ನವದೆಹಲಿ, ಮೇ 16: ಈ ಹಣಕಾಸು ವರ್ಷದಲ್ಲೇ (2024-25) ಭಾರತದ ಆರ್ಥಿಕತೆ (Indian economy) 4 ಟ್ರಿಲಿಯನ್ ಗಡಿ ದಾಟುತ್ತದೆ. ಮಂದಿನ ಹಣಕಾಸು ವರ್ಷದ ಆರಂಭಿಕ ಹಂತದಲ್ಲೇ ಜಪಾನ್ ಆರ್ಥಿಕತೆಯನ್ನು ಮೀರಿಸಿ ಭಾರತ ಬೆಳೆಯಲಿದೆ ಎಂದು ಪ್ರಧಾನಿಯ ಆರ್ಥಿಕ ಸಲಹೆಗಾರರಲ್ಲೊಬ್ಬರಾದ ಸಂಜೀವ್ ಸಾನ್ಯಾಲ್ ಹೇಳಿದ್ದಾರೆ. ದುರ್ಬಲ ರಫ್ತು ಸೇರಿದಂತೆ ವಿವಿಧ ಸವಾಲುಗಳ ಮಧ್ಯೆ ಭಾರತ ಶೇ 7ರಷ್ಟು ಜಿಡಿಪಿ ವೃದ್ಧಿ ತೋರುವುದು ನಿಜಕ್ಕೂ ಅದ್ವಿತೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭಾರತ ಶೇ. 10ರಷ್ಟು ಬೆಳವಣಿಗೆ ಸಾಧಿಸುವ ಸಾಮರ್ಥ್ಯ ಹೊಂದಿದೆ ಎಂದು ವಿವಿಧ ಆರ್ಥಿಕ ತಜ್ಞರು ಹೇಳಿರುವ ಹಿನ್ನೆಲೆಯಲ್ಲಿ ಸಾನ್ಯಾಲ್ ಅಭಿಪ್ರಾಯ ಮತ್ತೊಂದು ಎಳೆಯನ್ನು ತೆರೆದಿಟ್ಟಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತ 2027ರ ವೇಳೆ ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆ ಇದೆ ಎಂದು ಇತ್ತೀಚೆಗೆ ಹೇಳಿದ್ದರು. ಸದ್ಯ ಭಾರತ 3.7 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ.
ಜರ್ಮನಿ 4.6 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದೆ. ಜಪಾನ್ ಬಳಿ 4.1 ಟ್ರಿಲಿಯನ್ ಡಾಲರ್ ಜಿಡಿಪಿ ಇದೆ. ಜಪಾನ್ ಮತ್ತು ಜರ್ಮನಿ ಎರಡೂ ಕೂಡ ಹೆಚ್ಚು ವೇಗದಲ್ಲಿ ಆರ್ಥಿಕ ವೃದ್ಧಿ ಕಾಣುತ್ತಿಲ್ಲ. ಜಪಾನ್ ಸಾಕಷ್ಟು ಸಮಸ್ಯೆಗಳಿಂದ ನಲುಗುತ್ತಿದೆ. ಸಾನ್ಯಾಲ್ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿ ಜಪಾನ್ ಅನ್ನು ಭಾರತ ಹಿಂದಿಕ್ಕಬಹುದು. ಈ ವರ್ಷವೇ ಅದು ಸಾಧ್ಯವಾದರೂ ಅಚ್ಚರಿ ಇಲ್ಲ ಎಂಬುದು ಅವರ ಅನಿಸಿಕೆ.
ಇದನ್ನೂ ಓದಿ: ನೀವು ಸ್ಲೀಪಿಂಗ್ ಪಾರ್ಟ್ನರ್, ನಾನು ವರ್ಕಿಂಗ್ ಪಾರ್ಟ್ನರ್: ಸಭಿಕರೊಬ್ಬರ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಬೌಲ್ಡ್
‘ಈ ವರ್ಷವೇ ಜಪಾನ್ ಅನ್ನು ಭಾರತ ಹಿಂದಿಕ್ಕಿದರೆ ಆಶ್ಚರ್ಯ ಇಲ್ಲ. ಇನ್ನೆರಡು ವರ್ಷದಲ್ಲಿ ನಾವು ಜರ್ಮನಿಗಿಂತ ಮೇಲೆ ಹೋಗಬಹುದು. ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ದಿನ ಸಮೀಪವೇ ಇದೆ’ ಎಂದು ಪ್ರಧಾನಿಗಳ ಆರ್ಥಿಕ ಸಲಹೆಗಾರರ ಮಂಡಳಿ ಸದಸ್ಯರಾದ ಅವರು ಹೇಳಿದ್ದಾರೆ.
ದೇಶವು ಶೇ. 8ರಿಂದ 9ರಷ್ಟು ವೇಗದಲ್ಲಿ ಆರ್ಥಿಕ ವೃದ್ಧಿ ಕಾಣಬೇಕು ಎಂದು ಕೇಳಿಬರುತ್ತಿರುವ ಸಲಹೆಗಳನ್ನು ಸಂಜೀವ್ ಸಾನ್ಯಾಲ್ ತಳ್ಳಿ ಹಾಕುತ್ತಾರೆ. ಸರ್ಕಾರ ಶೇ. 8-9ರಷ್ಟು ಜಿಡಿಪಿ ವೃದ್ಧಿಯಾಗಬೇಕೆಂದು ಯಾವುದೇ ಹಣಕಾಸು ಕ್ರಮಕ್ಕೆ ಮುಂದಾಗದಿರುವುದು ಒಳ್ಳೆಯದು ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಎಚ್ಎಎಲ್ ಮತ್ತು ಗೇಲ್ ಭರ್ಜರಿ ಲಾಭ; ಎರಡು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಉತ್ತಮ ಹಣಕಾಸು ಸಾಧನೆ
ಶೇ. 9ರ ಬೆಳವಣಿಗೆ ಸಾಧಿಸಬೇಕೆಂದು ತೀರಾ ಬಯಸುವುದು ಬೇಡ. ಅಷ್ಟು ವೇಗ ಸಿಕ್ಕರೆ ಅದ್ಭುತವೇ. ಆದರೆ, ನಿರಂತರವಾಗಿ ಶೇ. 7ರ ದರದಲ್ಲಿ ಬೆಳೆಯುವುದೂ ಕೂಡ ಉತ್ತಮವೇ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ತೆರಿಗೆ ಸಂಗ್ಹರ ಹೆಚ್ಚಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ