Champions Trophy 2025: ಸಿರಾಜ್ರನ್ನು ತಂಡದಿಂದ ಕೈಬಿಟ್ಟಿದ್ದು ಯಾಕೆ? ನಾಯಕ ರೋಹಿತ್ ನೀಡಿದ ಕಾರಣವಿದು
Champions Trophy 2025: ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದ 15 ಸದಸ್ಯರ ತಂಡದಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಕೈಬಿಡಲಾಗಿದೆ. ಹಳೆಯ ಚೆಂಡಿನೊಂದಿಗೆ ಸಿರಾಜ್ ಪರಿಣಾಮಕಾರಿಯಲ್ಲ. ಸಿರಾಜ್ ಏಕದಿನ ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ತಂಡದ ಸಮತೋಲನಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೋಹಿತ್ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ನಾಯಕ ರೋಹಿತ್ ಶರ್ಮಾ ನೇತೃತ್ವದ 15 ಸದಸ್ಯರ ತಂಡವನ್ನು ಮುಖ್ಯ ಆಯ್ಕೆ ಮಂಡಳಿ ಇಂದು ಘೋಷಿಸಿದೆ. ಈ ಮೊದಲು ನಿರೀಕ್ಷಿಸಿದ ಹೆಸರುಗಳೇ ತಂಡದಲ್ಲಿದ್ದರೂ ವೇಗಿ ಮೊಹಮ್ಮದ್ ಸಿರಾಜ್ರನ್ನು ತಂಡದಿಂದ ಕೈಬಿಟ್ಟಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ವಾಸ್ತವವಾಗಿ ತಂಡವನ್ನು ಪ್ರಕಟಿಸುವುದಕ್ಕೂ ಮುನ್ನವೇ ಸಿರಾಜ್ ತಂಡದಲ್ಲಿ ಅವಕಾಶ ಪಡೆಯುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಪ್ರಮುಖ ಕಾರಣ ಅವರ ಇತ್ತೀಚಿನ ಪ್ರದರ್ಶನ. ಇದೀಗ ಪತ್ರಿಕಾಗೋಷ್ಠಿಯಲ್ಲಿ ಸಿರಾಜ್ರನ್ನು ತಂಡಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ರೋಹಿತ್ ಶರ್ಮಾ, ತಮ್ಮ ಹೇಳಿಕೆ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದು, ಸಿರಾಜ್ ಮೇಲೆ ನಾಯಕ ರೋಹಿತ್ ನಂಬಿಕೆ ಕಳೆದುಕೊಂಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಈ ಪ್ರಶ್ನೆಗೆ ಅವರೇ ಉತ್ತರ ನೀಡಿದ್ದಾರೆ.
ಸಿರಾಜ್ರನ್ನು ಹೊರಗಿಟ್ಟಿದ್ದು ಯಾಕೆ?
ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ರೋಹಿತ್, ನಾವು ಹೊಸ ಚೆಂಡಿನಲ್ಲಿ ಮತ್ತು ಚೆಂಡು ಹಳೆಯದಾದ ಬಳಿಕವೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಬಲ್ಲ ವೇಗಿಯನ್ನು ಎದುರು ನೋಡುತ್ತಿದ್ದೇವು. ಸಿರಾಜ್ ಹೊಸ ಚೆಂಡಿನ ಬೌಲರ್. ಆದರೆ ಹಳೆಯ ಚೆಂಡಿನೊಂದಿಗೆ ಅವರ ಅಷ್ಟು ಪರಿಣಾಮಕಾರಿಯಲ್ಲ. ಇದು ದುಬೈನಲ್ಲಿ ನಮಗೆ ಹಿನ್ನಡೆಯನ್ನುಂಟುಮಾಡಬಹುದು. ಮತ್ತೊಂದೆಡೆ, ಮೊಹಮ್ಮದ್ ಶಮಿ ಏಕದಿನ ವಿಶ್ವಕಪ್‌ನಲ್ಲಿ ತಮ್ಮ ಪ್ರತಿಭೆಯನ್ನು ತೋರಿದ್ದು, ಎಲ್ಲ ರೀತಿಯ ಎಸೆತಗಳನ್ನು ಬೌಲಿಂಗ್ ಮಾಡುವುದರಲ್ಲಿ ಅವರು ನಿಪುಣರು.
ಅರ್ಷದೀಪ್ ಸಿಂಗ್ ಆರಂಭಿಕ ಓವರ್‌ಗಳಲ್ಲಿ ಸ್ವಿಂಗ್ ಮತ್ತು ಡೆತ್ ಓವರ್‌ಗಳಲ್ಲಿಯೂ ತಮ್ಮ ಬೌಲಿಂಗ್ ಕಲೆಯನ್ನು ತೋರಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದ ಅವರು ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಇದಲ್ಲದೆ ಜಸ್ಪ್ರೀತ್ ಬುಮ್ರಾ ಅವರನ್ನು ಮೂರನೇ ವೇಗಿಯಾಗಿ ತಂಡದಲ್ಲಿ ಇರಿಸಲಾಗಿದೆ. ಆದರೆ, ಪ್ರಸ್ತುತ ಅವರು ಗಾಯದಿಂದ ಬಳಲುತ್ತಿದ್ದು, ಬುಮ್ರಾ ಫಿಟ್ ಆಗದಿದ್ದರೆ ಹರ್ಷಿತ್ ರಾಣಾ ಅವರನ್ನು ಬದಲಿಯಾಗಿ ಆಯ್ಕೆ ಮಾಡಬಹುದು.
ತಂಡದಲ್ಲಿ ಮೂವರು ವೇಗಿಗಳಿಗೆ ಸ್ಥಳಾವಕಾಶವಿತ್ತು. ಸಿರಾಜ್ ಅವರ ಬಳಿ ನಮಗೆ ಬೇಕಾದ ಕೌಶಲ್ಯವಿರಲಿಲ್ಲ. ಆದ್ದರಿಂದ ಅವರ ಬದಲಿಗೆ ಹರ್ಷಿತ್ ರಾಣಾ ಅವರನ್ನು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ರಾಣಾ ಸ್ವಲ್ಪ ವಿಭಿನ್ನವಾಗಿ ಬೌಲ್ ಮಾಡುತ್ತಾರೆ ಮತ್ತು ದುಬೈನಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತುಪಡಿಸಬಹುದು. ಆದರೆ, ಸಿರಾಜ್ರನ್ನು ತಂಡದಿಂದ ಕೈಬಿಟ್ಟಿರುವುದು ದುರದೃಷ್ಟಕರ. ಆದರೆ ತಂಡದ ಸಂಯೋಜನೆಯ ದೃಷ್ಟಿಯಿಂದಾಗಿ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ ಎಂದು ರೋಹಿತ್ ಹೇಳಿದ್ದಾರೆ.
ಅಮೋಘ ಪ್ರದರ್ಶನ ನೀಡಿದ್ದ ಸಿರಾಜ್
ಮೊಹಮ್ಮದ್ ಸಿರಾಜ್ ಕಳೆದ ಎರಡು-ಮೂರು ವರ್ಷಗಳಿಂದ ಏಕದಿನ ಪಂದ್ಯಗಳಲ್ಲಿ ಭಾರತ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದ್ದಾರೆ. ಸಿರಾಜ್ 2022 ರಿಂದ 50 ಓವರ್ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಎನಿಸಿಕೊಂಡಿದ್ದಾರೆ. ಆಡಮ್ ಝಂಪಾ (83) ನಂತರ ಈ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಈ ಮಾದರಿಯಲ್ಲಿ ಸಿರಾಜ್ 22.9 ಸರಾಸರಿಯಲ್ಲಿ 71 ವಿಕೆಟ್‌ಗಳನ್ನು ಪಡೆದಿದ್ದು, ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಅವರ ಇತ್ತೀಚಿನ ಪ್ರದರ್ಶನದ ಬಗ್ಗೆ ಮಾತನಾಡುವುದಾದರೆ, 2023 ರ ಏಕದಿನ ವಿಶ್ವಕಪ್‌ನಲ್ಲಿ 33.50 ಸರಾಸರಿಯಲ್ಲಿ 11 ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಪಡೆದಿದ್ದರು. 2023 ರ ಏಷ್ಯಾಕಪ್‌ನಲ್ಲಿಯೂ ಆಡಿದ 5 ಪಂದ್ಯಗಳ 4 ಇನ್ನಿಂಗ್ಸ್‌ಗಳಲ್ಲಿ 12.20 ಸರಾಸರಿಯಲ್ಲಿ 10 ವಿಕೆಟ್‌ಗಳನ್ನು ಪಡೆದು ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಅದರಲ್ಲೂ ಫೈನಲ್‌ನಲ್ಲಿ 6 ವಿಕೆಟ್‌ಗಳ ಮ್ಯಾಚ್ ವಿನ್ನಿಂಗ್ ಸ್ಪೆಲ್ ಬೌಲ್ ಮಾಡಿದ್ದನ್ನು ಯಾರು ಮರೆಯಲು ಸಾಧ್ಯವಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 pm, Sat, 18 January 25