ನವದೆಹಲಿ, ಡಿಸೆಂಬರ್ 15: ಭಾರತದಲ್ಲಿರುವ 6,44,131 ಹಳ್ಳಿಗಳ ಪೈಕಿ 6,22,840 ಹಳ್ಳಿಗಳಲ್ಲಿ ಮೊಬೈಲ್ ಕವರೇಜ್ ಇದೆ ಎನ್ನುವ ಮಾಹಿತಿಯನ್ನು ಸರ್ಕಾರ ನೀಡಿದೆ. ಇದು 2024ರ ಸೆಪ್ಟೆಂಬರ್ 30ರವರೆಗಿನ ಸ್ಥಿತಿ. ಮೊಬೈಲ್ ಕವರೇಜ್ ಇರುವ ಹಳ್ಳಿಗಳಲ್ಲಿ 4ಜಿ ಕನೆಕ್ಟಿವಿಟಿ ಇರುವ ಗ್ರಾಮಗಳ ಸಂಖ್ಯೆ 6,14,564 ಎನ್ನಲಾಗಿದೆ. ಕೇಂದ್ರ ಸಂವಹನ ಖಾತೆ ರಾಜ್ಯಸಚಿವ ಪೆಮ್ಮಸಾನಿ ಚಂದ್ರಶೇಖರ್ ಅವರು ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದಾರೆ.
ಬುಡಕಟ್ಟ ವ್ಯವಹಾರಗಳ ಸಚಿವಾಲಯದ ಯೋಜನೆಯಾದ ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ್ (ಪಿಎಂ ಜನಮಾನ್) ಅಡಿಯಲ್ಲಿ ಮೊಬೈಲ್ ಕವರೇಜ್ ಇಲ್ಲದ 4,543 ಸೂಕ್ಷ್ಮ ಬುಡಕಟ್ಟು ವರ್ಗದ (ಪಿವಿಟಿಜಿ) ಊರುಗಳನ್ನು ಗುರುತಿಸಲಾಗಿದೆ. ಈ ಪೈಕಿ 1,136 ಗ್ರಾಮಗಳಲ್ಲಿ ಮೊಬೈಲ್ ಕನೆಕ್ಟಿವಿಟಿ ನೀಡಲಾಗಿದೆ.
ಇದನ್ನೂ ಓದಿ: ನವೆಂಬರ್ನಲ್ಲಿ ಹಣದುಬ್ಬರ ಶೇ. 5.48ಕ್ಕೆ ಇಳಿಕೆ; ಹೆಚ್ಚು ಆದಾಯದ ರಾಜ್ಯಗಳಲ್ಲಿ ಬೆಲೆ ಏರಿಕೆ ಕಡಿಮೆ
ಗ್ರಾಮೀಣ ಹಾಗೂ ದುರ್ಗಮ ಸ್ಥಳಗಳಲ್ಲಿ ಟೆಲಿಕಾಂ ಕನೆಕ್ಟಿವಿಟಿ ಹೆಚ್ಚಿಸಲು ಡಿಜಿಟಲ್ ಭಾರತ್ ನಿಧಿ ಅಡಿ ಹಲವಾರು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದು ಸಾಕಷ್ಟು ಕಡೆ ಮೊಬೈಲ್ ಟವರ್ಗಳನ್ನು ನಿರ್ಮಿಸಲಾಗಿದೆ. ಡಿಜಿಟಲ್ ಭಾರತ್ ನಿಧಿಯಿಂದ ಫಂಡಿಂಗ್ ಮಾಡಲಾದ ಹಲವಾರು ಮೊಬೈಲ್ ಪ್ರಾಜೆಕ್ಟ್ಗಳ ಮೂಲಕ ಸೂಕ್ಷ್ಮ ಬುಡಕಟ್ಟು ವಾಸಸ್ಥಳಗಳಲ್ಲಿ 4ಜಿ ಕನೆಕ್ಟಿವಿಟಿ ನೀಡುವಂತಹ 1,018 ಮೊಬೈಲ್ ಟವರ್ಗಳನ್ನು ಸ್ಥಾಪಿಲಾಗಿದೆ. ಇದಕ್ಕೆ ಅಂದಾಜು ವೆಚ್ಚ 1,014 ಕೋಟಿ ರೂ ಇದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಭಾರತದಲ್ಲಿ ಮೊಬೈಲ್ ಕನೆಕ್ಟಿವಿಟಿ ಇಲ್ಲದ ಅತಿಹೆಚ್ಚು ಹಳ್ಳಿಗಳು ಇರುವುದು ಒಡಿಶಾದಲ್ಲಿ. ಇಲ್ಲಿನ ಸುಮಾರು 6,000ದಷ್ಟು ಹಳ್ಳಿಗಳಲ್ಲಿ ಮೊಬೈಲ್ ನೆಟ್ವರ್ಕ್ ತಲುಪಬೇಕಿದೆ. ಅರುಣಾಚಲಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್ ಮೊದಲಾದ ರಾಜ್ಯಗಳಲ್ಲಿ ಸಾಕಷ್ಟು ಹಳ್ಳಿಗಳಲ್ಲಿ ಮೊಬೈಲ್ ಕವರೇಜ್ ಇನ್ನೂ ಸಿಕ್ಕಿಲ್ಲ.
ಕೇರಳ, ಪಂಜಾಬ್, ತಮಿಳುನಾಡು, ಹರ್ಯಾಣ ಮೊದಲಾದ ಕೆಲ ರಾಜ್ಯಗಳಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದ ಹಳ್ಳಿಗಳ ಸಂಖ್ಯೆ ಬಹಳ ಕಡಿಮೆ ಇದೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ