ನವೆಂಬರ್​ನಲ್ಲಿ ಹಣದುಬ್ಬರ ಶೇ. 5.48ಕ್ಕೆ ಇಳಿಕೆ; ಹೆಚ್ಚು ಆದಾಯದ ರಾಜ್ಯಗಳಲ್ಲಿ ಬೆಲೆ ಏರಿಕೆ ಕಡಿಮೆ

SBI report on inflation trend in India: ಕಳೆದ 10 ವರ್ಷದಲ್ಲಿ ಕಡಿಮೆ ಆದಾಯದ ರಾಜ್ಯಗಳಿಗೆ ಹೋಲಿಸಿದರೆ ಮಧ್ಯಮ ಮತ್ತು ಅಧಿಕ ಆದಾಯದ ರಾಜ್ಯಗಳಲ್ಲಿ ಹಣದುಬ್ಬರ ಇಳಿಕೆ ಹೆಚ್ಚು ಇದೆ. ಎಸ್​ಬಿಐ ರಿಸರ್ಚ್ ಪ್ರಕಾರ ಕಡಿಮೆ ಆದಾಯದ ರಾಜ್ಯಗಳಿಂದ ಕಾರ್ಮಿಕರು ಹೆಚ್ಚೆಚ್ಚು ಶ್ರೀಮಂತ ರಾಜ್ಯಗಳತ್ತ ವಲಸೆ ಹೋಗುತ್ತಿರುವುದು ಇದಕ್ಕೆ ಕಾರಣವಿರಬಹುದು. ಇದೇ ವೇಳೆ ನವೆಂಬರ್​ನಲ್ಲಿ ಒಟ್ಟಾರೆ ರೀಟೇಲ್ ಹಣದುಬ್ಬರ ಶೇ. 5.48ಕ್ಕೆ ಇಳಿದಿದೆ.

ನವೆಂಬರ್​ನಲ್ಲಿ ಹಣದುಬ್ಬರ ಶೇ. 5.48ಕ್ಕೆ ಇಳಿಕೆ; ಹೆಚ್ಚು ಆದಾಯದ ರಾಜ್ಯಗಳಲ್ಲಿ ಬೆಲೆ ಏರಿಕೆ ಕಡಿಮೆ
ಹಣದುಬ್ಬರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 15, 2024 | 12:23 PM

ನವದೆಹಲಿ, ಡಿಸೆಂಬರ್ 15: ಭಾರತದಲ್ಲಿ ಅಕ್ಟೋಬರ್​ನಲ್ಲಿ ಸಖತ್ ಏರಿಕೆ ಆಗಿದ್ದ ರೀಟೇಲ್ ಹಣದುಬ್ಬರವು ನವೆಂಬರ್​ನಲ್ಲಿ ತುಸು ಶಾಂತಗೊಂಡಿದೆ. ಹಣದುಬ್ಬರ ದರ ಶೇ. 5.48ರಷ್ಟು ಇಳಿದಿದೆ. ಇದು ಸರ್ಕಾರಕ್ಕೆ ತುಸು ಸಮಾಧಾನ ತಂದಿರುವ ಬೆಳವಣಿಗೆ ಇದೆ. ಇದೇ ವೇಳೆ, ಭಾರತದ ವಿವಿಧ ರಾಜ್ಯಗಳ ಒಂದು ದಶಕದ ಹಣದುಬ್ಬರ ಟ್ರೆಂಡ್ ಸಕಾರಾತ್ಮಕವಾಗಿರುವುದು ತಿಳಿದುಬಂದಿದೆ. ಎಸ್​ಬಿಐ ರಿಸರ್ಚ್ ವರದಿ ಪ್ರಕಾರ, ಕೆಳ ಆದಾಯದ ರಾಜ್ಯಗಳಿಗೆ ಹೋಲಿಸಿದರೆ ಮಧ್ಯಮ ಮತ್ತು ಅಧಿಕ ಆದಾಯದ ರಾಜ್ಯಗಳಲ್ಲಿ ಹಣದುಬ್ಬರ ದರ ಕಡಿಮೆ ಆಗುತ್ತಿದೆ ಎನ್ನಲಾಗಿದೆ.

‘ಕಳೆದ ದಶಕದಲ್ಲಿ ಮಧ್ಯಮ ಮತ್ತು ಅಧಿಕ ಆದಾಯದ ರಾಜ್ಯಗಳಲ್ಲಿ ಹಣದುಬ್ಬರ ದರ ಹೆಚ್ಚು ಇಳಿಕೆ ಆಗುತ್ತಿರುವುದು ಗೊತ್ತಾಗಿದೆ’ ಎಂದು ಹೇಳಿರುವ ಈ ವರದಿಯು, ಈ ಟ್ರೆಂಡ್​ಗೆ ಕಾರ್ಮಿಕರ ವಲಸೆ ಒಂದು ಕಾರಣ ಇರಬಹುದು ಎಂದು ಅಂದಾಜಿಸಿದೆ.

ಇದನ್ನೂ ಓದಿ: ಶುಂಠಿಗೆ ಹೆಚ್ಚುತ್ತಿರುವ ಬೇಡಿಕೆ; ಲಾಭದಾಯಕ ವ್ಯಾಪಾರಕ್ಕಾಗಿ ಸಂಪೂರ್ಣ ಮಾರ್ಗದರ್ಶಿ

ಕೆಳ ಆದಾಯದ ರಾಜ್ಯಗಳಿಂದ ಕಾರ್ಮಿಕರು ಉತ್ತಮ ಉದ್ಯೋಗಾವಕಾಶದ ಹಿನ್ನೆಲೆಯಲ್ಲಿ ಹೆಚ್ಚು ಶ್ರೀಮಂತ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದು ಉನ್ನತ ಆದಾಯದ ರಾಜ್ಯಗಳಲ್ಲಿ ಹಣದುಬ್ಬರ ತಗ್ಗಲು ಎಡೆ ಮಾಡಿಕೊಡುತ್ತಿದೆ. ಇನ್ನೊಂದೆಡೆ, ಕಡಿಮೆ ಆದಾಯದ ರಾಜ್ಯಗಳಲ್ಲಿ ಆಹಾರ ಹಣದುಬ್ಬರ ಇಳಿಕೆಯ ದರ ಮಂದವಾಗಿದೆ.

ಎಸ್​ಬಿಐ ನಡೆಸಿದ ಸಿಗ್ಮಾ ವಿಶ್ಲೇಷಣಾ ಮಾದರಿಯಲ್ಲಿ, ಕಳೆದ 10 ವರ್ಷದಲ್ಲಿ ವಿವಿಧ ರಾಜ್ಯಗಳ ನಡುವೆ ಹಣದುಬ್ಬರ ದರದಲ್ಲಿ ಆಗುತ್ತಿರುವ ವ್ಯತ್ಯಾಸ ಕಡಿಮೆ ಇದೆ ಎಂಬ ಸಂಗತಿಯನ್ನು ಪತ್ತೆ ಮಾಡಿದೆ. ಒಟ್ಟಾರೆ ರೀಟೇಲ್ ಹಣದುಬ್ಬರ ಮತ್ತು ಆಹಾರ ಹಣದುಬ್ಬರದ ನಡುವಿನ ಅಂತರ ಕಡಿಮೆ ಆಗುತ್ತಿದೆ. ಆದರೆ ಆಹಾರ ಹಣದುಬ್ಬರದಲ್ಲಿ ತೀವ್ರ ವ್ಯತ್ಯಯಗಳಾಗುತ್ತಿರುವುದು ಒಂದು ಹಿನ್ನಡೆಯಂತಿದೆ ಎಂಬುದು ಈ ವರದಿಯ ಅಭಿಪ್ರಾಯ.

ಇದನ್ನೂ ಓದಿ: ವೈವಾಹಿಕ ಜೀವನವು ಸುಖಕರವಾಗಿಲು ಹಣಕಾಸಿನ ನಿರ್ವಹಣೆ ಹೀಗಿರಲಿ

ಒಟ್ಟಾರೆಯಾಗಿ, ಜನಸಂಖ್ಯಾ ವಲಸೆ, ಹಣದುಬ್ಬರ, ಆರ್ಥಿಕ ವಿಸ್ತರಣೆ ಇತ್ಯಾದಿ ನಡುವೆ ಸಂಕೀರ್ಣ ಸಂಬಂಧ ಇರುವುದನ್ನು ಗುರುತಿಸಿರುವ ಎಸ್​ಬಿಐ ವರದಿ, ಪ್ರಾದೇಶಿಕ ಅಸಮತೋಲನಗಳನ್ನು ನಿಯಂತ್ರಿಸಲು ಸರಿಯಾದ ನೀತಿ ಅಳವಡಿಸುವ ಅವಶ್ಯಕತೆ ಇರುವುದನ್ನು ಎತ್ತಿ ತೋರಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ