Vijay Hazare Final: ಸ್ಮರಣ್ ಶತಕ; ವಿದರ್ಭಕ್ಕೆ ಬೃಹತ್ ಟಾರ್ಗೆಟ್ ನೀಡಿದ ಕರ್ನಾಟಕ
Vijay Hazare Trophy Final: ವಿಜಯ್ ಹಜಾರೆ ಟ್ರೋಫಿ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ವಿದರ್ಭದ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದೆ. ರವಿಚಂದ್ರನ್ ಸ್ಮರಣ್ ಅವರ ಅದ್ಭುತ ಶತಕ (101 ರನ್) ಮತ್ತು ಶ್ರೀಜಿತ್ (78 ರನ್) ಹಾಗೂ ಅಭಿನವ್ ಮನೋಹರ್ (79 ರನ್) ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 348 ರನ್ ಗಳಿಸಿದೆ.
ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ವಿದರ್ಭದ ಮುಂದೆ ಬೃಹತ್ ಸ್ಕೋರ್ ಕಲೆಹಾಕಿದೆ. ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348ರನ್ ಕಲೆಹಾಕಿದೆ. ತಂಡದ ಪರ ಶ್ರೀಜಿತ್ ಹಾಗೂ ಅಭಿನವ್ ಮನೋಹರ್ ಅರ್ಧಶತಕ ಸಿಡಿಸಿದರೆ, ರವಿಚಂದ್ರನ್ ಸ್ಮರನ್ ಅದ್ಭುತ ಶತಕ ಗಳಿಸಿದರು. ಈ 21 ವರ್ಷದ ಬ್ಯಾಟ್ಸ್‌ಮನ್ ನಿರ್ಣಾಯಕ ಪಂದ್ಯದಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ಗಳ ಸಹಿತ 101 ರನ್ಗಳ ಇನ್ನಿಂಗ್ಸ್ ಆಡಿದರು.
ಫೈನಲ್‌ನಲ್ಲಿ ಸ್ಮರಣ್ ಅದ್ಭುತ ಶತಕ
ಯುವ ಬ್ಯಾಟ್ಸ್‌ಮನ್ ರವಿಚಂದ್ರನ್ ಸ್ಮರನ್ ಫೈನಲ್‌ನಂತಹ ದೊಡ್ಡ ಪಂದ್ಯದಲ್ಲಿ ತಮ್ಮ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಒಟ್ಟು 92 ಎಸೆತಗಳನ್ನು ಎದುರಿಸಿದ ಸ್ಮರಣ್ 101 ರನ್ ಕಲೆಹಾಕಿದರು. ಇದಲ್ಲದೆ ಅವರು ಶ್ರೀಜಿತ್ ಜೊತೆಗೆ 150 ರನ್ಗಳ ಜೊತೆಯಾಟವನ್ನಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ವಾಸ್ತವವಾಗಿ ಕರ್ನಾಟಕ ತಂಡ 67 ರನ್ಗಳಿಗೆ ಪ್ರಮುಖ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಲ್ಲಿಂದ ಜೊತೆಯಾದ ಶ್ರೀಜಿತ್ ಹಾಗೂ ಸ್ಮರಣ್ 4ನೇ ವಿಕೆಟ್ಗೆ ತಂಡದ ಮೊತ್ತವನ್ನು 224 ರನ್ಗಳಿಗೆ ಕೊಂಡೊಯ್ದರು.
ಇಬ್ಬರು ಬ್ಯಾಟ್ಸ್‌ಮನ್‌ಗಳ ಅರ್ಧಶತಕ
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕರ್ನಾಟಕದ ಆರಂಭ ಉತ್ತಮವಾಗಿರಲಿಲ್ಲ. ಕೇವಲ 67 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ದೇವದತ್ ಪಡಿಕ್ಕಲ್ 8 ರನ್ ಗಳಿಸಿ ಔಟಾದರೆ, ಕೆವಿ ಅನೀಶ್ 21 ರನ್ ಗಳಿಸಿ ಔಟಾದರು ಮತ್ತು ನಾಯಕ ಮಯಾಂಕ್ ಅಗರ್ವಾಲ್ ಕೂಡ 32 ರನ್ಗಳಿಗೆ ಸುಸ್ತಾದರು. ಆದರೆ ಇದಾದ ಬಳಿಕ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ನಡುವೆ ಅಮೋಘ ಜೊತೆಯಾಟ ಕಂಡು ಬಂತು. ಸ್ಮರಣ್ ಅವರ ಶತಕವನ್ನು ಹೊರತುಪಡಿಸಿ, ಕರ್ನಾಟಕದಿಂದ ಎರಡು ಅರ್ಧ ಶತಕಗಳು ಕೂಡ ಬಂದವು. ಕೃಷ್ಣನ್ ಶ್ರೀಜಿತ್ 74 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 78 ರನ್ ಗಳಿಸಿದರೆ, ಇವರಲ್ಲದೇ ಅಭಿನವ್ ಮನೋಹರ್ ಕೂಡ ಬಿರುಸಿನ ಬ್ಯಾಟಿಂಗ್ ನಡೆಸಿ 42 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 10 ಬೌಂಡರಿಗಳ ಸಹಾಯದಿಂದ 79 ರನ್ ಗಳಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Sat, 18 January 25