AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mutual Funds: ಮ್ಯೂಚುವಲ್ ಫಂಡ್​ಗೆ ಹಣ ಹಾಕಿ ಆತಂಕಗೊಂಡಿದ್ದೀರಾ? ಹೂಡಿಕೆ ಯಾವಾಗ ನಿಲ್ಲಿಸಬೇಕು? ಇಲ್ಲಿದೆ ಟಿಪ್ಸ್

ಇವತ್ತಿನ ದಿನಮಾನದಲ್ಲಿ ಅತ್ಯುತ್ತಮ ಹೂಡಿಕೆ ಮಾರ್ಗಗಳಲ್ಲಿ ಮ್ಯೂಚುವಲ್ ಫಂಡ್ (Mutual Fund) ಒಂದು. ಬಹುತೇಕ ಷೇರುಮಾರುಕಟ್ಟೆಗೆ ಜೋಡಿತವಾಗಿರುವ ಮ್ಯೂಚುವಲ್ ಫಂಡ್​ಗಳು ಒಂದು ರೀತಿಯಲ್ಲಿ ರಿಸ್ಕ್ ಹೌದು, ಹಾಗೆಯೇ ಲಾಭಕಾರಿಯೂ ಹೌದು. ಷೇರುಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಕೋಟ್ಯಾಧಿಪತಿಗಳಾಗಿರುವ ಅನೇಕರನ್ನು ನೋಡಿದ್ದೇವೆ. ಇಲ್ಲಿಯ ಹೂಡಿಕೆ ಸುರಕ್ಷಿತವಾ? ಇಲ್ಲಿದೆ ಒಂದಿಷ್ಟು ಟಿಪ್ಸ್.

Mutual Funds: ಮ್ಯೂಚುವಲ್ ಫಂಡ್​ಗೆ ಹಣ ಹಾಕಿ ಆತಂಕಗೊಂಡಿದ್ದೀರಾ? ಹೂಡಿಕೆ ಯಾವಾಗ ನಿಲ್ಲಿಸಬೇಕು? ಇಲ್ಲಿದೆ ಟಿಪ್ಸ್
ಮ್ಯೂಚುವಲ್ ಫಂಡ್
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Oct 08, 2026 | 1:01 PM

Share

ಮುಖ್ಯಾಂಶಗಳು

  • ಮ್ಯೂಚುವಲ್ ಫಂಡ್ ಮೂಲಕ ಸಾಮಾನ್ಯ ಜನರು ಷೇರುಪೇಟೆಯಲ್ಲಿ ಪರೋಕ್ಷವಾಗಿ ಹೂಡಿಕೆ ಮಾಡಲು ಸಾಧ್ಯ
  • ಮ್ಯೂಚುವಲ್ ಫಂಡ್ ಸದಾ ಹೆಚ್ಚು ಲಾಭ ಕೊಡುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ
  • ಅಲ್ಪಾವಧಿಗಿಂತ ದೀರ್ಘಾವಧಿ ಹೂಡಿಕೆ ಮಾಡುವವರಿಗೆ ಮ್ಯೂಚುವಲ್ ಫಂಡ್ ಸಹಾಯವಾಗಬಹುದು.

ಇವತ್ತಿನ ದಿನಮಾನದಲ್ಲಿ ಅತ್ಯುತ್ತಮ ಹೂಡಿಕೆ ಮಾರ್ಗಗಳಲ್ಲಿ ಮ್ಯೂಚುವಲ್ ಫಂಡ್ (Mutual Fund) ಒಂದು. ಬಹುತೇಕ ಷೇರುಮಾರುಕಟ್ಟೆಗೆ ಜೋಡಿತವಾಗಿರುವ ಮ್ಯೂಚುವಲ್ ಫಂಡ್​ಗಳು ಒಂದು ರೀತಿಯಲ್ಲಿ ರಿಸ್ಕ್ ಹೌದು, ಹಾಗೆಯೇ ಲಾಭಕಾರಿಯೂ ಹೌದು. ಷೇರುಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಕೋಟ್ಯಾಧಿಪತಿಗಳಾಗಿರುವ ಅನೇಕರನ್ನು ನೋಡಿದ್ದೇವೆ. ಹಾಗೆಯೇ, ಕೋಟಿ ಕೋಟಿ ಹಣ ಕಳೆದುಕೊಂಡವರೂ ಅನೇಕರಿದ್ದಾರೆ. ಅನುಭವಿಗಳಾಗಿದ್ದರೆ ಮತ್ತು ಮಾರುಕಟ್ಟೆಯ ಲಯ ಅರಿಯಬಲ್ಲವರಾಗಿದ್ದರೆ ವೈಯಕ್ತಿಕವಾಗಿ ಷೇರುಗಳ ಮೇಲೆ ಹೂಡಿಕೆ ಮಾಡಬಹುದು. ಇಲ್ಲದಿದ್ದರೆ ಮ್ಯೂಚುವಲ್ ಫಂಡ್ ಮಾರ್ಗ ಹಿಡಿಯಬಹುದು.

ಮ್ಯೂಚುವಲ್ ಫಂಡ್​ಗಳನ್ನು ವೃತ್ತಿಪರರು ನಿಭಾಯಿಸುತ್ತಾರೆ. ವಿವಿಧ ಸ್ತರದ ಕಂಪನಿಗಳ ಷೇರುಗಳ ಮೇಲೆ ಮ್ಯೂಚುವಲ್ ಫಂಡ್​ನ ಹಣ ಹೂಡಿಕೆ ಆಗಿರುತ್ತದೆ. ಅಂದರೆ ನಾವು ಮ್ಯೂಚುವಲ್ ಫಂಡ್​ಗೆ ಹಾಕುವ ಹಣ ವಿವಿಧ ಷೇರುಗಳಲ್ಲಿ ಇನ್ವೆಸ್ಟ್ ಆಗಿರುತ್ತದೆ. ಮ್ಯೂಚುವಲ್ ಫಂಡ್ ನಿರ್ವಾಹಕರು ಹೂಡಿಕೆಯನ್ನು ಅಲ್ಲಿಂದಿಲ್ಲಿಗೆ ಬದಲಿಸಬಹುದು. ಒಟ್ಟಾರೆ ಲಾಭದ ಗುರಿ ಮಾತ್ರ ಇರುತ್ತದೆ. ಅಲ್ಪಾವಧಿಯಲ್ಲಿ ಹೆಚ್ಚು ಲಾಭ ಗಳಿಸುವವರಿಗೆ ಮ್ಯೂಚುವಲ್ ಫಂಡ್ ಹೇಳಿ ಮಾಡಿಸಿದ್ದಲ್ಲ. ದೀರ್ಘಾವಧಿ ದೃಷ್ಟಿಯಿಂದ ಇವು ಬಹಳ ಲಾಭಕಾರಿ ಎನಿಸುತ್ತವೆ.

ಎಲ್ಲಾ ಮ್ಯೂಚುವಲ್ ಫಂಡ್​ಗಳು ಒಂದೇ ತೆರನಾಗಿ ಫಲ ಕೊಡುವುದಿಲ್ಲ ಎಂಬುದು ಗೊತ್ತಿರಲಿ. ಅನೇಕ ಬಾರಿ ಭರ್ಜರಿ ಲಾಭ ಕೊಡುವುದು ಇರಲಿ, ನಷ್ಟವೇ ತಂದುಕೊಡಬಹುದು. ಎಷ್ಟೆಂದರೂ ಷೇರುಪೇಟೆ ವ್ಯವಹಾರವಲ್ಲವೇ!!

ಮ್ಯೂಚುವಲ್ ಫಂಡ್​ಗಳ ಬಗ್ಗೆ ಒಂದಿಷ್ಟು ಮೂಲ ಮಾಹಿತಿ

ಅಲ್ಪಾವಧಿಗೆ ಗಮನಿಸಿದರೆ ಯಾವುದೇ ಮ್ಯೂಚುವಲ್ ಫಂಡ್​ನಲ್ಲಾದರೂ ಏರಿಳಿತಗಳು ಇದ್ದೇ ಇರುತ್ತವೆ. ಲಾಂಗ್–ಕ್ಯಾಪ್ ಕಂಪನಿ ಅಥವಾ ದೊಡ್ಡ ಷೇರುಮೊತ್ತದ ಕಂಪನಿಯ ಷೇರಿಗಿಂತ ಸ್ಮಾಲ್ ಕ್ಯಾಪ್ ಷೇರುಗಳ ಬೆಲೆ ಬಹಳ ವ್ಯತ್ಯಯ ಕಾಣುತ್ತದೆ. ಸ್ಮಾಲ್ ಕ್ಯಾಪ್ ಕಂಪನಿಗಳ ಷೇರು ಹೆಚ್ಚು ಲಾಭ ತಂದುಕೊಡಬಲ್ಲವಾದರೂ ರಿಸ್ಕ್ ಸಾಧ್ಯತೆ ಹೆಚ್ಚಿರುತ್ತದೆ.

ಮ್ಯೂಚುವಲ್ ಫಂಡ್​ನ ಹಿಂದಿನ ಪ್ರತಿಫಲಗಳೇನು ಎಂಬುದನ್ನು ತಿಳಿದಿರಿ. ಆ ಮ್ಯೂಚುವಲ್ ಫಂಡ್ ಹಿಂದಿನ ಕೆಲ ವರ್ಷ ಸರಿಯಾದ ಲಾಭ ಕೊಟ್ಟಿದೆಯಾ ನೋಡಿ. ಇಲ್ಲದಿದ್ದರೆ ಕಾರಣ ಏನೆಂದು ತಿಳಿದುಕೊಳ್ಳಿ. ಅದೇ ಸೆಕ್ಟರ್​ನ ಇತರ ಮ್ಯೂಚುವಲ್ ಫಂಡ್ ಎಷ್ಟು ಲಾಭ ತಂದಿವೆ ಎಂದು ಹೋಲಿಸಿ ನೋಡಿ.

ಕೆಲ ಮ್ಯೂಚುವಲ್ ಫಂಡ್​ಗಳು ಹಲವು ವರ್ಷ ಸತತವಾಗಿ ಒಳ್ಳೆಯ ರಿಟರ್ನ್ ಕೊಟ್ಟಿರುತ್ತವೆ. ಹಾಗಂತ ಈ ವರ್ಷವೂ, ಮುಂದಿನ ವರ್ಷಗಳೂ ಇದೇ ಟ್ರೆಂಡ್ ಇರುತ್ತದೆ ಎಂಬ ಖಾತ್ರಿ ಇರುವುದಿಲ್ಲ.

ಒಂದು ಮ್ಯೂಚುವಲ್ ಫಂಡ್ ಸತತ ಎರಡು ವರ್ಷ ಕಾಲ ನಿರೀಕ್ಷಿತ ಮಟ್ಟದಲ್ಲಿ ಲಾಭ ತಂದುಕೊಡುತ್ತಿಲ್ಲ ಎಂದರೆ ಅದರಿಂದ ಹೂಡಿಕೆ ಹಿಂಪಡೆಯುವುದು ಉತ್ತಮ ಎಂಬ ಸಾಮಾನ್ಯ ಸೂತ್ರ ಇದೆ. ಹಾಗಂತ, 2 ವರ್ಷ ಕಳಪೆ ಸಾಧನೆ ಮಾಡಿದ ಮ್ಯೂಚುವಲ್ ಫಂಡ್ ಭವಿಷ್ಯದಲ್ಲೂ ಅದೇ ಮಟ್ಟದಲ್ಲಿ ಮುಂದುವರಿಯುತ್ತದೆ ಎಂದಲ್ಲ. ಫಂಡ್ ಮ್ಯಾನೇಜರುಗಳು ಹೂಡಿಕೆ ಕಾರ್ಯತಂತ್ರವನ್ನು ಬದಲಿಸಿ ಹೆಚ್ಚಿನ ಲಾಭ ತರಲು ಯತ್ನಿಸಬಹುದು. ಹೀಗಾಗಿ, ಒಬ್ಬ ನುರಿತ ಇನ್ವೆಸ್ಟ್​ಮೆಂಟ್ ಅಡ್ವೈಸರ್​ನ ಸಲಹೆ ಪಡೆಯುವುದು ಉತ್ತಮ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:39 pm, Tue, 9 May 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More