ಕೇಂದ್ರೀಯ ವಿ.ವಿ.ಯಲ್ಲಿ ಪದವಿ ಕೋರ್ಸಗೆ ಅರ್ಜಿ ಆಹ್ವಾನ: ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ8 ರಷ್ಟು ಮೀಸಲಾತಿ
ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯವು 2026ರ ಶೈಕ್ಷಣಿಕ ಸಾಲಿಗೆ 15 ಪದವಿ ಕೋರ್ಸ್‌ಗಳ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿದೆ. ಜನವರಿ 3 ರಿಂದ ಅರ್ಜಿ ಸಲ್ಲಿಕೆ ಶುರುವಾಗಿದ್ದು, ಜನವರಿ 31 ಕೊನೆಯ ದಿನಾಂಕವಾಗಿದೆ. ಕಲ್ಯಾಣ ಕರ್ನಾಟಕ ಅಭ್ಯರ್ಥಿಗಳಿಗೆ 8 ಪ್ರತಿಶತ ಮೀಸಲಾತಿ ಇದೆ ಎಂದು ಕುಲಪತಿ ತಿಳಿಸಿದ್ದಾರೆ. ಮೇ 2026ರಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ.

ಕಲಬುರಗಿ, ಜನವರಿ 09: ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2026ನೇ ಶೈಕ್ಷಣಿಕ ಸಾಲಿನಲ್ಲಿ 15 ವಿವಿಧ ಪದವಿ ಕೋರ್ಸ್ ಗಳ ವ್ಯಾಸಂಗಕ್ಕೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ 8ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದ್ದಾರೆ.
ಜನವರಿ 3ರಿಂದಲೆ ಅರ್ಜಿ ಸಲ್ಲಿಕೆ ಆರಂಭ
ಕಲಬುರಗಿ ನಗರದ ಕಡಗಂಚಿ ಬಳಿ ಇರೋ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಜನವರಿ 3 ರಿಂದಲೆ https://cuet.nta.nic.in/ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅನ್ ಲೈನ್ ಮೂಲಕ ಶುಲ್ಕ ಪಾವತಿಯೊಂದಿಗೆ ಅರ್ಜಿ ಸಲ್ಲಿಸಲು ಜನವರಿ 31 ಕೊನೆ ದಿನವಾಗಿದೆ. ಫೆಬ್ರವರಿ 2 ರಿಂದ 4ರ ವರೆಗೆ ಸಲ್ಲಿಸಿದ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕುಲಪತಿ ಹೇಳಿದ್ದಾರೆ.
ಯಾವೆಲ್ಲಾ ಭಾಷೆಯಲ್ಲಿ ಪರೀಕ್ಷೆ?
ಮೇ-2026ರಲ್ಲಿ ಪ್ರವೇಶ ಪರೀಕ್ಷೆ ನಡೆಯುವುದರಿಂದ ಈಗಾಗಲೆ ದ್ವಿತೀಯ ಪಿ.ಯು.ಸಿ. ತೇರ್ಗಡೆಯಾದ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಸಹ ಪ್ರವೇಶಾತಿ ಪರೀಕ್ಷೆ ಬರೆಯಬಹುದಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದ್ದು, ಇಂಗ್ಲೀಷ್, ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಓಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆ ಬರೆಯಬಹುದಾಗಿದೆ.
ಯಾವೆಲ್ಲಾ ಕೋರ್ಸ್ಗಳು ಲಭ್ಯ?
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್), (ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್), (ಆರ್ಟಿಫಿಷಿಯಲ್ ಇಂಟಲಿಜನ್ಸ್ ಅಂಡ್ ಮಷೀನ್ ಲರ್ನಿಂಗ್), (ಗಣಿತ ಮತ್ತು ಕಂಪ್ಯೂಟಿಂಗ್), (ಕಂಪ್ಯೂಟರ್ ಸೈನ್ಸ್), ಬಿ.ಎಸ್ಸಿ (ಭೌತಶಾಸ್ತ್ರ), (ರಸಾಯನಶಾಸ್ತ್ರ), (ಭೂವಿಜ್ಞಾನ), (ಮನೋವಿಜ್ಞಾನ), ಬಿಬಿಎ, ಸಮಾಜ ಕಾರ್ಯದಲ್ಲಿ ಪದವಿ (ಬಿ ಎಸ್ ಡಬ್ಲ್ಯೂ), ಬಿ.ಎ (ಅರ್ಥಶಾಸ್ತ್ರ), (ಇತಿಹಾಸ), (ಇಂಗ್ಲಿಷ್), (ಎಲ್.ಎಲ್.ಬಿ ಐದು ವರ್ಷದ ಇಂಟಿಗ್ರೇಟೆಡ್ ಪ್ರೋಗ್ರಾಮ್) ಲಭ್ಯವಿದೆ. ಪರೀಕ್ಷೆ ನಡೆಯುವ ಸ್ಥಳ, ದಿನಾಂಕ, ಪ್ರವೇಶ ಕಾರ್ಡ್, ಫಲಿತಾಂಶ ಎಲ್ಲವು ಎನ್.ಟಿ.ಎ. ಅಂತರ್ಜಾಲದಲ್ಲಿ ತಿಳಿಸಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ನಿರಂತರ ವೆಬ್ ಸೈಟ್ ವೀಕ್ಷಿಸಬೇಕೆಂದು ಕುಲಪತಿಗಳು ತಿಳಿಸಿದ್ದಾರೆ.
ಯಾವೆಲ್ಲಾ ಜಿಲ್ಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ?
ಅರ್ಜಿ ಸಲ್ಲಿಸುವಲ್ಲಿ ಅಭ್ಯರ್ಥಿಗಳಿಗೆ ತೊಂದರೆ ಎದುರಾದಲ್ಲಿ ದೂ.ಸಂ. 011-40759000 ಅಥವಾ cuet-ug@nta.ac.in ಗೆ ಇಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ. ಕರ್ನಾಟಕದ ಬೆಳಗಾವಿ, ಬಳ್ಳಾರಿ, ಕಲಬುರಗಿ, ಬೀದರ್, ದಾವಣಗೆರೆ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಧಾರವಾಡ ಮತ್ತು ಚಿಕ್ಕಮಗಳೂರಿನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ, ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾಸಾಯಿ ಕೃಷ್ಣಾ, ಪ್ರೊ. ಹನುಮೇಗೌಡ, ಪ್ರೊ. ಹೆಗಡಿ, ಸಹಾಯಕ ಸಂಪರ್ಕಾಧಿಕಾರಿ ಪ್ರಕಾಶ ಬಾಳಿಕಾಯಿ, ಡಾ. ಟಿ.ಎಸ್. ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.