ ಮತ್ತು ಮೆಕಿನ್ಜೀ ಸ್ಕಾಟ್ ದಂಪತಿಗೆ ನಾಲ್ಕರು ಮಕ್ಕಳಿದ್ದಾರೆ.
ಜೆಫ್ ಬೇಜೋಸ್ ಒಂದು ಮದುವೆಯಾಗಿ ಡಿವೋರ್ಸ್ ಪಡೆದಿದ್ದರೆ, ಅವರ ಗರ್ಲ್ ಫ್ರೆಂಡ್ ಲಾರೆನ್ ಸಾಂಚೆಜ್ 2 ಮದುವೆಯಾಗಿದ್ದವರು. ಪ್ಯಾಟ್ರಿಕ್ ವೈಟ್ಸೆಲ್ ಮತ್ತು ಮಾಜಿ ಫುಟ್ಬಾಲ್ ಆಟಗಾರ ಟೋನಿ ಗೋಂಜಾಲೆಜ್ ಅವರು ಸಾಂಚೆಜ್ರ ಮಾಜಿ ಗಂಡಂದಿರು. ವೈಟ್ಸೆಲ್ ಜೊತೆಗಿನ ಸಂಸಾರದಲ್ಲಿ 2 ಮಕ್ಕಳು ಹಾಗೂ ಗೋಂಜಾಲೆಜ್ನಿಂದ 1 ಮಗುವನ್ನು ಸಾಂಚೆಜ್ ಹೆತ್ತಿದ್ದಾರೆ.
ಇದೀಗ ಅಮೇಜಾನ್ ಮುಖ್ಯಸ್ಥ ಜೆಫ್ ಬೇಜೋಸ್ ಮತ್ತು ಲಾರೆನ್ ಸಾಂಚೆಜ್ ನಿಜಕ್ಕೂ ಎಂಗೇಜ್ಮೆಂಟ್ ಮಾಡಿಕೊಂಡಿದ್ದರೆ ಮದುವೆ ಆಗುವುದು ಬಹುತೇಕ ನಿಶ್ಚಿತವೇ.