ಸುಖಾಂತ್ಯವಾಯ್ತು ‘ಜನ ನಾಯಗನ್’ ವಿವಾದ, ‘ಪರಾಶಕ್ತಿ’ ಕತೆ ಏನಾಯ್ತು?
Parasakthi Tamil movie: ‘ಜನ ನಾಯಗನ್’ ಸಿನಿಮಾಕ್ಕೆ ನ್ಯಾಯಾಲಯದ ಮೂಲಕ ಸಿಬಿಎಫ್ಸಿ ಪ್ರಮಾಣ ಪತ್ರ ದೊರೆತಿದೆ. ಅದರ ಬೆನ್ನಲ್ಲೆ, ‘ಪರಾಶಕ್ತಿ’ ಸಿನಿಮಾಕ್ಕೂ ಸಿಬಿಎಫ್ಸಿ ‘ಯು/ಎ’ ಪ್ರಮಾಣ ಪತ್ರ ನೀಡಿದೆ. ‘ಜನ ನಾಯಗನ್’ ರೀತಿ ‘ಪರಾಶಕ್ತಿ’ ಸಿನಿಮಾಕ್ಕೂ ಸಿಬಿಎಫ್ಸಿ ಸಮಸ್ಯೆ ಎದುರಾಗಿತ್ತು. ಇದೀಗ ನಿಗದಿತ ದಿನಾಂಕದಂದೇ ‘ಪರಾಶಕ್ತಿ’ ಸಿನಿಮಾ ಬಿಡುಗಡೆ ಆಗಲಿದೆ.

ತಮಿಳು ಸಿನಿಮಾಗಳಿಗೆ ಸೆನ್ಸಾರ್ (Censor) ಸಮಸ್ಯೆ ಕಾಡುತ್ತಿದೆ. ಇಂದು (ಜನವರಿ 09) ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿತ್ತು. ಇದೇ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ನಿರ್ಮಾಪಕರು ‘ಯು/ಎ’ ಪ್ರಮಾಣ ಪತ್ರ ಪಡೆಯಲು ಯಶಸ್ವಿ ಆಗಿದ್ದಾರೆ. ನಾಳೆ (ಜನವರಿ 10) ಬಿಡುಗಡೆ ಆಗಲಿದ್ದ ಮತ್ತೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ‘ಪರಾಶಕ್ತಿ’ ಸಿನಿಮಾಕ್ಕೂ ಸಹ ಸಿಬಿಎಫ್ಸಿ ಪ್ರಮಾಣ ಪತ್ರ ಕುರಿತಂತೆ ಸಮಸ್ಯೆ ಎದುರಾಗಿತ್ತು.
ಸುಧಾ ಕೊಂಗರ ನಿರ್ದೇಶಿಸಿ, ಶಿವಕಾರ್ತಿಕೇಯನ್ ಮತ್ತು ಶ್ರೀಲೀಲಾ ನಟಿಸಿದ್ದ ‘ಪರಾಶಕ್ತಿ’ ಸಿನಿಮಾಕ್ಕೆ ತಮಿಳುನಾಡಿ ಸಿಬಿಎಫ್ಸಿ ಸಮಿತಿ ಬರೋಬ್ಬರಿ 23 ಕಟ್ಗಳನ್ನು ಸೂಚಿಸಿತ್ತು. ಇದನ್ನು ನಿರ್ದೇಶಕಿ ಸುಧಾ ಕೊಂಗರ ವಿರೋಧಿಸಿದ್ದರು. ಸೆನ್ಸಾರ್ ಮಂಡಳಿ ಹೇಳಿರುವ ದೃಶ್ಯಗಳಿಗೆ ಕತ್ತರಿ ಹಾಕಿದರೆ ಸಿನಿಮಾದ ವಿಷಯ ಗೌಣವಾಗುತ್ತದೆ ಎಂದು ವಾದಿಸಿದ್ದರು. ಬಳಿಕ ಸಿನಿಮಾವನ್ನು ಮುಂಬೈನ ರಿವ್ಯೂ ಕಮಿಟಿಗೆ ಕಳಿಸಿದ್ದರು. ಇಂದು (ಜನವರಿ 09) ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ.
‘ಪರಾಶಕ್ತಿ’ ಸಿನಿಮಾ ತಮಿಳುನಾಡಿನ ಹಿಂದಿ ವಿರೋಧಿ ಚಳವಳಿಯ ಕುರಿತಾದ ಕತೆಯನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಸಹಜವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಕೆಲವಾರು ಸಂಭಾಷಣೆಗಳು ಸಹ ಇವೆ, ಹಾಗಾಗಿ ಈ ಸಿನಿಮಾ ಭಾಷಾವಾರು ದ್ವೇಷಕ್ಕೆ ಕಾರಣ ಆಗಬಹುದೆಂದು ತಮಿಳುನಾಡು ಸಿಬಿಎಫ್ಸಿ ಹಲವು ದೃಶ್ಯಗಳಿಗೆ ಕಟ್ ಸೂಚಿಸಿತ್ತು. ಆದರೆ ಚಿತ್ರತಂಡ ಇದನ್ನು ವಿರೋಧಿಸಿತ್ತು. ಇದೇ ಕಾರಣಕ್ಕೆ ‘ಜನ ನಾಯಗನ್’ ರೀತಿ ‘ಪರಾಶಕ್ತಿ’ ಸಿನಿಮಾದ ಬಿಡುಗಡೆ ಸಹ ಇಕ್ಕಟ್ಟಿಗೆ ಸಿಲುಕಿತ್ತು. ಇದೀಗ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ದೊರೆತಿದ್ದು, ಸಿನಿಮಾ ನಿಗದಿಯಂತೆ ನಾಳೆ ಅಂದರೆ ಜನವರಿ 10 ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ:‘ಜನ ನಾಯಗನ್’ ಎದುರು ‘ಪರಾಶಕ್ತಿ’ ಬಿಡುಗಡೆ ರಾಜಕೀಯ ಪ್ರೇರಿತವೇ? ಸಿಕ್ತು ಸ್ಪಷ್ಟನೆ
ಇದೇ ದಿನ ನ್ಯಾಯಾಲಯದ ಮೂಲಕ ‘ಜನ ನಾಯಗನ್’ ಸಿನಿಮಾಕ್ಕೂ ‘ಯು/ಎ’ ಪ್ರಮಾಣ ಪತ್ರ ದೊರೆತಿದೆ. ಆದರೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿಲ್ಲ. ಒಂದೊಮ್ಮೆ ‘ಜನ ನಾಯಗನ್’ ಸಿನಿಮಾದ ಬಿಡುಗಡೆ ತಡವಾದರೆ ಅದು ‘ಪರಾಶಕ್ತಿ’ ಸಿನಿಮಾಕ್ಕೆ ಒಳಿತೇ ಆಗಲಿದೆ. ‘ಪರಾಶಕ್ತಿ’ ಸಿನಿಮಾವು ತಮಿಳು ಜನರು ಹಿಂದಿ ಭಾಷಾ ಹೇರಿಕೆ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಒಳಗೊಂಡಿದೆ. ನಾಯಕ ಶಿವಕಾರ್ತಿಕೇಯನ್ ಕ್ರಾಂತಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ, ಹಿಂದಿ ಶಿಕ್ಷಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಜಯಂ ರವಿ ವಿಲನ್ ಪಾತ್ರದಲ್ಲಿ ನಟಿಸಿರುವುದು ವಿಶೇಷ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




