Vijay Hazare Trophy 2025: 5ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಕರ್ನಾಟಕ; ಕರುಣ್ ತಂಡಕ್ಕೆ ಸೋಲು
Vijay Hazare Trophy 2025: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯ ಇಂದು ಬರೋಡದ ಕೊಟಂಬಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ವಿದರ್ಭ ತಂಡವನ್ನು 36 ರನ್ಗಳಿಂದ ಮಣಿಸಿದ ಕರ್ನಾಟಕ ತಂಡ ಐದನೇ ಬಾರಿಗೆ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಇತ್ತ ಮೊದಲ ಬಾರಿಗೆ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದ ವಿದರ್ಭ ತಂಡಕ್ಕೆ ಸೋಲಿನ ನಿರಾಸೆ ಎದುರಾಗಿದೆ.
ಬರೋಡದ ಕೊಟಂಬಿ ಸ್ಟೇಡಿಯಂನಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ವಿದರ್ಭ ತಂಡವನ್ನು ಮಣಿಸಿದ ಕರ್ನಾಟಕ ತಂಡ ಐದನೇ ಬಾರಿಗೆ ಈ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ಸ್ಮರಣ್ ರವಿಚಂದ್ರನ್ ಸಿಡಿಸಿದ ಶತಕ ಹಾಗೂ ಶ್ರೀಜಿತ್ ಹಾಗೂ ಅಭಿನವ್ ಮನೋಹರ್ ಅವರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ವಿದರ್ಭ ತಂಡ ಕೂಡ ಗೆಲುವಿಗಾಗಿ ಹೋರಾಟ ನೀಡಿತ್ತಾದರೂ ಕರ್ನಾಟಕದ ಕರಾರುವಕ್ಕಾದ ದಾಳಿಗೆ ನಲುಗಿ 50ನೇ ಓವರ್‌ನಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 312 ರನ್ ಕಲೆಹಾಕಲಷ್ಟೇ ಶಕ್ತವಾಗಿ 36 ರನ್ಗಳಿಂದ ಸೋಲೊಪ್ಪಿಕೊಂಡಿತು.
ವಿದರ್ಭ ಕನಸು ಭಗ್ನ
ಟೂರ್ನಿಯಲ್ಲಿ ಎರಡೂ ತಂಡಗಳು ಅದ್ಭುತ ಪ್ರದರ್ಶನ ನೀಡಿದ್ದ ಕಾರಣ ಫೈನಲ್ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿತ್ತು. ಗುಂಪು ಹಂತದಲ್ಲಿ ಕರ್ನಾಟಕ ತಂಡ ಒಂದು ಪಂದ್ಯವನ್ನು ಸೋತಿದ್ದರೆ, ಇತ್ತ ವಿದರ್ಭ ಮಾತ್ರ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತು. ತಂಡದ ನಾಯಕ ಕರಣ್ ನಾಯರ್ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿ ಪ್ರತಿ ಪಂದ್ಯದಲ್ಲೂ ಅರ್ಧ ಶತಕ ಅಥವಾ ಶತಕಗಳನ್ನು ಸಿಡಿಸಿದ್ದರು. ಇವರ ಜೊತೆಗೆ ಆರಂಭಿಕರಾದ ಧ್ರುವ ಶೋರೆ ಮತ್ತು ಯಶ್ ರಾಥೋಡ್ ಕೂಡ ಅದ್ಭುತ ಫಾರ್ಮ್ನಲ್ಲಿದ್ದರು. ಆದರೆ ಫೈನಲ್‌ನಲ್ಲಿ ಸೋಲುವ ಮೂಲಕ ವಿದರ್ಭ ತಂಡ ಮೊದಲ ಬಾರಿಗೆ ಚಾಂಪಿಯನ್ ಆಗುವ ಅವಕಾಶವನ್ನು ಕಳೆದುಕೊಂಡಿತು.
ಸ್ಮರಣ್ ಶತಕ
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 15ನೇ ಓವರ್‌ನಲ್ಲಿ ನಾಯಕ ಮಯಾಂಕ್ ಸೇರಿದಂತೆ ಮೂವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರಿಕೊಂಡರು. ಈ ವೇಳೆಗೆ ತಂಡದ ಸ್ಕೋರ್ ಕೇವಲ 67 ರನ್ ಆಗಿತ್ತು. ಇಲ್ಲಿಂದ 21 ವರ್ಷದ ಯುವ ಬ್ಯಾಟ್ಸ್‌ಮನ್ ರವಿಚಂದ್ರನ್ ಸ್ಮರಣ್ ತಂಡದ ಜವಾಬ್ದಾರಿ ವಹಿಸಿಕೊಂಡು ಕೃಷ್ಣನ್ ಶ್ರೀಜಿತ್ ಅವರೊಂದಿಗೆ 160 ರನ್‌ಗಳ ಜೊತೆಯಾಟವನ್ನು ಮಾಡಿದರು. ಈ ವೇಳೆ ಶ್ರೀಜಿತ್ 78 ರನ್ ಗಳಿಸಿ ಔಟಾದರೆ, ಅಭಿನವ್ ಮನೋಹರ್ ಜೊತೆ ಸ್ಮರಣ್ 106 ರನ್ ಜೊತೆಯಾಟ ನಡೆಸಿದರು. ಸ್ಮರಣ್ ಅದ್ಭುತ ಶತಕ ಬಾರಿಸಿ 101 ರನ್‌ಗಳಿಗೆ ಔಟಾದರೆ, ಮನೋಹರ್ ಕೇವಲ 42 ಎಸೆತಗಳಲ್ಲಿ 79 ರನ್ ಗಳಿಸಿ ತಂಡವನ್ನು 348 ರನ್ ಗಳಿಗೆ ಕೊಂಡೊಯ್ದರು.
ಕರುಣ್ ವಿಫಲ
ವಿದರ್ಭ ಈ ಮೊದಲು ಪಂದ್ಯಾವಳಿಯಲ್ಲಿ ಬೃಹತ್ ಮೊತ್ತವನ್ನು ಕಲೆಹಾಕಿದ್ದಲ್ಲದೆ, ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲು ಯಶಸ್ವಿಯಾಗಿತ್ತು. ಹೀಗಾಗಿ ಪಂದ್ಯದಲ್ಲಿ ವಿದರ್ಭ ಗೆಲ್ಲುವುದು ನಿಶ್ಚಿತ ಎಂದು ತೋರುತ್ತಿತ್ತು. ಆದರೆ ಇದಕ್ಕೆ ಬೇಕಾದ ಉತ್ತಮ ಆರಂಭ ತಂಡಕ್ಕೆ ಸಿಗಲಿಲ್ಲ. ಕೇವಲ 32 ರನ್‌ಗಳಿಗೆ ಮೊದಲ ವಿಕೆಟ್ ಪತನವಾಯಿತು. ಆ ಬಳಿಕ ಬಂದ ನಾಯಕ ಕರುಣ್ (27) ಅವರಿಂದ ಮತ್ತೊಂದು ಅತ್ಯುತ್ತಮ ಇನ್ನಿಂಗ್ಸ್ ನಿರೀಕ್ಷಿಸಲಾಗಿತ್ತು. ಆದರೆ ಅವರು ತಂಡದ ಸ್ಕೋರ್ 88 ರಲ್ಲಿ ಔಟಾದರು.
ಇದಾದ ನಂತರ ಬಂದ ಆಟಗಾರರು ಕೆಲಕಾಲ ಕ್ರೀಸ್ನಲ್ಲಿ ನಿಂತರಾದರೂ ದೊಡ್ಡ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಕಳೆದ ಎರಡು ಸತತ ಪಂದ್ಯಗಳಲ್ಲಿ ಶತಕ ಸಿಡಿಸಿದ್ದ ಧ್ರುವ್ ಶೌರಿ (110) ಇಲ್ಲಿಯೂ ಏಕಾಂಗಿ ಹೋರಾಟ ನಡೆಸಿ ಸತತ ಮೂರನೇ ಶತಕ ಬಾರಿಸಿದರೂ ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಅಂತಿಮವಾಗಿ ಹರ್ಷ್ ದುಬೆ ಕೇವಲ 30 ಎಸೆತಗಳಲ್ಲಿ 63 ರನ್ ಗಳಿಸಿ ತಂಡವನ್ನು ಸ್ಕೋರ್ ಹತ್ತಿರಕ್ಕೆ ಕೊಂಡೊಯ್ದರು, ಆದರೆ ಅವರ ಔಟಾಗುವುದರೊಂದಿಗೆ ವಿದರ್ಭದ ಇನ್ನಿಂಗ್ಸ್ 312 ರನ್ ಗಳಿಗೆ ಅಂತ್ಯಗೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 pm, Sat, 18 January 25